ಅಸ್ಸಾಂ: ದೇವಸ್ಥಾನದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವೀಡಿಯೊ ವೈರಲ್ ಮಾಡಿದ ದುಷ್ಕರ್ಮಿಗಳು
ಸಿಲ್ಚಾರ್: ಗುವಾಹಟಿ ದೇವಸ್ಥಾನದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನ.17ರಂದು ರಾಸ್ ಮಹೋತ್ಸವದ ಸಂದರ್ಭದಲ್ಲಿ ದುರ್ಗಾ ದೇವಸ್ಥಾನದ ಆವರಣದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. 18 ರಿಂದ 23 ವರ್ಷದೊಳಗಿನ ದುಷ್ಕರ್ಮಿಗಳು ಕೃತ್ಯವನ್ನು ಎಸಗಿದ್ದಾರೆ ಮತ್ತು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರಾಬಿನ್ ದಾಸ್, ಕುಲದೀಪ್ ನಾಥ್ (23), ಬಿಜೋಯ್ ರಾಭಾ(22), ಪಿಂಕು ದಾಸ್(18), ಗಗನ್ ದಾಸ್ (21), ಸೌರವ್ ಬೋರೋ (20), ಮೃಣಾಲ್ ರಭಾ (19) ಮತ್ತು ದೀಪಂಕರ್ ಮುಖಿಯಾ(21) ) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಸಂತ್ರಸ್ತೆಯನ್ನು ನಾವು ಇನ್ನೂ ಗುರುತಿಸಿಲ್ಲ ಎಂದು ಗುವಾಹಟಿ ಪಶ್ಚಿಮದ ಡಿಸಿಪಿ ಪದ್ಮನಾಭ್ ಬರುವಾ ಹೇಳಿದ್ದಾರೆ.
ಗುವಾಹಟಿಯ ಗೋರ್ಚುಕ್ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಂದ್ರ ಕಲಿತಾ ಅವರು ಶುಕ್ರವಾರ ಮುಂಜಾನೆ 2.30ರ ಸುಮಾರಿಗೆ ವಾಟ್ಸಾಪ್ ನಲ್ಲಿ ವೀಡಿಯೊವೊಂದನ್ನು ಸ್ವೀಕರಿಸಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಆರಂಭದಲ್ಲಿ ಗುವಾಹಟಿಯ ಬೋರಗಾಂವ್ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿತ್ತು, ಪ್ರಾಥಮಿಕ ತನಿಖೆಯ ಬಳಿಕ ಇತರರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ನವೆಂಬರ್ 17ರಂದು ಸಂಜೆ ಬಾಲಕಿ ರಾಸ ಮಹೋತ್ಸವಕ್ಕೆ ದೇವಸ್ಥಾನಕ್ಕೆ ಬಂದಿದ್ದಳು. ಈ ವೇಳೆ 9 ಆರೋಪಿಗಳು ಮದ್ಯಪಾನ ಮಾಡಿಕೊಂಡಿದ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೊ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.