ಜೋಳಿಗೆ ಕೃಷಿ: ಸುಸ್ಥಿರತೆಗೆ ಹೆಜ್ಜೆಯಾದೀತೇ?

ಜೋಳಿಗೆ ಕೃಷಿಯು ನಗರಗಳಿಗೆ ಸಮರ್ಥನೀಯವಾಗಿ ಹೊಂದಿಕೊಳ್ಳಬಲ್ಲ ಮತ್ತು ಸಮುದಾಯ ಸ್ನೇಹಿ ವಿಧಾನವೆಂದು ಸಾಬೀತಾಗಿದೆ. ಸುಧಾರಿತ ಜೀವನೋಪಾಯಗಳು ಮತ್ತು ಆರೋಗ್ಯಕರ ಆಹಾರಕ್ರಮಗಳಿಗೆ ಜೋಳಿಗೆ ಕೃಷಿಯು ಅಮೂಲ್ಯ ಕೊಡುಗೆ ನೀಡುತ್ತದೆ. ಪ್ರಸಕ್ತ ಭಾರತದಲ್ಲಿ ಜೋಳಿಗೆ ಕೃಷಿಯ ಬಗ್ಗೆ ಜನರಿಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದನ್ನು ಗಮನಿಸಬಹುದು. ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಕೇಂದ್ರಗಳು, ರೈತ ಸಂಘಗಳು ಈ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿದಲ್ಲಿ ಭವಿಷ್ಯದಲ್ಲಿ ಇದೊಂದು ಉತ್ತಮ ಕೃಷಿ ಪದ್ಧತಿಯಾಗುವುದರಲ್ಲಿ ಸಂದೇಹವೇ ಇಲ್ಲ.

Update: 2024-11-24 09:02 GMT

ನಗರ ಅಥವಾ ಹಳ್ಳಿಗಳ ಮನೆ ಮುಂದೆ ಒಂದೆರಡು ಗಿಡಗಳನ್ನು ಬೆಳೆಸುವುದು ಸರ್ವೇಸಾಮಾನ್ಯ. ಅಲಂಕಾರಕ್ಕಾಗಿ, ಪೂಜೆಗಾಗಿ, ಸೌಂದರ್ಯಕ್ಕಾಗಿ, ಹೂವಿನ ಗಿಡಗಳನ್ನು ಬೆಳೆಸುವುದನ್ನು ಎಲ್ಲೆಡೆ ಕಾಣುತ್ತೇವೆ. ಇನ್ನು ಮನೆಯ ಅಕ್ಕಪಕ್ಕ ಖಾಲಿ ಜಾಗ ಇದ್ದರೆ ಅಲ್ಲಿ ಒಂದಿಷ್ಟು ತರಕಾರಿ, ಸೊಪ್ಪು ಮುಂತಾದ ಸಸ್ಯಗಳನ್ನು ಬೆಳೆಸುವುದನ್ನು ನೋಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಟೆರೆಸ್ ಮೇಲೆ ಸಸ್ಯಗಳನ್ನು ಬೆಳೆಯುವ ತಾರಸಿ ತೋಟ ಎಂಬ ಪರಿಕಲ್ಪನೆ ಹೆಚ್ಚು ವ್ಯಾಪಕವಾಗಿರುವುದನ್ನು ಕಾಣುತ್ತೇವೆ.

ಇದರ ಮುಂದುವರಿದ ಭಾಗವಾಗಿ ಜೋಳಿಗೆ ಕೃಷಿ ಹೆಚ್ಚು ಸದ್ದು ಮಾಡುತ್ತಿದೆ. ಅರೆರೆ ಇದೇನಿದು! ಇದುವರೆಗೂ ಪುಸ್ತಕ ಜೋಳಿಗೆ ಕೇಳಿದ್ದೆವು. ಜೋಳಿಗೆ ಭಿಕ್ಷೆ ಕೇಳಿದ್ದೆವು. ಇದೇನಿದು ಜೋಳಿಗೆ ಕೃಷಿ? ಎಂಬ ಪ್ರಶ್ನೆ ಮೂಡುವುದು ಸಹಜ. ಈಗಾಗಲೇ ಇಂತಹ ಒಂದಿಷ್ಟು ಸಣ್ಣ ಕೃಷಿ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಮನೆಯ ಬಳಿ ಪಾಟ್ಗಳಲ್ಲಿ, ಹಳೆಯ ವಾಟರ್ ಕ್ಯಾನ್ಗಳಲ್ಲಿ, ಹಳೆಯ/ಒಡೆದ ಪ್ಲಾಸ್ಟಿಕ್ ಬಕೆಟ್ಗಳಲ್ಲಿ ಹೀಗೆ ವಿವಿಧ ತ್ಯಾಜ್ಯ ಎನಿಸಿದ ವಸ್ತುಗಳನ್ನು ಬಳಸಿ ಅವುಗಳಲ್ಲಿ ಸಸ್ಯಗಳನ್ನು ಬೆಳೆಸುವ ಪದ್ಧತಿ ಇದೆ. ಇದರ ಮುಂದುವರಿದ ಭಾಗವೇ ಜೋಳಿಗೆ ಕೃಷಿ.

