ಮೈಕ್ರೋ ಫೈನಾನ್ಸ್, ಮ್ಯಾಕ್ರೋ ಪ್ರಾಫಿಟ್!
ಬಡವರ ಅಸಹಾಯಕತೆಯನ್ನು ಹೆಚ್ಚಿಸಿರುವ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕತೆ ಬಡವರ ಸಂಕಷ್ಟಗಳನ್ನು ಹೆಚ್ಚಿಸುತ್ತಿದೆ. ಅಲ್ಪಸ್ವಲ್ಪ ವ್ಯಾಪಾರ ಮಾಡಿದರೆ ಬದುಕಬಹುದೆಂಬ ಮಾರುಕಟ್ಟೆಯ ಹುಸಿಗಳು ಅವರನ್ನು ಸ್ವಪ್ರೇರಣೆಯಿಂದ ಮೈಕ್ರೋ ಫೈನಾನ್ಸ್ ನೇಣಿಗೆ ಕೊರಳೊಡ್ಡುವಂತೆ ಮಾಡುತ್ತವೆ. ಏಕೆಂದರೆ ಇದೇ ನಿಯೋ ಲಿಬರಲ್ ಆರ್ಥಿಕತೆಯ ಭಾಗವಾಗಿ ಸಾರ್ವಜನಿಕ ಬ್ಯಾಂಕುಗಳು ಕಿರುಸಾಲದ ಕ್ಷೇತ್ರಕ್ಕೆ ಗಮನಹರಿಸದೆ ಬ್ಲೇಡ್ ಕಂಪೆನಿಗಳಿಗೆ ಬಿಟ್ಟುಕೊಟ್ಟಿವೆ. ಆದರಲ್ಲಿರುವ ಲಾಭದ ಪ್ರಮಾಣ ಮತ್ತು ಲಾಭದ ಖಾತರಿಯನ್ನು ಕಂಡು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಈಗ ಈ ನರಭಕ್ಷಕ ಉದ್ಯಮದಲ್ಲಿ ಶೇರು ಹೂಡಿಕೆ ಮಾಡುತ್ತಾ ಅದರ ಪಂಜಾಗಳನ್ನು ಗಟ್ಟಿ ಮಾಡುತ್ತಿವೆ.

ಕಳೆದ ಎರಡು ಮೂರು ವಾರಗಳಿಂದ ಮೈಕ್ರೋ ಫೈನಾನ್ಸ್ ಕಂಪೆನಿಗಳ ವಸೂಲಿ ಕ್ರೌರ್ಯಕ್ಕೆ ತುತ್ತಾಗಿ ತಳ ಮಧ್ಯಮ ವರ್ಗದ ಬಡಪಾಯಿಗಳು ಸಾಲುಸಾಲಾಗಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ವರದಿಗಳು ಬರುತ್ತಿವೆ. ಸರಕಾರವು ತಡವಾಗಿ ಎಚ್ಚೆತ್ತು ಮೈಕ್ರೋ ೈನಾನ್ಸ್ ಕಂಪೆನಿಗಳು ಸಾಲ ವಸೂಲಿ ಮಾಡುವಾಗ ಪ್ರದರ್ಶಿಸುವ ಕ್ರೌರ್ಯಕ್ಕೆ ಲಗಾಮು ಹಾಕಲು ಕೆಲವು ನಿಯಮಗಳನ್ನು ಘೋಷಿಸಿದೆ.
ಆದರೆ ಸರಕಾರದ ಈ ಕ್ರಮಗಳು ಮೈಕ್ರೊ ಫೈನಾನ್ಸ್‌ನ ನೇಣಿಗೆ ಬಿದ್ದವರನ್ನು ನೋವಿಲ್ಲದೆ ಕೊಲ್ಲುವಂತೆ ತಾಕೀತು ಮಾಡುತ್ತವೆಯೇ ವಿನಾ, ಸಮಸ್ಯೆಯ ಮೂಲವಾದ ಮೈಕ್ರೋ ಫೈನಾನ್ಸ್‌ನ ನೇಣಿಗೆ ಈ ದೇಶದ ಮತ್ತು ನಾಡಿನ ಬಡಜನರು ಗೊತ್ತಿದ್ದೂ, ಗೊತ್ತಿದ್ದೂ ಆತುಕೊಳ್ಳುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಏಕೆಂದರೆ ಈ ಮೈಕ್ರೋ ಫೈನಾನ್ಸ್ ಎಂಬ ದಂಧೆ ಹುಲುಸಾಗಿ ಬೆಳೆಯುತ್ತಿರುವುದೇ ಬಡಜನತೆಗೆ ಹಣದ ಸಾಲ ತುರ್ತು ಅಗತ್ಯವಿರುವ ಸಂದರ್ಭಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ. ಇಂದಿನ ನಿಯೋಲಿಬರಲ್ ಬ್ಯಾಂಕಿಂಗ್ ಜಗತ್ತಿನಲ್ಲಿ ಸಾರ್ವಜನಿಕ ಬ್ಯಾಂಕುಗಳು ಸಂಪನ್ಮೂಲವಿಲ್ಲದ ಬಡಜನರ ಸಾಲದ ಅಗತ್ಯವನ್ನು ಪೂರೈಸಲು ಕಾನೂನುಬದ್ಧವಾಗಿಯೇ ನಿರಾಕರಿಸುತ್ತಿರುವ ಕ್ರೌರ್ಯದಿಂದ.
