ನ್ಯಾ. ಚಂದ್ರಚೂಡ್-ಹತಾಶ ಭಾರತದ ಮತ್ತೊಂದು ನಿರಾಶೆ

ನ್ಯಾ. ಡಿ.ವೈ. ಚಂದ್ರಚೂಡ್ ಅವರು ಎರಡು ವರ್ಷಗಳ ಅವಧಿಯನ್ನು ಮುಗಿಸಿ ನಿವೃತ್ತರಾಗುತ್ತಿರುವ ಈ ಹೊತ್ತಿನಲ್ಲಿ ಅವರ ‘ಲೀಗಸಿ’(ಪರಂಪರೆ)ಯು ಈ ಹಿಂದೆ ಆಳುವ ಮೋದಿ ಸರಕಾರಕ್ಕೆ ತಲೆಬಾಗಿದ ಇತರ ಮುಖ್ಯ ನ್ಯಾಯಾಧೀಶರುಗಳಿಗಿಂತ ಯಾವ ರೀತಿಯಿಂದಲೂ ಭಿನ್ನವಿರಲಿಲ್ಲ ಮಾತ್ರವಲ್ಲ, ಇನ್ನೂ ಹೆಚ್ಚು ಹಾನಿಕಾರಿಯಾಗಿತ್ತು ಎಂಬುದನ್ನು ಭಾರತ ಅತ್ಯಂತ ವಿಷಾದದಿಂದ ಗುರುತಿಸುತ್ತಿದೆ.

Update: 2024-11-06 05:47 GMT
Editor : Thouheed | Byline : ಶಿವಸುಂದರ್

ಭಾಗ- 1

ಭಾರತದ 50ನೇ ಮುಖ್ಯ ನ್ಯಾಯಾಧೀಶರಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಇದೇ ನವೆಂಬರ್ 10ಕ್ಕೆ ನಿವೃತ್ತರಾಗುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಅತಿ ದೀರ್ಘ ಕಾಲದ - ಎರಡು ವರ್ಷಗಳ ಅವಧಿಗೆ (2024ರ ನವೆಂಬರ್ ತನಕ) ಮುಖ್ಯ ನ್ಯಾಯಾಧೀಶರಾಗುವ ಅವಕಾಶ ನ್ಯಾ. ಚಂದ್ರಚೂಡ್ ಅವರಿಗೆ ಒದಗಿ ಬಂದಿತ್ತು. ಅವರ ತಂದೆಯವರೂ (ವೈ.ವಿ. ಚಂದ್ರಚೂಡ್) ಸಹ ಅತಿ ದೀರ್ಘ ಕಾಲ (ಏಳು ವರ್ಷ-1978-85) ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದರು.

ಭಾರತವು ಒಂದು ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ನ್ಯಾ. ಡಿ.ವೈ. ಚಂದ್ರಚೂಡ್ ಅವರು ಮುಖ್ಯ ನ್ಯಾಯಾಧೀಶರಾಗಿದ್ದು ಹಾಗೂ ಕಳೆದೊಂದು ದಶಕದಲ್ಲಿ ಈ ಹಿಂದಿನ ಬಹುಪಾಲು ಮುಖ್ಯ ನ್ಯಾಯಮೂರ್ತಿಗಳು ಆಡಳಿತಾರೂಢ ಹಿಂದುತ್ವವಾದಿ ಸರಕಾರದ ಸಿದ್ಧಾಂತ ಮತ್ತು ರಾಜಕೀಯಗಳಿಗೆ, ಅದರ ಸರ್ವಾಧಿಕಾರಿ ಕ್ರಮಗಳಿಗೆ ಕಿಂಚಿತ್ತೂ ನ್ಯಾಯಿಕ/ ಸಾಂವಿಧಾನಿಕ ತಡೆಯೊಡ್ಡದೆ ತಲೆ ಬಾಗಿ ಆಳುವ ಸರಕಾರ ದೇಶದ ಜನತೆಯ ಹಕ್ಕುಗಳ ಮೇಲೆ ಸತತ ದಾಳಿಯನ್ನು ನಡೆಸುತ್ತಿದ್ದರೂ ರಕ್ಷಿಸದೆ ಇದ್ದ ಸಂದರ್ಭದಲ್ಲಿ, ಭಾರತದ ನ್ಯಾಯಾಂಗವು ನಿಜಕ್ಕೂ ಸ್ವತಂತ್ರವೇ ಅಥವಾ ಕಾರ್ಯಾಂಗದ ಮತ್ತೊಂದು ಸಾಲಂಕೃತ ಕಚೇರಿಯೇ ಎಂಬ ಗಂಭೀರವಾದ ಪ್ರಶ್ನೆ ಉದ್ಭವಿಸಿರುವ ಕಾಲದಲ್ಲಿ ತಮ್ಮ ಅಪಾರ ವಿದ್ವತ್ತು ಹಾಗೂ ನೀಡಿದ್ದ ಕೆಲವು ನ್ಯಾಯಾದೇಶಗಳ ಮೂಲಕ ನ್ಯಾ. ಡಿ.ವೈ. ಚಂದ್ರಚೂಡ್ ಅವರು ದೇಶದಲ್ಲಿ ಸಹಜವಾಗಿಯೇ ನಿರೀಕ್ಷೆಯನ್ನು ಹುಟ್ಟಿಸಿದ್ದರು.

