ಭಾರತದ ಕೃಷಿಗೆ ಸೌರೀಕರಣದ ಅಗತ್ಯವಿದೆಯೇ?

Update: 2024-10-06 04:50 GMT

ಅಗ್ರಿವೋಲ್ಟಾಯಿಕ್ಸ್ ಆಧುನಿಕ ಕೃಷಿಯ ಭವಿಷ್ಯವಾಗಿದೆ. ವಿಶೇಷವಾಗಿ ಭಾರತದಂತಹ ಬಿಸಿ ಹವಾಮಾನದ ಪ್ರದೇಶಗಳಲ್ಲಿ ಅಗತ್ಯ ತಂತ್ರಜ್ಞಾನವಾಗಿದೆ. ಭವಿಷ್ಯದಲ್ಲಿ ಹವಾಮಾನ ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳನ್ನು ಸಾಧಿಸಲು ಇಂತಹ ಮಾದರಿಗಳು ಅತ್ಯಗತ್ಯವಾಗಿವೆ. ಈಗಾಗಲೇ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಚೀನಾದಂತಹ ದೇಶಗಳು ಅಗ್ರಿವೋಲ್ಟಾಯಿಕ್ಸ್‌ನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಭಾರತವೂ ಈ ಸಾಲಿಗೆ ಸೇರುವಂತಾಗಲಿ, ಆ ಮೂಲಕ ದೇಶದ ಜನತೆಗೆ ಆಹಾರ ಭದ್ರತೆಯು ದೊರಕಲಿ

ಇಡೀ ದೇಶಕ್ಕೆ ಅನ್ನ ನೀಡುವ ರೈತರ ಪಾಡು ಹೇಳುವಂತಿಲ್ಲ. ಭಾರತದಲ್ಲಿ ಆಹಾರ ಭದ್ರತೆಯ ಉತ್ತೇಜನವೇನೋ ಪ್ರಮುಖ ಆದ್ಯತೆಯಾಗಿದೆ. ಆದರೆ ಹಸಿವಿನಿಂದ ಬಳಲುತ್ತಿರುವ ರೈತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ ಸುಮಾರು 19.5 ಕೋಟಿ ಜನರು ಮತ್ತು ಸರಿಸುಮಾರು ಶೇ. 43ರಷ್ಟು ಮಕ್ಕಳು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

2030ರ ವೇಳೆಗೆ ಭಾರತಕ್ಕೆ ಸುಮಾರು 311 ಮಿಲಿಯನ್ ಟನ್ ಆಹಾರ ಧಾನ್ಯಗಳು ಮತ್ತು 2050ರ ವೇಳೆಗೆ 350 ಮಿಲಿಯನ್ ಟನ್‌ಗಳಷ್ಟು ಆಹಾರ ಧಾನ್ಯಗಳು ಬೇಕಾಗುತ್ತವೆ ಎಂದು ಒಂದು ಅಧ್ಯಯನವು ಭವಿಷ್ಯ ನುಡಿದಿದೆ. ಇಷ್ಟು ಪ್ರಮಾಣದ ಆಹಾರ ಧಾನ್ಯಗಳಿಗಾಗಿ ವ್ಯಾಪಕವಾದ ಕೃಷಿ ಭೂಮಿಯ ಅಗತ್ಯವಿರುತ್ತದೆ. ಈಗಾಗಲೇ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ನಾಶವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ಭೂಮಿಯ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಇರುವ ಭೂಮಿಯಲ್ಲಿಯೇ ಹೆಚ್ಚು ಇಳುವರಿ ಪಡೆಯಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಕೃಷಿ ಜಮೀನಿನಲ್ಲಿ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ನಮಗೆಲ್ಲಾ ತಿಳಿದಂತೆ ಭಾರತದ ಮಾನ್ಸೂನ್ ರೈತರೊಂದಿಗೆ ಜೂಜಾಟ ಆಡುತ್ತಿದೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ರೈತರ ಬೆಳೆಗಳು ಬಾಡುತ್ತಿವೆ. ಅದಕ್ಕಾಗಿ ಹೆಚ್ಚಿನ ನೀರಾವರಿ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ. ಇವುಗಳ ಜೊತೆಗೆ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ರೈತರು ನೀರಾವರಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪರ್ಯಾಯ ತಂತ್ರಗಳನ್ನು ಅನುಸರಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