ಹೀಗಾಗಿ ನರಭಕ್ಷಕ-ಲಾಭಕೋರ ನಿಯೋಲಿಬರಲ್ ವ್ಯವಸ್ಥೆಯ ಭಾಗವಾಗಿರುವ ಹಣಕಾಸು ವ್ಯವಸ್ಥೆಯ ಕ್ರೌರ್ಯವನ್ನು ತಡೆಗಟ್ಟದೆ ಕೇವಲ ವಸೂಲಿ ಕ್ರೌರ್ಯವನ್ನು ತಡೆಗಟ್ಟಲು ಸಾಧ್ಯವಿಲ್ಲ.
ನಿಯೋಲಿಬರಲ್ ಹಣಕಾಸು ವ್ಯವಸ್ಥೆಯ ಮೂಲವೇ 1991ರಿಂದ ಪ್ರಾರಂಭವಾದ ಕಾರ್ಪೊರೇಟ್ ಲಾಭದ ಪರ ಸುಧಾರಣೆಗಳಲ್ಲಿದೆ. ಶ್ರೀಮಂತರಿಂದ ಬಡವರೆಡೆಗೆ ಸಂಪನ್ಮೂಲವನ್ನು ಹರಿಸುವ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನೇ ಬುಡಮೇಲುಗೊಳಿಸಿ ಬಡವರಿಂದ ಶ್ರೀಮಂತರೆಡೆಗೆ ಅದರಲ್ಲೂ ಕೆಲವು ಬಿಲಿಯಾಧೀಶರೆಡೆಗೆ ಸಂಪನ್ಮೂಲಗಳ ಉಲ್ಟಾ ಹರಿವನ್ನೇ ಅಭಿವೃದ್ಧಿ ಎಂದು ಘೋಷಿಸಿದ ನಿಯೋಲಿಬರಲ್ ರಾಜ್ಯವಾಗಿ ಬದಲಾಗಿರುವುದರಲ್ಲಿ ಮೈಕ್ರೋ ೈನಾನ್ಸಿನ ಕ್ರೌರ್ಯದ ಮೂಲವೂ ಇದೆ.
ಇದು ಎರಡು ರೀತಿ ಅಭಿವ್ಯಕ್ತಗೊಳ್ಳುತ್ತಿದೆ. 1. ಪ್ರಭುತ್ವವು ಜನರಿಗೆ ಒದಗಿಸುತ್ತಿದ್ದ ಎಲ್ಲಾ ನೆರವುಗಳಿಂದ ಹಿಂದೆಗೆದುಕೊಂಡು ಮಾರುಕಟ್ಟೆ ಶಕ್ತಿಗಳಿಗೆ ಬಡಜನರನ್ನು ಬಲಿಗೊಟ್ಟಿದ್ದರಿಂದ ಹೆಚ್ಚಾಗುತ್ತಿರುವ ಸಂಪನ್ಮೂಲ ಕೊರತೆಗಳು ಮತ್ತು ಬಡಜನರ ಸಂಕಟಗಳು. 2. ಅಂಥ ಸಂಕಟಗಳಲ್ಲಿ ಅಲ್ಪಸ್ವಲ್ಪವಾದರೂ ನೆರವಾಗುತ್ತಿದ್ದ ಸಾರ್ವಜನಿಕ ಬ್ಯಾಂಕುಗಳು ಬಡಜನರನ್ನು ಗ್ರಾಹಕರೆಂದೂ ಪರಿಗಣಿಸದೆ ಅವರನ್ನು ಮೈಕ್ರೋ ಫೈನಾನ್ಸ್ ಕಂಪೆನಿಗಳೆಂಬ ರಣಹದ್ದುಗಳಿಗೆ ಬಲಿಗೊಡುತ್ತಿರುವುದು.
ಬಡತನದ ಅಸಹಾಯಕತೆಯ ವ್ಯಾಪಾರೀಕರಣ
ಭಾರತದಲ್ಲಿ ಬಡವರ ಹೆಸರಲ್ಲಿ ಜಾರಿಗೆ ಬಂದ ಎಲ್ಲಾ ಯೋಜನೆಗಳು ನಿಜಕ್ಕೂ ಬಡವರ ಪರವಾಗಿದ್ದಿದ್ದರೆ ಈ ದೇಶದಲ್ಲಿ ಎಲ್ಲಾ ಬಡವರು ಟಾಟಾ-ಬಿರ್ಲಾಗಳೇ ಆಗಿರುತ್ತಿದ್ದರು. ಆದರೆ ಬಡವರ ಹೆಸರಿನಲ್ಲಿ ಶ್ರೀಮಂತಿಕೆಯ ಬಸಿರು ಬೆಳೆದಿದ್ದರಿಂದಲೇ ಇಂದು ಈ ದೇಶ ಪ್ರಪಂಚದ ಶೇ.50 ಬಡವರ ತವರುಮನೆಯಾಗಿಯೇ ಉಳಿದಿದೆ. ಇದಕ್ಕೆ ಮುಖ್ಯ ಕಾರಣ ಬಡವರ ಹೆಸರಿನಲ್ಲಿ ಜಾರಿಯಾಗುತ್ತಿದ್ದ ಯೋಜನೆಗಳು ಅವರಿಗೆ ಸಿಗದಂತೆ ದಾರಿಮಧ್ಯದಲ್ಲೇ ಕಾಂಟ್ರಾಕ್ಟರುಗಳು, ಶ್ರೀಮಂತರು, ಭೂಮಾಲಕರು ನುಂಗಿ ಹಾಕುತ್ತಿರುವುದು.