ಉದಾಹರಣೆಗೆ ಪುಟ್ಟಸ್ವಾಮಿ ಪ್ರಕರಣದಲ್ಲಿ ಜನರ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ವಿಸ್ತರಿಸಿದ ಒಂಭತ್ತು ಜನರ ಪೀಠದಲ್ಲಿ ಚಂದ್ರಚೂಡ್ ಕೂಡ ಒಬ್ಬರಾಗಿದ್ದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಅಲ್ಪಸಂಖ್ಯಾತ ತೀರ್ಪು ಕೊಟ್ಟಿದ್ದರು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿದಿದ್ದರು. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಯ ಜಾಮೀನು ಹಕ್ಕಿನ ಪರವಾಗಿಯೂ ಹಲವಾರು ಮಹತ್ವದ ಆದೇಶಗಳನ್ನು ಕೊಟ್ಟಿದ್ದರು. ಕೇರಳದ ಹಿಂದೂ ತರುಣಿ ಸ್ವ ಇಚ್ಛೆಯಿಂದ ಇಸ್ಲಾಮಿಗೆ ಮತಾಂತರಗೊಂಡು ಮುಸ್ಲಿಮ್ ಯುವಕನನ್ನು ಮದುವೆಯಾದ ಪ್ರಖ್ಯಾತ ಹಾದಿಯಾ ಪ್ರಕರಣದಲ್ಲಿ ವಯಸ್ಕ ತರುಣ ತರುಣಿಯರು ಸಮ್ಮತಿ ಪೂರ್ವಕವಾಗಿ ವೈವಾಹಿಕ ಸಂಬಂಧಕ್ಕೆ ಮುಂದಾದಾಗ ಕುಟುಂಬ, ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವ ಹಾಗಿಲ್ಲ ಎಂಬ ಮಹತ್ವದ ತೀರ್ಪು ಕೊಟ್ಟಿದ್ದರು. ಹಾಗೂ ಶಬರಿಮಲೆ ಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸುವುದು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಬರದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತೀರ್ಪು ಕೊಟ್ಟ ಪೀಠದ ಬಹುಸಂಖ್ಯಾತ ತೀರ್ಪನ್ನು ಬರೆದಿದ್ದರು.

ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತಾಗುವಲ್ಲಿ ಮತ್ತು ಲಾಕ್‌ಡೌನ್ ಅವಧಿ ಇದ್ದಿದ್ದರಲ್ಲಿ ಸಹನೀಯವಾಗುವಂತೆ ಮಾಡುವಲ್ಲಿ ನ್ಯಾ. ಚಂದ್ರಚೂಡ್ ಅವರ ಪೀಠ ಮಧ್ಯಪ್ರವೇಶ ಮಾಡಿದ್ದೇ ಕಾರಣವಾಗಿತ್ತು.