ಜೋಳಿಗೆ ಕೃಷಿಯು ಹೊಸ ಕೃಷಿ ವಿಧಾನವಾಗಿದ್ದು, ಬಳಸಿದ ಪ್ಲಾಸ್ಟಿಕ್ ಗೊಬ್ಬರ ಚೀಲಗಳು, ಬಳಸಿದ ಸಿಮೆಂಟ್ ಚೀಲಗಳಲ್ಲಿ ಮಣ್ಣು ಮತ್ತು ಮಿಶ್ರಗೊಬ್ಬರ ತುಂಬಿಸಿ ಅದರಲ್ಲಿ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ಬೆಳೆಯುವುದಾಗಿದೆ. ಈ ತಂತ್ರವು ಜನನಿಬಿಡ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಸೀಮಿತ ಕೃಷಿಯೋಗ್ಯ ಭೂಮಿ ಹೊಂದಿರುವ ಸಮುದಾಯಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಏಕೆಂದರೆ ಇದಕ್ಕೆ ಕನಿಷ್ಠ ಸ್ಥಳಾವಕಾಶ, ನೀರು ಮತ್ತು ಸಂಪನ್ಮೂಲಗಳು ಸಾಕಾಗುತ್ತವೆ.

ಜೋಳಿಗೆ ಕೃಷಿಯು ಇಂದಿನ ದಿನಗಳಿಗೆ ಹೆಚ್ಚು ಸೂಕ್ತ ಎನಿಸಿದೆ. ಏಕೆಂದರೆ ಇದರಲ್ಲಿ ಬಳಸುವ ಚೀಲವು ಸಾಂಪ್ರದಾಯಿಕ ಕೃಷಿಗಿಂತ ಕಡಿಮೆ ನೀರನ್ನು ಬಳಸುತ್ತದೆ. ಚೀಲವು ತೇವಾಂಶವನ್ನು ಪರಿಣಾಮಕಾರಿಯಾಗಿ ಉಳಿಸಿಕೊಳ್ಳುತ್ತದೆ. ಹಾಗಾಗಿ ನೀರಿನ ಕೊರತೆಯ ಪ್ರದೇಶಗಳಲ್ಲಿ ಈ ಪದ್ಧತಿಯು ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಸಾಂಪ್ರದಾಯಿಕ ಕೃಷಿಗಿಂತ ಭಿನ್ನವಾಗಿ, ಗೋಣಿಚೀಲ ಕೃಷಿಯನ್ನು ಸಣ್ಣ ಬಜೆಟ್ನಲ್ಲಿ ಪ್ರಾರಂಭಿಸಬಹುದು. ಇದು ಕಡಿಮೆ ಆದಾಯದ ಕುಟುಂಬಗಳಿಗೆ ಉತ್ತಮ ಪದ್ಧತಿಯಾಗಿದೆ.

