ಫೆಬ್ರವರಿಯಲ್ಲಿ ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷ ಆಯ್ಕೆ ಸಾಧ್ಯತೆ
Update: 2024-12-17 06:45 GMT
ಹೊಸದಿಲ್ಲಿ: ಹಾಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬದಲಿಗೆ ನೂತನ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜನವರಿ ಮಧ್ಯದೊಳಗೆ ಅರ್ಧದಷ್ಟು ರಾಜ್ಯ ಘಟಕಗಳ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸದ್ಯ ಪಕ್ಷದ ಸಂಘಟನಾತ್ಮಕ ಚುನಾವಣೆಗಳು ಪ್ರಗತಿಯಲ್ಲಿವೆ. ಈ ಪ್ರಕ್ರಿಯೆಯು ನೂತನ ರಾಷ್ಟ್ರಾಧ್ಯಕ್ಷರ ಚುನಾವಣೆಗೆ ದಾರಿ ಮಾಡಿಕೊಡಲಿದೆ.
ಸುಮಾರು ಶೇ. 60ರಷ್ಟು ರಾಜ್ಯ ಘಟಕಗಳ ಅಧ್ಯಕ್ಷರ ಅವಧಿ ಮೀರಿ ಹೋಗಿದೆ. ಅವರ ಬದಲಿ ಆಯ್ಕೆ ಪ್ರಕ್ರಿಯೆಯು ಮುಂದಿನ ತಿಂಗಳ ಮಧ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸದ್ಯ ಕೇಂದ್ರ ಆರೋಗ್ಯ ಸಚಿವರಾಗಿರುವ ಜೆ.ಪಿ.ನಡ್ಡಾ, ಫೆಬ್ರವರಿ 2020ರಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿದ್ದರು.