ಲೋಕಸಭಾ ಚುನಾವಣೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ರಕೀಬುಲ್ ಹುಸೇನ್ ಯಾರು?

Update: 2024-06-06 08:36 GMT

ರಕೀಬುಲ್ ಹುಸೇನ್ | PC : X \ @rakibul_inc

ಹೊಸದಿಲ್ಲಿ: ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಹೇಳಲಾಗುತ್ತಿತ್ತು, ಆದರೆ ಕಳೆದ ಬಾರಿ ಸುಮಾರು ಐದು ಲಕ್ಷ ಮತಗಳ ಅಂತರದಿಂದ ವಾರಣಾಸಿಯಲ್ಲಿ ಗೆದ್ದಿದ್ದ ಮೋದಿ ಈ ಬಾರಿ ಅಲ್ಲಿ ಕೇವಲ ಒಂದೂವರೆ ಲಕ್ಷ ಮತಗಳಿಂದ ಗೆದ್ದಿದ್ದಾರೆ.

ಆದರೆ ಎಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿ ಈ ಬಾರಿ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದವರು ರಕೀಬುಲ್ ಹುಸೇನ್. ಅಸ್ಸಾಂ ನಲ್ಲಿ ಕಾಂಗ್ರೆಸ್ ನ ಸೋಲಿಲ್ಲದ ಸರದಾರ ರಕೀಬುಲ್ ಹುಸೇನ್ ದುಬ್ರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ಇಳಿಸಿ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪ್ರಚಂಡ ಜಯ ಗಳಿಸಿದ್ದಾರೆ.

ದೊಡ್ಡ ಲೋಕಸಭಾ ಕ್ಷೇತ್ರವಾದ ದುಬ್ರಿಯಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಬೋಟ್ ಮೂಲಕ ನದಿ ದಾಟಬೇಕಾಗುತ್ತದೆ. ರಕೀಬುಲ್ ಹಸನ್ ರವರು ಬೋಟ್ ನಲ್ಲಿ ನದಿ ದಾಟಿ ತನ್ನ ಪ್ರಚಾರ ಮಾಡಿ ಭರ್ಜರಿ ಜಯ ಗಳಿಸಿದ್ದಾರೆ.

ಇಂದೋರ್ ನಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಹನ್ನೊಂದು ಮುಕ್ಕಾಲು ಲಕ್ಷಕ್ಕಿಂತ ಹೆಚ್ಚು ಅಂತರದಿಂದ ಗೆದ್ದಿದ್ದಾರೆ. ಆದರೆ ಇಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದು ಬಿಜೆಪಿ ಸೇರಿದ್ದರು. ಬಿಜೆಪಿ ಸಚಿವರೇ ಕರೆದುಕೊಂಡು ಹೋಗಿ ನಾಮಪತ್ರ ವಾಪಸ್ ಪಡೆದಿದ್ದರು. ಅಲ್ಲಿ ಪ್ರಮುಖ ಪ್ರತಿಪಕ್ಷವೇ ಕಣದಲ್ಲಿರಲಿಲ್ಲ. ಪರಿಣಾಮ ಅಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ನೋಟಾ ಮತ ಚಲಾಯಿಸಲಾಗಿದೆ. ಆದ್ದರಿಂದ ಇಲ್ಲಿ ಸರಿಯಾದ ಸ್ಪರ್ಧೆಯ ವಾತಾವರಣವೇ ಇರಲಿಲ್ಲ.

ಹಾಗಾಗಿ ನೇರಾ ನೇರ ಸ್ಪರ್ಧೆಯಿದ್ದ, ಆ ಪ್ರದೇಶದ ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದ ಕ್ಷೇತ್ರಗಳ ಲೆಕ್ಕದಲ್ಲಿ, ಇಡೀ ದೇಶದಲ್ಲೇ ಅತಿ ಹೆಚ್ಚು ಅಂತರದಿಂದ ರಕೀಬುಲ್ ಹುಸೇನ್ ಗೆಲುವು ಸಾಧಿಸಿದ್ದಾರೆ.