ಆದರೆ ಅವರು ಎರಡು ವರ್ಷಗಳ ಅವಧಿಯನ್ನು ಮುಗಿಸಿ ನಿವೃತ್ತರಾಗುತ್ತಿರುವ ಈ ಹೊತ್ತಿನಲ್ಲಿ ನ್ಯಾ. ಚಂದ್ರಚೂಡರ ‘ಲೀಗಸಿ’(ಪರಂಪರೆ)ಯು ಈ ಹಿಂದೆ ಆಳುವ ಮೋದಿ ಸರಕಾರಕ್ಕೆ ತಲೆಬಾಗಿದ ಇತರ ಮುಖ್ಯ ನ್ಯಾಯಾಧೀಶರುಗಳಿಗಿಂತ ಯಾವ ರೀತಿಯಿಂದಲೂ ಭಿನ್ನವಿರಲಿಲ್ಲ ಮಾತ್ರವಲ್ಲ, ಇನ್ನೂ ಹೆಚ್ಚು ಹಾನಿಕಾರಿಯಾಗಿತ್ತು ಎಂಬುದನ್ನು ಭಾರತ ಅತ್ಯಂತ ವಿಷಾದದಿಂದ ಗುರುತಿಸುತ್ತಿದೆ. ಪ್ರಾಯಶಃ ಸಮಕಾಲೀನ ನ್ಯಾಯಾಂಗ ಇತಿಹಾಸದಲ್ಲಿ ಪ್ರಧಾನಿ ಮೋದಿಯವರನ್ನು ಬಿಟ್ಟರೆ ಅತ್ಯಂತ ಹೆಚ್ಚು ಸಾರ್ವಜನಿಕ ಚರ್ಚೆಯಲ್ಲಿ ಇದ್ದದ್ದು ಚಂದ್ರಚೂಡರು. ಆದರೆ ಸೆಮಿನಾರ್‌ಗಳಲ್ಲಿ ಭರ್ಜರಿಯಾಗಿ ಸಂವಿಧಾನದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ನ್ಯಾ. ಚಂದ್ರಚೂಡರು, ನ್ಯಾಯಾಲಯದ ಒಳಗೆ ಮಾತ್ರ ಸಂವಿಧಾನ ಮತ್ತು ಜನರ ಹಕ್ಕುಗಳನ್ನು ಔಟು ಮಾಡುತ್ತಿದ್ದೇಕೆ ಎಂಬ ಪ್ರಶ್ನೆ ಅವರ ಕಾಲಾವಧಿಯನ್ನು ವಿಶ್ಲೇಷಣೆ ಮಾಡುವ ಪ್ರತಿಯೊಬ್ಬರಲ್ಲೂ ಮೂಡುತ್ತಿದೆ.

ನ್ಯಾ. ಚಂದ್ರಚೂಡರ ಅವಧಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಆರು ವರ್ಗೀಕರಣ ಮಾಡಿಕೊಂಡರೆ ಸುಲಭವಾಗುತ್ತದೆ:

1. ತಮ್ಮೆಲ್ಲಾ ಮೇಧಾಶಕ್ತಿಯನ್ನು ಬಳಸಿ ಖುಲ್ಲಂ ಖುಲ್ಲಾ ಮೋದಿ ಸರಕಾರದ ಸಿದ್ಧಾಂತದ ಪರವಾಗಿ ಸಂವಿಧಾನದ ವ್ಯಾಖ್ಯಾನ ಮಾಡಿ ಸಂವಿಧಾನ ವಿರೋಧಿ ಕಾರ್ಪೊರೇಟ್ ಬಂಡವಾಳಶಾಹಿ ಪರ ಹಿಂದೂ ರಾಷ್ಟ್ರವಾದದ ರಾಜಕಾರಣಕ್ಕೆ ನ್ಯಾಯಿಕ ಸಮರ್ಥನೆ ನೀಡಿದ್ದು.

2. ಕಾನೂನಿನ ವ್ಯಕ್ತಿನಿಷ್ಠ ವ್ಯಾಖ್ಯಾನ ಮಾಡಿ ಮೋದಿ ಸರಕಾರದ ನಾಯಕರುಗಳ ಪರವಾದ ಆದೇಶಗಳು.

3. ಪಾಕ್ಷಿಕವಾಗಿ ಮೋದಿ ಸರಕಾರದ ವಿರುದ್ಧದ ಸ್ವರೂಪವಿದ್ದರೂ ಸಾರದಲ್ಲಿ ಮೋದಿ ಸರಕಾರಕ್ಕೆ ಯಾವುದೇ ಹಾನಿಯುಂಟು ಮಾಡದ ಆದೇಶಗಳು.

4. ನಾಗರಿಕ ಹಕ್ಕುಗಳನ್ನು ಅರೆಬರೆಯಾಗಿ ಎತ್ತಿಹಿಡಿದು, ಸಾರದಲ್ಲಿ ಭಿನ್ನಮತವನ್ನು ಹತ್ತಿಕ್ಕುವ ಮೋದಿ ಸರಕಾರದ ನೀತಿಗಳು ಮುಂದುವರಿಯಲು ಅವಕಾಶ ಕೊಟ್ಟಿರುವುದು.