25 ವಯಸ್ಸಿನ ಗೋವಿಂದ್ ರಾಸಾವೆ ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಥ ಗ್ರಾಮದ ಕೃಷಿಕ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯಬೇಕೆಂಬ ಹಂಬಲವುಳ್ಳ ರೈತ. ಅದಕ್ಕಾಗಿ ಹೊಸ ತಂತ್ರಜ್ಞಾನವನ್ನು ಕೃಷಿ ಭೂಮಿಯಲ್ಲಿ ಅಳವಡಿಸುವ ಯೋಚನೆಯಲ್ಲಿದ್ದಾಗ ಪರ್ಭಾನಿಯಲ್ಲಿನ ಸೌರ ವಿದ್ಯುತ್ ಉತ್ಪಾದನೆಯೊಂದಿಗೆ ಕೃಷಿ ಬೆಳೆಗಳನ್ನು ಸಂಯೋಜಿಸುವ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆ ಅವರ ಗಮನ ಸೆಳೆಯಿತು. ಅದನ್ನು ನೋಡಿದ ಗೋವಿಂದ್ ರಾಸಾವೆಗೆ ತನ್ನ ಕೃಷಿ ಜಮೀನಿನಲ್ಲೂ ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂಬ ಹಂಬಲ ಮೂಡಿತು. ಅದನ್ನು ಸಾಕಾರಗೊಳಿಸಿದ ನಂತರ ಉತ್ತಮ ಇಳುವರಿ ಪಡೆಯಲಾರಂಭಿಸಿದರು.

ಹೀಗೆ ಪರ್ಯಾಯ ತಂತ್ರಗಾರಿಕೆಯನ್ನು ಬಳಸುವಲ್ಲಿ ಮಹಾರಾಷ್ಟ್ರದ ಕೆಲ ರೈತರು ಯಶಸ್ವಿಯಾಗಿದ್ದಾರೆ. ಆ ತಂತ್ರಗಾರಿಕೆ ಯಾವುದೆಂದರೆ ಕೃಷಿ ಜಮೀನಿನಲ್ಲಿ ಸೌರಫಲಕಗಳನ್ನು ಅಳವಡಿಸುವ ಅಗ್ರಿವೋಲ್ಟಾಯಿಕ್ಸ್ ತಂತ್ರಜ್ಞಾನವಾಗಿದೆ. ಅಗ್ರಿವೋಲ್ಟಾಯಿಕ್ಸ್ ಅಥವಾ ಅಗ್ರೋಫೋಟೋವೋಲ್ಟಾಯಿಕ್ಸ್ ಎಂಬುದು ಒಂದೇ ಭೂಮಿಯಲ್ಲಿ ಕೃಷಿ ಬೆಳೆಗಳು ಮತ್ತು ಸೌರ ವಿದ್ಯುತ್ ಉತ್ಪಾದನೆಯನ್ನು ಸಂಯೋಜಿಸುವ ಒಂದು ವಿಧಾನವಾಗಿದೆ. ಇದು ಕೃಷಿ ಮತ್ತು ನವೀಕರಿಸಬಹುದಾದ ಶಕ್ತಿಯ ನಡುವಿನ ಭೂ ಸಂಪನ್ಮೂಲ ಸ್ಪರ್ಧೆಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅಗ್ರಿವೋಲ್ಟಾಯಿಕ್ಸ್ ಬಳಸಿ ಯಶಸ್ವಿ ಇಳುವರಿಯನ್ನು ಪಡೆದ ಅನೇಕ ಉದಾಹರಣೆಗಳಿವೆ.