ಈ ದೇಶದ ಸಂಪನ್ಮೂಲಗಳು ಅಂದರೆ ಜಮೀನು, ಇತರ ಆರ್ಥಿಕ ಉತ್ಪತ್ತಿಗಳಲ್ಲಿ ಸರಿಸಮಾನವಾದ ಪಾಲು ಸಿಗುವಂಥಾ ಕಾಯ್ದೆಗಳೇ ನಮ್ಮ ಸಂವಿಧಾನದಲ್ಲಿ ಇಲ್ಲ. ಇದೇ ಬಡವರು ಬಡವರಾಗಿಯೇ ಉಳಿಯಲು ಕಾರಣ ಎಂಬ ವಾದವನ್ನು ಸ್ವಾತಂತ್ರ್ಯ ಬರುವ ಹಿಂದಿನಿಂದಲೂ ಅಂಬೇಡ್ಕರ್ ಅವರನ್ನೂ ಒಳಗೊಂಡಂತೆ ಎಲ್ಲಾ ಪ್ರಗತಿಪರ ಮತ್ತು ಎಡಪಂಥೀಯ ಚಿಂತಕರು ವಾದಿಸುತ್ತಾ ಬಂದಿದ್ದಾರೆ. ಅಂಬೇಡ್ಕರ್ ಅವರಂತೂ ಈ ದೇಶದ ಪ್ರಮುಖ ಉತ್ಪಾದನಾ ಸಾಧನವಾದ ಭೂಮಿಯು ಖಾಸಗಿ ವ್ಯಕ್ತಿಗಳಲ್ಲೇ ಕೇಂದ್ರೀಕೃತವಾಗಿರುವುದೇ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಪ್ರಮುಖ ಕಾರಣ ಎಂದು ಸ್ಪಷ್ಟವಾಗಿ ಗುರುತಿಸಿದ್ದರು. ಆದ್ದರಿಂದಲೇ ಭೂಮಿಯ ರಾಷ್ಟ್ರೀಕರಣವಾಗಬೇಕೆಂದೂ ತಮ್ಮ ‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’ ದಸ್ತಾವೇಜಿನಲ್ಲಿ ಪ್ರಬಲವಾಗಿ ವಾದಿಸಿದ್ದರು.
ಅದೇನೇ ಇರಲಿ, 1991ರ ನಂತರ ದೇಶದ ಚಿಂತನೆಯ ಕ್ರಮವೇ ಬದಲಾಯಿತಲ್ಲ. ಈಗ ಸಂಪನ್ಮೂಲದ ಸಮಾನ ವಿತರಣೆ ಇನ್ನಿತ್ಯಾದಿ ಸಮಾಜವಾದಿ ಪರಿಹಾರಗಳಿಗಿಂತ ಮಾರುಕಟ್ಟೆಯೇ ಸರ್ವರೋಗ ನಿವಾರಕವೆಂಬ ತತ್ವವನ್ನು ಸರಕಾರ ಎಲ್ಲಾ ಕ್ಷೇತ್ರಗಳಲ್ಲೂ ಜಾರಿಗೆ ತಂದಿತು. ಅದರ ಪ್ರಕಾರ ಪ್ರತಿಯೊಬ್ಬರೂ ಕೊಳ್ಳುವವರೋ ಅಥವಾ ಮಾರುವವರೋ ಆದರೆ ಎಲ್ಲರ ಸಮಸ್ಯೆಯೂ ಬಗೆಹರಿಯುತ್ತದೆ. ಈ ಸಿದ್ಧಾಂತದ ಪ್ರಕಾರ ಬಡತನಕ್ಕೆ ಪ್ರಮುಖ ಕಾರಣ ಬಡವರು ಮಾರುಕಟ್ಟೆಯಲ್ಲಿ ಕೊಳ್ಳುವವರಾಗಿ ಅಥವಾ ಮಾರುವವರಾಗಿ ಹೆಚ್ಚಾಗಿ ಪ್ರವೇಶಿಸುತ್ತಿಲ್ಲ ಎನ್ನುವುದು. ಬಡವರು ಮಾರುಕಟ್ಟೆ ಪ್ರವೇಶ ಮಾಡಲಾಗದಿರುವುದಕ್ಕೆ ಪ್ರಮುಖ ಕಾರಣ ಅವರ ಬಳಿ ಬಂಡವಾಳ ಇಲ್ಲದಿರುವುದು. ಬಡವರು ಕೂಡಾ ಸಣ್ಣಪುಟ್ಟ ಉದ್ಯಮಗಳಲ್ಲಿ ತೊಡಗಿ, ಬುಟ್ಟಿ ಹೆಣೆಯುವುದು, ಹೂವು ಕಟ್ಟುವುದು, ಚಪ್ಪಲಿ ಮಾರುವುದು, ಸಣ್ಣ ಗೂಡಂಗಡಿ ನಡೆಸುವುದು, ಯಾವುದಾದರೂ ಸರಿ, ಉದ್ಯಮದಲ್ಲಿ ತೊಡಗಿ ತಮ್ಮ ಸರಕು ಮಾರಿದರೆ ಅವರ ಬಡತನ ಹೋಗುತ್ತದೆ ಎಂಬುದು ಇದರ ತರ್ಕ.
ಆದರೆ ಬಡವರು ಉದ್ಯಮಿಗಳಾಗದೆ ಇರಲು ಅವರ ಬಳಿ ಬಂಡವಾಳವಿಲ್ಲದಿರುವುದೇ ಕಾರಣ ಎಂದು ತರ್ಕಿಸಿದ ಮುಹಮ್ಮದ್ ಯೂನುಸ್ ಎಂಬವರು ಬಾಂಗ್ಲಾದೇಶದಲ್ಲಿ ಮೊಟ್ಟಮೊದಲಿಗೆ ಬಡವರಿಗೆ ಸಣ್ಣ ಸಾಲ ಕೊಡುವ ‘ಉದ್ಯಮ’ ಪ್ರಾರಂಭಿಸಿದರು. ಅವರೀಗ ಪಾಶ್ಚಿಮಾತ್ಯ ಬಂಡವಾಳಶಾಹಿ ದೇಶಗಳ ಅಚ್ಚುಮೆಚ್ಚಿನ ಸಾಮಾಜಿಕ ನಾಯಕ ಮತ್ತು ಹಾಲಿ ಬಾಂಗ್ಲಾ ದೇಶದ ತಾತ್ಕಾಲಿಕ ಅಧ್ಯಕ್ಷ.
