‘ಕುದುರೆಮುಖ’ಕ್ಕೆ ಇನ್ನು ಯಾವ ‘ಆನಿ’ಮುಖ?!

ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ನಿರ್ಮಾಣಗೊಂಡಿರುವ ‘ರತ್ನ’ ಕಂಪೆನಿಗಳು ಲಾಭದಲ್ಲಿ ನಡೆಯುತ್ತಿರುವಾಗ, ಉಸಿರುಗಟ್ಟಿಸಿ, ಅವನ್ನು ಹಂತಹಂತವಾಗಿ ಖಾಸಗಿಯವರ ತೆಕ್ಕೆಗೆ ದೂಡುವ ಭಾರತ ಸರಕಾರದ ತಂತ್ರಗಾರಿಕೆ ಕರ್ನಾಟಕದಲ್ಲಿ ಸಾರ್ವಜನಿಕ ವಲಯದ ಸಮರ್ಥ ಕಂಪೆನಿಗಳಲ್ಲಿ ಒಂದಾಗಿರುವ ಕೆಐಒಸಿಎಲ್ ಅನ್ನು ಅಂತಿಮವಾಗಿ ಯಾವುದಾದರೊಂದು ‘ಆನಿ’ಯ ಬಾಯಿಗೆ ದೂಡಿದರೆ ಅಚ್ಚರಿ ಇಲ್ಲ.

Update: 2024-11-02 05:19 GMT

‘ಮಿನಿರತ್ನ’ ದರ್ಜೆಯ ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ (ಕೆಐಒಸಿಎಲ್)ಯನ್ನು ‘ಮಹಾರತ್ನ’ ದರ್ಜೆಯ ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಎನ್‌ಎಂಡಿಸಿ) ಜೊತೆ ವಿಲೀನಗೊಳಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ; ಭಾರತ ಸರಕಾರದ ಉಕ್ಕು, ಬೃಹತ್ ಉದ್ದಿಮೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಈ ಕುರಿತು ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ಈ ವಾರದ ಆದಿಯಲ್ಲಿ ಸುದ್ದಿ ಪ್ರಕಟಿಸಿದ್ದವು. ಆದರೆ, ಅದೇ ದಿನ (ಅಕ್ಟೋಬರ್ 28) ಈ ವಿಲೀನವನ್ನು ಅಲ್ಲಗಳೆದಿರುವ ಎನ್‌ಎಂಡಿಸಿ, ಆ ಕುರಿತು ಸ್ಟಾಕ್ ಮಾರುಕಟ್ಟೆ ನಿಯಮಗಳ ಅನುಸಾರ ವರದಿ ಸಲ್ಲಿಸಿ, ಸದ್ಯಕ್ಕೆ ಅಂತಹ ಯಾವುದೇ ಉದ್ದೇಶಗಳಿಲ್ಲ ಮತ್ತು ಅಂತಹದೇನಾದರೂ ಇದ್ದರೆ, ನಿಯಮಗಳಿಗೆ ಅನುಗುಣವಾಗಿ ಅದನ್ನು ಬಹಿರಂಗಪಡಿಸಲಾಗುವುದು ಎಂದು ಸ್ಪಷ್ಟಪಡಿಸಿತು. (ಗಮನಿಸಿ: ಈ ವಿಲೀನ ನಡೆಯುವುದಿಲ್ಲ ಎಂದು ಎಲ್ಲಿಯೂ ಖಡಾಖಂಡಿತವಾಗಿ ಹೇಳಿಲ್ಲ!).