ಜೋಳಿಗೆ ಕೃಷಿಯು ತಮ್ಮ ತಮ್ಮ ಮನೆಗಳಿಗೆ ಅಗತ್ಯವಿರುವ ತರಕಾರಿಗಳನ್ನು, ಸೊಪ್ಪುಗಳನ್ನು ಉತ್ಪಾದಿಸಲು ಸ್ವಯಂ ಅಧಿಕಾರ ನೀಡುತ್ತದೆ. ಮಾರುಕಟ್ಟೆಯಿಂದ ಖರೀದಿಸಿದ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಹೆಚ್ಚಿನ ಆಹಾರ ಬೆಲೆಗಳಿಗೆ ಒಳಗಾಗುವ ಪ್ರದೇಶಗಳಲ್ಲಿ ಅಥವಾ ತಾಜಾ ತರಕಾರಿಗಳು ಸುಲಭವಾಗಿ ಲಭ್ಯವಿಲ್ಲದಿರುವಲ್ಲಿ ತುಂಬಾ ಸೂಕ್ತವಾಗಿದೆ. ಜೋಳಿಗೆ ಕೃಷಿಯು ಸ್ಥಳೀಯವಾಗಿ ಆಹಾರವನ್ನು ಉತ್ಪಾದಿಸುವ ಮೂಲಕ ಆಹಾರ ಸಾಗಣೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಈ ಕೃಷಿ ಪದ್ಧತಿಯಲ್ಲಿ ವಸ್ತುಗಳನ್ನು ಮರುಬಳಕೆ ಮಾಡುವುದರಿಂದ ಪರಿಸರಕ್ಕೆ ಪೂರಕವಾಗಿದೆ. ಇಲ್ಲಿ ಹಳೆಯ ಚೀಲಗಳನ್ನು ಕೃಷಿಗಾಗಿ ಬಳಸಲಾಗುವುದರಿಂದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.

ವಿವಿಧ ತರಕಾರಿಗಳನ್ನು ನೇರವಾಗಿ ಮನೆಯಲ್ಲಿ ಬೆಳೆಯುವುದು ವೈವಿಧ್ಯಮಯ ಆಹಾರಕ್ರಮವನ್ನು ಉತ್ತೇಜಿಸುತ್ತದೆ. ಪೋಷಕಾಂಶಗಳ ಕೊರತೆಯನ್ನು ಪರಿಹರಿಸುತ್ತದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕುಟುಂಬಗಳು ತಮ್ಮ ಮನೆಯ ಬಳಿ ಇರುವ ಅಲ್ಪ ಜಾಗದಲ್ಲಿ ತಮ್ಮ ಕುಟುಂಬಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ಭರಿತ ಸೊಪ್ಪುಗಳು ಮತ್ತು ತರಕಾರಿಗಳನ್ನು ಬೆಳೆಯಬಹುದು. ಹಾಗಾಗಿ ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಇಷ್ಟೆಲ್ಲಾ ಪ್ರಯೋಜನಗಳಿರುವ ಜೋಳಿಗೆ ಕೃಷಿಯ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ಇದಕ್ಕೆ ಉತ್ತರವೂ ಸರಳ.2x2 ಉದ್ದಗಲದ ಅಳತೆಗೆ ಒಂದರಂತೆ ಇರುವ ಖಾಲಿ ಜಾಗದ ಆಧಾರದ ಮೇಲೆ ಎಷ್ಟು ಚೀಲಗಳನ್ನು ಬಳಸಬಹುದು ಎಂದು ಅಂದಾಜು ಮಾಡಿಕೊಳ್ಳಬೇಕು. ಪ್ರತೀ ಚೀಲಕ್ಕೆ ಅರ್ಧದಷ್ಟು ಮಣ್ಣು ಮತ್ತು ಮಿಶ್ರಗೊಬ್ಬರಗಳನ್ನು ತುಂಬಬೇಕು. ಸಾಧ್ಯವಾದರೆ ತಳಭಾಗದಲ್ಲಿ ಒಂದಿಷ್ಟು ಜಲ್ಲಿಕಲ್ಲುಗಳನ್ನು ತುಂಬಬೇಕು. ಇದು ಸಸ್ಯದ ಬೇರುಗಳು ಗಾಳಿಯಾಡಲು ಸಹಾಯ ಮಾಡುತ್ತದೆ. ಚೀಲದ ಬದಿಗಳಲ್ಲಿ ಒಂದಿಷ್ಟು ರಂಧ್ರಗಳನ್ನು ಮಾಡಬೇಕು. ಹೆಚ್ಚಾದ ನೀರು ಹೊರಹೋಗಲು ರಂಧ್ರಗಳು ಪ್ರಯೋಜನಕಾರಿ. ಹೀಗೆ ಮಣ್ಣು ಭರ್ತಿ ಮಾಡಿದ ಚೀಲಗಳಲ್ಲಿ ನಮಗೆ ಅಗತ್ಯ ಎನಿಸಿದ ಸಸ್ಯಗಳ ಬೀಜ/ಸಸಿಗಳನ್ನು ಅಂದರೆ ತರಕಾರಿ, ಸೊಪ್ಪುಗಳನ್ನು ಬೆಳೆಸಬೇಕು. ನಿಯಮಿತ ನೀರುಹಾಕುವುದು ಹಾಗೂ ಆಗಾಗ ಸಸ್ಯಗಳ ಪಾಲನೆಗೆ ಕಾಳಜಿ ಮಾಡಬೇಕು.