ರಕೀಬುಲ್ ಹುಸೇನ್ ಅವರು ಅಸ್ಸಾಮಿನ ದುಬ್ರಿ ಕ್ಷೇತ್ರದಿಂದ ಹಾಲಿ ಸಾಂಸದ ಎಐಯುಡಿಎಫ್ ನ ಬದ್ರುದ್ದೀನ್ ಅಜ್ಮಲ್ ಅವರನ್ನು 10 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ದುಬ್ರಿಯಲ್ಲಿ 27 ಲಕ್ಷ ಮತದಾರರಿದ್ದು, ಇಲ್ಲಿ 92.1 ಶೇಕಡಾ ಮತದಾನವಾಗಿತ್ತು. ಮೂರನೇ ಹಂತದವರೆಗೂ ಇದುವೇ ಇಡೀ ದೇಶದಲ್ಲಿ ಒಂದು ಕ್ಷೇತ್ರದಲ್ಲಾದ ಅತಿ ಹೆಚ್ಚು ಮತದಾನವಾಗಿತ್ತು. ರಕೀಬುಲ್ ಹುಸೇನ್ ಅವರು 60% ಮತಗಳನ್ನು ಪಡೆದಿದ್ದಾರೆ. ಅವರಿಗೆ ಒಟ್ಟು 14.5 ಲಕ್ಷ ಮತಗಳು ಸಿಕ್ಕಿದ್ದರೆ ಬದ್ರುದ್ದೀನ್ ಅಜ್ಮಲ್ ಅವರಿಗೆ ಕೇವಲ 4.5 ಲಕ್ಷ ಮತಗಳು ಪಡೆಯಲು ಸಾಧ್ಯವಾಗಿದೆ. ಇನ್ನು ಇಲ್ಲಿ ಬಿಜೆಪಿ ಮೈತ್ರಿಯಲ್ಲಿದ್ದು ಮೂರನೇ ಸ್ಥಾನಕ್ಕೆ ಕುಸಿದು ಹೋಗಿದೆ.

ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಅಸ್ಸಾಮಿನಲ್ಲಿ ಮೂರನೇ ಅತಿ ದೊಡ್ಡ ಪಕ್ಷ. ಆದರೆ ಈ ಬಾರಿ ಅವರು ಸ್ಪರ್ಧಿಸಿದಂತಹ ಮೂರೂ ಕ್ಷೇತ್ರಗಳಲ್ಲಿ ಸೋಲಿನ ರುಚಿ ನೋಡಬೇಕಾಗಿದೆ. ಬದ್ರುದ್ದೀನ್ ಅಜ್ಮಲ್ ಅವರು ಈ ಕ್ಷೇತ್ರದಿಂದ 2009 ರಿಂದ ಸತತ ಮೂರು ಬಾರಿ ಸಾಂಸದರಾಗಿ ಚುನಾಯಿತರಾಗಿದ್ದರು.

27 ಲಕ್ಷ ಮತದಾರರನ್ನು ತಲುಪುವುದೆಂದರೆ ಸುಲಭದ ಕೆಲಸವೇನು ಅಲ್ಲ. ರಕೀಬುಲ್ ಹುಸೇನ್ ಇಲ್ಲಿ ಒಮ್ಮೆ ಬೋಟಿನಲ್ಲಿ ಹೋಗಿ ಪ್ರಚಾರ ಮಾಡಿದರೆ ಇನ್ನೊಂಮ್ಮೆ ಸ್ಕೂಟರ್ ಚಲಾಯಿಸಿ ಪ್ರಚಾರ ಮಾಡ್ತಾರೆ. ಈ ಬಾರಿ ಕಳೆದ ಬಾರಿಯಂತೆ ಕಾಂಗ್ರೆಸ್ಸಿಗೆ ಅಸ್ಸಾಮಿನಲ್ಲಿ ಮೂರು ಕ್ಷೇತ್ರಗಳಲ್ಲಿ ವಿಜಯ ಸಿಕ್ಕಿದೆ. ಆದರೆ ಈ ಬಾರಿ ಕಾಂಗ್ರೆಸ್ ಗೆಲುವು ಕಷ್ಟ ಎಂದು ಹಲವರು ಹೇಳಿದ್ದರು.

ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ ಅವರ ಗೆಲುವು ಕೂಡ ಕಷ್ಟ ಎಂದು ಹಲವರು ಹೇಳಿದ್ದರು. ಕ್ಷೇತ್ರ ಬದಲಿಸುವ ಪರಿಸ್ಥಿತಿ ಗೌರವ್ ಗೊಗೋಯಿ ಅವರಿಗೆ ಎದುರಾಗಿತ್ತು. ಆದರೆ ಅವರು ಈ ಬಾರಿ ಹೊಸ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ತಪನ್ ಗೊಗೋಯ್ ಅವರನ್ನು ಸೋಲಿಸಿದ್ದಾರೆ.

