ಲಕ್ಷದ್ವೀಪ ಪ್ರವಾಸೋದ್ಯಮ ಬೆಂಬಲಿಸಲು ಕೈಜೋಡಿಸಿದ ಸೆಲೆಬ್ರಿಟಿಗಳು

Update: 2024-01-07 13:26 GMT

ಹೊಸದಿಲ್ಲಿ: ಲಕ್ಷದ್ವೀಪದ ಕುರಿತು ಮಾಲ್ಡೀವ್ಸ್ ನ ಸಚಿವರೊಬ್ಬರು ಮಾಡಿರುವ ವಿವಾದಾತ್ಮಕ ಪೋಸ್ಟ್ ನ ಬೆನ್ನಿಗೇ, ಭಾರತದ ಸೆಲಬ್ರಿಟಿಗಳು ದ್ವೀಪಸಮೂಹದ ಪರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಭಾರತೀಯ ನಾಗರಿಕರು ಲಕ್ಷದ್ವೀಪದ ಸೌಂದರ್ಯವನ್ನು ಅನ್ವೇಷಿಸಬೇಕು ಎಂದು ಪ್ರೋತ್ಸಾಹಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಭಾರತವು ಪ್ರವಾಸೋದ್ಯಮದಲ್ಲಿ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಹಾಗೂ ಸಮುದ್ರ ತೀರ ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್ ನೊಂದಿಗೆ ಸ್ಪರ್ಧಿಸುವಲ್ಲಿ ಭಾರತವು ಸವಾಲುಗಳನ್ನು ಎದುರಿಸಿದೆ ಎಂದು ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿರುವ ಪೋಸ್ಟ್ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ, ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮುಂದೆ ಬಂದಿರುವ ಭಾರತೀಯ ಸೆಲೆಬ್ರಿಟಿಗಳು, ಭಾರತೀಯ ದ್ವೀಪಗಳ ವೈವಿಧ್ಯತೆ ಹಾಗೂ ಸೌಂದರ್ಯದ ಗುಣಗಾನ ಮಾಡಲು ಮುಂದಾಗಿದ್ದಾರೆ.

ಮಾಲ್ಡೀವ್ಸ್ ನ ಕೆಲವು ಸಾರ್ವಜನಿಕ ವ್ಯಕ್ತಿಗಳ ಪ್ರತಿಕ್ರಿಯೆಯ ಕುರಿತು ವಿಸ್ಮಯ ವ್ಯಕ್ತಪಡಿಸಿ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

“ಮಾಲ್ಡೀವ್ಸ್ ನ ಖ್ಯಾತ ಸಾರ್ವಜನಿಕ ವ್ಯಕ್ತಿಗಳು ಭಾರತೀಯರ ವಿರುದ್ಧ ದ್ವೇಷಪೂರಿತ ಹಾಗೂ ಜನಾಂಗೀಯ ಹೇಳಿಕೆಗಳನ್ನು ನೀಡಿರುವುದನ್ನು ನಾನು ಕಂಡೆ. ಯಾವ ದೇಶ ಅವರ ದೇಶಕ್ಕೆ ಹೆಚ್ಚು ಪ್ರವಾಸಿಗರನ್ನು ಕಳಿಸುತ್ತಿದೆಯೊ ಆ ದೇಶದ ಕುರಿತ ಅವರ ಇಂತಹ ಹೇಳಿಕೆಗಳು ನನ್ನಲ್ಲಿ ಅಚ್ಚರಿ ಮೂಡಿಸಿವೆ. ನಾವು ನಮ್ಮ ನೆರೆಹೊರೆಯವರೊಂದಿಗೆ ಸೌಹಾರ್ದವಾಗಿರುತ್ತೇವಾದರೂ, ಇಂತಹ ಅಪ್ರಚೋದಿತ ದ್ವೇಷವನ್ನು ಏಕೆ ಸಹಿಸಬೇಕು? ನಾನು ಹಲವಾರು ಬಾರಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದೇನೆ ಮತ್ತು ಅದನ್ನು ಪ್ರಶಂಸಿಸಿದ್ದೇನೆ. ಆದರೆ, ಘನತೆ ಮೊದಲು. ನಾವು #ExploreIndianIslands ಅನ್ನು ಬೆಂಬಲಿಸಲು ನಿರ್ಧರಿಸೋಣ ಮತ್ತು ನಮ್ಮ ಸ್ವಂತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸೋಣ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.

