ಶಾಸಕರ ಅಸಮಾಧಾನ: ಮಧ್ಯಪ್ರದೇಶ ಬಿಜೆಪಿಯಲ್ಲಿ ಆಂತರಿಕ ಕಲಹ

Update: 2024-10-12 10:02 GMT

Photo: NDTV

ಭೋಪಾಲ್: ಮಧ್ಯಪ್ರದೇಶ ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದ್ದು, ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ ಬಿಜೆಪಿ ಸರಕಾರ ಇಕ್ಕಟ್ಟಿಗೆ ಸಿಲುಕಿದೆ.

ಬಿಜೆಪಿಯ ಹಲವಾರು ಶಾಸಕರು ಸಾರ್ವಜನಿಕವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದರಿಂದುಂಟಾಗಿರುವ ಪ್ರಕ್ಷುಬ್ಧತೆಯು ರಾಜೀನಾಮೆಗಳ ಮೂಲಕ ವ್ಯಕ್ತವಾಗತೊಡಗಿದೆ. ಕೆಲವು ಶಾಸಕರು ಗೋಪ್ಯ ಸಭೆಗಳನ್ನು ನಡೆಸುತ್ತಿದ್ದರೆ, ಮತ್ತೆ ಕೆಲವರು ತಮ್ಮ ಅಸಮಾಧಾನವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಮೂಲಕ ಹೊರ ಹಾಕುತ್ತಿದ್ದಾರೆ. ಇದು ಆಡಳಿತಾರೂಢ ಬಿಜೆಪಿಯೊಳಗೆ ಬಿಗಡಾಯಿಸುತ್ತಿರುವ ಆಂತರಿಕ ಕಲಹವನ್ನು ಎತ್ತಿ ತೋರಿಸುತ್ತಿದೆ.

ಮೂವರು ಮಾಜಿ ಸಚಿವರು ಸೇರಿದಂತೆ ಆರು ಮಂದಿ ಪ್ರಮುಖ ಬಿಜೆಪಿ ಶಾಸಕರು ವಿವಾದದ ಕೇಂದ್ರ ಬಿಂದುವಾಗಿದ್ದು, ಸರಕಾರ ಹಾಗೂ ಪಕ್ಷದ ನಾಯಕತ್ವದ ಕುರಿತು ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ.

ಗುರುವಾರ ರಾತ್ರಿ, ದಿಯೋರಿ ಶಾಸಕ ಬಿಹಾರಿ ಪಟೇರಿಯ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಹಾವು ಕಚ್ಚಿದ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಕಾರಣವನ್ನು ‌ನೀಡಿ ಪಟೇರಿಯ ವಿಧಾನಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಇದಕ್ಕೂ ಹಿಂದಿನ ದಿನ, ಮೌಗಂಜ್ ಶಾಸಕ ಪ್ರದೀಪ್ ಪಟೇಲ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಪೊಲೀಸರು ಮದ್ಯ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಪಟೇಲ್, ಗೂಂಡಾಗಳು ನನ್ನನ್ನು ಕೊಲೆ ಮಾಡಿರುತ್ತಿದ್ದರು ಎಂದೂ ಆಪಾದಿಸಿದ್ದರು. ಅವರ ಈ ಹೇಳಿಕೆಯಿಂದ ಬಿಜೆಪಿಯೊಳಗಿನ ಪ್ರಕ್ಷುಬ್ಧತೆ ಮತ್ತಷ್ಟು ಉಲ್ಬಣಗೊಂಡಿತ್ತು.

ಈ ನಡುವೆ, ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ವಹಿವಾಟು ಹಾಗೂ ಜೂಜಾಟದ ವಿರುದ್ಧ ನಾರಿಯಾವಾಲಿ ಕ್ಷೇತ್ರದ ಬಿಜೆಪಿ ಶಾಸಕ ಕೂಡಾ ಕ್ರಮ ಕೈಗೊಂಡಿದ್ದರು. ಪೊಲೀಸರು ತಮ್ಮ ಸೂಚನೆಗೆ ಸ್ಪಂದಿಸದಿದ್ದರಿಂದ ಅಸಮಾಧಾನಗೊಂಡಿದ್ದ ಅವರು, ಖುದ್ದು ಪೊಲೀಸ್ ಠಾಣೆಗೆ ತೆರಳಿ, ಕ್ರಮಕ್ಕೆ ಆಗ್ರಹಿಸಿದ್ದರು.

ಬಿಜೆಪಿಯು ಈ ಘಟನೆಗಳನ್ನು ಪಕ್ಷದ ದೈನಂದಿನ ಆಂತರಿಕ ಚರ್ಚೆಗಳು ಎಂದು ಹೇಳಿದರೂ, ಈ ಘಟನೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷವಾದ ಕಾಂಗ್ರೆಸ್ ಮಾತ್ರ ಇದು ಆಡಳಿತಾರೂಢ ಬಿಜೆಪಿಯೊಳಗಿನ ಆಂತರಿಕ ಕಲಹ ಎಂದು ಆಪಾದಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News