ಕಿರುಸಾಲವೆಂಬ ಅಮೃತದ ಬಟ್ಟಲಿನ ವಿಷ
ಈ ಯೋಜನೆಯಲ್ಲಿ ವಿಶೇಷವಾಗಿ ಗ್ರಾಮೀಣ ಉದ್ಯಮಶೀಲ ಮಹಿಳೆಯರನ್ನು ಗುಂಪು ಸೇರಿಸಿ ಆ ಗುಂಪಿಗೆ ಸಾಲ ಕೊಟ್ಟು ಆ ಮೂಲಕ ಗ್ರಾಮೀಣ ಮಹಿಳೆಯರನ್ನು ಮಾರುಕಟ್ಟೆಗೆ ಸೆಳೆಯುವ ಉದ್ಯಮ ಪ್ರಾರಂಭವಾಯಿತು. ಇದಕ್ಕೆ ಮೈಕ್ರೋ ಕ್ರೆಡಿಟ್-ಕಿರುಸಾಲ- ಆಂದೋಲನವೆಂದೂ ಕರೆಯಲಾಯಿತು. ಬಾಂಗ್ಲಾ- ಭಾರತದಂಥ ಬಡರಾಷ್ಟ್ರಗಳ ಬಡತನ ನಿವಾರಣೆಯಾಗಲು ಇದೇ ಹೊಸ ಮಂತ್ರದಂಡವೆಂದು ಆ ದೇಶಗಳನ್ನು ಸುಲಿಯುತ್ತಿರುವ ಶ್ರೀಮಂತ ದೇಶಗಳೇ ಹೇಳಲಾರಂಭಿಸಿದವು. ಮಾತ್ರವಲ್ಲ, ಬಡದೇಶಗಳ ಬಡತನಕ್ಕೆ ಕಾರಣವಾದ ತಮ್ಮ ಸುಲಿಗೆಯನ್ನು ಮರೆಮಾಚಲು ಹೊಸ ದಾರಿಯೊಂದನ್ನು ತೋರಿದ ಯೂನುಸ್ ಸಾಹೇಬರಿಗೆ ‘ನೊಬೆಲ್’ ಪ್ರಶಸ್ತಿಯನ್ನೂ ದಯಪಾಲಿಸಿದವು. ಭಾರತವನ್ನು ಒಳಗೊಂಡಂತೆ ಪ್ರಪಂಚದ ಬಹುಪಾಲು ಬಡದೇಶಗಳಲ್ಲಿ ಇವರ ನೇತೃತ್ವದಲ್ಲೇ ಈ ಮೈಕ್ರೋ ಕ್ರೆಡಿಟ್ ‘ಆಂದೋಲನ’ ಪ್ರಾರಂಭವಾಯಿತು. ಭಾರತದಲ್ಲೂ ಸ್ವ-ಸಹಾಯ ಗುಂಪುಗಳು (Sಊಉ) ಈ ಆಂದೋಲನವನ್ನು ಭಾರತದ ಮೂಲೆ ಮೂಲೆ ಮುಟ್ಟಿಸಿತು.
ಈ ಮೈಕ್ರೋ ಕ್ರೆಡಿಟ್ ಆಂದೋಲನದ ಮೂಲಕ ಒಂದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಲುಗುತ್ತಿರುವ ಮಹಿಳೆಯರು ಹೊರಬಂದು ಸ್ವಂತ ಕಾಲ ಮೇಲೆ ನಿಲ್ಲುವಂತಾಗುತ್ತದೆ. ಅವರ ಬಡತನ ನೀಗುತ್ತದೆ. ಅವರ ಮೇಲಿನ ಪುರುಷ ಶೋಷಣೆ ತಪ್ಪುತ್ತದೆ ಎಂದೆಲ್ಲಾ ನಿರೀಕ್ಷಿಸಲಾಗಿತ್ತು.
ಭಾರತವನ್ನೂ ಒಳಗೊಂಡಂತೆ ಈ ಸ್ವಸಹಾಯ ಗುಂಪು ಆಂದೋಲನ ಪ್ರಾರಂಭವಾಗಿ ಈಗ ಕಾಲು ಶತಮಾನವಾಗಿದೆ. ಇವುಗಳ ಘೋಷಿತ ಉದ್ದೇಶ ಮತ್ತು ಸಾಧನೆಗಳ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆದಿದೆ. ಈ ಅಧ್ಯಯನಗಳು ತುಂಬಾ ಸ್ಪಷ್ಟವಾಗಿ ಈ Sಊಉ ಆಂದೋಲನವು ಮಹಿಳೆಯರಲ್ಲಿ ಸ್ವಲ್ಪ ಚಲನೆ ಮತ್ತು ತಿಳಿವಳಿಕೆಯನ್ನು ನೀಡಿರುವುದು ನಿಜವೇ ಆದರೂ ಅದು ಯಾವ ರೀತಿಯಿಂದಲೂ ಅವರ ಬಡತನವನ್ನಾಗಲೀ, ಕುಟುಂಬದ ಒಳಗಿನ ಅವರ ಶೋಷಣೆಯನ್ನಾಗಲೀ ತಪ್ಪಿಸಿಲ್ಲವೆಂದು ಸ್ಪಷ್ಟ ಮಾತಿನಲ್ಲಿ ತಿಳಿಸಿವೆ. ಈ ಕಿರುಸಾಲ ಆಂದೋಲನವು ಮಹಿಳೆಯ ಶೋಷಣೆ ನಡೆಯುವ ಪುರುಷಾಧಿಪತ್ಯದ ಸಾಮಾಜಿಕ ಹಂದರವನ್ನೇನೂ ಅಲುಗಾಡಿಸುವುದಿಲ್ಲವಾದ್ದರಿಂದ ಇದು ಮಹಿಳೆಯ ಸಂಸಾರಕ್ಕಾಗಿ ತನ್ನ ಎಲ್ಲಾ ಸುಖ ಸಂತೋಷವನ್ನೂ ತ್ಯಾಗ ಮಾಡುವ ಸಾಂಪ್ರದಾಯಿಕ ಪಾತ್ರವನ್ನೇ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಕರ್ನಾಟಕ, ಆಂಧ್ರಗಳಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಅಧ್ಯಯನ ಸಾಬೀತು ಪಡಿಸಿದೆ.