5. ಇವಲ್ಲದೆ ಮೋದಿ ಸರಕಾರದ ಸರ್ವಾಧಿಕಾರವನ್ನು ಪ್ರಶ್ನಿಸುವಂತಹ ಪ್ರಕರಣಗಳನ್ನೇ ಕೈಗೆತ್ತಿಕೊಳ್ಳದಿರುವುದು.

6. ನ್ಯಾಯಾಲಯದ ಹೊರಗಡೆ ಕೊನೆಯ ದಿನಗಳಲ್ಲಿ ಸಂಪೂರ್ಣವಾಗಿ ಸರಕಾರದೊಡನೆ ಮತ್ತು ಅದರ ಸಿದ್ಧಾಂತದೊಡನೆ ಸಹಮತ ವ್ಯಕ್ತಪಡಿಸುವ ವರ್ತನೆಗಳನ್ನು ತೋರುತ್ತಿರುವುದು.

ಹಿಂದುತ್ವ ತಾತ್ವಿಕತೆಯ ಪರವಾದ ನ್ಯಾಯಿಕ ತೀರ್ಮಾನಗಳು:

ಅ) ಬಾಬರಿ ಮಸೀದಿ -ರಾಮಜನ್ಮಭೂಮಿ, ಜ್ಞಾನವಾಪಿ ಪ್ರಕರಣಗಳು

ಬಿಜೆಪಿಯ ದ್ವೇಷ ರಾಜಕಾರಣದ ಹುಸಿ ಬುನಾದಿಯಾದ ಬಾಬರಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವ ಅಜೆಂಡಾಗೆ ನ್ಯಾ. ಚಂದ್ರಚೂಡರು ತಮ್ಮೆಲ್ಲಾ ಬುದ್ಧಿಮತ್ತೆಯನ್ನು ಬಳಸಿ ಸಾಂವಿಧಾನಿಕ ಸಮರ್ಥನೆಯನ್ನು ಒದಗಿಸಿದವರಲ್ಲಿ ಪ್ರಮುಖರು. 2019ರಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ರಾಮ ಮಂದಿರ ನಿರ್ಮಾಣದ ಪರವಾಗಿ ಅತ್ಯಂತ ಅನ್ಯಾಯಯುತ ಮತ್ತು ಸರ್ವಸಮ್ಮತ ತೀರ್ಪು ನೀಡಿತು. ಆ ಮೂಲಕ ಮೋದಿಯ ಹಿಂದುತ್ವ ರಥಯಾತ್ರೆಗೆ ಉನ್ನತ ನ್ಯಾಯಪೀಠ ಇದ್ದ ಅಡ್ಡಿಯನ್ನು ಕೂಡ ನಿವಾರಿಸಿತ್ತು. ಅಲ್ಲದೆ ನ್ಯಾಯಾದೇಶದಲ್ಲಿ ಸಾಕ್ಷಿ-ಪುರಾವೆಗಳಿಗಿಂತ ಬಹುಸಂಖ್ಯಾತರ ನಂಬಿಕೆಯೇ ಹೆಚ್ಚು ಮಹತ್ವದ್ದು ಎಂಬ ವ್ಯಾಖ್ಯಾನ ಈ ದೇಶದ ಸೆಕ್ಯುಲರ್ ಬುನಾದಿಗೆ ಬಲವಾದ ಪೆಟ್ಟುಕೊಟ್ಟಿದೆ. ಈ ನ್ಯಾಯಾದೇಶವನ್ನು ತಾನೇ ಬರೆದದ್ದೆಂದೂ, ಅದನ್ನು ಸಂವಿಧಾನದ ಮಾರ್ಗದರ್ಶನಕ್ಕಿಂತ ಹೆಚ್ಚಾಗಿ ದೇವರ ಮಾರ್ಗದರ್ಶನದಲ್ಲಿ ಬರೆದೆನೆಂದು ಮೊನ್ನೆ ನ್ಯಾ. ಚಂದ್ರಚೂಡರೇ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಒಬ್ಬ ಮುಖ್ಯ ನ್ಯಾಯಾಧೀಶನಾಗಿ ಹಾಗೆ ಮಾಡುವುದರಲ್ಲಿ ತಪ್ಪೇನು ಇಲ್ಲವೆಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲೂ ಸಮರ್ಥಿಸಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲ, ಭಾರತದ ಎಲ್ಲಾ ಮಸೀದಿಗಳನ್ನು ಕೆಡವಿ ಮಂದಿರ ಕಟ್ಟಬೇಕೆಂಬ ಹಿಂದುತ್ವವಾದಿ ಯೋಜನೆಗೂ ಸಾಕ್ಷಾತ್ ಚಂದ್ರಚೂಡರೇ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಲೈಸೆನ್ಸ್ ಕೊಟ್ಟಿದ್ದಾರೆ. ವಾಸ್ತವದಲ್ಲಿ ಅಯೋಧ್ಯಾ ತೀರ್ಪಿನಲ್ಲಿ ನ್ಯಾ. ಚಂದ್ರಚೂಡ್ ಅವರನ್ನೂ ಒಳಗೊಂಡಂತೆ ಐವರು ನ್ಯಾಯಾಧೀಶರು ಸಹ ತಮ್ಮ ಆದೇಶದಲ್ಲಿ ದೇಶದ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು 1947ಕ್ಕಿಂತ ಮುಂಚೆ ಹೇಗಿತ್ತೋ ಹಾಗೆ ಉಳಿಸಿಕೊಳ್ಳಬೇಕೆಂದು ತಾಕೀತು ಮಾಡುವ Pಟಚಿಛಿes ಔಜಿ Places Of Worship Act-1991 ಅನ್ನು ಈ ದೇಶದ ಸೆಕ್ಯುಲರಿಸಂ ರಕ್ಷಕ ಎಂದೆಲ್ಲಾ ಹೇಳಿದ್ದರು. ಅಯೋಧ್ಯೆ ಒಂದನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕಡೆ ಎಲ್ಲಾ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಹಾಗಿಲ್ಲ ಎಂದು ಆ ಆದೇಶದಲ್ಲಿ ಉಲ್ಲೇಖಿಸಿದ್ದರು.

