ಮಹಿಳೆ ಏನು ಧರಿಸುತ್ತಾಳೆಂಬುದು ಆಕೆಯ ನಿರ್ಧಾರ, ಜವಾಬ್ದಾರಿ: ಹಿಜಾಬ್ ಕುರಿತಂತೆ ರಾಹುಲ್ ಗಾಂಧಿ
ಲಕ್ನೋ: ಹಿಜಾಬ್ ಸೇರಿದಂತೆ ತಾವು ಧರಿಸುವ ಉಡುಪಿನ ಕುರಿತಾದ ಮಹಿಳೆಯರ ಆಯ್ಕೆಯನ್ನು ಗೌರವಿಸಬೇಕು, ಒಬ್ಬ ವ್ಯಕ್ತಿ ಯಾವ ಉಡುಪು ಧರಿಸಬೇಕು ಎಂಬ ಕುರಿತಂತೆ ಯಾರೂ ತಮ್ಮ ನಿರ್ಧಾರವನ್ನು ಅವರ ಮೇಲೆ ಹೇರುವಂತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರಾ ಭಾಗವಾಗಿ ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ಸಂವಾದ ವೇಳೆ ಅವರು ಮೇಲಿನಂತೆ ಹೇಳಿದರು.
ಸಂವಹನದ ವೇಳೆ ವಿದ್ಯಾರ್ಥಿನಿಯೊಬ್ಬರು ಕರ್ನಾಟಕದಲ್ಲಿ ಕೆಲ ಸಮಯದ ಹಿಂದೆ ಭುಗಿಲೆದ್ದಿದ್ದ ಹಿಜಾಬ್ ವಿವಾದವನ್ನು ಉಲ್ಲೇಖಿಸಿ, "ನೀವು ಪ್ರಧಾನಿಯಾಗಿದ್ದರೆ ನಿಮ್ಮ ಅಭಿಪ್ರಾಯ ಏನಾಗಿರುತ್ತಿತ್ತು?" ಎಂದು ರಾಹುಲ್ ಆವರನ್ನು ಕೇಳಿದ್ದರು.
“ಮಹಿಳೆಯೊಬ್ಬಳು ಯಾವ ಉಡುಪು ಧರಿಸಲು ಬಯಸುತ್ತಾಳೆ ಎಂಬುದು ಆಕೆಗೆ ಬಿಟ್ಟ ವಿಚಾರ. ಆಕೆಗೆ ಆ ಅವಕಾಶ ಇರಬೇಕು. ಇದು ನನ್ನ ಅಭಿಪ್ರಾಯ. ನೀವೇನು ಧರಿಸುತ್ತೀರಿ ಅದು ನಿಮ್ಮ ಜವಾಬ್ದಾರಿ, ಏನನ್ನು ಧರಿಸಬೇಕೆಂಬುದು ನಿಮ್ಮ ನಿರ್ಧಾರ. ನೀವೇನು ಧರಿಸಬೇಕು ಎಂಬುದನ್ನು ಬೇರೆ ಯಾರೂ ನಿರ್ಧರಿಸಬಾರದು,” ಎಂದು ರಾಹುಲ್ ಹೇಳಿದರು.