ಸಂಸತ್ ಸದನದಲ್ಲಿ ಭಾಷಣ ಜೀವಮಾನದ ನೆನಪು: ಮಂಗಳೂರಿನ ಪ್ರತಿಭೆ ಸೌರವ್ ಸಾಲ್ಯಾನ್ ಅನಿಸಿಕೆ

Update: 2023-10-05 09:47 GMT

ಮಂಗಳೂರು, ಅ.5: ದೆಹಲಿಯ ಹಳೆ ಸಂಸತ್ ಭವನದಲ್ಲಿ ಭಾಷಣ ಮಾಡಲು ದೊರಕಿರುವ ಅವಕಾಶ ಜೀವಮಾನದ ನೆನಪಿನ ಕ್ಷಣ ಎಂದು ಮಂಗಳೂರಿನ ಸೌರವ್ ಸಾಲ್ಯಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಗಾಂಧೀ ಜಯಂತಿ ಪ್ರಯುಕ್ತ ದೆಹಲಿಯ ಸಂಸತ್ ಭವನದಲ್ಲಿ ಭಾಷಣ ಮಾಡಲು ರಾಜ್ಯದಿಂದ ಆಯ್ಕೆಯಾಗಿದ್ದ ಮಂಗಳೂರಿನ ಯುವ ಪ್ರತಿಭೆ ಸೌರವ್ ಸಾಲ್ಯಾನ್ ಕೆನರಾ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿ. ಕಲಾವಿದನೂ ಆಗಿರುವ ಸೌರವ್ ಅವರು ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಸಾಧಕ ಪುರಸ್ಕಾರ, ಕರ್ನಾಟಕ ಪ್ರತಿಭಾ ರತ್ನ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರೆಸ್ಕ್ಲಬ್ನಲ್ಲಿ ಗುರುವಾರ ದೆಹಲಿ ಸಂಸತ್ ಭವನದಲ್ಲಿನ ತಮ್ಮ ಅನುಭವ ಹಂಚಿಕೊಂಡ ಸೌರವ್, ಲಾಲ್ಬಹಾದ್ದೂರ್ ಶಾಸ್ತ್ರಿ ಅವರ ಜೀವನ ಪಾಠದ ಬಗ್ಗೆ ಮಾತುಗಳನ್ನು ಆಡಿದ್ದಾಗಿ ಹೇಳಿದರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಬಗ್ಗೆ ಧೈರ್ಯ ಇತ್ತಾದರೂ, ರಾಜ್ಯ ಮಟ್ಟದಿಂದ ಆಯ್ಕೆಯಾಗಿ ಸಂಸತ್ ಭವನಕ್ಕೆ ಹೋಗಲು ಅವಕಾಶ ಪಡೆಯುವ ಬಗ್ಗೆ ಕಿಂಚಿತ್ತೂ ವಿಶ್ವಾಸವಿರಲಿಲ್ಲ. ಆದರೆ ಅಂತಹ ಅವಕಾಶಕ್ಕೆ ನನ್ನ ಅಜ್ಜಿಯ ಪ್ರೇರಣೆಯೇ ಪ್ರಮುಖ ಕಾರಣ ಎಂದವರು ಹೇಳಿದರು.