ಅಸ್ಸಾಂ ಸಿಎಂ ಬಿಜೆಪಿಯ ಹಿಮಂತ ಬಿಸ್ವಾ ಶರ್ಮ ಅವರು ತಮ್ಮ ಹಳೆಯ ಪಕ್ಷ ಕಾಂಗ್ರೆಸ್ ನ ಅಭ್ಯರ್ಥಿಗಳ ವಿರುದ್ಧ ಬಹಳ ಆಕ್ರಮಣಕಾರಿಯಾಗಿಯೇ ಪ್ರಚಾರ ನಡೆಸಿದ್ದರು. ರಕೀಬುಲ್ ಹುಸೇನ್ ಅವರು ಈಗ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ಉಪನಾಯಕ. ಅವರು ಐದು ಬಾರಿ ಶಾಸಕರಾದವರು. 2016ರಲ್ಲಿ ಬಿಜೆಪಿ ಅಲೆ ಇದ್ದಾಗಲೂ ಅವರು ಗೆಲುವು ಸಾಧಿಸಿದ್ದರು.

ಹಿಮಂತ ಬಿಸ್ವಾ ಶರ್ಮ ಅವರು ಕೂಡ ಒಮ್ಮೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೆ ರಕೀಬುಲ್ ಹುಸೇನ್ ಈವರೆಗೂ ಸೋಲು ಕಂಡಿಲ್ಲ.

ರಕೀಬುಲ್ ಹುಸೇನ್ ಅಸ್ಸಾಂ ಕಾಂಗ್ರೆಸ್ಸಿನ ಹಿರಿಯ ನಾಯಕ. ಎನ್ ಎಸ್ ಐ ಯು ಐ ನಿಂದ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಇವರು ನಂತರ ಅಸ್ಸಾಮಿನ ಎನ್ ಎಸ್ ಐ ಯು ಐ ಅಧ್ಯಕ್ಷರಾಗಿದ್ದರು. ಇವರ ತಂದೆ ಅವರು ಕೂಡ ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದವರು.

ಬಿಜೆಪಿಯ ಘಟಾನುಘಟಿ ನಾಯಕರಾದ ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂದಿಯಾ, ಇವರೆಲ್ಲರಿಗಿಂತಲೂ ಹೆಚ್ಚು ಅಂತರದಿಂದ ರಕೀಬುಲ್ ಹುಸೇನ್ ವಿಜಯಿಯಾಗಿದ್ದಾರೆ. ಮುಸ್ಲಿಂ ನಾಯಕರಿಗೆ ಎಲ್ಲಾ ಪಕ್ಷಗಳು ಟಿಕೆಟ್ ನೀಡಲು ಹಿಂಜರಿಯುತ್ತಿರುವಂತಹ ಈ ಕಾಲದಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿ 10 ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ಬಹು ದೊಡ್ಡ ಸಾಧನೆ.

ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಡೋದಿಲ್ಲ. ಕಾಂಗ್ರೆಸ್ ಕೂಡ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ಲೋದು ಕಷ್ಟ ಅಂತ ನೆಪ ಹೇಳಿ ಟಿಕೆಟ್ ನಿರಾಕರಿಸುದೇ ಹೆಚ್ಚು ಎಂಬ ಟೀಕೆಗಳ ನಡುವೆ ದೇಶದಲ್ಲೇ ಅತ್ಯಂತ ದೊಡ್ಡ ದಾಖಲೆಯ ಅಂತರದಲ್ಲಿ ರಕೀಬುಲ್ ಹುಸೇನ್ ಗೆದ್ದು ತೋರಿಸಿದ್ದಾರೆ.

ಈ ಬಾರಿ ಈಶಾನ್ಯ ಭಾಗದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಮುನ್ನಡೆ ಪಡೆದಿದೆ. ನಾಲ್ಕು ಸೀಟ್ ಇದ್ದ ಕಾಂಗ್ರೆಸ್ ಈ ಬಾರಿ ಈಶಾನ್ಯ ಭಾಗದಲ್ಲಿ ಆರು ಸೀಟುಗಳಿಗೆ ಏರಿದೆ. ಮಣಿಪುರದ ಎರಡು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News