ತೇಲುವ ಕೊಟ್ಟಿಗೆ: ಸುಸ್ಥಿರ ಕೃಷಿಗೆ ನಾಂದಿಯಾದೀತೇ?

ಸಮುದ್ರದ ಆಸುಪಾಸುಗಳಲ್ಲಿರುವ ಸಣ್ಣ ಸಣ್ಣ ನಗರಗಳು ಸೇರಿದಂತೆ ಇನ್ನಿತರ ಜಲಾವೃತ ಪ್ರದೇಶಗಳಲ್ಲಿ ಇಂತಹ ಒಂದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂಬುದಕ್ಕೆ ಪ್ರಸಕ್ತ ರೋಟರ್‌ಡ್ಯಾಮ್‌ನಲ್ಲಿರುವ ವಿಶಿಷ್ಟ ತೇಲುವ ಕೊಟ್ಟಿಗೆಯು ಸೂಕ್ತ ಮಾದರಿಯಾಗಿದೆ. ನೀರಿನ ಮೇಲೆ ಕೊಟ್ಟಿಗೆ ನಿರ್ಮಿಸುವ ಮೂಲಕ, ನಾವು ಹವಾಮಾನಕ್ಕೆ ಹೊಂದಿಕೊಳ್ಳುತ್ತೇವೆ. ಆದ್ದರಿಂದ ಎಷ್ಟೇ ಮಳೆ ಸುರಿದರೂ ಅಥವಾ ಸಮುದ್ರ ಮಟ್ಟವು ಎಷ್ಟೇ ಹೆಚ್ಚಾದರೂ, ನಾವು ಯಾವಾಗಲೂ ಆರೋಗ್ಯಕರ ಆಹಾರವನ್ನು ಉತ್ಪಾದಿಸಬಹುದು ಎನ್ನುತ್ತಾರೆ ಅದರ ನಿರ್ಮಾತೃ ಪೀಟರ್ ವ್ಯಾನ್ ವಿಂಗರ್‌ಡೆನ್.

Update: 2024-12-08 04:35 GMT

ಇತ್ತೀಚಿನ ವರ್ಷಗಳಲ್ಲಿ ಕೃಷಿಯು ತುಂಬಾ ವೆಚ್ಚದಾಯಕವಾಗುತ್ತಿದೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಹಾಗೂ ಕುಂಟಿತ ಬೆಲೆಯು ಕೃಷಿಯನ್ನು ವೆಚ್ಚದಾಯಕವನ್ನಾಗಿಸಿವೆ. ಅದರಲ್ಲೂ ಸಾಂಪ್ರದಾಯಿಕ ಕೃಷಿಯು ಮೂಲೆಗುಂಪಾಗುತ್ತಿದೆ. ಹೆಚ್ಚಿನ ರೈತರು ಆಹಾರ ಬೆಳೆಗಳನ್ನು ಬೆಳೆಯುವ ಗೋಜಿಗೆ ಹೋಗುತ್ತಿಲ್ಲ. ಕಾರ್ಮಿಕರ ಕೊರತೆ ಒಂದೆಡೆಯಾದರೆ, ಆಹಾರ ಬೆಳೆಗಳಿಗೆ ತಗಲುವ ರೋಗಗಳು ಹಾಗೂ ಅವುಗಳ ನಿರ್ವಹಣೆಯೂ ಕಷ್ಟದಾಯಕವಾಗುತ್ತಿದೆ. ಹಾಗಾಗಿ ಹೆಚ್ಚಿನ ರೈತರು ತೋಟಗಾರಿಕಾ ಬೆಳೆಗಳನ್ನು ಅವಲಂಬಿಸಿದ್ದಾರೆ.