(https://monthlyreview.org/2015/03/01/bangladesh-a-model-of-neoliberalism/)
ಕಿರು ಸಾಲ: ಹಿರಿ ಲಾಭ ಕ್ರೂರ ಲಾಭ
ಆದರೂ ಈ ‘ಆಂದೋಲನ’ದಿಂದ ಸಾಕಷ್ಟು ಲಾಭ ಪಡೆದವರು ಮಾತ್ರ ದೊಡ್ಡ ದೊಡ್ಡ ಮೈಕ್ರೋ ಫೈನಾನ್ಸ್ ಕಂಪೆನಿ(ಒಈI)ಗಳು. ವಾಸ್ತವದಲ್ಲಿ ಆಗುತ್ತಿರುವುದಿಷ್ಟೆ. ಪ್ರಾರಂಭದಲ್ಲಿ ಈ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕುಗಳು ಅವರ ಅರ್ಹತೆ ಇತ್ಯಾದಿಗಳನ್ನು ಗಮನಿಸಿ ಸಾಲ ಕೊಡಲು ಪ್ರಾರಂಭಿಸಿದ್ದವು. ಆದರೆ ಜಾಗತೀಕರಣ-ಉದಾರೀಕರಣದ ಈ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಮೊದಲಿದ್ದ ಸಾಮಾಜಿಕ ಕಾಳಜಿಯ ಮುಖವಾಡವನ್ನೆಲ್ಲಾ ಕಳಚಿಟ್ಟು ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಉದ್ಯಮಕ್ಕೇ ಇಳಿಯಿತು. ಈ ಕಿರುಸಾಲ ಕ್ಷೇತ್ರದಲ್ಲಿ ಹಣ ನೀಡುವುದು ಮತ್ತು ಅದನ್ನು ವಸೂಲಿ ಮಾಡುವ ಡೆಲಿವರಿ ವೆಚ್ಚಗಳೇ ಅಧಿಕ. ಆ ಖರ್ಚನ್ನೆಲ್ಲಾ ನಿಭಾಯಿಸಿ ಲಾಭ ಮಾಡಬೇಕೆಂದರೆ ಅಧಿಕ ಬಡ್ಡಿ ದರವನ್ನು ಹೇರಬೇಕು. ಆದರೆ ಈ ಸಂಘಟಿತ ಬ್ಯಾಂಕಿಂಗ್ ಕ್ಷೇತ್ರದ ವಹಿವಾಟನ್ನು ರಿಸರ್ವ್ ಬ್ಯಾಂಕ್ ನಿಯಮಗಳು ನಿರ್ದೇಶಿಸುತ್ತವೆ. ಅದರ ಪ್ರಕಾರ ಅವರು ಸಿಕ್ಕಾಪಟ್ಟೆ ಬಡ್ಡಿ ವಸೂಲಿ ಮಾಡುವಂತಿಲ್ಲ. ಹಾಗಿದ್ದರೂ ಹಲವು ಬ್ಯಾಂಕುಗಳು ಈಗಲೂ SHGಗಳಿಗೆ ಶೇ.24ಕ್ಕೂ ಹೆಚ್ಚು ಬಡ್ಡಿ ದರವನ್ನು ವಿಧಿಸುವುದುಂಟಾದರೂ ಬ್ಯಾಂಕುಗಳು ಕಿರುಸಾಲದ ಕಡೆ ಹೆಚ್ಚು ಗಮನ ನೀಡಲಿಲ್ಲ.
ಆಗ ಈ ಕ್ಷೇತ್ರಕ್ಕೆ ಪ್ರವೇಶಿಸಿದ್ದು ಖಾಸಗಿ MFI- ಮೈಕ್ರೋ ಫೈನಾನ್ಸ್ ಕಂಪೆನಿಗಳು. ಅರ್ಥಾತ್ ಗ್ರಾಮೀಣ ಮತ್ತು ಪಟ್ಟಣದ ಬಡಜನತೆಯ ಬದುಕನ್ನು ಪ್ಯಾರಾಸೈಟುಗಳಂತೆ ಕಿತ್ತು ತಿನ್ನುತ್ತಿರುವ ಹೊಸ ಬಡ್ಡಿ ವ್ಯಾಪಾರಿಗಳು! ಇವುಗಳ ಕ್ಷೇತ್ರ ಕಿರುಸಾಲವಾದ್ದರಿಂದ ರಿಸರ್ವ್ ಬ್ಯಾಂಕ್ ನಿಯಮಾವಳಿಗಳು ಇತ್ತೀಚಿನವರೆಗೆ ಇದಕ್ಕೆ ಅನ್ವಯಿಸುತ್ತಿರಲಿಲ್ಲ. ಹೀಗಾಗಿ ಸಾಲವನ್ನು ಕೊಟ್ಟು ವಸೂಲಿ ಮಾಡುವ ತಾಕತಿದ್ದರೆ ಕಾನೂನುಬದ್ಧವಾಗಿಯೇ ಬಡಜನರನ್ನು ಲೂಟಿ ಹೊಡೆಯುವ ಹೊಸ ಅವಕಾಶವನ್ನು ಕಿರುಸಾಲ ಕ್ಷೇತ್ರ ತೆರೆದಿಟ್ಟಿತು.
