ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು

ಕರ್ನಾಟಕದ 200 ಯೂನಿಟ್ ವಿದ್ಯುತ್ ಉಚಿತ ಎಂಬ ‘ಗ್ಯಾರಂಟಿ’ ಬಹಳ ಜನಪರ ನಿಲುವು ಅನ್ನಿಸುತ್ತದೆ. ತೀರಾ ತಳವರ್ಗದ ಗೃಹಜ್ಯೋತಿಯಂತಹ ವಿದ್ಯುತ್ ಸಬ್ಸಿಡಿ ಫಲಾನುಭವಿಗಳಿಗೆ ಮತ್ತು ಬಡವರ್ಗದ ವಿದ್ಯುತ್ ಗ್ರಾಹಕರಿಗೆ ಈ ಯೋಜನೆಯಿಂದ ಸದ್ಯಕ್ಕೆ, ಖಾಸಗೀಕರಣದ ಹೊರತಾಗಿಯೂ, ವಿದ್ಯುತ್ ಉಚಿತವಾಗಿ ಸಿಗಲಿದೆ. ವಿದ್ಯುತ್ ಖಾಸಗೀಕರಣದ ಸಲೀಸು ಹಾದಿಗೆ ಬಂದೊದಗಿರುವ ಈ ಅನಿರೀಕ್ಷಿತ ಅಡ್ಡಿಯನ್ನು ಭಾರತ ಸರಕಾರ ಹೇಗೆ ನಿವಾರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡೋಣ.

Update: 2023-07-29 08:47 GMT

ಕರ್ನಾಟಕದಲ್ಲಿ ಉಚಿತ ವಿದ್ಯುತ್ ‘ಗ್ಯಾರಂಟಿ’ ಗದ್ದಲದ ನಡುವೆ ಭಾರತ ಸರಕಾರ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ತಂದಿರುವ ಹಲವು ಮಹತ್ವದ ಬದಲಾವಣೆಗಳು ಸಾರ್ವಜನಿಕರ ಗಮನಕ್ಕೆ ಬರಬೇಕಾದಷ್ಟು ಮಟ್ಟದಲ್ಲಿ ಬಂದಂತಿಲ್ಲ. ಒಂದು ಕೋನದಿಂದ ನೋಡಿದರೆ, ಕರ್ನಾಟಕದ ಉಚಿತ ವಿದ್ಯುತ್ ಗ್ಯಾರಂಟಿಯು ಮುಂದೊಂದು ದಿನ, ವಿದ್ಯುತ್ ರಂಗದ ಖಾಸಗೀಕರಣ ಮಾಡುವ ಭಾರತ ಸರಕಾರದ ಹುನ್ನಾರಕ್ಕೆ ಗಂಟಲ ಮುಳ್ಳಾಗಿ ನಿಂತರೂ ಅಚ್ಚರಿ ಇಲ್ಲ.