ಕೃಷಿಯ ಕಗ್ಗಂಟು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದೆಡೆ ಪ್ರಪಂಚದ ಜನಸಂಖ್ಯೆಯು ಹೆಚ್ಚಾದಂತೆ ಕೃಷಿ ಭೂಮಿ ಹೆಚ್ಚು ವಿರಳವಾಗುತ್ತಿದೆ. ಇದು ಭವಿಷ್ಯದಲ್ಲಿ ಜಾಗತಿಕ ಜನಸಂಖ್ಯೆಗೆ ಆಹಾರ ನೀಡುವುದನ್ನು ಮುಂದುವರಿಸಲು ಹೊಸ ಮಾರ್ಗಗಳ ಹುಡುಕಾಟಕ್ಕೆ ಕಾರಣವಾಗಿದೆ. ಅದೇ ಸಮಯದಲ್ಲಿ ಹವಾಮಾನ ಸಮಸ್ಯೆಗಳು ಸಹ ನೇರವಾಗಿ ಕೃಷಿ ಚಟುವಟಿಕೆಗಳಿಗೆ ಕಾರಣವಾಗಿವೆ. ಇಂತಹ ಅನೇಕ ಸವಾಲುಗಳ ನಡುವೆ ಕೃಷಿಯನ್ನು ಆರಾಧಿಸುವವರು, ಅನುಸರಿಸುವವರೂ ಇದ್ದಾರೆ. ಅಂತಹವರು ತಮ್ಮದೇ ಆದ ಹೊಸ ಹೊಸ ಆಲೋಚನೆಗಳ ಮೂಲಕ ಕೃಷಿಯನ್ನು ಪ್ರಯೋಗಾತ್ಮಕವಾಗಿ ಕೈಗೊಂಡು ಯಶಸ್ಸು ಕಂಡಿದ್ದಾರೆ.

ಕೃಷಿಯ ಜೊತೆಗೆ ದನಕರುಗಳ ಸಾಕಣೆ ಇಂದು ನಿನ್ನೆಯದಲ್ಲ. ಭೂಮಿಯ ಮೇಲೆ ಕೃಷಿ ಚಟುವಟಿಕೆಗಳು ಪ್ರಾರಂಭವಾದಾಗಿನಿಂದ ಕೃಷಿಯ ಜೊತೆಜೊತೆಗೆ ದನಕರು ಸಾಕಣೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಅಂತಹ ಕೆಲ ಪ್ರಯೋಗಾತ್ಮಕ ಕೃಷಿಯಲ್ಲಿ ತೇಲುವ ಕೊಟ್ಟಿಗೆಯೂ ಒಂದು. ಏನಿದು ತೇಲುವ ಕೊಟ್ಟಿಗೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ನಮಗೆಲ್ಲಾ ತೇಲುವ ಹೊಟೇಲ್‌ಗಳು ಗೊತ್ತಿವೆ. ಅಂತಹದ್ದೇ ಮಾದರಿಯಲ್ಲಿ ನಿರ್ಮಿತವಾದದ್ದೇ ತೇಲುವ ಕೊಟ್ಟಿಗೆ ಪರಿಕಲ್ಪನೆ. ಇದು ಸಾಕಾರಗೊಂಡಿರುವುದು ನೆದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್‌ನ ಸ್ಟೈಲಿಶ್ ಮೆರ್ವೆ ಬಂದರಿನಲ್ಲಿ.


 