ಇಂದು ಇವುಗಳ ವಿಸ್ತಾರ ಎಷ್ಟಿದೆಯೆಂದರೆ Micro Finance Industry Network - MFINನ 2022-23ರ ವರದಿಯ ಪ್ರಕಾರ ಹಾಲಿ ಸಾಲಿನಲ್ಲಿ 3.5 ಲಕ್ಷ ಕೋಟಿಗೂ ಹೆಚ್ಚು ಸಾಲಗಳನ್ನು ಕೊಟ್ಟಿದ್ದಾರೆ. ಇದರ 7 ಕೋಟಿ ಗ್ರಾಹಕರಲ್ಲಿ ಶೇ. 95 ಭಾಗ ಮಹಿಳೆಯರು. ಆರ್‌ಬಿಐನ ಇತ್ತೀಚಿನ ಮಾನದಂಡಗಳ ಪ್ರಕಾರ ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳು ಈ ಕಿರು ಸಾಲಕ್ಕೆ ಅರ್ಹರು. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಈ ದೇಶದ ಶೇ. 90 ರಷ್ಟು ಗ್ರಾಮೀಣ ರೈತ ಕುಟುಂಬದ ಸರಾಸರಿ ಆದಾಯ 1.5 ಲಕ್ಷಕ್ಕಿಂತ್ ಕಡಿಮೆ. ಹೀಗಾಗಿ ಈ ಕಿರುಸಾಲ ಕೈಗಾರಿಕೆಯ ಪ್ರಕಾರ ಇನ್ನು ಹತ್ತು ಹಲವು ಪಟ್ಟು ಅವರು ವೃದ್ಧಿಯಾಗಲು ಅವಕಾಶವಿದೆಯಂತೆ.
ಏಕೆಂದರೆ ಆರ್‌ಬಿಐನ ನಿಯಮಗಳೇ ಇವರಿಗೆ ಸಾಲ ವಸೂಲಿ ಮಾಡಲು ಹಲವು ವಿಧಾನಗಳನ್ನು ಅನುಸರಿಸುವುದನ್ನು ಮಾನ್ಯ ಮಾಡುತ್ತದೆ. ಅದರ ಜೊತೆಗೆ ಈ MFIಗಳು ಸಾಲ ವಸೂಲಿ ಮಾಡಲು ಎಂಥಾ ಕ್ರೂರ ವಿಧಾನಗಳನ್ನು ಬೇಕಾದರೂ ಅನುಸರಿಸುತ್ತವೆ. ಹಾಡ ಹಗಲೇ ಮನೆಗೆ ನುಗ್ಗುವುದು, ಬೀದಿಯಲ್ಲಿ ಹೊಡೆಯುವುದು, ಮಕ್ಕಳನ್ನು ಒತ್ತೆ ಇಟ್ಟುಕೊಳ್ಳುವುದು, ಬಹಿರಂಗವಾಗಿ ಅಪಮಾನ ಮಾಡುವುದು ಇತ್ಯಾದಿ. ಇದರಿಂದಾಗಿಯೇ ದೇಶಾದ್ಯಂತ ಹಾಗೂ ಕರ್ನಾಟಕದಲ್ಲೂ ಸಾಲು ಸಾಲು ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಧರ್ಮಸ್ಥಳದಂತಹ ಕಿರುಸಾಲ ಕಂಪೆನಿಗಳು ಶೇ. 24 ಕ್ಕೂ ಹೆಚ್ಚು ಬಡ್ಡಿ ವಸೂಲಿ ಮಾಡುತ್ತವೆ, ಧರ್ಮಸ್ಥಳ ಕಂಪೆನಿಗೆ ಶೇ.99 ರಷ್ಟು ಸಾಲ ವಸೂಲಿಯಾಗುತ್ತದೆ. ಧರ್ಮಸ್ಥಳದ ಧರ್ಮಲೆಪಿತ ಫೈನಾನ್ಸ್ ದರೋಡೆಯು ಮೈಕ್ರೋ ಫೈನಾನ್ಸ್ ಅಡಿ ಬರುವುದೇ ಇಲ್ಲವೆಂದು ರಕ್ಷಿಸುವರು ಕಾಂಗ್ರೆಸ್ ಮಂತ್ರಿಗಳು.
