ಎರೆಹುಳು ಘಟಕದಿಂದ ವಾರ್ಷಿಕ 6 ಲಕ್ಷ ರೂ.ಗಳಿಸುತ್ತಿರುವ ರೈತ

ಶಿವಣ್ಣ ತಮ್ಮ 20 ಗುಂಟೆಯ ಜಮೀನಿನ ಜತೆ 3 ಎಕರೆ ಜಮೀನನ್ನು ಗುತ್ತಿಗೆ ಪಡೆದ ಅವರು ಎರೆಹುಳು ಗೊಬ್ಬರ, ಜೀವಾಮೃತ, ಫನ ಜೀವಾಮೃತ ತಯಾರಿಸಿ ಮಾರಾಟ ಮಾಡುವ ಕಾಯಕ ಆರಂಭಿಸಿದರು. ನಂತರ ದಿನಗಳಲ್ಲಿ ದೊಡ್ಡ ಮಟ್ಟದ ಎರೆಹುಳು ಘಟಕ ಸ್ಥಾಪಿಸಿ ಪ್ರಸ್ತುತ ಪ್ರತೀ ತಿಂಗಳು 10 ಟನ್‌ಗೂ ಅಧಿಕ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಾ ಪ್ರತೀ ವರ್ಷ ಸುಮಾರು 6 ಲಕ್ಷ ರೂ. ಸಂಪಾದಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

Update: 2024-05-13 08:02 GMT

ಮಂಡ್ಯ: ಸರಕಾರಿ ಕೆಲಸ ತೊರೆದು ತನ್ನ 20 ಗುಂಟೆ ಜಮೀನಿನ ಜತೆಗೆ 3 ಎಕರೆ ಜಮೀನು ಗುತ್ತಿಗೆ ಪಡೆದು ಕೃಷಿಯಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ತಾಲೂಕಿನ ಮಿಕ್ಕೆರೆ ಗ್ರಾಮದ ಶಿವಣ್ಣ, ಇಂದು ದೊಡ್ಡ ಪ್ರಮಾಣದ ಎರೆಹುಳು ಘಟಕ ಸ್ಥಾಪಿಸಿ ವಾರ್ಷಿಕ 6 ಲಕ್ಷ ರೂ. ಸಂಪಾದಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಐಟಿಐ ವ್ಯಾಸಂಗ ಮಾಡಿದ್ದ ಶಿವಣ್ಣ ಅವರು 1995-99ರವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ಕೃಷಿಯ ಕಡೆಗೆ ಒಲವು ಹೊಂದಿದ್ದ ಅವರು ಕೆಲಸ ಬಿಟ್ಟು ಊರಿಗೆ ಬಂದು ಬ್ಯಾಂಕ್‌ನಿಂದ ಸಾಲ ಪಡೆದು ಹೈನುಗಾರಿಕೆ ಪ್ರಾರಂಭಿಸಿ ಡೇರಿ ಪ್ರಾರಂಭಿಸಿದರು.

ಮೈಸೂರು ಆಕಾಶವಾಣಿಯಲ್ಲಿ ಶಿವಣ್ಣ ಅವರು ಸಂದರ್ಶನಕ್ಕೆ ತೆರಳಿದ್ದ ವೇಳೆ ಧಾರವಾಡದ ರೈತರೊಬ್ಬರ ಯಶೋಗಾಥೆ ಬಗ್ಗೆ ತಿಳಿದುಕೊಂಡರು. 2015ರಲ್ಲಿ ಹಲವಾರು ನೈಸರ್ಗಿಕ ಕೃಷಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ದೇಸಿ ಹಸು, ವಿದೇಶಿ ಹಸುಗಳ ನಡುವಿನ ವ್ಯತ್ಯಾಸ ತಿಳಿದುಕೊಂಡು ದೇಸಿ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ, ಗಿರ್ ತಳಿಯ ಹಸುಗಳನ್ನು ಸಾಕಿದ್ದಾರೆ.

ಜೀವವೈವಿಧ್ಯ ಹೆಚ್ಚಿಸಲು ಕತ್ತೆ, ಬಾತು ಕೋಳಿ. ಮೇಕೆ ಮರಿ, ಜೇನು ಸಾಕಣೆಯನ್ನು ಆರಂಭಿಸಿದ್ದಾರೆ. ಕತ್ತೆ ಹಾಲಿಗಂತೂ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ದೂರದ ಊರುಗಳಿಂದ ಮಕ್ಕಳಿಗೆ ಕತ್ತೆ ಹಾಲು ಕುಡಿಸಲು ಜನ ಇವರ ತೋಟಕ್ಕೆ ಬರುತ್ತಾರೆ. ರೇಷ್ಮೆಹುಳು ಸಾಕಣೆಯನ್ನು ಮಾಡುತ್ತಿದ್ದಾರೆ. ರಾಜಮುಡಿ, ಸೇಲಂ ಸಣ್ಣ, ಮುಂತಾದ ದೇಸಿ ತಳಿ ಭತ್ತ ಬೆಳೆದು ಅಕ್ಕಿ ಮಾಡಿ ಮಾರಾಟ ಮಾಡುತ್ತಾರೆ.

ಇವರ ಎರೆಹುಳು ಘಟಕಕ್ಕೆ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೃಷಿಯಲ್ಲೂ ಆಸಕ್ತಿ ಮೂಡಿಸುವ ಕೆಲಸವನ್ನು ಶಿವಣ್ಣ ಮಾಡುತ್ತಿದ್ದಾರೆ. ಹಲವು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾರಿವ ಶಿವಣ್ಣ ಅವರಿಗೆ ಹಲವು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News