ಡೆಂಗಿ: ನಿರ್ಲಕ್ಷ್ಯ ಸಲ್ಲ
ಮಾನ್ಯರೇ,
ರಾಜ್ಯದಲ್ಲಿ ಡೆಂಗಿ ಜ್ವರ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ರಾಜ್ಯದ ಕೆಲವೆಡೆ ಆಸ್ಪತ್ರೆಗಳಲ್ಲಿ ಡೆಂಗಿ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ ಎಂದು ವರದಿಗಳು ತಿಳಿಸುತ್ತಿವೆ. ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಅತಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ವರ್ಷ ಡೆಂಗಿ ಸೋಂಕು ಹರಡುವಿಕೆ ತೀವ್ರವಾಗಿದೆ. ಹಾಗಾಗಿ ಡೆಂಗಿ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಡೆಂಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳು ಸಿಗುವಂತೆ ನೋಡಿಕೊಳ್ಳುವುದು, ಸೊಳ್ಳೆಗಳ ನಾಶಕ್ಕೆ ಔಷಧಿ ಇತ್ಯಾದಿ ಕ್ರಮಗಳ ಬಗ್ಗೆ ಸ್ಥಳೀಯಾಡಳಿತಗಳನ್ನು ಬಳಸಿಕೊಂಡು ಆರೋಗ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಡೆಂಗಿ ಬೆನ್ನಲ್ಲೇ ಚಿಕನ್ಗುನ್ಯಾ ಕೂಡ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೂ ಸರಕಾರ ಔಷಧ ಮತ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಬಡವರು, ಅನಕ್ಷರಸ್ಥರು ಹಾಗೂ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಮಾಹಿತಿ ಇಲ್ಲದವರು ಇರುವ ಕಡೆ ಸ್ಥಳೀಯ ಆಡಳಿತಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಡೆಂಗಿ ಸೋಂಕನ್ನು ಎದುರಿಸಲು ಜನರನ್ನು ಸಜ್ಜುಗೊಳಿಸುವ ಅಗತ್ಯವಿದೆ. ಪ್ರತೀ ಜಿಲ್ಲೆಗಳಿಂದ ಡೆಂಗಿ ಕುರಿತ ಅಂಕಿಅಂಶಗಳನ್ನು ತರಿಸಿಕೊಂಡು ಆರೋಗ್ಯ ಇಲಾಖೆ ತಕ್ಷಣವೇ ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು