‘ವಿವೇಕ’ದ ಅರ್ಥ ಗೊತ್ತಿಲ್ಲದ ಮೋದಿ ಯಾವ ‘ಧ್ಯಾನ’ ಮಾಡುತ್ತಾರೆ? : ಸಿಬಲ್

Update: 2024-05-29 15:32 GMT

ಕಪಿಲ ಸಿಬಲ್ | PTI 

ಚಂಡಿಗಡ : ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಮೇ 30ರಿಂದ ಜೂ.1ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶಿತ ಧ್ಯಾನವನ್ನು ರಾಜ್ಯಸಭಾ ಸದಸ್ಯ ಕಪಿಲ ಸಿಬಲ್ ಅವರು ಬುಧವಾರ ವ್ಯಂಗ್ಯವಾಡಿದ್ದಾರೆ. ‘ವಿವೇಕ’ದ ಅರ್ಥ ಗೊತ್ತಿಲ್ಲದ ಮೋದಿ ಅದ್ಯಾವ ‘ಧ್ಯಾನ’ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿಯವರು ‘ಪ್ರಾಯಶ್ಚಿತ್ತ’ಕ್ಕಾಗಿ ಕನ್ಯಾಕುಮಾರಿಗೆ ಹೋಗುತ್ತಿದ್ದರೆ ಅದು ಒಳ್ಳೆಯದು ಅಥವಾ ಅವರು ವಿವೇಕಾನಂದರ ಬರಹಗಳು ಮತ್ತು ಭಾಷಣಗಳಿಂದ ಸ್ಫೂರ್ತಿ ಪಡೆಯಲು ಅಲ್ಲಿಗೆ ಹೋಗುತ್ತಿದ್ದರೆ ಅದು ಇನ್ನೂ ಒಳ್ಳೆಯದು ಎಂದು ಸಿಬಲ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನ್ನ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಅದರ ಬಳಿ ತೋರಿಸಲು ಏನೂ ಇಲ್ಲ ಎಂದು ಆರೋಪಿಸಿದ ಸಿಬಲ್,ಅವರು ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದ್ದಾರೆ? ತಾನು ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದ್ದೇನೆ ಎಂದು ಪ್ರಧಾನಿ ತನ್ನ ಭಾಷಣಗಳಲ್ಲಿ ಹೇಳಿದ್ದಾರೆಯೇ? ಅವರ ಸಾಧನೆಗಳೇನು? ಎಂದು ಪ್ರಶ್ನಿಸಿದರು.

ಅಧಿಕಾರಕ್ಕೆ ಬರುವ ಮುನ್ನ ಮೋದಿ ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುತ್ತಿದ್ದರು. ಕಾಂಗ್ರೆಸ್‌ಗೆ ನೀವು 60 ವರ್ಷಗಳನ್ನು ನೀಡಿದ್ದೀರಿ, ತನಗೆ 60 ತಿಂಗಳುಗಳನ್ನು ನೀಡಿ ಮತ್ತು ತಾನು ‘ನವ ಭಾರತ’ವನ್ನು ನಿರ್ಮಿಸುವುದಾಗಿ ಅವರು ಜನರಿಗೆ ಹೇಳುತ್ತಿದ್ದರು. 120 ತಿಂಗಳುಗಳ ಬಳಿಕ ಅದ್ಯಾವ ‘ನವ ಭಾರತ’ವನ್ನು ಅವರು ನೀಡಿದ್ದಾರೆ ಎಂದು ಸಿಬಲ್ ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕರ ವಿರುದ್ಧ ‘ಮುಜ್ರಾ’ ಹೇಳಿಕೆಗಾಗಿ ಮೋದಿಯವರನ್ನು ತರಾಟೆಗೆತ್ತಿಕೊಂಡ ಸಿಬಲ್, ತೋರಿಸಬಹುದಾದ ಯಾವುದೇ ಸಾಧನೆ ಇದ್ದಿದ್ದರೆ ಅವರು ಮುಜ್ರಾ, ಮಂಗಳಸೂತ್ರ, ವೋಟ್ ಜಿಹಾದ್ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದರು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News