ಆರ್‌ಬಿಐ ನೀತಿ ಸಮಿತಿಯು ಸತತ ಒಂಭತ್ತನೇ ಸಲವೂ ಬಡ್ಡಿದರಗಳನ್ನು ಬದಲಿಸಿಲ್ಲವೇಕೆ?

Update: 2024-08-08 12:33 GMT

RBI | PC : PTI 

ಮುಂಬೈ: ಗುರುವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಆಹಾರ ಹಣದುಬ್ಬರವು ಈಗಲೂ ಚಿಲ್ಲರೆ ಹಣದುಬ್ಬರಕ್ಕೆ ಬೆದರಿಕೆಯಾಗಿ ಉಳಿದಿರುವುದರಿಂದ ಸತತ ಒಂಭತ್ತನೇ ಸಲವೂ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಶೇ.6.5ರಲ್ಲಿ ಸ್ಥಿರವಾಗಿಸಿದೆ. ಎಂಪಿಸಿಯ ನಿರ್ಧಾರದ ಪರಿಣಾಮವಾಗಿ ಬ್ಯಾಂಕುಗಳು ಸಾಲದರಗಳನ್ನು ಯಥಾಸ್ಥಿತಿಯಲ್ಲಿರಿಸುವ ನಿರೀಕ್ಷೆಯಿದೆ ಮತ್ತು ಇಎಂಐಗಳು ಪ್ರಸ್ತುತ ಮಟ್ಟಗಳಲ್ಲಿಯೇ ಮುಂದುವರಿಯಬಹುದು.

ಆಹಾರ ಹಣದುಬ್ಬರವು ಇಳಿಕೆಯಾಗುತ್ತಿಲ್ಲವಾದರೂ ಆರ್‌ಬಿಐ 2025ರ ವಿತ್ತವರ್ಷಕ್ಕಾಗಿ ಜಿಡಿಪಿ ಬೆಳವಣಿಗೆಯ ಮುನ್ನಂದಾಜನ್ನು ಶೇ.7.2ರ ಮತ್ತು ಚಿಲ್ಲರೆ ಹಣದುಬ್ಬರ ಮುನ್ನಂದಾಜನ್ನು ಶೇ.4.5ರ ಯಥಾಸ್ಥಿತಿಯಲ್ಲಿರಿಸಿದೆ.

ನೀತಿ ದರವನ್ನು ಬದಲಾಯಿಸದಿರಲು ಎಂಪಿಸಿ ನಿರ್ಧರಿಸಿದ್ದೇಕೆ?:

ಆರು ಸದಸ್ಯರ ಎಂಪಿಸಿಯು 4-2 ಬಹುಮತದ ನಿರ್ಧಾರದೊಂದಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ರೆಪೋ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲಗಳ ಮೇಲೆ ವಿಧಿಸುವ ಬಡ್ಡಿದರವಾಗಿದೆ.

ಆರ್‌ಬಿಐ ಕಳೆದ ಹಲವು ತಿಂಗಳುಗಳಿಂದಲೂ ಹೆಚ್ಚುತ್ತಿರುವ ಆಹಾರ ಹಣದುಬ್ಬರದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಲೇ ಇದೆ,ಏಕೆಂದರೆ ಈ ಹೆಚ್ಚಳವು ಹಣದುಬ್ಬರ ಇಳಿಕೆಗೆ ಅಡ್ಡಿಯನ್ನುಂಟು ಮಾಡಬಹುದು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ)ದಲ್ಲಿ ವರ್ಷದಿಂದ ವರ್ಷಕ್ಕೆ ಬದಲಾವಣೆಗಳ ಮೂಲಕ ಲೆಕ್ಕ ಹಾಕಲಾಗುವ ಮುಖ್ಯ ಹಣದುಬ್ಬರವು ಮೇ ತಿಂಗಳಿನಲ್ಲಿದ್ದ ಶೇ.4.8ರಿಂದ ಜೂನ್‌ನಲ್ಲಿ ಶೇ.5.1ಕ್ಕೆ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ ಶೇ.7.9ರಷ್ಟಿದ್ದ ಆಹಾರ ಹಣದುಬ್ಬರವು ಜೂನ್‌ನಲ್ಲಿ ಶೇ.8.4ಕ್ಕೆ ಜಿಗಿದಿದ್ದು,ಇದು ಹಣದುಬ್ಬರ ದರ ಹೆಚ್ಚಲು ಕಾರಣವಾಗಿದೆ.

