ಎಲ್ಲಿ ಹೋಯಿತು ಪ್ರಧಾನಿ ಮೋದಿಯವರ ಒಂದು ದೇಶ ಒಂದು ಚುನಾವಣೆ? : ಶರದ್ ಪವಾರ್ ಪ್ರಶ್ನೆ
ನಾಗಪುರ : ಪ್ರಧಾನಿ ನರೇಂದ್ರ ಮೋದಿ ́ಒಂದು ದೇಶ ಒಂದು ಚುನಾವಣೆʼಯ ಪರ ವಾದಿಸುತ್ತಿದ್ದರೂ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳನ್ನೇಕೆ ಒಂದೇ ಸಮಯದಲ್ಲಿ ನಡೆಸುತ್ತಿಲ್ಲ ಎಂದು ಶನಿವಾರ ಎನ್ಸಿ ಪಿ(ಎಸ್ಪಿ)ಯ ವರಿಷ್ಠ ಶರದ್ ಪವಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಹೇಳುವುದರಲ್ಲಿ ಯಾವುದೇ ಸತ್ಯಾಂಶವಿರುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ‘ಒಂದು ದೇಶ ಒಂದು ಚುನಾವಣೆ’ಯನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದರು.
ಆದರೆ, ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ರಾಜ್ಯಗಳಿಗೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ಪ್ರಕಟಿಸಿರುವ ಭಾರತೀಯ ಚುನಾವಣಾ ಆಯೋಗವು, 2019ರಲ್ಲಿ ಹರ್ಯಾಣ ವಿಧಾನಸಭೆಯೊಂದಿಗೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಸಿತ್ತಾದರೂ, ಈ ಬಾರಿ ಭದ್ರತಾ ಪಡೆಗಳ ಕೊರತೆಯನ್ನು ಮುಂದು ಮಾಡಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಿಸುವುದನ್ನು ವಿಳಂಬಗೊಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎನ್ಸಿಚಪಿ(ಎಸ್ಪಿವ) ವರಿಷ್ಠ ಶರದ್ ಪವಾರ್, “ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭೆಗೆ ಚುನಾವಣೆಗಳನ್ನು ಘೋಷಿಸಲಾಗಿದೆಯಾದರೂ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ಚುನಾವಣೆಯನ್ನು ಪ್ರಕಟಿಸಿಲ್ಲ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಹೇಳುವ ಮಾತಿನಲ್ಲಿ ಯಾವುದೇ ಸತ್ಯಾಂಶವಿರುವುದಿಲ್ಲ” ಎಂದು ಟೀಕಿಸಿದರು.