ಭಾರತ ಸರಕಾರದ ಉಕ್ಕು ಖಾತೆಯ ಸಚಿವರು ಸ್ವತಃ ಕರ್ನಾಟಕದವರೇ ಆದ ಎಚ್.ಡಿ. ಕುಮಾರಸ್ವಾಮಿಯವರಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆಗಳು ಕುತೂಹಲಕರವಾಗಿವೆ. ಬಳ್ಳಾರಿ ಜಿಲ್ಲೆಯ ಸಂಡೂರು ಬಳಿ ದೇವದಾರು ಕಬ್ಬಿಣದ ಅದಿರು ಗಣಿಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಉಂಟಾಗಿರುವ ವಿವಾದಗಳ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ವಿಚಾರ ಸಾಕಷ್ಟು ಪದರಗಳ ಸಂಕೀರ್ಣವಾದ ರಂಗೋಲಿಯಂತೆ ಕಾಣಿಸತೊಡಗಿದೆ. 1976ರಲ್ಲಿ ಸ್ಥಾಪನೆಗೊಂಡಿದ್ದ ಕರ್ನಾಟಕದ ಹೆಮ್ಮೆಯ ಕೆಐಒಸಿಎಲ್, 2024ನೇ ಸಾಲಿಗೆ 1,854 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಆದರೆ 97 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಹೊರಟಿದ್ದರಿಂದ, 2024ನೇ ಹಣಕಾಸು ವರ್ಷಕ್ಕೆ ಅದು 83 ಕೋಟಿ ರೂ. ನಷ್ಟ ದಾಖಲಿಸಿದೆ (ಆಧಾರ: ಸಂಸ್ಥೆಯ ವಾರ್ಷಿಕ ವರದಿ 2024). ಈ ನಷ್ಟ ಭರ್ತಿಗಾಗಿ ಹಾಗೂ ದೀರ್ಘಕಾಲಿಕ ನೆಲೆಯಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ದೇವದಾರು ಕಬ್ಬಿಣದ ಅದಿರು ಯೋಜನೆಯನ್ನು ಪುನರಾರಂಭಿಸುವುದು ಅಗತ್ಯವಿದೆ ಎಂದು ಕೆಐಒಸಿಎಲ್ ಭಾವಿಸಿದ್ದು, ಅದಕ್ಕಾಗಿ ಈಗಾಗಲೇ 530 ಕೋಟಿ ರೂ.ಗಳ ಹೂಡಿಕೆ ಮಾಡಿದೆ ಎಂದು ಸಂಸ್ಥೆಯ ವಾರ್ಷಿಕ ವರದಿ ಹೇಳುತ್ತಿದೆ. 2017ರಲ್ಲಿ ಕರ್ನಾಟಕ ಸರಕಾರವು ಕೆಐಒಸಿಎಲ್‌ಗೆ ಈ ದೇವದಾರು ಗಣಿಗಾರಿಕೆಗೆಂದು 470.40 ಹೆಕ್ಟೇರ್ ಜಾಗ ಮಂಜೂರು ಮಾಡಿತ್ತು. ಎಲ್ಲವೂ ಯೋಜನೆಯಂತೆ ನಡೆದಿದ್ದರೆ, 2024ರ ಡಿಸೆಂಬರ್ ಹೊತ್ತಿಗೆ ವಾರ್ಷಿಕ 2ಎಂಟಿ ಸಾಮರ್ಥ್ಯದ ಕಬ್ಬಿಣದ ಅದಿರು ಗಣಿಗಳು ಮತ್ತು ಸಂಸ್ಕರಣಾ ಸ್ಥಾವರ ಆರಂಭಗೊಳ್ಳಬೇಕಿತ್ತು. ಆದರೆ, ಈ ಯೋಜನೆಗಾಗಿ 99,000ದಷ್ಟು ಮರಗಳು ಆಹುತಿ ಆಗಬೇಕಾಗುತ್ತದೆ, ಅಪಾರ ಪರಿಸರ ಹಾನಿ ಸಂಭವಿಸಲಿದೆ ಎಂಬ ದೂರುಗಳು-ಪ್ರತಿಭಟನೆಗಳು ಮತ್ತು ನ್ಯಾಯಾಲಯದಲ್ಲಿ ಕೆಐಒಸಿಎಲ್‌ಗೆ ಆದ ಹಿನ್ನಡೆಗಳ ಕಾರಣಕ್ಕೆ ದೇವದಾರು ಯೋಜನೆ ನನೆಗುದಿಗೆ ಬಿದ್ದಂತಿದೆ. ಸಾರ್ವಜನಿಕ ಒತ್ತಡಕ್ಕೆ ಮಣಿದಿರುವ ಕರ್ನಾಟಕ ಸರಕಾರ, ಈ ಯೋಜನೆಗೆ ಭೂಮಿ ಹಸ್ತಾಂತರವನ್ನು ಸ್ಥಗಿತಗೊಳಿಸಲು ಈ ಜೂನ್ ತಿಂಗಳಿನಲ್ಲಿ ಆದೇಶ ಮಾಡಿದೆ. ಇದು ಕರ್ನಾಟಕ ಸರಕಾರ ಹಾಗೂ ಹಾಲಿ ಉಕ್ಕು ಖಾತೆಯ ಸಚಿವರಾಗಿರುವ ಕುಮಾರಸ್ವಾಮಿ ಅವರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಈ ನಡುವೆ ಕೆಐಒಸಿಎಲ್ ಉತ್ಪಾದನಾ ಚಟುವಟಿಕೆಗಳಿಗೆ ಸಾಕಷ್ಟು ಕಬ್ಬಿಣದ ಅದಿರು ಇಲ್ಲದ ಕಾರಣಕ್ಕೆ, ತನ್ನ ಉಂಡೆಕಬ್ಬಿಣ ತಯಾರಿಸುವ ಘಟಕವೊಂದನ್ನು ಈಗಾಗಲೇ ಕೆಐಒಸಿಎಲ್ ಸಂಸ್ಥೆಯು ಎನ್‌ಎಂಡಿಸಿಗೆ ಲೀಸ್ ನೀಡಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಈಗ ಎನ್‌ಎಂಡಿಸಿ ಸಂಸ್ಥೆ ಕೆಐಒಸಿಎಲ್‌ನ್ನು ವಿಲೀನ ಮಾಡಿಕೊಳ್ಳುವ ಸಂಗತಿ ಮೇಲೆದ್ದು ಬಂದಿರುವುದು ಅಚ್ಚರಿಯ ಸಂಗತಿಯೇನಲ್ಲ. ಆದರೆ ಈ ಬೆಳವಣಿಗೆಗೆ ಇನ್ನೂ ಒಂದು ಆಯಾಮ ಇದೆ. ಅಮಾಯಕವಾಗಿ ಅಲ್ಲೊಂದು ಇಲ್ಲೊಂದು ಚುಕ್ಕೆಗಳನ್ನು ಇರಿಸುತ್ತಾ ಹೋಗಿ, ಕಡೆಗೆ ಏಕಾಏಕಿ ರಂಗೋಲಿಯನ್ನು ಪೂರ್ಣಗೊಳಿಸುವ ಹಾಲಿ ಭಾರತ ಸರಕಾರದ ಕೌಶಲ ಈಗ ನಾಜೂಕು ಪಡೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹದೊಂದು ಬೆಳವಣಿಗೆಯ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ.

