ವಿಶ್ವಕಪ್‌ನಲ್ಲಿ ಪುರುಷ - ಮಹಿಳಾ ತಂಡಕ್ಕೆ ಸಮಾನ ಬಹುಮಾನ ಮೊತ್ತ ಘೋಷಿಸಿದ ಐಸಿಸಿ
ಹೊಸದಿಲ್ಲಿ : ಈ ವರ್ಷ ನಡೆಯಲಿರುವ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ಪುರುಷರ ತಂಡ ಪಡೆದಷ್ಟೇ ನಗದು ಬಹುಮಾನ ಮೊತ್ತವನ್ನು ಸ್ವೀಕರಿಸಲಿದೆ. 2023ರ ಜುಲೈನಲ್ಲಿ ನಡೆದಿದ್ದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ.
2030ರ ವೇಳೆಗೆ ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನ ಮೊತ್ತವನ್ನು ಪುರುಷರ ಹಾಗೂ ಮಹಿಳೆಯರ ತಂಡಕ್ಕೆ ಸಮಾನವಾಗಿ ಹಂಚುವ ಗುರಿ ಹೊಂದಲಾಗಿತ್ತು. ಇದೀಗ ಐಸಿಸಿ ಮಂಡಳಿಯು 7 ವರ್ಷಗಳ ಮುಂಚಿತವಾಗಿಯೇ ಈ ಗುರಿಯನ್ನು ಸಾಧಿಸಲು ನಿರ್ಧರಿಸಿದೆ.
ವಿಶ್ವಕಪ್ ಸ್ಪರ್ಧೆಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಬಹುಮಾನ ಮೊತ್ತ ನೀಡಲು ಮುಂದಾಗಿರುವ ಮೊದಲ ಪ್ರಮುಖ ಕ್ರೀಡಾ ತಂಡ ಕ್ರಿಕೆಟ್ ಆಗಿದೆ.
ಈ ವರ್ಷ ಯುಎಇನಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿದೆ. ವಿಜೇತ ತಂಡವು 2.34 ಮಿಲಿಯನ್ ಡಾಲರ್ ಸ್ವೀಕರಿಸಲಿದೆ. 2023ರಲ್ಲಿ ಆಸ್ಟ್ರೇಲಿಯ ತಂಡ 1 ಮಿಲಿಯನ್ ಡಾಲರ್ ಸ್ವೀಕರಿಸಿತ್ತು. ಇದೀಗ ಬಹುಮಾನ ಮೊತ್ತವನ್ನು 134 ಶೇ.ದಷ್ಟು ಹೆಚ್ಚಿಸಲಾಗಿದೆ.
ರನ್ನರ್ಸ್ ಅಪ್ ತಂಡವು 1.17 ಮಿಲಿಯನ್ ಡಾಲರ್ ಸ್ವೀಕರಿಸಲಿದೆ. ಕಳೆದ ವರ್ಷ 500,000 ಡಾಲರ್ ನೀಡಲಾಗಿದ್ದು ಇದೀಗ 134 ಶೇ.ಹೆಚ್ಚಳ ಮಾಡಲಾಗಿದೆ.
ಸೆಮಿ ಫೈನಲ್‌ನಲ್ಲಿ ಸೋಲುವ ತಂಡಗಳು ತಲಾ 675,000 ಡಾಲರ್ ಸ್ವೀಕರಿಸಲಿವೆ. 2023ರಲ್ಲಿ 210,000 ಡಾಲರ್ ಸ್ವೀಕರಿಸಿದ್ದವು.
ಪಂದ್ಯಾವಳಿಯ ಒಟ್ಟು ಬಹುಮಾನ ಮೊತ್ತ 7,958,080 ಡಾಲರ್ ಆಗಿದ್ದು, ಕಳೆದ ವರ್ಷ 2.45 ಮಿಲಿಯನ್ ಡಾಲರ್ ಬಹುಮಾನ ನೀಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 225 ಶೇ. ಹೆಚ್ಚಳ ಮಾಡಲಾಗಿದೆ.
ಪ್ರತಿ ಗ್ರೂಪ್ ಹಂತದ ಗೆಲುವಿಗೆ ತಂಡಗಳು 31,154 ಡಾಲರ್ ಸ್ವೀಕರಿಸಲಿವೆ. ಸೆಮಿ ಫೈನಲ್‌ಗೆ ತಲುಪದ ಆರು ತಂಡಗಳು 1.35 ಮಿಲಿಯನ್ ಡಾಲರ್‌ನಲ್ಲಿ ಸ್ಥಾನಗಳನ್ನು ಆಧರಿಸಿ ಹಣವನ್ನು ಹಂಚಿಕೊಳ್ಳಲಿವೆ. ಪ್ರತಿ ಗುಂಪಿನ ಮೂರನೇ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳು 270,000 ಡಾಲರ್, 5ನೇ ಸ್ಥಾನ ಪಡೆಯುವ ತಂಡಗಳು 135,000 ಡಾಲರ್ ಸ್ವೀಕರಿಸಲಿದೆ.
ಭಾಗವಹಿಸಲಿರುವ ಎಲ್ಲ ತಂಡಗಳು 112,500 ಡಾಲರ್ ಬಹುಮಾನವನ್ನು ಸ್ವೀಕರಿಸುವುದು ಖಾತ್ರಿಯಾಗಿದೆ.
ಐಸಿಸಿ ಮಹಿಳೆಯರ ಟಿ20 ವಿಶ್ವಕಪ್-2024 ಅಕ್ಟೋಬರ್ 3ರಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್‌ಲ್ಯಾಂಡ್ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ.
ಅಕ್ಟೋಬರ್ 5ರಂದು ಶಾರ್ಜಾದಲ್ಲಿ ನಡೆಯಲಿರುವ ಎರಡು ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಸಣ್ಣಮಟ್ಟದ ಬದಲಾವಣೆ ಮಾಡಲಾಗಿದ್ದು, ಆಸ್ಟ್ರೇಲಿಯವು ಮಧ್ಯಾಹ್ನ 2 ಗಂಟೆಗೆ ಶ್ರೀಲಂಕಾವನ್ನು ಎದುರಿಸಲಿದೆ. ಆ ನಂತರ 6 ಗಂಟೆಗೆ ಬಾಂಗ್ಲಾದೇಶ-ಇಂಗ್ಲೆಂಡ್ ನಡುವೆ ಹೋರಾಟ ನಡೆಯಲಿದೆ.
10 ತಂಡಗಳು 2024ರ ಚಾಂಪಿಯನ್ಸ್ ನಿರ್ಧರಿಸಲು ದುಬೈ ಹಾಗೂ ಶಾರ್ಜಾದಲ್ಲಿ 23 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.