ರಾಮೇಶ್ವರ ಕೆಫೆ ದಾಳಿಕೋರರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ನಿಮಗೆ ಹೇಳಿದವರು ಯಾರು?: ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

Update: 2024-07-11 10:06 GMT

ಶೋಭಾ ಕರಂದ್ಲಾಜೆ

ಚೆನ್ನೈ: ಬೆಂಗಳೂರಿನ ರಾಮೇಶ್ವರಮ್ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ ಬಾಂಬ್ ಸ್ಫೋಟ ಘಟನೆಯ ಸಂಚುಕೋರರು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಸಂಸದೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಏಕೆ ಪ್ರತಿಪಾದಿಸಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.

ಶೋಭಾ ಕರಂದ್ಲಾಜೆಯವರ ಹೇಳಿಕೆ ಬಗ್ಗೆ ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಮಧುರೈ ನಗರದ ಸೈಬರ್ ಅಪರಾಧ ಪೊಲೀಸರು ದಾಖಲಿಸಿದ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ.ಜಯಚಂದ್ರ ಅವರು ಶೋಭಾ ಕರಂದ್ಲಾಜೆಯವರನ್ನು ಈ ರೀತಿ ಪ್ರಶ್ನಿಸಿದರು ಎಂದು barandbench.com ವರದಿ ಮಾಡಿದೆ.

"ನೀವು ಎನ್‍ಐಎ ಚೆನ್ನೈನಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಮುನ್ನವೆ ಈ ಹೇಳಿಕೆ ನೀಡಿದ್ದೀರಿ. ಅಂದರೆ ಈ ಬಗ್ಗೆ ಮಾಹಿತಿ ಇದ್ದರಿರಬೇಕು. ತರಬೇತಿ ಪಡೆದ ವ್ಯಕ್ತಿಗಳು ಯಾರು, ತರಬೇತಿ ನೀಡಿದವರು ಯಾರು, ಅವರು ಏನು ಮಾಡಿದರು ಎನ್ನುವುದು ನಿಮಗೆ ಗೊತ್ತು. ಈ ಅಪರಾಧದದ ಬಗ್ಗೆ ಒಂದಷ್ಟು ಮಾಹಿತಿಗಳು ನಿಮಗೆ ಲಭ್ಯವಾದಲ್ಲಿ, ನೀವು ಅದನ್ನು ಪೊಲೀಸರಿಗೆ ತಿಳಿಸಬೇಕಿತ್ತು. ಜವಾಬ್ದಾರಿಯುತ ನಾಗರಿಕರಾಗಿ ಸಚಿವರಾದ ನೀವು ಅದನ್ನು ಮಾಡಿಲ್ಲ" ಎಂದು ನ್ಯಾಯಮೂರ್ತಿ ಹೇಳಿದರು.

ಕರಂದ್ಲಾಜೆ ಪರ ವಕೀಲರಾದ ಆರ್.ಹರಿಪ್ರಸಾದ್ ಅವರು ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ಹೇಳಿದಾಗ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸದಂತೆ ಮಧ್ಯಂತರ ಇಂಜಂಕ್ಷನ್ ನೀಡಬೇಕು ಎಂದು ಅವರು ಕೋರಿದರು.

ಸರ್ಕಾರಿ ವಲೀಯ ಕೆಎಂಡಿ ಮುಹಿಲನ್ ಈ ಮನವಿಯನ್ನು ಬಲವಾಗಿ ವಿರೋಧಿಸಿ, ಕರಂದ್ಲಾಜೆ ಈ ಹೇಳಿಕೆ ನೀಡಿದ ಸಂದರ್ಶನದ ವಿಡಿಯೊ ತುಣುಕನ್ನು ನ್ಯಾಯಾಲಯ ವೀಕ್ಷಿಸಬೇಕು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News