ಆದರೆ ಅದಕ್ಕೆ ಪ್ರತಿಯಾಗಿ ‘‘ಮೈಕ್ರೋಫೈನಾನ್ಸ್ ಸಂಸ್ಥೆಗಳ ಗಳಿಕೆ 2002ರಲ್ಲಿ ಶೇ. 18.8ರಷ್ಟು ಮಾತ್ರ ಇದ್ದದ್ದು ಈಗ ಶೇ.31.4ಕ್ಕೆ ಏರಿದೆ. ಅದೇ ಅವಧಿಯಲ್ಲಿ ಅವರ ನಿರ್ವಹಣಾ ವೆಚ್ಚವು ಶೇ.19.9ರಿಂದ ಶೇ.11.5ಕ್ಕೆ ಇಳಿದಿದೆ. ಹೀಗಾಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಂಪತ್ತಿನ ಮೇಲಿನ ಗಳಿಕೆಯ ದರವು ವಿಶ್ವದೆಲ್ಲೆಡೆ ಕೇವಲ ಶೇ.1.5ರಷ್ಟಿದ್ದರೂ ಭಾರತದಲ್ಲಿ ಮಾತ್ರ ಈ ಕಂಪೆನಿಗಳ ಸಂಪತ್ತಿನ ಮೇಲಿನ ಗಳಿಕೆಯ ದರವು 2002ರಲ್ಲಿ -1.5 ಇದ್ದದ್ದು 2009ರಲ್ಲಿ ಶೇ. 4.3ಕ್ಕೆ ಏರಿದೆ. ಹೀಗಾಗಿ ಈ ಕಂಪೆನಿಗಳು ತಮ್ಮ ಬಡ್ಡಿ ದರವನ್ನು ಕಡಿಮೆ ಮಾಡಿದರೆ ಏನೂ ನಷ್ಟವಿಲ್ಲ’’ ಎಂಬುದೂ ಸಹ ಇತ್ತೀಚಿನ ನಬಾರ್ಡ್ ವಿಶ್ಲೇಷಣೆ.
ಹೀಗಾಗಿಯೇ ಕೆಲ ವರ್ಷಗಳ ಹಿಂದೆ ಅಡ್ರೆಸ್ ಇಲ್ಲದ ನೂರಾರು ಬ್ಲೇಡ್ ಕಂಪೆನಿಗಳು ಈ ಮೈಕ್ರೋಫೈನಾನ್ಸ್ ದಂಧೆಯಲ್ಲಿ ತೊಡಗಿ ಈಗ ದೈತ್ಯವಾಗಿ ಬೆಳೆಯುತ್ತಿವೆ.
ಅಂದರೆ ಮೈಕ್ರೊಫೈನಾನ್ಸ್ ದಂಧೆ ಇತರ ದಂಧೆಗಳಿಗಿಂತ ಅಥವಾ ಲಾಭದಾಯಕ ಎಂದಾಯಿತಲ್ಲವೇ? ಬೇರೆ ಕಂಪೆನಿಗಳಿಗೆ ತಮ್ಮ ಸರಕನ್ನು ಅತಿ ಹೆಚ್ಚಿನ ದರಕ್ಕೆ ಮಾರಿದರೆ ಮಾತ್ರ ಅತಿಹೆಚ್ಚು ಲಾಭ ಸಿಗುತ್ತದೆ. ಕಿರುಸಾಲ ಕಂಪೆನಿಗಳಿಗೆ ಲಾಭ ಎಲ್ಲಿಂದ ಬರುತ್ತದೆ? ಅತಿ ಹೆಚ್ಚು ಬಡ್ಡಿ ದರಕ್ಕೆ ಸಾಲವನ್ನು ಮಾರಿಕೊಂಡರೆ ಮಾತ್ರ ಅತಿ ಹೆಚ್ಚು ಲಾಭ ಸಿಗುತ್ತದೆ. ಇದೇ ಈ ಮೈಕ್ರೊ ಫೈನಾನ್ಸ್ ಕಂಪೆನಿಗಳ ಅಸಲಿ ಗುಟ್ಟು. ಇಂಥಾ ಬ್ಲೇಡ್ ಕಂಪೆನಿಯಾದ SಏS ನಲ್ಲಿ ವಿದೇಶಿ ಬಂಡವಾಳ ಹೂಡಿಕೆಯೂ ಇದೆ. ಅಷ್ಟು ಮಾತ್ರವಲ್ಲ, ಯಾವಾಗಲೂ ಉದ್ದಿಮೆಪತಿಗಳಲ್ಲೇ ಅತ್ಯಂತ ನ್ಯಾಯ ನಿಷ್ಠುರ, ಆದರ್ಶವಾದಿ ಎಂದೆಲ್ಲಾ ಹೆಸರು ಮಾಡಿರುವ ಇನ್ಫೋಸಿಸ್ ನಾರಾಯಣಮೂರ್ತಿಗಳ
ರೂ.30 ಕೋಟಿಗೂ ಹೆಚ್ಚಿನ ಬಂಡವಾಳವಿದೆ!!!
ಬಂಡವಾಳಶಾಹಿ ಎಂದರೆ ಉಚ್ಚೆಯಲ್ಲಿ ಮೀನು ಹಿಡಿಯುವ ದಂಧೆ ಎನ್ನುತ್ತಾರೆ. ಈ ಮೈಕ್ರೋ ಫೈನಾನ್ಸ್ ದಂಧೆ ಅದಕ್ಕಿಂತ ಒಂದು ಹೆಜ್ಜೆ ಮುಂದು. ಬೆಂದು ಬಸವಳಿದಿರುವ ಬಡವರ ಮೂಳೆ ಚಕ್ಕಳವನ್ನು ಕೆಜಿ ಲೆಕ್ಕದಲ್ಲಿ ಕೊಳ್ಳುವ-ಮಾರುವ ದಂಧೆಯಿದು.
ವ್ಯವಸ್ಥೆಯ ಕ್ರೌರ್ಯದಿಂದಲೇ ವಸೂಲಿಯ ಕ್ರೌರ್ಯ
ಹಾಗೆ ನೋಡಿದರೆ, ಈ ಮೈಕ್ರೋ ಫೈನಾನ್ಸ್ ಯಾವ ಕಾರಣಕ್ಕೂ ರೈತಾಪಿಯ ಬಡತನವನ್ನು ನೀಗುವುದಿಲ್ಲ ಎಂದು ಸ್ವತಃ ರಿಸರ್ವ್ ಬ್ಯಾಂಕೇ ಈಗ ಹೇಳುತ್ತಿದೆ.