ಜೀವನದಲ್ಲಿ ಮೊದಲ ಬಾರಿಗೆ ದೆಹಲಿಯ ಸಂಸತ್ಗೆ ಹೋಗಲು ವಿಮಾನ ಹತ್ತಲು ಅವಕಾಶ ದೊರೆಯಿತು. ಅಲ್ಲಿ ಅತ್ಯುತ್ತಮ ವ್ಯವಸ್ಥೆಯಡಿ ತಂಗುವ ವ್ಯವಸ್ಥೆಯೂ ದೊರಕಿತ್ತು. ಹಳೆ ಸಂಸತ್ ಭವನದಲ್ಲಿ ಮಾತನಾಡುವ ಜತೆಗೆ ಹೊಸ ಸಂಸತ್ ಭವನವನ್ನು ನೋಡುವ ಅವಕಾಶವೂ ದೊರೆಯಿತು. ಇದರ ಜತೆಗೆ ರಾಜ್ಘಾಟ್, ಇಂಡಿಯಾ ಗೇಟ್ಗೆ ನಮ್ಮನ್ನು ಕರೆದೊಯ್ಯಲಾಗಿತ್ತು. ನನ್ನ ತಾಯಿ, ತಾಯಿ ಸ್ನೇಹಿತೆ ಹಾಗೂ ನನ್ನ ಗೆಳೆಯನೊಂದಿಗೆ ದೆಹಲಿಗೆ ಹೋಗಿದ್ದೆ. ದೆಹಲಿಯೆಂದರೆ ಮಾಲಿನ್ಯ ಭರಿತ ನಗರ ಎಂಬ ಕಲ್ಪನೆ ನನ್ನದಾಗಿತ್ತು. ಆದರೆ, ಅಲ್ಲಿ ಆರಂಭದಲ್ಲಿ ನೋಡಿದ ದಿಲ್ಲಿ ಅತ್ಯಂತ ಸುಂದರ ಮತ್ತು ಸ್ವಚ್ಛವಾಗಿತ್ತು. ಆದರೆ ಕಾರ್ಯಕ್ರಮದ ಮುಗಿದ ಬಳಿಕ ತಾಯಿ ಹಾಗೂ ಸ್ನೇಹಿತರ ಜತೆ ದೆಹಲಿ ಸುತ್ತಿದಾಗ ದೆಹಲಿಯ ಕತ್ತಲಿನ ಭಾಗದ ಅನಾವರಣವೂ ಆಯಿತು ಎಂದು ಸೌರವ್ ಹೇಳಿದರು.

ಆಂಗ್ಲ ಭಾಷೆಯ ಉಪನ್ಯಾಸಕನಾಗಬೇಕೆಂಬುದು ನನ್ನ ಕನಸು. ಆಂಗ್ಲ ಭಾಷೆಯ ಟ್ಯೂಶನ್ ನೀಡುತ್ತಾ ನನ್ನ ಶಿಕ್ಷಣ ಪಡೆಯುತ್ತಿದ್ದೇನೆ. ಉಪನ್ಯಾಸಕನಾಗುವ ಕನಸಿನ ಜತೆಗೆ ಬರಹಗಾರನಾಗಬೇಕೆಂಬ ಇರಾದೆಯೂ ಇದೆ ಎಂದು ಸೌರವ್ ಹೇಳಿದರು.

ಸೌರವ್ ಬಾಲ್ಯದಿಂದಲೇ ಮಾತುಗಾರ. ವಿವಿಧ ರೀತಿಯ ಕಲೆಯ ಬಗ್ಗೆಯೂ ಆಸಕ್ತಿ ಹೊಂದಿರುವ ಆತ ಎಸೆಸೆಲ್ಸಿಯಲ್ಲಿ ಶೇ. 92.8 ಹಾಗೂ ಪಿಯುಸಿಯಲ್ಲಿ ಶೇ. 97.7 ಅಂಕಗಳನ್ನು ಪಡೆಯುವ ಮೂಲಕ ಶೈಕ್ಷಣಿಕವಾಗಿಯೂ ಉತ್ತಮ ನಿರ್ವಹಣೆ ತೋರುತ್ತಿದ್ದಾನೆ ಎಂದು ಸೌರವ್ ತಾಯಿ ಪುಷ್ಪಾವತಿ ಹೇಳಿದರು.

ಸೌರವ್ ಸಾಧನೆ ಜಿಲ್ಲೆಯ ಜತೆಗೆ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ನೆಹರೂ ಯುವ ಕೇಂದ್ರದ ಜಗದೀಶ್ ಕೆ., ಕೆನರಾ ಕಾಲೇಜು ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ., ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸೀಮಾ ಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಿಯಾ ಸುದೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News