ನೀವು ಕಾನೂನಿಗಿಂತ ಮೇಲಲ್ಲ: ಈಡಿ ಗೆ ದಿಲ್ಲಿ ಕೋರ್ಟ್ ತರಾಟೆ
ಹೊಸದಿಲ್ಲಿ: ಕಾನೂನು ಜಾರಿ ನಿರ್ದೇಶನಾಲಯ ಕಾನೂನಿನ ಚೌಕಟ್ಟಿನಲ್ಲೇ ಬರುತ್ತದೆ ಹಾಗೂ ಜನಸಾಮಾನ್ಯರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಕೋರ್ಟ್ ತನಿಖಾ ಏಜೆನ್ಸಿ ಮೇಲೆ ಟೀಕಾಪ್ರಹಾರ ನಡೆಸಿದೆ. ಆರೋಪಿಯೊಬ್ಬರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ವಿರೋಧಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ವೈದ್ಯರ ಹೇಳಿಕೆಯನ್ನು ಹಣ ದುರ್ಬಳಕೆ ತಡೆ ಕಾಯ್ದೆ( ಪಿಎಂಎಎಲ್‍ಎ) ಯ ಸೆಕ್ಷನ್ 50ರ ಅಡಿಯಲ್ಲಿ ಮರು ದಾಖಲಿಸಿಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ರೋಸ್ ಅವೆನ್ಯೂ ಕೋರ್ಟ್‍ನ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಜನಸಾಮಾನ್ಯರನ್ನು (ವೈದ್ಯರನ್ನು) ಪಿಎಂಎಲ್‍ಎ ಸೆಕ್ಷನ್ 50ರ ಅಡಿಯಲ್ಲಿ ಕಟ್ಟುನಿಟ್ಟಿನ ಪ್ರಕ್ರಿಯೆಗೆ ಗುರಿಪಡಿಸುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ಹೇಳಿದರು. ಹಣ ದುರುಪಯೋಗದ ಆರೋಪಿ ಮತ್ತು ವೈದ್ಯರ ನಡುವೆ ಅಪವಿತ್ರ ಮೈತ್ರಿ ಇದೆ ಎಂಬ ಆರೋಪದ ಲವಲೇಶವೂ ಇಲ್ಲದೇ ಮರು ದಾಖಲಿಸಿಕೊಳ್ಳಲು ಮುಂದಾಗಿರುವುದು ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಪ್ರಜೆಗಳು ಹಕ್ಕುಗಳನ್ನು ಹೊಂದಿದ್ದಾರೆ. ಸರ್ಕಾರಕ್ಕೆ ಕೆಲ ಕರ್ತವ್ಯಗಳಿವೆ ಮತ್ತು ಸರ್ಕಾರಕ್ಕೆ ಕೆಲ ಹಕ್ಕುಗಳಿವೆ ಎಂಬ ವಾದ ಮಂಡಿಸಿ ಈ ಮೂಲಭೂತ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು.
ಪ್ರಭಾವಿ ಮುಖಂಡರು, ಕಾನೂನುಗಳು ಮತ್ತು ಏಜೆನ್ಸಿಗಳು ಸಾಮಾನ್ಯವಾಗಿ ಜನಸಾಮಾನ್ಯರನ್ನು ಗುರಿ ಮಾಡುತ್ತಾರೆ. ಇಂಥ ಗುರಿ ಮಾಡಲ್ಪಟ್ಟವರ ಮೇಲೆ ಕಾನೂನಿನ ಅಸ್ತ್ರವನ್ನು ಬಳಸಲಾಗುತ್ತದೆ. ಸಾಮಾನ್ಯ ಪ್ರಜೆಗಳ ವಿರುದ್ಧ ಇಂಥ ಕಾನೂನುಗಳನ್ನು ಜಾರಿ ಮಾಡಲಾಗುತ್ತದೆ ಎಂಬ ಆರೋಪವಿದೆ ಎಂದು ನ್ಯಾಯಾಧೀಶರು ಎಚ್ಚರಿಸಿದರು.