ಆದರೆ ಅಂತಹ ಆದೇಶ ಕೊಟ್ಟ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದ ನ್ಯಾ. ಚಂದ್ರಚೂಡ್ ಅವರೇ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇತ್ತೋ ಇಲ್ಲವೋ ಎಂದು ಅರಿತುಕೊಳ್ಳಲು 1991ರ ಕಾಯ್ದೆ ಅಡ್ಡಿ ಮಾಡುವುದಿಲ್ಲ ಎಂದು ಆದೇಶ ಕೊಟ್ಟರು. ಜ್ಞಾನವಾಪಿ ಆದೇಶ ಮತ್ತು ಅಯೋಧ್ಯಾ ಪ್ರಕರಣದಲ್ಲಿ ಜನರ ನಂಬಿಕೆಯೇ ಸಾಕ್ಷಿ ಪುರಾವೆಗಳಿಗಿಂತ ಹೆಚ್ಚಿನ ಮಹತ್ವದ್ದು ಎಂದು ಕೊಟ್ಟಿರುವ ಆದೇಶಗಳನ್ನು ಈಗ ಕಾಶಿ, ಮಥುರಾ, ನಮ್ಮ ಬಾಬಾಬುಡಾನ್ ದರ್ಗಾ ಎಲ್ಲಾ ಕಡೆ ಮಸೀದಿ ನಾಶಕ್ಕೆ ಅವಕಾಶ ಕೊಡುವ ಮೇಲ್ಪಂಕ್ತಿ ಆದೇಶವನ್ನಾಗಿ ಕೆಳಗಿನ ಕೋರ್ಟುಗಳು ಬಳಸುತ್ತಿವೆ ಹಾಗೂ ಅದು ಹಿಂದುತ್ವ ಫ್ಯಾಶಿಸ್ಟ್ ರಾಜಕೀಯವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೋಷಿಸುತ್ತಿದೆ.

