ಮಧ್ಯಪ್ರದೇಶ | ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೋರ್ವನಿಗೆ 100ಕ್ಕೆ 101.66 ಅಂಕ: ಭುಗಿಲೆದ್ದ ಪ್ರತಿಭಟನೆ
ಇಂದೋರ್: ಮಧ್ಯಪ್ರದೇಶ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೋರ್ವ ಒಟ್ಟು 100 ಅಂಕಗಳಲ್ಲಿ 101.66 ಅಂಕಗಳನ್ನು ಪಡೆದಿರುವ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಉದ್ಯೋಗಾಕಾಂಕ್ಷಿಗಳು ಇಂದೋರ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಪ್ರದೇಶದ ಉದ್ಯೋಗಿಗಳ ಆಯ್ಕೆ ಮಂಡಳಿ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 13ರಂದು ಪ್ರಕಟಿಸಲಾಗಿದೆ. ಅರಣ್ಯ ಮತ್ತು ಕಾರಾಗೃಹ ಇಲಾಖೆಗಳ ಜಂಟಿ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು ಒಟ್ಟು 100ಕ್ಕೆ 101.66 ಅಂಕಗಳನ್ನು ಪಡೆದು ಆಯ್ಕೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಕೆಲ ಉದ್ಯೋಗಾಕಾಂಕ್ಷಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ಹಸ್ತಾಂತರಿಸಿದ್ದಾರೆ.
ವಿವಾದ ಭುಗಿಲೆದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿದ ನೇಮಕಾತಿ ಮಂಡಳಿ, ನಿಯಮಗಳ ಪ್ರಕಾರ ನೇಮಕಾತಿ ಪರೀಕ್ಷೆಯಲ್ಲಿ "ಸಾಮಾನ್ಯೀಕರಣದ ಪ್ರಕ್ರಿಯೆ"ಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು(100) ಹೆಚ್ಚು ಮತ್ತು ಶೂನ್ಯಕ್ಕಿಂತ ಕಡಿಮೆ ಪಡೆಯಬಹುದು ಎಂದು ತಿಳಿಸಿದೆ.
ಈ ಕುರಿತು ಪ್ರತಿಭಟನಾಕಾರರ ತಂಡದ ನೇತೃತ್ವ ವಹಿಸಿದ್ದ ಗೋಪಾಲ್ ಪ್ರಜಾಪತ್ ಎಂಬವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನೇಮಕಾತಿ ಪರೀಕ್ಷೆಯಲ್ಲಿ ಅಳವಡಿಸಿಕೊಂಡಿರುವ ಸಾಮಾನ್ಯೀಕರಣ ಪ್ರಕ್ರಿಯೆಯಿಂದ ಅಭ್ಯರ್ಥಿಯೊಬ್ಬರು ಒಟ್ಟು ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು, ನಾವು ʼಸಾಮಾನ್ಯೀಕರಣʼ ಎಂಬ ಅನ್ಯಾಯದ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಫಾರೆಸ್ಟ್ ಗಾರ್ಡ್, ಫೀಲ್ಡ್ ಗಾರ್ಡ್ ಮತ್ತು ಜೈಲು ಗಾರ್ಡ್ ಹುದ್ದೆಗಳಿಗೆ ನಡೆದ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.