ಎನ್‌ಎಂಡಿಸಿ ಉಕ್ಕು ಮತ್ತು ಬೇರೆ ಮೈನಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ, ಭಾರತ ಸರಕಾರದ ಲಾಭದಾಯಕ ಮಹಾರತ್ನಗಳಲ್ಲಿ ಒಂದು. ಈ ಸಂಸ್ಥೆಯ ಉಕ್ಕು ವಿಭಾಗವನ್ನು 2022ರಲ್ಲಿ ಪ್ರತ್ಯೇಕಿಸಲಾಗಿದೆ. ಛತ್ತೀಸ್‌ಗಡದ ನಗರ್ನಾರ್ ಎಂಬಲ್ಲಿರುವ 3ಎನ್‌ಟಿಪಿಎಸ್ ಸಾಮರ್ಥ್ಯದ ಮತ್ತು 20,000 ಕೋಟಿ ರೂ. ಹೂಡಿಕೆ ಮಾಡಲಾಗಿರುವ NMDC Steel Ltd ಎಂಬ ಹೆಸರಿನ ಈ ಪ್ರತ್ಯೇಕ ಸಂಸ್ಥೆಯ ಶೇ. 60.79 ಷೇರು ಸರಕಾರದ ಬಳಿ ಇದ್ದು, ಅದರಲ್ಲಿ ಶೇ. 50.79 ಷೇರುಗಳನ್ನು ಖಾಸಗಿಯವರಿಗೆ ಮಾರುವ ಮೂಲಕ ಹೂಡಿಕೆ ಹಿಂದೆಗೆತ ಮಾಡಿಕೊಳ್ಳಲು ಭಾರತ ಸರಕಾರ ನಿರ್ಧರಿಸಿದ್ದು, ಅದಕ್ಕೆ ಟಾಟಾ, ಜೆಎಸ್‌ಪಿಎಲ್, ಜೆಎಸ್‌ಡಬ್ಲ್ಯು, ಅದಾನಿ, ವೇದಾಂತ ಬಳಗಗಳು ಆಸಕ್ತಿ ತೋರಿದ್ದವು. 2023ರ ಅಕ್ಟೋಬರ್ 03ರಂದು ಭಾರತದ ಪ್ರಧಾನಮಂತ್ರಿಗಳು ಈ ಘಟಕವನ್ನು ಉದ್ಘಾಟಿಸಿದ್ದರು. ಆ ನಡುವೆ ಸಾರ್ವತ್ರಿಕ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ಘಟಕವನ್ನು ಖಾಸಗೀಕರಿಸುವುದಿಲ್ಲ ಎಂಬ ಭರವಸೆ ಸರಕಾರದ ಕಡೆಯಿಂದ ಬಂದಿತ್ತು. ಈಗ ಚುನಾವಣೆ ಮುಗಿಯುತ್ತಲೇ ಮತ್ತೆ ಅದರ ಖಾಸಗೀಕರಣದ ಪ್ರಕ್ರಿಯೆ ಆರಂಭಗೊಂಡಂತಿದೆ.