ಮತ್ತೊಬ್ಬ ಜನಪ್ರಿಯ ನಟ ಜಾನ್ ಅಬ್ರಹಾಂ ಅವರು ಲಕ್ಷದ್ವೀಪದಲ್ಲಿನ ಆತಿಥ್ಯ ಹಾಗೂ ಜಲಚರಗಳ ಜೀವನವನ್ನು ಪ್ರಶಂಸಿಸಿದ್ದಾರೆ. “ಬೆರಗುಗೊಳಿಸುವ ಭಾರತೀಯ ಆತಿಥ್ಯವು ‘ಅತಿಥಿ ದೇವೊ ಭವ’ ಎಂಬ ಕಲ್ಪನೆಯೊಂದಿಗೆ ವಿಸ್ತಾರವಾದ ಜಲಚರ ಜೀವನವನ್ನು ಅನ್ವೇಷಿಸಬೇಕಿದೆ. ಲಕ್ಷದ್ವೀಪವು ಭೇಟಿ ನೀಡಬೇಕಾದ ಸ್ಥಳವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಇವರೊಂದಿಗೆ ನಟಿ ಶ್ರದ್ಧಾ ಕಪೂರ್ ಕೂಡಾ ಸೇರಿಕೊಂಡಿದ್ದು, ಲಕ್ಷದ್ವೀಪದ ಪ್ರಾಚೀನ ಸಮುದ್ರ ತೀರಗಳು ಹಾಗೂ ಕರಾವಳಿ ಪ್ರದೇಶವನ್ನು ಅನ್ವೇಷಿಸುವ ತಮ್ಮ ಬಯಕೆಯನ್ನು ಹೊರ ಹಾಕಿದ್ದಾರೆ. “ಈ ಎಲ್ಲ ಚಿತ್ರಗಳು ಹಾಗೂ ಮೀಮ್‌ ಗಳು ನನ್ನನ್ನು ಇದೀಗ ಸೂಪರ್ ಫೋಮೊ ಅನ್ನಾಗಿ ಮಾಡಿವೆ. ಲಕ್ಷದ್ವೀಪವು ಪ್ರಾಚೀನ ಸಮುದ್ರ ತೀರಗಳು, ಕರಾವಳಿ ಪ್ರದೇಶಗಳು, ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಥಳೀಯ ಸಂಸ್ಕೃತಿಯನ್ನು ಹೊಂದಿದೆ. ನಾನು ಈ ವರ್ಷ ರಜೆಯನ್ನು ಮುಂಗಡವಾಗಿ ಕಾದಿರಿಸುವ ಹಂತದಲ್ಲಿದ್ದೇನೆ. #ExploreIndianIslands ಯಾಕಾಗಬಾರದು?” ಎಂದು ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇವರೊಂದಿಗೆ ಸಲ್ಮಾನ್ ಖಾನ್ ಕೂಡಾ ಲಕ್ಷದ್ವೀಪದ ಸುಂದರ ಹಾಗೂ ಸ್ವಚ್ಛ ಸಮುದ್ರ ತೀರಗಳನ್ನು ಶ್ಲಾಘಿಸಿದ್ದಾರೆ. “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಸುಂದರ, ಸ್ವಚ್ಛ ಹಾಗೂ ದಿಗ್ಮೂಢಗೊಳಿಸುವ ಲಕ್ಷದ್ವೀಪದ ಸಮುದ್ರ ತೀರದಲ್ಲಿ ಕುಳಿತಿರುವುದು ಕಣ್ಣಿಗೆ ತಂಪನ್ನುಂಟು ಮಾಡುತ್ತದೆ. ಇದಕ್ಕಿಂತ ಹೆಚ್ಚಿನದೆಂದರೆ, ಈ ದ್ವೀಪವು ನಮ್ಮ ಭಾರತದಲ್ಲಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಇವರೊಟ್ಟಿಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡಾ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರದ ಸಿಂಧುದರ್ಗದಲ್ಲಿನ ತಮ್ಮ ಅನುಭವವನ್ನು ಸ್ಮರಿಸಿದ್ದಾರೆ. “ಸಿಂಧುದುರ್ಗದಲ್ಲಿ ನನ್ನ 50ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು 250ಕ್ಕೂ ಹೆಚ್ಚು ದಿನಗಳಾಗಿವೆ. ಆ ಕರಾವಳಿ ಪಟ್ಟಣವು ನಮಗೆ ಅಗತ್ಯವಿದ್ದ ಎಲ್ಲವನ್ನೂ ಮತ್ತು ಅದಕ್ಕಿಂತ ಹೆಚ್ಚನ್ನು ನಮಗೆ ಒದಗಿಸಿತು. ಅದ್ಭುತ ಆತಿಥ್ಯದೊಂದಿಗೆ ಭವ್ಯವಾದ ಸ್ಥಳಗಳು ನಮ್ಮ ಸ್ಮೃತಿಪಟಲದಲ್ಲಿ ನಿಧಿಯಂತೆ ಉಳಿದು ಹೋಗಿವೆ. ಭಾರತವು ಅದ್ಭುತ ಕರಾವಳಿ ಪ್ರದೇಶಗಳು ಹಾಗೂ ಪ್ರಾಚೀನ ದ್ವೀಪಗಳಿಂದ ಧನ್ಯವಾಗಿದೆ. ‘ನಮ್ಮ ‘ಅತಿಥಿ ದೇವೊ ಭವ’ ತಾತ್ವಿಕತೆಯೊಂದಿಗೆ ನಾವು ಅನ್ವೇಷಿಸಲು ಸಾಕಷ್ಟಿದೆ. ಹೀಗಾಗಿ ಹಲವಾರು ನೆನಪುಗಳು ಸೃಷ್ಟಿಯಾಗಲು ಕಾಯುತ್ತಿವೆ” ಎಂದು ತೆಂಡೂಲ್ಕರ್ ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಮುಖ್ಯವಾಗಿ ಹಾಲಿ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ನವೆಂಬರ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮತ್ತಷ್ಟು ಪ್ರಕ್ಷುಬ್ಧವಾಗಿದೆ. ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರುವ ಕುರಿತು ನೂತನ ಅಧ್ಯಕ್ಷರು ಸೂಚನೆ ನೀಡಿದ್ದು, ಚೀನಾದೊಂದಿಗಿನ ಬಾಂಧವ್ಯವನ್ನು ವೃದ್ಧಿಸಿಕೊಂಡು, ‘ಭಾರತ ಮೊದಲು’ ಎಂಬ ನೀತಿಯನ್ನು ಕೈಬಿಡುವ ಸೂಚನೆ ನೀಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News