ವಿದ್ಯುತ್ ಕ್ಷೇತ್ರ ಸುಧಾರಣೆಯ ಹೆಸರಿನಲ್ಲಿ ಹಾಲಿ ಭಾರತ ಸರಕಾರ ತೆಗೆದುಕೊಳ್ಳಲು ತೀರ್ಮಾನಿಸಿರುವ ಮಹತ್ವದ ಹೆಜ್ಜೆಗಳೆಂದರೆ: ದೇಶದಲ್ಲಿ ಶೇ. 100 ಸ್ಮಾರ್ಟ್ ಮೀಟರ್ ಬಳಕೆ; ವಿದ್ಯುತ್ ಉತ್ಪಾದಕರಿಂದ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ವಿದ್ಯುತ್ ಖರೀದಿ ವ್ಯವಸ್ಥೆ; ಡಿಸ್ಕಾಂಗಳ ಬೇಡಿಕೆ ಅನುಸರಿಸಿ ವಿದ್ಯುತ್ ಉತ್ಪಾದಕರಿಂದ ಮಾರಾಟ ದರ ನಿಗದಿ; ವಿದ್ಯುತ್ ವಿತರಣಾ ಕಂಪೆನಿಗಳ (ಡಿಸ್ಕಾಂ) ಖಾಸಗೀಕರಣ; ವಿದ್ಯುತ್ ಕ್ಷೇತ್ರಕ್ಕೆ ನಿಯಂತ್ರಣ ಪ್ರಾಧಿಕಾರ; ಕೃಷಿಗೆ ಉಚಿತ ವಿದ್ಯುತ್ ನೀಡುವ ಬದಲು ವಿದ್ಯುತ್, ರಸಗೊಬ್ಬರ, ಬೆಳೆ ವಿಮೆ ಸೇರಿದಂತೆ ಎಲ್ಲ ಸಬ್ಸಿಡಿಗಳಿಗೆ ಒಟ್ಟಾಗಿ ಎಕರೆಗೆ ಇಂತಿಷ್ಟು ಹಣವೆಂದು ನಿಗದಿ ಮಾಡಿ ಅದನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುವುದು; ಸೋಲಾರ್ ಕೃಷಿ ಪಂಪ್ ಸೆಟ್ಗಳ ಬಳಕೆಗೆ ಪ್ರೋತ್ಸಾಹ; ಲೋಡ್ ಶೆಡ್ಡಿಂಗ್ ಮಾಡಿದರೆ ಡಿಸ್ಕಾಂಗಳಿಗೆ ದಂಡ; ಕ್ರಾಸ್ ಸಬ್ಸಿಡಿಗಳಿಗೆ ಅಂತ್ಯ; ದಿನದ ಸಮಯ ಆಧರಿಸಿ ವಿದ್ಯುತ್ ಬೆಲೆ ನಿಗದಿ; ಮತ್ತು ವಿದ್ಯುತ್ ರಫ್ತು ಮಾಡಲು ಪ್ರೋತ್ಸಾಹ. 2018ರಲ್ಲಿ ಸಿದ್ಧಗೊಂಡಿದ್ದ ಈ ರೋಡ್ಮ್ಯಾಪ್, ಎಲ್ಲವೂ ಸರಿಯಾಗಿ ಕೆಲಸ ಮಾಡಿದ್ದಿದ್ದರೆ, ಭಾರತ ಸ್ವತಂತ್ರಗೊಂಡು 75 ವರ್ಷ ಪೂರೈಸುವ ಹೊತ್ತಿಗೆ, ಅಂದರೆ 2022ರ ಹೊತ್ತಿಗೆ ಅನುಷ್ಠಾನಗೊಂಡಿರಬೇಕಿತ್ತು. ಅದೃಷ್ಟವಶಾತ್ ಹಾಗಾಗಿಲ್ಲ.

ದೇಶದಾದ್ಯಂತ ಖಾಸಗೀಕರಣಕ್ಕೆ ಪ್ರಬಲ ವಿರೋಧದ ಹೊರತಾಗಿಯೂ, ದೇಶದ ವಿದ್ಯುತ್ ವ್ಯವಸ್ಥೆಯನ್ನು ಉತ್ಪಾದನೆ ವಿತರಣೆ ಸೇರಿದಂತೆ ಸಮಗ್ರವಾಗಿ ಖಾಸಗಿಯವರ ಪದತಲದಲ್ಲಿ ಇರಿಸುವ ಹಾದಿಯಲ್ಲಿ ಹಲವಾರು ಗಟ್ಟಿ ಹೆಜ್ಜೆಗಳನ್ನು ಈಗಾಗಲೇ ಇರಿಸಲಾಗಿದೆ. ಅವುಗಳಲ್ಲಿ ಹಲವು ಹಿಂದಿರುಗಿ ಬರಲು ಸಾಧ್ಯವಾಗದ ಹೆಜ್ಜೆಗಳು.

