ನೀವೀಗ ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಝ್ ಅನ್ನೂ ನೆಲಸಮಗೊಳಿಸುತ್ತೀರಾ? : ಹಿಂದುತ್ವವಾದಿ ಸಂಘಟನೆಗಳಿಗೆ ಖರ್ಗೆ ಪ್ರಶ್ನೆ
ಹೊಸದಿಲ್ಲಿ: ಪ್ರತಿ ಮಸೀದಿಯ ಕೆಳಗೂ ಶಿವಲಿಂಗವನ್ನು ಹುಡುಕಬಾರದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಸೂಚನೆ ಎರಡು ನಾಲಿಗೆಯ ಮಾತೇ ಎಂದು ರವಿವಾರ ಪ್ರಶ್ನಿತಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೀವೀಗ ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಝ್ ಅನ್ನು ಮುಸ್ಲಿಮರು ನಿರ್ಮಿಸಿರುವುದರಿಂದ, ಅವನ್ನೂ ಗುರಿಯಾಗಿಸಿಕೊಳ್ಳುತ್ತೀರಾ ಎಂದೂ ಹಿಂದುತ್ವವಾದಿ ಸಂಘಟನೆಗಳನ್ನು ಪ್ರಶ್ನಿಸಿದ್ದಾರೆ.
ಇಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ರಕ್ಷಣೆ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಸೀದಿಗಳ ಕೆಳಗೆ ದೇವಾಲಯಗಳ ಅವಶೇಷಗಳನ್ನು ಪರಿಶೀಲಿಸಲು ಸಮೀಕ್ಷೆ ನಡೆಸಬೇಕು ಎಂದು ಹೆಚ್ಚುತ್ತಿರುವ ಹಿಂದುತ್ವವಾದಿ ಸಂಘಟನೆಗಳ ಬೇಡಿಕೆಯ ಕುರಿತು ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವ್ಯಕ್ತಪಡಿಸಿದ್ದ ಮೌಖಿಕ ಅಭಿಪ್ರಾಯವನ್ನು ಪರೋಕ್ಷವಾಗಿ ದೂಷಿಸಿದರು.
“ನೀವೀಗ ಮುಸ್ಲಿಮರು ನಿರ್ಮಿಸಿರುವ ಕೆಂಪು ಕೋಟೆಯನ್ನು ನೆಲಸಮಗೊಳಿಸುತ್ತೀರಾ? ಕುತುಬ್ ಮಿನಾರ್ ಅನ್ನು ನೆಲಸಮಗೊಳಿಸುತ್ತೀರಾ? ತಾಜ್ ಮಹಲ್ ಅನ್ನು ನೆಲಸಮಗೊಳಿಸುತ್ತೀರಾ? ಚಾರ್ಮಿನಾರ್ ಅನ್ನು ನೆಲಸಮಗೊಳಿಸಲು ನೀವು ಹೈದರಾಬಾದ್ ಗೆ ಹೋಗುತ್ತೀರಾ? ಗೋಲ್ ಗುಂಬಝ್ ಅನ್ನು ನೆಲಸಮಗೊಳಿಸಲು ನೀವು ಬಿಜಾಪುರಕ್ಕೆ ಹೋಗುತ್ತೀರಾ?” ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಮ್ಮ ಗುರಿ ರಾಮ ಮಂದಿರವನ್ನು ನಿರ್ಮಿಸುವುದಾಗಿತ್ತು. ಇನ್ನು ಮುಂದೆ ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಜೂನ್ 2022ರಲ್ಲಿ ಮೋಹನ್ ಭಾಗವತ್ ಹೇಳಿದ್ದರು ಎಂಬುದನ್ನು ಅವರು ನೆನಪಿಸಿದರು.
“ಆದರೆ, ಅವರ ಜನ ಈಗಲೂ ಶಿವಲಿಂಗವನ್ನು ಹುಡುಕುತ್ತಿದ್ದಾರೆ. ಕಾನೂನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳುತ್ತದೆ. ಅವರೇಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ? ಸುರಕ್ಷಿತವಾಗಿರಲು ಒಗ್ಗಟ್ಟಾಗಿರಿ ಎಂದು ಅವರು ಹೇಳುತ್ತಾರೆ. ಜಗತ್ತಿಗೆ ಒಗ್ಗಟ್ಟಾಗಿರುವುದನ್ನು ತೋರಿಸಬೇಕು ಎಂದು ಭಾಗವತ್ ಹೇಳುತ್ತಾರೆ. ಆದರೆ, ಅವರ ಜನರು ಬೇರೆಯದೇ ದಾರಿ ಹಿಡಿದಿದ್ದಾರೆ” ಎಂದು ಅವರು ದೂರಿದರು.
ಇತ್ತೀಚಿನ ವಾರಗಳಲ್ಲಿ ಉತ್ತರ ಪ್ರದೇಶದ ಸಂಭಲ್ ಹಾಗೂ ರಾಜಸ್ಥಾನದ ಅಜ್ಮೀರ್ ನಲ್ಲಿ ಮಸೀದಿಗಳ ಆವರಣದ ಸಮೀಕ್ಷೆ ನಡೆಸುವಂತೆ ನ್ಯಾಯಾಲಯಗಳು ಆದೇಶಿಸಿದ್ದರಿಂದ ವಿವಾದಗಳು ಭುಗಿಲೆದ್ದು, ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಿತ್ತು.
ಇದಕ್ಕೂ ಮುನ್ನ, 1991ರ ಪ್ರಾರ್ಥನಾ ಸ್ಥಳಗಳು (ವಿಶೇಷ ಅವಕಾಶಗಳು) ಕಾಯ್ದೆ ಪರವಾಗಿ ಕಾಂಗ್ರೆಸ್ ಪಕ್ಷ ತನ್ನ ದೃಢ ಬದ್ಧತೆಯನ್ನು ಪುನರುಚ್ಛರಿಸಿತ್ತು. ಇದರ ಬೆನ್ನಿಗೇ, ಖರ್ಗೆ ಮೇಲಿನಂತೆ ಹೇಳಿಕೆ ನೀಡಿದ್ದು, ಈ ಕಾಯ್ದೆಯನ್ನು ಬಿಜೆಪಿ ನಿರ್ಲಜ್ಜವಾಗಿ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.