ಪ್ರಸಕ್ತ ಭಾರತದಲ್ಲಿ ಮೂರು ವಿಧದ ಅಗ್ರಿವೋಲ್ಟಾಯಿಕ್ಸ್ ಗಳು ಚಾಲ್ತಿಯಲ್ಲಿವೆ. ಒಂದನೆಯದು ನೆಲ ಆರೋಹಿತವಾದ ಪ್ಯಾನೆಲ್‌ಗಳು. ಇದು ಇಂಟರ್‌ಸ್ಪೇಸ್ ಕೃಷಿಗೆ ಅವಕಾಶ ನೀಡುತ್ತದೆ. ಎರಡನೆಯದು ಸ್ವಲ್ಪ ಎತ್ತರದ ಫಲಕಗಳು. ಇದು ಫಲಕಗಳ ಅಡಿಯಲ್ಲಿ ಮತ್ತು ಅವುಗಳ ನಡುವೆ ಭಾಗಶಃ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಭೂಮಿಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಮೂರನೆಯದು ಸಂಪೂರ್ಣ ಎತ್ತರದ ಫಲಕಗಳು. ಇದು ಸಂಪೂರ್ಣ ಸಣ್ಣ ಯಂತ್ರೋಪಕರಣಗಳೊಂದಿಗೆ ಕೃಷಿ ಮತ್ತು ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಪ್ಯಾನೆಲ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ನೀರಾವರಿ ಮೂಲಕ ಕೃಷಿ ಚಟುವಟಿಕೆಗಳನ್ನು ವರ್ಷದ ಎಲ್ಲಾ ದಿನವೂ ನಿರ್ವಹಿಸಬಹುದು. ವಿದ್ಯುತ್ ಅಭಾವ ಇಲ್ಲದೇ ನಿರಂತರ ಸೌರ ವಿದ್ಯುತ್‌ನಿಂದ ಬೆಳೆಗಳನ್ನು ಬೆಳೆಯಬಹುದು. ಇದು ರೈತರಿಗೆ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಬೆಳೆಯಲು ಮತ್ತು ಅವರ ಆದಾಯವನ್ನು ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ.

ಭಾರತ ಸರಕಾರವು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀರಾವರಿಗೆ ಹೊಸ ಮೂಲಗಳನ್ನು ಒದಗಿಸುವ ಮತ್ತು ಕೃಷಿಯನ್ನು ‘ಡೀಸೆಲ್ ಮುಕ್ತಗೊಳಿಸುವ’ ಉದ್ದೇಶಗಳೊಂದಿಗೆ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಯೋಜನೆಯನ್ನು ಪ್ರಾರಂಭಿಸಿತು. ಇದೂ ಸಂಪೂರ್ಣವಾಗಿ ಅಗ್ರಿವೋಲ್ಟಾಯಿಕ್ಸ್ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸುವ ಯೋಜನೆಯಾಗಿದೆ. ಆದರೆ ಈ ಯೋಜನೆಯು ಇದುವರೆಗೆ ತನ್ನ ಗುರಿಯ ಶೇ. 30ರಷ್ಟು ಮಾತ್ರ ಸಾಧಿಸಿದೆ. ಮಾರ್ಚ್ 2026 ರೊಳಗೆ ಉಳಿದ 70 ಪ್ರತಿಶತ ಗುರಿಯನ್ನು ಸಾಧಿಸಲು ನೀತಿ ಮತ್ತು ಅನುಷ್ಠಾನದ ಕಾರ್ಯತಂತ್ರ ಹೊಂದಿದೆ. ಹಾಗಿದ್ದರೂ ಅಲ್ಲಲ್ಲಿ ಕೆಲ ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.