ಬಲಿಯಲು ಹೆಚ್ಚು ಸಮಯ ತೆಗೆದುಕೊಳ್ಳದ, ಪೊದೆಯಾಗದ, ಆಳವಿಲ್ಲದ ಬೇರುಗಳನ್ನು ಹೊಂದಿರದ ಮತ್ತು ಹೆಚ್ಚು ಎತ್ತರಕ್ಕೆ ಬೆಳೆಯದ ಬೆಳೆಗಳಿಗೆ ಜೋಳಿಗೆ ಕೃಷಿ ಒಳ್ಳೆಯದು. ಉದಾಹರಣೆಗೆ, ತರಕಾರಿಗಳು, ದ್ವಿದಳ ಧಾನ್ಯಗಳು, ಸೊಪ್ಪುಗಳನ್ನು ಜೋಳಿಗೆ ಕೃಷಿಯಲ್ಲಿ ಬೆಳೆಯಬಹುದು. ಜೋಳಿಗೆ ಬೇಸಾಯವನ್ನು ವಿಶೇಷವಾಗಿ ಸೂಕ್ತವಾದ ಕೃಷಿ ಭೂಮಿಯ ಕೊರತೆ ಇರುವ ಸ್ಥಳಗಳಲ್ಲಿ ಪರಿಗಣಿಸಲಾಗುತ್ತದೆ.

ಜೋಳಿಗೆ ಕೃಷಿಯು ನಗರಗಳಿಗೆ ಸಮರ್ಥನೀಯವಾಗಿ ಹೊಂದಿಕೊಳ್ಳಬಲ್ಲ ಮತ್ತು ಸಮುದಾಯ ಸ್ನೇಹಿ ವಿಧಾನವೆಂದು ಸಾಬೀತಾಗಿದೆ. ಸುಧಾರಿತ ಜೀವನೋಪಾಯಗಳು ಮತ್ತು ಆರೋಗ್ಯಕರ ಆಹಾರಕ್ರಮಗಳಿಗೆ ಜೋಳಿಗೆ ಕೃಷಿಯು ಅಮೂಲ್ಯ ಕೊಡುಗೆ ನೀಡುತ್ತದೆ. ಪ್ರಸಕ್ತ ಭಾರತದಲ್ಲಿ ಜೋಳಿಗೆ ಕೃಷಿಯ ಬಗ್ಗೆ ಜನರಿಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದನ್ನು ಗಮನಿಸಬಹುದು. ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಕೇಂದ್ರಗಳು, ರೈತ ಸಂಘಗಳು ಈ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿದಲ್ಲಿ ಭವಿಷ್ಯದಲ್ಲಿ ಇದೊಂದು ಉತ್ತಮ ಕೃಷಿ ಪದ್ಧತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಇಡೀ ದೇಶದ ಜನರು ತಮಗೆ ಬೇಕಾಗುವ ತರಕಾರಿ ಮತ್ತು ಸೊಪ್ಪುಗಳನ್ನು ತಾವೇ ಬೆಳೆಯುವುದರಿಂದ ಆರ್ಥಿಕ ಲಾಭ ಉಂಟಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತರಕಾರಿಗಳ ಸಾಗಣೆ ವೆಚ್ಚವನ್ನು ಕಡಿತಗೊಳಿಸಬಹುದು. ಜೊತೆಗೆ ರಾಸಾಯನಿಕ ಮುಕ್ತ ತಾಜಾ ತರಕಾರಿಗಳನ್ನು ಬಳಸಲು ಸಾಧ್ಯವಾಗುತ್ತದೆ. ನಿಮ್ಮ ಮನೆಯ ಬಳಿ ಒಂದಿಷ್ಟು ಜಾಗವಿದ್ದರೆ ಈ ಕೃಷಿ ಪದ್ಧತಿಯನ್ನು ಅಳವಡಿಸಬಹುದೇ? ಒಮ್ಮೆ ಯೋಚಿಸಿ, ಪ್ರಯತ್ನಿಸಿ.

Writer - ವಾರ್ತಾಭಾರತಿ

contributor

Editor - Musaveer

contributor

Contributor - ಆರ್. ಬಿ. ಗುರುಬಸವರಾಜ

contributor

Similar News