ಆ) ಆರ್ಟಿಕಲ್ 370 ರದ್ದು-ಫೆಡರಲ್ ವಿರೋಧಿ-ಬಿಜೆಪಿಯ ದುರಾಕ್ರಮಣಕ್ಕೆ ನ್ಯಾಯಾಂಗದ ಸೀಲು:

ಬಿಜೆಪಿಯ ಹಿಂದುತ್ವ ಅಜೆಂಡಾದ ಮತ್ತೊಂದು ಪ್ರಮುಖ ಕಾರ್ಯಸೂಚಿ ಆರ್ಟಿಕಲ್ 370 ರದ್ದು. ಅದನ್ನು 2019ರ ಆಗಸ್ಟ್ 5ರಂದು ಮೋದಿ ಸರಕಾರ ಒಂದು ರಾಷ್ಟ್ರಪತಿ ಆದೇಶದ ಮೂಲಕ ಅತ್ಯಂತ ಅಸಾಂವಿಧಾನಿಕವಾಗಿ ಮಾಡಿಬಿಟ್ಟಿತು ಹಾಗೂ ಕಾಶ್ಮೀರವನ್ನು ವಿಭಜೀಕರಿಸಿ ರಾಜ್ಯದ ಸ್ಥಾನಮಾನವನ್ನು ಕಸಿದುಕೊಂಡಿತು. ಇದರ ವಿರುದ್ಧದ ಅಹವಾಲನ್ನು ಪರಿಶೀಲಿಸುವ ಪೀಠದ ಮುಖ್ಯಸ್ಥರಾಗಿದ್ದ ಮುಖ್ಯ ನ್ಯಾಯಾಧೀಶ ಚಂದ್ರಚೂಡರು ಎಲ್ಲಾ ಸಾಂವಿಧಾನಿಕ ನಿಯಮಗಳನ್ನು, ತತ್ವಗಳನ್ನು, ರೀತಿ ನಿಯಮಗಳನ್ನು ಒಗ್ಗಿಸಿ, ಬಗ್ಗಿಸಿ ಬಿಜೆಪಿ ಸರಕಾರದ ಆದೇಶಕ್ಕೆ ನ್ಯಾಯಿಕ ಮುದ್ರೆಯನ್ನು ಒತ್ತಿಬಿಟ್ಟರು.

ಅದೇರೀತಿ ದಿಲ್ಲಿಯ ಚುನಾಯಿತ ಸರಕಾರದ ಅಧಿಕಾರ ವ್ಯಾಪ್ತಿಯನ್ನು ಮೋದಿ ಸರಕಾರ ಅತ್ಯಂತ ಸರ್ವಾಧಿಕಾರದಿಂದ ಕಿತ್ತುಹಾಕಿದ ಫೆಡರಲ್ ವಿರೋಧಿ ಕ್ರಮವನ್ನೂ ಕೂಡ ಚಂದ್ರಚೂಡ್ ಪೀಠ ಮಾನ್ಯ ಮಾಡಿತು.

ಕಾರ್ಪೊರೇಟ್ ಬಂಡವಾಳಶಾಹಿ ತಾತ್ವಿಕತೆಯ ಪರ ತೀರ್ಮಾನಗಳು

ಅ) ‘ಪ್ರಭುತ್ವ ನಿರ್ದೇಶನಾ ತತ್ವ’ಗಳನ್ನು, ‘ಬಂಡವಾಳಶಾಹಿ ನಿರ್ದೇಶನ ತತ್ವ’ಗಳನ್ನಾಗಿಸಿದ ನ್ಯಾ. ಚಂದ್ರಚೂಡ್