ಈಗಾಗಲೇ ಟಾಟಾ, ಜೆಎಸ್‌ಡಬ್ಲ್ಯು ಸಂಸ್ಥೆಗಳು ಬಳ್ಳಾರಿಯಲ್ಲಿ ಕಬ್ಬಿಣದ ಅದಿರಿನ ಘಟಕಗಳನ್ನು ಹೊಂದಿದ್ದು, ಅವರ ಕಲ್ಲಿದ್ದಲು ಮತ್ತಿತರ ಲಾಜಿಸ್ಟಿಕ್ಸ್‌ಗಳಿಗೆ, ತನ್ನ ಅಧೀನದಲ್ಲಿರುವ ಬಂದರುಗಳು-ಜೆಟ್ಟಿಗಳ ಮೂಲಕ ಅದಾನಿ ಬಳಗ ಸಕ್ರಿಯವಾಗಿದೆ. ನವಮಂಗಳೂರು ಬಂದರು ಖಾಸಗೀಕರಣದ ಚರ್ಚೆಗಳೂ ಆಗೀಗ ಸುದ್ದಿಯಲ್ಲಿರುತ್ತವೆ. ಈ ಹಿನ್ನೆಲೆಯಲ್ಲಿ, ಈಗ ಕೆಐಒಸಿಎಲ್ ಅನ್ನು ಎನ್‌ಎಂಡಿಸಿ ಜೊತೆ ವಿಲೀನಗೊಳಿಸುವ ಹಾಗೂ ಎನ್‌ಎಂಡಿಸಿಯ ಉಕ್ಕು ಘಟಕವನ್ನು ಖಾಸಗೀಕರಿಸುವ ಚುಕ್ಕಿಗಳನ್ನು ಒಟ್ಟಾಗಿ ಜೋಡಿಸತೊಡಗಿದರೆ ಸಂಪೂರ್ಣ ಚಿತ್ರ ಮೂಡತೊಡಗುತ್ತದೆ.

ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ನಿರ್ಮಾಣಗೊಂಡಿರುವ ‘ರತ್ನ’ ಕಂಪೆನಿಗಳು ಲಾಭದಲ್ಲಿ ನಡೆಯುತ್ತಿರುವಾಗ, ಹೀಗೆ ಉಸಿರುಗಟ್ಟಿಸಿ, ಅವನ್ನು ಹಂತಹಂತವಾಗಿ ಖಾಸಗಿಯವರ ತೆಕ್ಕೆಗೆ ದೂಡುವ ಭಾರತ ಸರಕಾರದ ಈ ತಂತ್ರಗಾರಿಕೆ ಕರ್ನಾಟಕದಲ್ಲಿ ಸಾರ್ವಜನಿಕ ವಲಯದ ಸಮರ್ಥ ಕಂಪೆನಿಗಳಲ್ಲಿ ಒಂದಾಗಿರುವ ಕೆಐಒಸಿಎಲ್ ಅನ್ನು ಅಂತಿಮವಾಗಿ ಯಾವುದಾದರೊಂದು ‘ಆನಿ’ಯ ಬಾಯಿಗೆ ದೂಡಿದರೆ ಅಚ್ಚರಿ ಇಲ್ಲ. ವ್ಯವಹಾರ ನಡೆಸುವುದು ಸರಕಾರದ ಕೆಲಸವಲ್ಲ ಎಂಬುದನ್ನು ಪ್ರಧಾನಮಂತ್ರಿಗಳು ತನ್ನ ಮೊದಲ ಅವಧಿಯಲ್ಲೇ ಸ್ಪಷ್ಟವಾಗಿ ಹೇಳಿ, ನುಡಿದಂತೆ ನಡೆಯುತ್ತಿದ್ದಾರೆ. ಆದರೆ ಸಾರ್ವಜನಿಕರದ್ದಾಗಿದ್ದ

ಸೊತ್ತುಗಳನ್ನು ಇಂಚಿಂಚಾಗಿ ಒಂದೊಂದನ್ನೇ ಎತ್ತಿ ಒಂದು ಕೈಬೆರಳೆಣಿಕೆಯ ಸಂಖ್ಯೆಯಲ್ಲಿರುವ ‘ಆನಿ’ಗಳ ಕೈಗೆ ಒಪ್ಪಿಸುವುದಕ್ಕೆ ಈ ಸಮರ್ಥನೆಯಾಗಿತ್ತು ಎಂದು ಅನ್ನಿಸತೊಡಗಿದೆ. ಕರಾವಳಿಯಲ್ಲಂತೂ ಇದು ಎದ್ದು ಕಾಣಿಸುತ್ತಿದೆ. ವಿಮಾನ ನಿಲ್ದಾಣ, ಬಂದರಿನ ಜೆಟ್ಟಿಗಳು, ಬಂದರುಗಳು, ಒಳನಾಡ ಜಲಮಾರ್ಗ, ನೆಲ, ಕಾಡು, ನೆಲದಡಿಯ ಸಂಪನ್ಮೂಲಗಳು, ಸರಕಾರಿ ಕಾರ್ಖಾನೆಗಳು... ಹೀಗೆ ಪ್ರತಿಯೊಂದೂ ಆನಿಪಾಲಾಗುತ್ತಿದೆ. ದೊಡ್ಡಗಾತ್ರದ ಚಿತ್ರವೊಂದನ್ನು ಮೂಗಿನ ಬಳಿ ಹಿಡಿದಾಗ ಚಿತ್ರ ಕಾಣಿಸದಿರುವುದು ಅಥವಾ ಅಯೋಮಯ ಅನ್ನಿಸುವುದು ಸಹಜ. ಈ ಚಿತ್ರ ಅರ್ಥ ಆಗುವ ಹೊತ್ತಿಗೆ ವಿಳಂಬ ಆಗಿರದಿದ್ದರೆ ಸಾಕು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ರಾಜಾರಾಂ ತಲ್ಲೂರು

contributor

Similar News