ಹಾಲಿ ಸರಕಾರ ಸಂಸತ್ತಿನಿಂದ ಹೊರಗಡೆ, ಅಧಿಕಾರಶಾಹಿಯನ್ನು ಮುಂದಿಟ್ಟುಕೊಂಡು ದೇಶವನ್ನಾಳುವ ಒಂದು ‘ಬಹುಮತದ ಸರ್ವಾಧಿಕಾರಿ’ ವ್ಯವಸ್ಥೆಯನ್ನು ಹಂತಹಂತವಾಗಿ ರೂಪಿಸುತ್ತಾ ಬರುತ್ತಿದೆ. ‘ಕಾಯ್ದೆ’ಗಳ (Acts) ಬದಲು ‘ನಿಯಮ’ಗಳ (Rules) ಮೂಲಕ ಆಳುವ ವ್ಯವಸ್ಥೆ ಇದು. ಸಿಎಎ-ಎನ್ಆರ್ಸಿ ಕಾಲದಲ್ಲಿ ಚಾಲ್ತಿಗೆ ಬರತೊಡಗಿದ ಈ ವ್ಯವಸ್ಥೆ, ಕೋವಿಡ್ ಸಾಂಕ್ರಾಮಿಕದ ಅವಧಿಯ ಹೊತ್ತಿಗೆ ಸಾಕಷ್ಟು ನಯ-ನಾಜೂಕು ಅಳವಡಿಸಿಕೊಂಡಿದೆ. ಅದನ್ನೀಗ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಬಳಸಲಾಗುತ್ತಿದೆ.

ವಿದ್ಯುಚ್ಛಕ್ತಿ ಕಾಯ್ದೆ 2003, ದೇಶದಲ್ಲಿ ಉದಾರೀಕರಣದ ಚಟುವಟಿಕೆಗಳಿಗೆ ಗರಿಮೂಡುತ್ತಿದ್ದಾಗ ರೂಪುಗೊಂಡ ಸ್ಥೂಲ ಸ್ವರೂಪದ ಕಾಯ್ದೆ. ಈಗ ಅದರ ಅಡಿಯಲ್ಲಿಯೇ, ಯಾವುದೇ ಚರ್ಚೆ ಇಲ್ಲದೆ, ‘ನಿಯಮಗಳ ರೂಪದಲ್ಲಿ’ ವಿದ್ಯುತ್ ಕ್ಷೇತ್ರದ ಪರಭಾರೆ ಕೆಲಸ ನಡೆಯುತ್ತಿದೆ. ಅಂತಹ ಒಂದು ನಿಯಮವೆಂದರೆ ‘ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮ-2020’. ಆ ನಿಯಮದ ಮೂಲಕ ಸ್ಮಾರ್ಟ್ ಮೀಟರ್ಗಳು ಅಥವಾ ಪೂರ್ವಪಾವತಿ ಮೀಟರ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಯಿತು. ಕೃಷಿ ಬಳಕೆಯ ವಿದ್ಯುತ್ ಹೊರತುಪಡಿಸಿ, ಬೇರೆಲ್ಲ ಗ್ರಾಹಕರಿಗೆ 24x7 ವಿದ್ಯುತ್ ನೀಡಿಕೆ ಕಡ್ಡಾಯ ಎಂದು ಹೇಳಲಾಯಿತು.

2022ರ ಎಪ್ರಿಲ್ 20ರಂದು ಈ ನಿಯಮಕ್ಕೆ ತಿದ್ದುಪಡಿ ತಂದು, ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ ಡೀಸೆಲ್ ಜನರೇಟರ್ಗಳ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ 24x7 ವಿದ್ಯುತ್ ನೀಡಬೇಕು ಮತ್ತು ಡೀಸೆಲ್ ಜನರೇಟರ್ಗಳಿರುವವರು ಪರಿಸರ ಸಹ್ಯ ಪರ್ಯಾಯಗಳನ್ನು ಐದು ವರ್ಷಗಳಲ್ಲಿ ಹುಡುಕಿಕೊಳ್ಳಬೇಕೆಂದು ಸೂಚಿಸಲಾಯಿತು.