‘‘ಒಂದು ಸ್ಥಗಿತಗೊಂಡ ಗ್ರಾಮೀಣ ಆರ್ಥಿಕತೆಯಲ್ಲಿ ಹೆಚ್ಚೆಚ್ಚು ಸಣ್ಣ ವ್ಯಾಪಾರಿಗಳು ಇರಲು ಅಶಕ್ಯ. ಹಳ್ಳಿಯ 2/3 ಭಾಗದಷ್ಟು ಜನ ವಾಣಿಜ್ಯ ಉದ್ದೇಶವಿಲ್ಲದ ಆಹಾರ ಧಾನ್ಯದ ಉತ್ಪಾದನೆಯ ಮೇಲೆ ಆಧಾರಿತರಾಗಿದ್ದರೆ ಉಳಿದ ಶೇ.20ರಷ್ಟು ಜನ ಸಣ್ಣಪುಟ್ಟ ಕುಶಲ ಕೆಲಸಗಾರರಾಗಿರುತ್ತಾರೆ. ಈ ಜನತೆಯ ಆರ್ಥಿಕ ಚಟುವಟಿಕೆಯ ಚಕ್ರ 6 ತಿಂಗಳಿಂದ ಒಂದು ವರ್ಷದಷ್ಟು ಸುದೀರ್ಘವಾಗಿರುತ್ತದೆ. ಈ ಯಾವುದೇ ಆರ್ಥಿಕ ಚಟುವಟಿಕೆಗಳು ಪ್ರತಿವಾರ ಮರುಪಾವತಿ ಮಾಡುವಂಥ ಆದಾಯವನ್ನಾಗಲೀ, ಶೇ.20-40ರಷ್ಟು ಬಡ್ಡಿಯನ್ನು ತೆರಬಲ್ಲಂಥ ಆದಾಯವನ್ನಾಗಲೀ ಹುಟ್ಟುಹಾಕುವುದಿಲ್ಲ. ಹೀಗಾಗಿ ಅವರು ಮೈಕ್ರೋ ಫೈನಾನ್ಸ್‌ಗಳಿಂದ ಈ ಬಗೆಯ ಭಾರೀ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಂಡರೆ ಅವರ ಬಡತನವು ಅಳಿಯುವುದಿರಲಿ ಕೆಲವೇ ದಿನಗಳಲ್ಲಿ ಮೊದಲಿಗಿಂತ ಹೆಚ್ಚಿನ ಬಡತನಕ್ಕೆ ಗುರಿಯಾಗುತ್ತಾರೆ’’ ಎಂದು ನಬಾರ್ಡ್‌ನ ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ.
ಬಡವರ ಅಸಹಾಯಕತೆಯನ್ನು ಹೆಚ್ಚಿಸಿರುವ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕತೆ ಬಡವರ ಸಂಕಷ್ಟಗಳನ್ನು ಹೆಚ್ಚಿಸುತ್ತಿದೆ. ಅಲ್ಪಸ್ವಲ್ಪ ವ್ಯಾಪಾರ ಮಾಡಿದರೆ ಬದುಕಬಹುದೆಂಬ ಮಾರುಕಟ್ಟೆಯ ಹುಸಿಗಳು ಅವರನ್ನು ಸ್ವಪ್ರೇರಣೆಯಿಂದ ಮೈಕ್ರೋ ಫೈನಾನ್ಸ್ ನೇಣಿಗೆ ಕೊರಳೊಡ್ಡುವಂತೆ ಮಾಡುತ್ತವೆ. ಏಕೆಂದರೆ ಇದೇ ನಿಯೋ ಲಿಬರಲ್ ಆರ್ಥಿಕತೆಯ ಭಾಗವಾಗಿ ಸಾರ್ವಜನಿಕ ಬ್ಯಾಂಕುಗಳು ಕಿರುಸಾಲದ ಕ್ಷೇತ್ರಕ್ಕೆ ಗಮನಹರಿಸದೆ ಬ್ಲೇಡ್ ಕಂಪೆನಿಗಳಿಗೆ ಬಿಟ್ಟುಕೊಟ್ಟಿವೆ. ಆದರಲ್ಲಿರುವ ಲಾಭದ ಪ್ರಮಾಣ ಮತ್ತು ಲಾಭದ ಖಾತರಿಯನ್ನು ಕಂಡು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಈಗ ಈ ನರಭಕ್ಷಕ ಉದ್ಯಮದಲ್ಲಿ ಶೇರು ಹೂಡಿಕೆ ಮಾಡುತ್ತಾ ಅದರ ಪಂಜಾಗಳನ್ನು ಗಟ್ಟಿ ಮಾಡುತ್ತಿವೆ.
ಮೈಕ್ರೋ ೈನಾನ್ಸ್ ದಂಧೆಯಲ್ಲಿರುವ ಈ ನಿಯೋಲಿಬರಲ್ ವ್ಯವಸ್ಥಿತ ಕ್ರೌರ್ಯಕ್ಕೆ ಆರ್ಥಿಕ ಪ್ರಗತಿಯ ಹೆಸರಿನಲ್ಲಿ ಕುಮ್ಮಕ್ಕು ಕೊಡುವ ವ್ಯವಸ್ಥೆ ವಸೂಲಿಯಲ್ಲಿರುವ ಕ್ರೌರ್ಯವನ್ನು ಮಾತ್ರ ತಡೆಗಟ್ಟುತ್ತೇನೆ ಎಂದು ಹೇಳುವುದು ಎಂಥಾ ಸೋಗಲಾಡಿತನವಲ್ಲವೇ?