ವಯನಾಡ್ | ಮೃತರ ಅಂತ್ಯಕ್ರಿಯೆಗೆ ಧಾರ್ಮಿಕ ಸಂಸ್ಥೆಗಳಿಂದ ವಿಶೇಷ ವ್ಯವಸ್ಥೆ
ವಯನಾಡ್ : ಮೃತದೇಹಗಳ ಅಂತ್ಯಕ್ರಿಯೆಗೆ ಮೆಪ್ಪಾಡಿಯ ಧಾರ್ಮಿಕ ಸಂಸ್ಥೆಗಳು ಎಲ್ಲಾ ವ್ಯವಸ್ಥೆ ಮಾಡಿರುವುದರಿಂದ ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ನಿಟ್ಟುಸಿರು ಬಿಡುವಂತಾಗಿದೆ.
ಮೆಪ್ಪಾಡಿ ಮಾರಿಯಮ್ಮ ದೇವಾಲಯದ ಚಿತಾಗಾರದಲ್ಲಿ ಕಳೆದ ಮೂರು ದಿನಗಳಲ್ಲಿ 46ಕ್ಕೂ ಅಧಿಕ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳು ಈ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿವೆ. ಆಚರಣೆಯ ಭಾಗವಾದ ಚಿತೆಗೆ ಬೇಕಾದ ಕಟ್ಟಿಗೆಗಳನ್ನು ಸ್ವಯಂ ಸೇವಕರು ವ್ಯವಸ್ಥೆಗೊಳಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿಲ್ಲ.
ಇದೇ ರೀತಿ ಮೆಪ್ಪಾಡಿ ಮಹಲ್ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ಕೂಡ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಮಸೀದಿಯ ಸ್ಮಶಾನದಲ್ಲಿ 46ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಮೆಪ್ಪಾಡಿಯಲ್ಲಿರುವ ವಿವಿಧ ಚರ್ಚ್‌ಗಳಲ್ಲಿ ಕೂಡ ವ್ಯವಸ್ಥೆ ಮಾಡಲಾಗಿದೆ.