ಐತಿಹಾಸಿಕ ಯುದ್ಧ ಚಿತ್ರ ಸ್ಥಳಾಂತರ; ಭುಗಿಲೆದ್ದ ವಿವಾದ

Update: 2024-12-17 06:18 GMT

ಹೊಸದಿಲ್ಲಿ: ಬಾಂಗ್ಲಾದೇಶ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಶರಣಾದ ಐತಿಹಾಸಿಕ ಯುದ್ಧ ಚಿತ್ರವನ್ನು ಸೌತ್ ಬ್ಲಾಕ್‍ನಲ್ಲಿರುವ ಸೇನೆಯ ಮುಖ್ಯಸ್ಥರ ಲಾಂಜ್‍ನಿಂದ ಸ್ಥಳಾಂತರಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲವು ಮಂದಿ ನಿವೃತ್ತ ಯೋಧರು ಮತ್ತು ಪ್ರಿಯಾಂಕಾಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಸ್ಥಳಾಂತರವನ್ನು ವಿರೋಧಿಸಿದ್ದು, ಈ ಆಕರ್ಷಕ ಚಿತ್ರ ದೆಹಲಿ ಕಂಟೋನ್ಮೆಂಟ್‍ನ ಮಾಣಿಕ್‍ಶಾ ಸೆಂಟರ್‍ನಲ್ಲಿ ಸೂಕ್ತ ಜಾಗವನ್ನು ಅಲಂಕರಿಸಲಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.

ಆಕರ್ಷಕ ಫೋಟೊದ ಮರು ಮುದ್ರಣವು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಎ.ಎ.ಕೆ ನೈಝಿಯವರು 1971ರ ಡಿಸೆಂಬರ್‍ನಲ್ಲಿ ಶರಣಾಗತಿಗೆ (ಇನ್‍ಸ್ಟ್ರುಮೆಂಟ್ ಆಫ್ ಸರಂಡರ್) ಸಹಿ ಮಾಡುತ್ತಿರುವ ಚಿತ್ರಣವಿದೆ. ಅವ ಪಕ್ಕದಲ್ಲಿ ಲೆಫ್ಟಿನೆಂಟ್ ಜನರಲ್ ಜಗಜೀತ್ ಸಿಂಗ್ ಅರೋರಾ ಮತ್ತು ಇತರರು ನಿಂತಿದ್ದರು. ಈ ಚಿತ್ರ ಸೇನಾ ಮುಖ್ಯಸ್ಥರು ಇಲ್ಲಿಗೆ ಭೇಟಿ ನೀಡುವ ಗಣ್ಯರನ್ನು ಭೇಟಿ ಮಾಡುವ ಲಾಂಜ್ ಅನ್ನು ಹಲವು ವರ್ಷಗಳಿಂದ ಅಲಂಕರಿಸಿತ್ತು.

ಕೆಲ ದಿನಗಳ ಹಿಂದೆ ಇದನ್ನು ಸ್ಥಳಾಂತರಿಸಲಾಗಿದ್ದು, ಇದರ ಬದಲು ಪೂರ್ವ ಲಡಾಖ್ ಮತ್ತು ಹಿಮಚ್ಛಾದಿತ ಪರ್ವತಗಳ ನಡುವಿನ ಪಂಗಾಂಗ್ ತ್ಸೋ ಪ್ರದೇಶದಲ್ಲಿ ಅರ್ಜುನನ ಜತೆಗೆ ಕೃಷ್ಣ ರಥದಲ್ಲಿರುವ ಮತ್ತು ಗರುಡ ಹಾಗೂ ಚಾಣಕ್ಯ ಆಧುನಿಕ ಟ್ಯಾಂಕ್, ರಾಕೆಟ್ ಲಾಂಚರ್‍ಗಳು ಮತ್ತು ದಾಳಿ ಹೆಲಿಕಾಪ್ಟರ್‍ಗಳೊಂದಿಗೆ ಇರುವ ಕರ್ಮಕ್ಷೇತ್ರ ಎಂಬ ಚಿತ್ರವನ್ನು ಇಲ್ಲಿ ಅಳವಡಿಸಲಾಗಿದೆ.

ಆಧುನಿಕ ಚಿತ್ರವು ಸೇನೆಯನ್ನು ಧರ್ಮರಕ್ಷಕ ಮತ್ತು ಮಹಾಭಾರತದ ಬೋಧನೆಯಿಂದ ಪ್ರೇರಿತವಾದ ಸದಾಚಾರದ ಅಪರಿಮಿತ ಬದ್ಧತೆ ಎಂದು ಬಿಂಬಿಸಿದೆ ಮತ್ತು ಇದು ಚಾಣಕ್ಯನ ಕಾರ್ಯತಂತ್ರ ಹಾಗೂ ತತ್ವಶಾಸ್ತ್ರದ ಜ್ಞಾನದಿಂದ ಪ್ರೇರೇಪಿಸಲ್ಪಟ್ಟು, ಸಮಗ್ರ, ತಂತ್ರಜ್ಞಾನಿಕವಾಗಿ ಅತ್ಯಾಧುನಿಕ ಪಡೆ ಎನ್ನುವುದನ್ನು ಬಿಂಬಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ಮಂದಿ ಮಾಜಿ ಯೋಧರು ಈ ಕ್ರಮವನ್ನು ಖಂಡಿಸಿದ್ದು, ಇದು ಸೇನೆಯ ಇತಿಹಾಸದ ಮೇಲಿನ ದಾಳಿ ಹಾಗೂ 1971ರ ಯುದ್ಧವೀರರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News