ಈ ಕೊಟ್ಟಿಗೆಯನ್ನು ಡಚ್ ಪ್ರಾಪರ್ಟಿ ಡೆವಲಪ್‌ಮೆಂಟ್ ಕಂಪೆನಿ ಬೆಲಾಡಾನ್‌ನ ಸಂಸ್ಥಾಪಕ ಪೀಟರ್ ವ್ಯಾನ್ ವಿಂಗರ್‌ಡೆನ್ ಅವರು ನಿರ್ಮಿಸಿದ್ದಾರೆ. 1,800 ಚದರ ಮೀಟರ್‌ನಲ್ಲಿ ನಿರ್ಮಿತವಾದ ಈ ಕೊಟ್ಟಿಗೆಯನ್ನು ಮೆರ್ವೆ ಬಂದರಿನಲ್ಲಿ ನಿರ್ಮಿಸಲಾಗಿದ್ದು, ಇದು ಸಮುದ್ರದ ನೀರಿನ ಮೇಲೆ ತೇಲುತ್ತದೆ. ತೇಲುವ ಕೊಟ್ಟಿಗೆಯಲ್ಲಿ ಮುಖ್ಯವಾಗಿ ಹಾಲಿನ ಉತ್ಪನ್ನಗಳಿಗಾಗಿ ಹಸು ಸಾಕಣೆ ಇದ್ದರೂ, ಅಲ್ಲಿ ಅಲ್ಪ ಪ್ರಮಾಣದ ಕೃಷಿಯೂ ಇರುವುದನ್ನು ಗಮನಿಸಬಹುದು. ದನಕರುಗಳಿಗೆ ಅಗತ್ಯವಾದ ಹಸಿರು ಮೇವನ್ನು ಅಲ್ಲಿಯೇ ಬೆಳೆಸಲಾಗುತ್ತದೆ. ತೇಲುವ ಕೊಟ್ಟಿಗೆಯನ್ನು ಬಂದರಿನ ಸಮೀಪದ ಹುಲ್ಲುಗಾವಲಿಗೆ ಜೋಡಿಸಲಾಗಿದೆ, ಹಸುಗಳು ತಮಗೆ ಬೇಕಾದಾಗ ಕಿರು ಸೇತುವೆಯ ಮೂಲಕ ಹುಲ್ಲುಗಾವಲನ್ನು ಪ್ರವೇಶಿಸಬಹುದು.

ತೇಲುವ ಕೊಟ್ಟಿಗೆಯು ಅನೇಕ ವಿಶೇಷತೆಗಳನ್ನು ಹೊಂದಿದೆ. ಶಕ್ತಿಯ ಅವಲಂಬನೆಯನ್ನು ಕಡಿಮೆ ಮಾಡಲು ಕೊಟ್ಟಿಗೆಯ ಸುತ್ತಲೂ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಕೊಟ್ಟಿಗೆಯು ನೀರಿನ ಮೇಲೆ ತೇಲುವಂತೆ ನಿರ್ಮಿತವಾಗಿದ್ದರೂ ಸಣ್ಣ ಟರ್ಬೈನ್ ಬಳಸಿ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಕೊಟ್ಟಿಗೆಯು ಮೂರು ಅಂತಸ್ತುಗಳನ್ನು ಹೊಂದಿದೆ. ಕೊಟ್ಟಿಗೆಯ ಮೇಲಿನ ಮಹಡಿಯಲ್ಲಿ ದನದ ಸೆಗಣಿ ಗೊಬ್ಬರವನ್ನು ಸಂಗ್ರಹಿಸಲು ಸ್ವಯಂಚಾಲಿತ ರೊಬೋಟ್ ವ್ಯವಸ್ಥೆ ಮಾಡಲಾಗಿದೆ. ಸ್ವಯಂಚಾಲಿತ ರೊಬೋಟ್ ವ್ಯವಸ್ಥೆಯು ಗೊಬ್ಬರವನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ವಿಭಜಕಕ್ಕೆ ತೆಗೆದುಕೊಳ್ಳುತ್ತದೆ. ಗೊಬ್ಬರವನ್ನು ತಕ್ಷಣವೇ ಮೂತ್ರ ಮತ್ತು ಗೊಬ್ಬರದ ಒಣ ಭಾಗವಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ. ಜೊತೆಗೆ ಇಲ್ಲಿ ಮಳೆನೀರ ಕೊಯ್ಲು ಅಳವಡಿಸಲಾಗಿದ್ದು, ಛಾವಣಿಯ ಮೇಲಿನ ಮಳೆನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಬಳಸಲಾಗುತ್ತದೆ. ಹೆಚ್ಚಾದ ಮಳೆನೀರನ್ನು ಕೃಷಿಗೆ ಮರುಬಳಕೆ ಮಾಡಲಾಗುತ್ತದೆ.