ಈಗ, 2023ರ ಜೂನ್ 14ರಂದು ಮತ್ತೊಂದು ಮಹತ್ವದ ತಿದ್ದುಪಡಿಯ ಮೂಲಕ, 2024ರ ಎಪ್ರಿಲ್ ಒಂದರಿಂದ 10ಕಿಲೊವಾಟ್ಗಿಂತ ಹೆಚ್ಚಿನ ವಿದ್ಯುತ್ ಬಳಸುವವರಿಗೆ, ಮತ್ತು 2025ರ ಎಪ್ರಿಲ್ ಒಂದರಿಂದ ಕೃಷಿ ಬಳಕೆ ಹೊರತುಪಡಿಸಿ ಬೇರೆಲ್ಲರಿಗೂ ದಿನದ ಅವಧಿಯನ್ನು ಆಧರಿಸಿ ವಿದ್ಯುತ್ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಸೂರ್ಯನ ಬಿಸಿಲಿರುವ ಅವಧಿಯಲ್ಲಿ (ಹಗಲಿನ ಎಂಟುಗಂಟೆಗಳ ಕಾಲ), ಸಾಮಾನ್ಯ ದರಕ್ಕಿಂತ ಕನಿಷ್ಠ ಶೇ. 20 ಕಡಿಮೆ ದರ ಮತ್ತು ಪೀಕ್ ಅವಧಿಯಲ್ಲಿ (ಪೀಕ್ ಅವಧಿ ಸೋಲಾರ್ ಅವಧಿಗಿಂತ ಹೆಚ್ಚಿರುವಂತಿಲ್ಲ) ಪೀಕ್ ದರವು ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಸಾಮಾನ್ಯ ದರಕ್ಕಿಂತ 1.20 ಪಟ್ಟು ಹೆಚ್ಚು ಮತ್ತು ಇತರರಿಗೆ 1.10 ಪಟ್ಟಿಗಿಂತ ಹೆಚ್ಚಿರಬೇಕು ಎಂದು ವಿಧಿಸಲಾಗಿದೆ.

ಜನರಿಗೆ ಮತ್ತು ಕೈಗಾರಿಕೆಗಳಿಗೆ ಈ ಬದಲಾವಣೆಗಳು ವಿನ್-ವಿನ್ ಸ್ಥಿತಿ ಎಂದು ವಿವರಿಸಿರುವ ಭಾರತ ಸರಕಾರದ ಇಂಧನ ಸಚಿವ ಆರ್.ಕೆ. ಸಿಂಗ್ ಅವರು, ಜನರು ಮತ್ತು ಕೈಗಾರಿಕೆಗಳು ಈ ವ್ಯವಸ್ಥೆಗೆ ಹೊಂದಿಕೊಂಡರೆ, ಅವರ ವಿದ್ಯುತ್ ವೆಚ್ಚಗಳು ತಗ್ಗಲಿವೆ ಎಂದಿದ್ದಾರೆ. 2005ರ ರಾಷ್ಟ್ರೀಯ ವಿದ್ಯುತ್ ನೀತಿ ಮತ್ತು 2016ರ ವಿದ್ಯುತ್ ದರ ನೀತಿಗಳಿಗೆ ಅನುಗುಣವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ (PIB Release ID: 1934673).

