ನಿಮಗೆ ನನ್ನ ಹೃದಯದಲ್ಲಿ ಪ್ರಥಮ ಸ್ಥಾನ ಎಂದು ಪ್ರಶಂಸಿಸಿದ ಧನಕರ್‌ಗೆ ಖರ್ಗೆ ನೀಡಿದ ಪ್ರತಿಕ್ರಿಯೆ ಏನು?

Update: 2023-07-25 14:06 GMT

Photo: ಮಲ್ಲಿಕಾರ್ಜುನ ಖರ್ಗೆ | PTI 

ಹೊಸದಿಲ್ಲಿ: ಮಂಗಳವಾರ ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ನಡೆದ ಕೋಲಾಹಲದ ನಡುವೆಯೇ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಲಘು ಧಾಟಿಯ ಮಾತುಗಳ ವಿನಿಮಯವೂ ನಡೆಯಿತು. ಮಣಿಪುರ ಹಿಂಸಾಚಾರದ ಕುರಿತು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ ನಾಯಕರ ಪೈಕಿ ನಾನೂ ಕೂಡಾ ಒಬ್ಬ ಎಂದು ಖರ್ಗೆ ಹೇಳಿದಾಗ, "ಸಮಯ ಅವಕಾಶ ನೀಡಿದಾಗ ಅದಾಗಲಿದೆ.. ಆದರೆ, ನೀವು ನನ್ನ ಹೃದಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೀರಿ" ಎಂದು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು hindustantimes.com ವರದಿ ಮಾಡಿದೆ.

ಈ ಮಾತಿಗೆ ತಿರುಗೇಟು ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಿಮ್ಮ ಹೃದಯ ತುಂಬಾ ದೊಡ್ಡದು ಎಂಬುದು ನನಗೆ ತಿಳಿದಿದೆ... ಆದರದು ಮತ್ತೊಂದು ಬದಿಯಲ್ಲಿದೆ" ಎಂದು ವ್ಯಂಗ್ಯವಾಡಿದರು.

ಕೂಡಲೇ ಈ ರಾಜಕೀಯ ತಿರುಗೇಟಿಗೆ ರಾಜ್ಯಸಭೆಯ ಸದಸ್ಯರು ನಗೆಗಡಲಲ್ಲಿ ತೇಲಿದರು. ಧನಕರ್ ಕೂಡಾ ಖರ್ಗೆ ಮಾತಿಗೆ ಮುಗುಳ್ನಕ್ಕರು.

ನಿಯಮಾವಳಿ 267ರ ಅಡಿ ದೈನಂದಿನ ಕಾರ್ಯಕಲಾಪಗಳನ್ನು ಅಮಾನತುಗೊಳಿಸಿ, ಮಣಿಪುರದ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕರಾದ ಖರ್ಗೆ ಮನವಿ ಮಾಡಿದಾಗ ಈ ಮಾತಿನ ವಿನಿಮಯ ನಡೆಯಿತು. ಈ ನಿಯಮಾವಳಿಯು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ವಿಷಯವನ್ನು ಚರ್ಚಿಸಲು ಪಟ್ಟಿ ಮಾಡಲಾದ ಕಾರ್ಯಕಲಾಪಗಳನ್ನು ರದ್ದುಗೊಳಿಸಬೇಕು ಎಂದು ನೋಟಿಸ್ ನೀಡುವ ಅಧಿಕಾರವನ್ನು ಸಂಸದರಿಗೆ ನೀಡುತ್ತದೆ.

ಗುರುವಾರದಿಂದ ಪ್ರಾರಂಭಗೊಂಡಿರುವ ಮುಂಗಾರು ಸಂಸತ್ ಅಧಿವೇಶನವು ಮಣಿಪುರ ಕುರಿತ ಚರ್ಚೆಯಿಂದಾಗಿ ಅಸ್ತವ್ಯಸ್ತಗೊಂಡಿದೆ. ಈ ಕುರಿತು ಚರ್ಚೆ ಮುಕ್ತಾಯಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ವಿಷಯದ ಕುರಿತು ಉಭಯ ಸದನಗಳಲ್ಲೂ ವಿಸ್ತೃತ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.

ಮಣಿಪುರ ಕುರಿತು ಚರ್ಚಿಸಲು ಸರ್ಕಾರ ಸಮ್ಮತಿ ಸೂಚಿಸಿದ್ದರೂ, ಅಧಿವೇಶನಕ್ಕೆ ಅಡ್ಡಿಯುಂಟಾಗಲು ಮೋದಿ ಹೇಳಿಕೆ ನೀಡಬೇಕು ಎಂಬ ಆಗ್ರಹ ಕಾರಣ ಎಂದು ಅದು ಹೇಳಿದೆ. ಸಂಸತ್ತಿನ ಮುಂಗಾರು ಅಧಿವೇಶನ ಉದ್ಘಾಟನೆಗೊಂಡ ಗುರುವಾರದಂದು ಮೇ 3ರಂದು ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಸ್ಫೋಟಗೊಂಡಿದ್ದ ಜನಾಂಗೀಯ ಸಂಘರ್ಷದ ಮರುದಿನ ನಡೆದಿದ್ದ ಇಬ್ಬರು ಕುಕಿ ಮಹಿಳೆಯರ ನಗ್ನ ಮೆರವಣಿಗೆ ಹಾಗೂ ಅವರ ಮೇಲೆ ನಡೆಸಿದ್ದ ಲೈಂಗಿಕ ದೌರ್ಜನ್ಯವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದರು.

ಈ ಘಟನೆಯ ವಿಡಿಯೊ ಕಳೆದ ಬುಧವಾರದಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಮಣಿಪುರ ಹಿಂಸಾಚಾರದ ಕುರಿತು ಚರ್ಚಿಸಲು ಸರ್ಕಾರ ಸಿದ್ಧ ಎಂದು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಚರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News