2019ರಿಂದ ಪ್ರಾರಂಭವಾದ ತೇಲುವ ಕೊಟ್ಟಿಗೆಯಲ್ಲಿ ಪ್ರಸಕ್ತ 40 ಹಸುಗಳಿದ್ದು, ಪ್ರತಿದಿನ 600 ಲೀಟರ್ ಹಾಲನ್ನು ಉತ್ಪಾದಿಸುತ್ತದೆ. ಈ ಹಾಲನ್ನು ಸ್ಥಳೀಯ ಅಂಗಡಿಗಳಿಗೆ ಮತ್ತು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ. ಮಾರಾಟವಾಗದೆ ಉಳಿದ ಹಾಲಿನಿಂದ ಮೊಸರು ಹಾಗೂ ಇನ್ನಿತರ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕೊಟ್ಟಿಗೆಯಲ್ಲಿಯೇ ಇರುವ ಸಣ್ಣ ರೆಸ್ಟೋರೆಂಟ್‌ನಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತದೆ.

ತೇಲುವ ಕೊಟ್ಟಿಗೆಯ ಇನ್ನೊಂದು ವಿಶೇಷತೆ ಎಂದರೆ ಅದರ ವಿನ್ಯಾಸ. ಕೊಟ್ಟಿಗೆಯ ಹೊರಭಾಗವನ್ನು ಪಾರದರ್ಶಕವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿಗೆ ಬರುವ ಸಂದರ್ಶಕರಿಗೆ ತೇಲುವ ಕೊಟ್ಟಿಗೆಯಲ್ಲಿ ಏನಿದೆ? ಏನೇನು ನಡೆಯುತ್ತಿದೆ ಎಂಬುದನ್ನು ನೋಡಲು ಅನುಕೂಲವಾಗುವಂತೆ ಪಾರದರ್ಶಕವಾಗಿ ನಿರ್ಮಿಸಲಾಗಿದೆ. ಇದು ಮಕ್ಕಳು ಮತ್ತು ವಯಸ್ಕರಿಗೆ ವಿನೋದಮಯವಾಗಿದೆ ಮತ್ತು ಕಲಿಕಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಣ ಕೇಂದ್ರದಂತಿದೆ.

ಹೀಗೆ ವಿಶೇಷತೆಗಳನ್ನು ಹೊಂದಿದ ಈ ತೇಲುವ ಕೊಟ್ಟಿಗೆಯು ಅನೇಕ ಸಾಧ್ಯತೆಗಳನ್ನು ವಿವರಿಸುತ್ತದೆ. ಮೊದಲನೆಯದಾಗಿ ಕೃಷಿಯಲ್ಲಿ ತಂತ್ರಜ್ಞಾನದ ಅವಳಡಿಕೆಯ ಸಾಧ್ಯತೆಯನ್ನು ತಿಳಿಸುತ್ತದೆ. ಇಲ್ಲಿ ಬಳಸಿದ ಮಳೆಕೊಯ್ಲು, ರೊಬೋಟಿಕ್ ವ್ಯವಸ್ಥೆ, ಸೌರ ವಿದ್ಯುತ್, ಜಲ ವಿದ್ಯುತ್ ಬಳಕೆಯು ಕೃಷಿಯನ್ನು ಒಂದು ಉದ್ಯಮವನ್ನಾಗಿಸುವ ಅವಕಾಶಗಳನ್ನು ತೆರೆದಿಡುತ್ತದೆ. ಎರಡನೆಯದಾಗಿ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಪ್ರವಾಹ ಮತ್ತು ಹೆಚ್ಚುತ್ತಿರುವ ಸಾಗರ ಸಮುದ್ರಗಳ ಅಪಾಯಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಕೃಷಿ ಭೂಮಿಯು ಕಡಿಮೆಯಾಗುತ್ತದೆ. ಕೃಷಿ ಭೂಮಿಯ ಕೊರತೆಗೆ ತೇಲುವ ಕೊಟ್ಟಿಗೆಯು ಸೂಕ್ತ ಉತ್ತರವನ್ನು ನೀಡುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದ ನೀರಿನ ಸರಬರಾಜಿನ ಮೇಲೆ ಉಂಟಾಗುವ ಒತ್ತಡಗಳನ್ನು ನಿವಾರಿಸುತ್ತದೆ.

