ಪಶ್ಚಿಮ ಬಂಗಾಳ | ನಕಲಿ ಕಾಲ್ ಸೆಂಟರ್ ಭೇದಿಸಿದ ಪೊಲೀಸರು: 18 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ನಕಲಿ ಕಾಲ್ ಸೆಂಟರ್ ಅನ್ನು ಭೇದಿಸಲಾಗಿದ್ದು, 18 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಅಮೆರಿಕ ನಾಗರಿಕರನ್ನು ಗುರಿಯಾಗಿಸಿಕೊಂಡು ತಮ್ಮನ್ನು ತಾವು ಮೈಕ್ರೊಸಾಫ್ಟ್ ಉದ್ಯೋಗಿಗಳೆಂದು ಪರಿಚಯಿಸಿಕೊಳ್ಳುತ್ತಿದ್ದರು. ನಂತರ, ಅವರಿಗೆ ತಾಂತ್ರಿಕ ನೆರವು ನೀಡುವ ಸೋಗಿನಲ್ಲಿ ವಂಚಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಳಿವೊಂದನ್ನು ಆಧರಿಸಿ, ಪಶ್ಚಿಮ ಬಂಗಾಳ ಸೈಬರ್ ಅಪರಾಧ ಘಟಕದ ಅಧಿಕಾರಿಗಳು ಹಾಗೂ ಇಕೊ ಪಾರ್ಕ್ ಹಾಗೂ ಬಿಧಾನ್ ನಗರ್ ಸೈಬರ್ ಪೊಲೀಸ್ ಠಾಣೆಗಳ ಸಿಬ್ಬಂದಿಗಳು ನ್ಯೂಟೌನ್ ಕಟ್ಟಡವೊಂದರಲ್ಲಿದ್ದ ನಕಲಿ ಕಾಲ್ ಸೆಂಟರ್ ನ ಎರಡು ಕಚೇರಿಗಳ ಮೇಲೆ ಜಂಟಿ ದಾಳಿ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ಬಂಧಿತರ ಪೈಕಿ ಮೂವರು ಮಹಿಳೆಯರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಹಲವಾರು ದಾಖಲೆಗಳು, 32 ಲ್ಯಾಪ್ ಟಾಪ್ ಗಳು ಹಾಗೂ 41 ಮೊಬೈಲ್ ಫೋನ್ ಗಳನ್ನು ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
“ವಹಿವಾಟುಗಳನ್ನು ಹೇಗೆ ನಡೆಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ. ಈ ವಹಿವಾಟುಗಳು ಕ್ರಿಪ್ಟೊಕರೆನ್ಸಿ ಅಥವಾ ಹವಾಲಾ ಅಥವಾ ಇನ್ನಿತರ ಸ್ವರೂಪದಲ್ಲಿ ನಡೆಯುತ್ತಿದ್ದವೆ ಎಂಬ ಕುರಿತು ತನಿಖೆ ನಡೆಸಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.