ವೆಬ್ ಸೈಟ್ ಗಳಿಗೆ ತಡೆ ಹೇರುವ ಆದೇಶ 10 ವರ್ಷಗಳಲ್ಲಿ ನೂರು ಪಟ್ಟಿಗೂ ಅಧಿಕ: ಮಾಹಿತಿ ಹಕ್ಕಿನಡಿ ಬಹಿರಂಗ

Update: 2024-01-10 14:27 GMT

ಹೊಸದಿಲ್ಲಿ: ವೆಬ್ ಸೈಟ್ ಗಳಿಗೆ ತಡೆಹೇರುವಂತೆ ಕೇಂದ್ರ ಸರಕಾರ ಹೊರಡಿಸಿರುವ ಆದೇಶಗಳು 2013 ಮತ್ತು 2023ರ ನಡುವೆ ನೂರು ಪಟ್ಟು ಹೆಚ್ಚಿವೆ ಎನ್ನುವುದನ್ನು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಗಳು ತಿಳಿಸಿವೆ ಎಂದು ‘ದ ಹಿಂದೂ’ ವರದಿ ಮಾಡಿದೆ.

2013ರಲ್ಲಿ ಕೇಂದ್ರ ಸರಕಾರವು ಇಂಥ 62 ಆದೇಶಗಳನ್ನು ಹೊರಡಿಸಿತ್ತು ಎಂಬ ಉತ್ತರವನ್ನು ಬಿಹಾರದ ಹೋರಾಟಗಾರ ಕಣಯ್ಯ ಕುಮಾರ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ನೀಡಲಾಗಿದೆ. 2023ರಲ್ಲಿ, ಈ ಸಂಖ್ಯೆಯು ಅಕ್ಟೋಬರ್ ವರೆಗೆ 6,954ಕ್ಕೆ ಏರಿದೆ.

2022ರಲ್ಲಿ ಕೇಂದ್ರ ಸರಕಾರವು, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಇದರ 69ಎ ವಿಧಿಯನ್ವಯ ವೆಬ್ ಸೈಟ್ ಗಳಿಗೆ ತಡೆ ಹೇರುವಂತೆ 6,775 ಆದೇಶಗಳನ್ನು ಹೊರಡಿಸಿತ್ತು.

ಕಾಯ್ದೆಯ 69ಎ ವಿಧಿಯಡಿಯಲ್ಲಿ,ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ದರ್ಜೆಗಿಂತ ಮೇಲಿನ ಅಧಿಕಾರಿಗಳು ಸಂದೇಶಗಳನ್ನು ತೆಗೆದುಹಾಕುವಂತೆ ಸೂಚಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಗಳನ್ನು ಕಳುಹಿಸಬಹುದಾಗಿದೆ. ಸಂದೇಶವು ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲ್ಪಟ್ಟರೆ, ಅದನ್ನು ತೆಗೆದುಹಾಕುವಂತೆ ಸೂಚಿಸಿ ಕೇಂದ್ರ ಸರಕಾರವು ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಆದೇಶಗಳನ್ನು ನೀಡಬಹುದಾಗಿದೆ.

2018 ಮತ್ತು 2023 ಅಕ್ಟೋಬರ್ ನಡುವಿನ ಅವಧಿಯಲ್ಲಿ ಕನಿಷ್ಠ 36,838 ಸಂದೇಶಗಳಿಗೆ ತಡೆ ಹೆರುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಸೆಂಬರಿನಲ್ಲಿ ಸಂಸತ್ತಿನಲ್ಲಿ ಹೇಳಿತ್ತು.

2018 ಮತ್ತು ಕಳೆದ ವರ್ಷದ ಅಕ್ಟೋಬರ್ ನಡುವಿನ ಅವಧಿಯಲ್ಲಿ, ಸಂದೇಶಗಳನ್ನು ತೆಗೆದುಹಾಕುವಂತೆ ಸೂಚಿಸಿ ಕೇಂದ್ರ ಸರಕಾರವು ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್)ಗೆ 13,660 ಆದೇಶಗಳನ್ನು ನೀಡಿದೆ. ಇದು ಸಾಮಾಜಿಕ ಮಾಧ್ಯಮ ಕಂಪೆನಿಯೊಂದು ಸ್ವೀಕರಿಸಿದ ಅತ್ಯಧಿಕ ಆದೇಶಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News