ತೇಲುವ ಕೊಟ್ಟಿಗೆಯು ಪ್ರವಾಹದ ಸಮಯದಲ್ಲಿಯೂ ಆಹಾರ ಉತ್ಪಾದನೆಯನ್ನು ಮುಂದುವರಿಸಬಹುದು ಎಂಬುದಕ್ಕೆ ಸೂಕ್ತ ಉದಾಹಣೆಯಾಗಿದೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯಲ್ಲೂ ಇಲ್ಲಿ ಯಾವುದೇ ತೊಂದರೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು. ಸಮುದ್ರದ ಆಸುಪಾಸುಗಳಲ್ಲಿರುವ ಸಣ್ಣ ಸಣ್ಣ ನಗರಗಳು ಸೇರಿದಂತೆ ಇನ್ನಿತರ ಜಲಾವೃತ ಪ್ರದೇಶಗಳಲ್ಲಿ ಇಂತಹ ಒಂದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂಬುದಕ್ಕೆ ಪ್ರಸಕ್ತ ರೋಟರ್‌ಡ್ಯಾಮ್‌ನಲ್ಲಿರುವ ವಿಶಿಷ್ಟ ತೇಲುವ ಕೊಟ್ಟಿಗೆಯು ಸೂಕ್ತ ಮಾದರಿಯಾಗಿದೆ. ನೀರಿನ ಮೇಲೆ ಕೊಟ್ಟಿಗೆ ನಿರ್ಮಿಸುವ ಮೂಲಕ, ನಾವು ಹವಾಮಾನಕ್ಕೆ ಹೊಂದಿಕೊಳ್ಳುತ್ತೇವೆ. ಆದ್ದರಿಂದ ಎಷ್ಟೇ ಮಳೆ ಸುರಿದರೂ ಅಥವಾ ಸಮುದ್ರ ಮಟ್ಟವು ಎಷ್ಟೇ ಹೆಚ್ಚಾದರೂ, ನಾವು ಯಾವಾಗಲೂ ಆರೋಗ್ಯಕರ ಆಹಾರವನ್ನು ಉತ್ಪಾದಿಸಬಹುದು ಎನ್ನುತ್ತಾರೆ ಅದರ ನಿರ್ಮಾತೃ ಪೀಟರ್ ವ್ಯಾನ್ ವಿಂಗರ್‌ಡೆನ್.

ಭಾರತವು 7,516 ಕಿ.ಮೀ. ಕರಾವಳಿ ತೀರ ಪ್ರದೇಶ ಹೊಂದಿದ್ದು, ಅಲ್ಲಲ್ಲಿ ಇಂತಹ ತೇಲುವ ಕೊಟ್ಟಿಗೆಗಳನ್ನು ನಿರ್ಮಿಸುವ ಮೂಲಕ ಭಾರತದ ಕೃಷಿ ಪದ್ಧತಿಯನ್ನು ವಿಸ್ತರಿಸಬಹುದು. ಈ ಬಗ್ಗೆ ನಮ್ಮ ಸರಕಾರಗಳು ಯೋಜನೆ ಕೈಗೊಂಡರೆ ಭಾರತದ ಕೃಷಿಗೆ ಹೊಸ ರೂಪ ನೀಡಬಹುದು ಅಲ್ಲವೇ?

Writer - ವಾರ್ತಾಭಾರತಿ

contributor

Editor - Ashik

contributor

Byline - ಆರ್. ಬಿ. ಗುರುಬಸವರಾಜ

contributor

Similar News