ಆಹಾರ ಹಣದುಬ್ಬರವು ಇಳಿಯುತ್ತಿಲ್ಲ ಮತ್ತು ಒಟ್ಟಾರೆ ಚಿಲ್ಲರೆ ಹಣದುಬ್ಬರದಲ್ಲಿ ಆಹಾರ ಹಣದುಬ್ಬರದ ಕೊಡುಗೆ ಶೇ.70ರಷ್ಟಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು,ಬೆಲೆ ಸ್ಥಿರತೆಯಿಲ್ಲದೆ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಿಲ್ಲ. ನಿರಂತರ ಆಹಾರ ಹಣದುಬ್ಬರದಿಂದ ಹರಡುವಿಕೆಗಳನ್ನು ಅಥವಾ ಎರಡನೇ ಸುತ್ತಿನ ಪರಿಣಾಮಗಳನ್ನು ತಡೆಗಟ್ಟಲು ಮತ್ತು ಹಣಕಾಸು ನೀತಿ ವಿಶ್ವಾಸಾರ್ಹತೆಯಲ್ಲಿ ಈವರೆಗೆ ಗಳಿಸಿರುವ ಲಾಭಗಳನ್ನು ಸಂರಕ್ಷಿಸಲು ಎಂಪಿಸಿ ಜಾಗರೂಕವಾಗಿರಬೇಕಿದೆ ಎಂದು ಹೇಳಿದರು.

ಆರ್‌ಬಿಐ ಸಿಪಿಐನ್ನು ಶೇ.2ರಿಂದ ಶೇ.6ರೊಳಗೆ ಕಾಯ್ದುಕೊಳ್ಳಬೇಕಾಗಿದೆ. ಅದು ಹಣದುಬ್ಬರವನ್ನು ಸುಸ್ಥಿರ ಶೇ.4ಕ್ಕೆ ತಗ್ಗಿಸುವ ಗುರಿಯನ್ನು ಹೊಂದಿದೆ.

ಸಾಲದರಗಳಿಗೆ ಏನಾಗುತ್ತದೆ?:

ಆರ್‌ಬಿಐ ರೆಪೋ ದರವನ್ನು ಶೇ.6.5ರ ಯಥಾಸ್ಥಿತಿಯಲ್ಲಿ ಇರಿಸಿರುವುದರಿಂದ ಅದಕ್ಕೆ ತಳುಕು ಹಾಕಲಾಗಿರುವ ಎಲ್ಲ ಬಾಹ್ಯ ಮಾನದಂಡ ಸಾಲದರ(ಇಬಿಎಲ್‌ಆರ್)ಗಳಲ್ಲಿ ಯಾವುದೇ ಏರಿಕೆಯಾಗುವುದಿಲ್ಲ. ಗೃಹ ಮತ್ತು ವೈಯಕ್ತಿಕ ಸಾಲಗಳ ಇಎಂಐಗಳು ಹೆಚ್ಚುವುದಿಲ್ಲ ಮತ್ತು ಇದು ಸಾಲಗಾರರಿಗೆ ನೆಮ್ಮದಿಯನ್ನು ನೀಡಲಿದೆ. ಆದರೆ ಬ್ಯಾಂಕುಗಳು ನಿಧಿ ಆಧರಿತ ಸಾಲದರಗಳ ಮಾರ್ಜಿನಲ್ ವೆಚ್ಚ (ಎಂಸಿಎಲ್‌ಆರ್)ದೊಂದಿಗೆ ತಳುಕು ಹಾಕಲಾಗಿರುವ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು.

ಡಿಸೆಂಬರ್ 2024ರಲ್ಲಷ್ಟೇ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಬಹುದು ಎಂದು ಕೆಲವು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಎಂಪಿಸಿಯ ಮುಂದಿನ ಸಭೆಯು ಅ.7ಮತ್ತು 9ರ ನಡುವೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News