ಅಗ್ರಿವೋಲ್ಟಾಯಿಕ್ಸ್‌ನಲ್ಲಿ ಸೌರ ಫಲಕಗಳನ್ನು ನೆಲದಿಂದ 2-3 ಮೀಟರ್‌ಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿರುತ್ತದೆ. ಇದು ಬೆಳೆಗಳ ಕೆಳಗೆ ಅಥವಾ ಅದರ ನಡುವೆ ಸಾಕಷ್ಟು ಸೂರ್ಯನ ಬೆಳಕನ್ನು ನೀಡುತ್ತದೆ. ಈ ವ್ಯವಸ್ಥೆಯು ಕೃಷಿ ಜಮೀನುಗಳಲ್ಲಿ ಮೈಕ್ರೋಕ್ಲೈಮೇಟ್‌ನ್ನು ನಿರ್ಮಿಸುತ್ತದೆ. ಇದು ಹವಾಮಾನ ವೈಪರೀತ್ಯಗಳಿಂದ ಬೆಳೆಗಳನ್ನು ರಕ್ಷಿಸುತ್ತದೆ. ಕೃಷಿ ಜಮೀನಿನಲ್ಲಿ ಸೌರಫಲಕಗಳನ್ನು ಅಳವಡಿಸುವುದರಿಂದ ಆಲಿಕಲ್ಲು ಮಳೆಯಂತಹ ಹವಾಮಾನ ಅಪಾಯಗಳಿಂದ ಬೆಳೆಗಳನ್ನು ರಕ್ಷಿಸುತ್ತದೆ ಮತ್ತು ಧೂಳಿನ ಸವೆತವನ್ನು ಕಡಿಮೆ ಮಾಡುತ್ತದೆ. ಮಣ್ಣಿನ ತೇವಾಂಶದ ಆವಿಯಾಗುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೌರ ಫಲಕದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಅಗ್ರಿವೋಲ್ಟಾಯಿಕ್ಸ್ ಎಂಬುದು ಕೃಷಿಯಲ್ಲಿ ಕೇವಲ ಸೌರ ವಿದ್ಯುತ್ ಬಳಸಿಕೊಳ್ಳುವುದು ಮಾತ್ರವಲ್ಲ. ಅದರ ಜೊತೆಗೆ ಪಾರಂಪರಿಕ ಬೆಳೆಗಳನ್ನು ಬೆಳೆಯುವ ತಂತ್ರವಾಗಿದೆ. ಕೃಷಿ ಬೆಳೆಗಳಾದ ತರಕಾರಿಗಳು, ಸೊಪ್ಪುಗಳು, ಟೊಮೆಟೊಗಳು, ಗೆಡ್ಡೆ-ಗೆಣಸುಗಳು ಸೇರಿದಂತೆ ಹಣ್ಣುಗಳನ್ನೂ ಬೆಳೆಯುವ ಯೋಜನೆಯಾಗಿದೆ. ಹಾಗಾಗಿ ಇದು ಕೃಷಿ ಬಿಕ್ಕಟ್ಟುಗಳನ್ನು ತಕ್ಕಮಟ್ಟಿಗೆ ಸುಧಾರಿಸುತ್ತದೆ.

ಆದರೆ ಇಲ್ಲೊಂದಿಷ್ಟು ಸಣ್ಣಪುಟ್ಟ ಅಡೆತಡೆಗಳಿವೆ. ಅದೇನೆಂದರೆ ಅಗ್ರಿವೋಲ್ಟಾಯಿಕ್ಸ್ ಅಳವಡಿಕೆಯ ವಿದ್ಯುತ್ ವೈರ್‌ಗಳಿಂದ ರೈತರ ಸುರಕ್ಷತೆ ಮತ್ತು ದಿನನಿತ್ಯದ ಕೃಷಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತವೆ. ಇವುಗಳನ್ನು ನಿವಾರಿಸಲು ಒಂದಿಷ್ಟು ಸುರಕ್ಷತಾ ಮಾರ್ಗಗಳ ಅಗತ್ಯವಿದೆ. ಇವುಗಳನ್ನು ನಿವಾರಿಸಿದರೆ ಕೃಷಿ ಜಮೀನಿನಲ್ಲಿ ಅಗ್ರಿವೋಲ್ಟಾಯಿಕ್ಸ್ ಬಳಸುವಂತಾದರೆ, ವಿದ್ಯುತ್ ಖರೀದಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ವಿದ್ಯುತ್ ಸರಬರಾಜು ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಅಗ್ರಿವೋಲ್ಟಾಯಿಕ್ಸ್ ಆಧುನಿಕ ಕೃಷಿಯ ಭವಿಷ್ಯವಾಗಿದೆ. ವಿಶೇಷವಾಗಿ ಭಾರತದಂತಹ ಬಿಸಿ ಹವಾಮಾನದ ಪ್ರದೇಶಗಳಲ್ಲಿ ಅಗತ್ಯ ತಂತ್ರಜ್ಞಾನವಾಗಿದೆ. ಭವಿಷ್ಯದಲ್ಲಿ ಹವಾಮಾನ ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳನ್ನು ಸಾಧಿಸಲು ಇಂತಹ ಮಾದರಿಗಳು ಅತ್ಯಗತ್ಯವಾಗಿವೆ. ಈಗಾಗಲೇ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಚೀನಾದಂತಹ ದೇಶಗಳು ಅಗ್ರಿವೋಲ್ಟಾಯಿಕ್ಸ್‌ನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಭಾರತವೂ ಈ ಸಾಲಿಗೆ ಸೇರುವಂತಾಗಲಿ, ಆ ಮೂಲಕ ದೇಶದ ಜನತೆಗೆ ಆಹಾರ ಭದ್ರತೆಯು ದೊರಕಲಿ ಎಂಬ ಆಶಯ ನಮ್ಮದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಬಿ ಗುರುಬಸವರಾಜು

contributor

Similar News