ಸಂಚು ರೂಪಿಸಿದ್ದು ಪುತ್ರಿಯ ಹತ್ಯೆಗೆ; ತಾಯಿಯೇ ಕೊಲೆಯಾದದ್ದು ಹೇಗೆ?
ಆಗ್ರಾ: ಹದಿಹರೆಯದ ಪುತ್ರಿಯ ನಡವಳಿಕೆಯಿಂದ ಬೇಸತ್ತ 35 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಆಕೆಯ ಹತ್ಯೆಗೆ ಬಾಡಿಗೆ ಹಂತಕರನ್ನು ನಿಯೋಜಿಸಿದ್ದಳು. ಆದರೆ ತಾಯಿಯ ಕೊಲೆಯಲ್ಲಿ ಪ್ರಕರಣ ಅಂತ್ಯಗೊಂಡಿದೆ. ಯುವತಿಯ ಪ್ರಿಯಕರ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 6ರಂದು ಏತ್ ಜಿಲ್ಲೆಯ ಜಸರತ್ಪುರ ಠಾಣೆ ವ್ಯಾಪ್ತಿಯ ಹೊಲವೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಇದರ ವಿಚಾರಣೆ ನಡೆಸಿದಾಗ ಇಡೀ ಕೃತ್ಯ ಬಯಲಾಗಿದೆ.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಂತೆ ಪತ್ತೆಯಾದ ಮಹಿಳೆಯ ಮೃತದೇಹ ಅಲ್ಕಾ ಎಂಬಾಕೆಯದ್ದು. ಈಕೆ ಏತ್ ಜಿಲ್ಲೆಯ ನಯಗಾಂವ್ ಠಾಣೆ ವ್ಯಾಪ್ತಿಯ ಅಲ್ಲಾಪುರದ ನಿವಾಸಿ. ಮಗಳ ನಡವಳಿಕೆಯಿಂದ ಬೇಸತ್ತ ಅಲ್ಕಾ, ಸುಭಾಶ್ ಸಿಂಗ್ (38) ಎಂಬ ಬಾಡಿಗೆ ಹಂತಕನ್ನು ನಿಯೋಜಿಸಿದ್ದಳು. ಆದರೆ ಆತ ಮಗಳ ಪ್ರಿಯಕರ ಎನ್ನುವ ವಿಷಯ ಆಕೆಗೆ ತಿಳಿದಿರಲಿಲ್ಲ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪುತ್ರಿ ಹಾಗೂ ಸುಭಾಷ್ ನನ್ನು ಬಂಧಿಸಲಾಗಿದೆ.
ಅಲ್ಕಾ ಪುತ್ರಿ ಕೆಲ ದಿನಗಳ ಹಿಂದೆ ಯುವಕನೊಬ್ಬನ ಜತೆ ಓಡಿಹೋಗಿದ್ದಳು. ಪತ್ತೆ ಮಾಡಿದ ತಾಯಿ ಆಕೆಯನ್ನು ಫರೂಕಾಬಾದ್ನಲ್ಲಿರುವ ತನ್ನ ತಾಯಿಮನೆಗೆ ಕಳುಹಿಸಿದಳು. ಅಲ್ಲಿ ಸುಭಾಷ್ ನ ಜತೆ ಸುಧೀರ್ಘ ಕಾಲ ಫೋನ್ ನಲ್ಲಿ ಮಾತನಾಡುತ್ತಿದ್ದಳು ಹಾಗೂ ಪ್ರೇಮಸಂಬಂಧ ಬೆಳೆಯಿತು ಎನ್ನಲಾಗಿದೆ. ಮಾವ ಇದನ್ನು ಗಮನಿಸಿ, ಆಕೆಯನ್ನು ಮನೆಗೆ ಕರೆದೊಯ್ಯುವಂತೆ ಅಲ್ಕಾಳಿಗೆ ಸೂಚಿಸಿದರು. ಇದರಿಂದ ಅವಮಾನಿತಳಾದ ಮಹಿಳೆ ಮಗಳ ಹತ್ಯೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.