ಈ ಹೊಸ ತಿದ್ದುಪಡಿಯೊಂದಿಗೆ ವಿದ್ಯುತ್ ವಿತರಣೆ ಖಾಸಗೀಕರಣಕ್ಕೆ ತಳಮಟ್ಟದಲ್ಲಿ ಈಗ ಸಂಪೂರ್ಣವಾಗಿ ರಂಗ ಸಜ್ಜಾದಂತಾಗಿದೆ. ಇನ್ನೊಂದೆಡೆ ಮೇಲು ಹಂತದಲ್ಲಿ, ಜನರ ತೆರಿಗೆ ದುಡ್ಡಿನ ಖರ್ಚಿನಲ್ಲಿ ಡಿಸ್ಕಾಂಗಳ ನಷ್ಟ ಭರ್ತಿ ಮಾಡುವ ಮತ್ತು ಅವುಗಳನ್ನು ಸಾಧ್ಯವಾದಷ್ಟೂ ನಷ್ಟ ರಹಿತ ಸ್ಥಿತಿಯಲ್ಲಿ, ಹರಿವಾಣದಲ್ಲಿರಿಸಿ ಖಾಸಗಿಯವರಿಗೆ ಹಸ್ತಾಂತರಿಸಲು ಸಿದ್ಧಪಡಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಉದ್ಯಮಿಗಳಿಗೆ-ಕೈಗಾರಿಕೆಗಳಿಗೆ ಹೆಚ್ಚಿನ ದರ ವಿಧಿಸಿ, ಅದನ್ನು ಬಡವರ ವಿದ್ಯುತ್ ಬಳಕೆಯಲ್ಲಾಗುವ ಖರ್ಚಿಗೆ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಕ್ರಾಸ್ ಸಬ್ಸಿಡಿಗಳನ್ನು ಹಂತಹಂತವಾಗಿ ನಿವಾರಿಸಿ, ಉಳ್ಳವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಜನರಿಂದ ಮತ್ತು ಜನಪ್ರತಿನಿಧಿಗಳಿಂದ ದೂರವಾಗಿ, ಯಾವುದೇ ಪ್ರಜಾತಾಂತ್ರಿಕ ಚರ್ಚೆಗಳಿಲ್ಲದೆ, ಸಂಸತ್ತಿನ ಹೊರಗೆ ನಡೆಯುತ್ತಿರುವ ಈ ಎಲ್ಲ ಬದಲಾವಣೆಗಳ ಕುರಿತು ದೇಶದಾದ್ಯಂತ ಅಸಮಾಧಾನ ಇದೆ. ಆದರೆ ಅದನ್ನು ಸಾಂವಿಧಾನಿಕ ವೇದಿಕೆಗಳಲ್ಲಿ ವ್ಯಕ್ತಪಡಿಸಲಾಗದ ಅಸಹಾಯಕತೆ ಕಾಡುತ್ತಿದೆ. ಆ ಹಿನ್ನೆಲೆಯಲ್ಲಿ, ಕರ್ನಾಟಕದ ೨೦೦ ಯೂನಿಟ್ ವಿದ್ಯುತ್ ಉಚಿತ ಎಂಬ ‘ಗ್ಯಾರಂಟಿ’ ಬಹಳ ಜನಪರ ನಿಲುವು ಅನ್ನಿಸುತ್ತದೆ. ತೀರಾ ತಳವರ್ಗದ ಗೃಹಜ್ಯೋತಿಯಂತಹ ವಿದ್ಯುತ್ ಸಬ್ಸಿಡಿ ಫಲಾನುಭವಿಗಳಿಗೆ ಮತ್ತು ಬಡವರ್ಗದ ವಿದ್ಯುತ್ ಗ್ರಾಹಕರಿಗೆ ಈ ಯೋಜನೆಯಿಂದ ಸದ್ಯಕ್ಕೆ, ಖಾಸಗೀಕರಣದ ಹೊರತಾಗಿಯೂ, ವಿದ್ಯುತ್ ಉಚಿತವಾಗಿ ಸಿಗಲಿದೆ. ವಿದ್ಯುತ್ ಖಾಸಗೀಕರಣದ ಸಲೀಸು ಹಾದಿಗೆ ಬಂದೊದಗಿರುವ ಈ ಅನಿರೀಕ್ಷಿತ ಅಡ್ಡಿಯನ್ನು ಭಾರತ ಸರಕಾರ ಹೇಗೆ ನಿವಾರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ರಾಜಾರಾಂ ತಲ್ಲೂರು

contributor

Similar News

ನಾಸ್ತಿಕ ಮದ