ಸಂವಿಧಾನದ ಕಲ್ಯಾಣ ರಾಜ್ಯ ಪರಿಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರ ಪ್ರಭುತ್ವ ಸಮಾಜವಾದಿ ಆಶಯದ ಬಗ್ಗೆ ಸೆಮಿನಾರ್‌ಗಳಲ್ಲಿ ಉದ್ದುದ್ದ ಮಾತನಾಡುತ್ತಿದ್ದ ನ್ಯಾ. ಚಂದ್ರಚೂಡ್ ಅವರ ನಿವೃತ್ತರಾಗುವ ಮುಂಚೆ ಮೊನ್ನೆ (4-11-2024) ಒಂಭತ್ತು ನ್ಯಾಯಾಧೀಶರ ಪೀಠದ ಭಾಗವಾಗಿ ಕೊಟ್ಟ ಬಹುಸಂಖ್ಯಾತರ ಆದೇಶದಲ್ಲಿ ಸಂವಿಧಾನದ ಈ ಆಶಯವನ್ನೇ ಮಾರುಕಟ್ಟೆಯ ಕಾರ್ಪೊರೇಟ್ ಪರ ಹಿತಾಸಕ್ತಿಗಳ ಪರವಾಗಿ ವ್ಯಾಖ್ಯಾನ ಮಾಡಿದ್ದಾರೆ ಹಾಗೂ ಭಾರತ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ಜನಪರ ನ್ಯಾಯಾಧೀಶ ನ್ಯಾ. ಕೃಷ್ಣ ಅಯ್ಯರ್ ಅವರು ದೇಶದ ಸಂಪತ್ತಿನ ಮೇಲೆ ಸಮುದಾಯದ ಒಡೆತನವಿರಬೇಕು ಎಂಬ ಸಂವಿಧಾನದ ಆರ್ಟಿಕಲ್ 39 (ಬಿ) ಬಗ್ಗೆ ಕೊಟ್ಟ ವ್ಯಾಖ್ಯಾನವನ್ನು ‘ಕಮ್ಯುನಿಸ್ಟ್ ಸಿದ್ಧಾಂತವಾದಿ’ ಆಶಯವೆಂದು ಪರೋಕ್ಷವಾಗಿ ಟೀಕಿಸಿ ತಿರಸ್ಕರಿಸಿದ್ದಾರೆ ಮತ್ತು ಬದಲಾಗುತ್ತಿರುವ ಬಂಡವಾಳಶಾಹಿ ಜಗತ್ತಿನ ಮೌಲ್ಯಕ್ಕೆ ತಕ್ಕಂತೆ ಸಂವಿಧಾನದ ‘ಪ್ರಭುತ್ವ ನಿರ್ದೇಶನಾ ತತ್ವ’ಗಳನ್ನು ಬಂಡವಾಳಶಾಹಿ ನಿರ್ದೇಶನಾ ತತ್ವ’ಗಳನ್ನಾಗಿ ಮಾನ್ಯಮಾಡಿದ್ದಾರೆ. ಇದು ಬರಲಿರುವ ದಿನಗಳಲ್ಲಿ ಸಮುದಾಯದ ಸಂಪತ್ತಿನ ಮೇಲೆ ಕಾರ್ಪೊರೇಟ್ ದಾಳಿಯನ್ನು ಅತ್ಯಂತ ಸರಾಗಗೊಳಿಸಿದೆ.

ಹಲವಾರು NCLAT ಪ್ರಕರಣಗಳಲ್ಲಿ ನ್ಯಾ. ಚಂದ್ರಚೂಡರು ಕಾರ್ಪೊರೇಟುಗಳಿಗೆ ಕೊಟ್ಟಷ್ಟು ವಿನಾಯಿತಿಯನ್ನು ಬೇರೆ ಯಾವ ನ್ಯಾಯಾಧೀಶರೂ ಕೊಟ್ಟಿಲ್ಲ. ಫಿನೊಲೆಕ್ಸ್ ಎಂಬ ಬೃಹತ್ ಕಾರ್ಪೊರೇಟ್ ಕಂಪೆನಿಯ ಪ್ರಕರಣದಲ್ಲಂತೂ NCLAT ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನೂ ಕೂಡ ನ್ಯಾಯಾಲಯಕ್ಕೆ ಕರೆಸಿ ಸುಪ್ರೀಂ ಆದೇಶ ಜಾರಿ ಮಾಡದಿರುವುದಕ್ಕಾಗಿ ನ್ಯಾಯಾಲಯ ನಿಂದನೆ ಮೊಕದ್ದಮೆಯನ್ನು ಹೂಡುವ ಬೆದರಿಕೆಯನ್ನು ಹಾಕಿದ್ದವರು ಕೂಡ ಇದೇ ನ್ಯಾ. ಚಂದ್ರಚೂಡರೇ. PMLA ಪ್ರಕರಣಗಳಲ್ಲಿ ಬಂಧಿತರಾದ ಹೋರಾಟಗಾರರ ಜಾಮೀನು ವಿಷಯದ ಬಗ್ಗೆ ನಿರ್ಲಕ್ಷ್ಯ ತೋರುವ ನ್ಯಾ. ಚಂದ್ರಚೂಡರ ನ್ಯಾಯಾಲಯ ಈ ಕಾನೂನಿನ ಕೆಳಗೆ ಬಂಧಿತರಾದ ಉದ್ಯಮಿಗಳನ್ನು ಬಿಡುಗಡೆ ಮಾಡಲು ಮಾತ್ರ ಇನ್ನಿಲ್ಲದ ಮುತುವರ್ಜಿ ವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News