"ನನಗೆ ಏನು ಬೇಕು ಅದನ್ನು ನಾನು ಧರಿಸುತ್ತೇನೆ": ಫೆಲೆಸ್ತೀನ್ ಪರ ಬ್ಯಾಗ್ ವಿವಾದಕ್ಕೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ
ಹೊಸದಿಲ್ಲಿ: ʼನಾನು ಏನು ಧರಿಸಬೇಕೆಂಬುದನ್ನು ಯಾರು ನಿರ್ಧರಿಸುತ್ತಾರೆ? ನನಗೆ ಏನು ಬೇಕು ಅದನ್ನು ನಾನು ಧರಿಸುತ್ತೇನೆʼ ಎಂದು ಫೆಲೆಸ್ತೀನ್ ಪರ ಬ್ಯಾಗ್ ಧರಿಸಿ ಸಂಸತ್ತಿಗೆ ಬಂದಿರುವ ಬಗ್ಗೆ ವ್ಯಕ್ತವಾದ ಟೀಕೆಗೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದ್ದು, ಟೀಕೆಯನ್ನು ʼಪಿತೃಪ್ರಭುತ್ವ' ಎಂದು ಕರೆದಿದ್ದಾರೆ.
ಬ್ಯಾಗ್ ಬಗೆಗಿನ ಟೀಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, "ನಾನು ಯಾವ ಬಟ್ಟೆಯನ್ನು ಧರಿಸಬೇಕೆಂದು ಯಾರು ನಿರ್ಧರಿಸುತ್ತಾರೆ? ನಾನಲ್ವ, ಮಹಿಳೆ ಏನು ಧರಿಸಬೇಕೆಂದು ನೀವು ನಿರ್ಧರಿಸುವುದಾಗಿದ್ದರೆ ಅದು ಪಿತೃಪ್ರಭುತ್ವವಾಗಿದೆ, ನಾನು ಅದನ್ನು ಅನುಸರಿಸುವುದಿಲ್ಲ, ನನಗೆ ಏನು ಬೇಕು ಅದನ್ನು ನಾನು ಧರಿಸುತ್ತೇನೆʼ ಎಂದು ಹೇಳಿದ್ದಾರೆ.
ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ʼಫೆಲೆಸ್ತೀನ್ʼ ಎಂದು ಬರೆದ ಚೀಲವನ್ನು ಹಾಕಿಕೊಂಡು ಸಂಸತ್ತಿಗೆ ತೆರಳಿದ್ದು, ಆ ಮೂಲಕ ಫೆಲೆಸ್ತೀನ್ ಜನರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಪ್ರಿಯಾಂಕ ಅವರ ಚೀಲವು, "ಫೆಲೆಸ್ತೀನ್" ಎಂಬ ಪದ ಮತ್ತು ಕಲ್ಲಂಗಡಿ ಸೇರಿದಂತೆ ಫೆಲೆಸ್ತೀನ್ ಲಾಂಛನಗಳನ್ನು ಹೊಂದಿದ್ದು, ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಆಡಳಿತಾರೂಢ ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿಗೆ ಈ ಬಗ್ಗೆ ಟೀಕಿಸಿದ್ದರು.