ವಿಶ್ವಾಸಮತದವರೆಗೂ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುವುದಿಲ್ಲ: ಬಿಹಾರ ಸ್ಪೀಕರ್

Update: 2024-02-07 17:05 GMT

ಅವಧ್ ಬಿಹಾರಿ ಚೌಧರಿ | Photo : twitter

ಪಾಟ್ನಾ: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಎನ್ಡಿಎ ಸರಕಾರವು ತನ್ನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆಯಾದರೂ ಬಿಹಾರ ವಿಧಾನಸಭಾ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರು ವಿಶ್ವಾಸ ಮತದವರೆಗೂ ತಾನು ಖುರ್ಚಿಯಿಂದ ಕೆಳಗಿಳಿಯುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.

ನಿತೀಶ್ ಕುಮಾರ್ ಸರಕಾರವು ವಿಶ್ವಾಸ ಮತವನ್ನು ಕೋರಲಿರುವ ಬಜೆಟ್ ಅಧಿವೇಶನ ಫೆ.೧೨ರಂದು ಆರಂಭಗೊಳ್ಳುವುದಕ್ಕೆ ಮೊದಲು ತಾನು ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಚೌಧರಿ ಸ್ಪಷ್ಟಪಡಿಸಿದರು.

‘ನಾನು ರಾಜೀನಾಮೆಯನ್ನು ನೀಡುವುದಿಲ್ಲ, ಫೆ.೧೨ರಂದು ಸದನದಲ್ಲಿ ನಾನು ಉಪಸ್ಥಿತನಿರುತ್ತೇನೆ ಮತ್ತು ನಿಯಮಗಳಂತೆ ಕಲಾಪಗಳನ್ನು ನಡೆಸುತ್ತೇನೆ’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ ತಿಳಿಸಿದರು.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಬಾಕಿಯಿರುವಾಗ ಅವರು ಪೀಠದಲ್ಲಿ ಕೂರುವಂತಿಲ್ಲ ಎಂಬ ಎನ್ಡಿಎ ಪ್ರತಿಪಾದನೆಯನ್ನು ಸುದ್ದಿಗಾರರು ಚೌಧರಿಯವರ ಗಮನಕ್ಕೆ ತಂದಾಗ, ನಿಯಮಗಳಂತೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ನೋಟಿಸ್ ಸ್ವೀಕರಿಸಿದ ೧೪ ದಿನಗಳಲ್ಲಿ ಸ್ಪೀಕರ್ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನೋಟಿಸ್ ಇಂದಷ್ಟೇ ತನ್ನ ಕೈಸೇರಿದೆ ಎಂದು ಚೌಧರಿ ಉತ್ತರಿಸಿದರು.

ಅಲ್ಪ ಬಹುಮತವನ್ನು ಹೊಂದಿರುವ ಎನ್ಡಿಎ ಮುಖ್ಯ ಪ್ರತಿಪಕ್ಷದ ಸ್ಪೀಕರ್ ಪೀಠದಲ್ಲಿದ್ದು ನಡೆಯುವ ಬಲಾಬಲ ಪರೀಕ್ಷೆಯ ಬಗ್ಗೆ ತೀವ್ರ ಎಚ್ಚರಿಕೆಯನ್ನು ವಹಿಸಿದೆ.

ಸದನ ನಾಯಕನಾಗಿ ಮುಖ್ಯಮಂತ್ರಿಗಳು ಸದನದ ಕಾರ್ಯಸೂಚಿಯಲ್ಲಿನ ಯಾವ ಕಲಾಪವನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ. ಹೀಗಾಗಿ ಆರ್ಜೆಡಿ ನಾಯಕ (ಸ್ಪೀಕರ್ ಚೌಧರಿ) ತನ್ನ ಪದಚ್ಯುತಿಗಾಗಿ ಸದನವು ಮತ ಚಲಾಯಿಸುವ ಸ್ಥಿತಿಯನ್ನು ಎದುರಿಸಬಹುದು. ಅವಮಾನವನ್ನು ಎದುರಿಸಬೇಕೇ ಅಥವಾ ರಾಜೀನಾಮೆ ನೀಡುವ ಮೂಲಕ ತನ್ನ ಗೌರವವನ್ನು ಉಳಿಸಿಕೊಳ್ಳಬೇಕೇ ಎನ್ನುವುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News