ಪಶ್ಚಿಮಬಂಗಾಳ: ಈಡಿ ಅಧಿಕಾರಿಗಳಿಗೆ ಟಿಎಂಸಿ ನಾಯಕನ ಬೆಂಬಲಿಗರಿಂದ ಹಲ್ಲೆ

Update: 2024-01-05 16:38 GMT

Photo: ANI 

ಕೋಲ್ಕತಾ: ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿ ಟಿಎಂಸಿ ನಾಯಕ ಶೇಖ್ ಶಾಜಹಾನ್ ಅವರ ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ನಿವಾಸಕ್ಕೆ ಶುಕ್ರವಾರ ದಾಳಿ ನಡೆಸಲು ಯತ್ನಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಶಾಜಹಾನ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಹಾಗೂ ಅವರ ವಾಹನಗಳಿಗೆ ಹಾನಿ ಉಂಟು ಮಾಡಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾಜ್ಯದ 15 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇದರಲ್ಲಿ ಶಾಜಹಾನ್ ಅವರ ಮನೆ ಕೂಡ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂದೇಶ್ಖಾಲಿ ಪ್ರದೇಶದಲ್ಲಿರುವ ಶೇಖ್ ಅವರ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ತಲುಪಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ ಅವರ ಜೊತೆಗಿದ್ದ ಕೇಂದ್ರೀಯ ಪಡೆಯ ಸಿಬ್ಬಂದಿಗೆ ಟಿಎಂಸಿ ನಾಯಕನ ದೊಡ್ಡ ಸಂಖ್ಯೆಯ ಬೆಂಬಲಿಗರು ಮೊದಲು ಘೆರಾವೊ ಹಾಕಿ ಪ್ರತಿಭಟನೆ ನಡೆಸಿದರು. ಅನಂತರ ಅವರಿಗೆ ಹಲ್ಲೆ ನಡೆಸಿದರು ಹಾಗೂ ಈ ಪ್ರದೇಶದಿಂದ ನಿರ್ಗಮಿಸುವಂತೆ ಬಲವಂತಪಡಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಜಹಾನ್ ಅವರ ಬೆಂಬಲಿಗರು ನಡೆಸಿದ ಹಲ್ಲೆಯಿಂದ ಓರ್ವ ಅಧಿಕಾರಿಯ ತಲೆಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗದೆ ಎಂದು ಅವರು ಹೇಳಿದ್ದಾರೆ. ಶಾಜಹಾನ್ ಅವರನ್ನು ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಾಜ್ಯ ಸಚಿವ ಜ್ಯೋತಿಪ್ರಿಯ ಮಲಿಕ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.

‘‘ಈ ರೀತಿಯ ದಾಳಿ ಅನಿರೀಕ್ಷಿತ. ಶೇಖ್ ಶಾಜಹಾನ್ ಕುರಿತು ನಾವು ನಮ್ಮ ದಿಲ್ಲಿ ಕಚೇರಿಗೆ ವರದಿ ಕಳುಹಿಸಿದ್ದೇವೆ’’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಬಾರಿ ವಿನಂತಿಸಿದ ಹೊರತಾಗಿಯೂ ಟಿಎಂಸಿ ನಾಯಕರು ಶಾಜಹಾನ್ನ ಮನೆಯ ಗೇಟು ತೆರೆಯಲಿಲ್ಲ. ಆದುದರಿಂದ ಗೇಟಿನ ಬೀಗ ಒಡೆಯಲು ನಾವು ಪ್ರಯತ್ನಿಸಿದೆವು. ಈ ಸಂದರ್ಭ ಶಾಜಹಾನ್ ಬೆಂಬಲಿಗರು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ ಕೇಂದ್ರ ಪಡೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News