ಬಾಹ್ಯಾಕಾಶದಿಂದ ಬಂದ ಮತ
ಬಾಹ್ಯಾಕಾಶದಿಂದ ಚಲಾಯಿಸಲಾಗುವ ಮತದಾನವು ಮತ ಚಲಾವಣೆಯ ಹೊಸ ಸಂಪ್ರದಾಯವನ್ನೇ ಹುಟ್ಟು ಹಾಕಿದೆ. ಬಾಹ್ಯಾಕಾಶದ ಮತದಾನವು ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ಸಾಧನೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ನಾವಿರುವ ಸ್ಥಳದಿಂದಲೇ ಅಂದರೆ ನಮ್ಮ ಕಚೇರಿ, ಮನೆಗಳು ಹಾಗೂ ಇನ್ನಿತರ ವಸತಿ ಸ್ಥಳದಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಬಂದರೂ ಅಚ್ಚರಿಪಡಬೇಕಾಗಿಲ್ಲ ಅಲ್ಲವೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಬಹಳ ಮಹತ್ವದ್ದು. ಆಯಾ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಅರ್ಹ ಮತದಾರನು ತನ್ನ ಹಕ್ಕನ್ನು ಚಲಾಯಿಸಲು ಬಾಧ್ಯಸ್ಥನಾಗಿರುತ್ತಾನೆ.
ನಮ್ಮ ದೇಶದಲ್ಲೂ ಚುನಾವಣೆಗಳು ನಡೆಯುತ್ತವೆ. ಅದರಲ್ಲಿ ಬಹುತೇಕ ಅರ್ಹ ಮತದಾರರು ಮತ ಚಲಾಯಿಸುವುದೇ ಇಲ್ಲ. ಒಂದು ದಿನ ರಜೆ ಸಿಕ್ಕಿತೆಂದು ಇಡೀ ದಿನ ಮತದಾನ ಪ್ರಕ್ರಿಯೆಯಿಂದ ದೂರ ಉಳಿದು ಮೋಜು ಮಸ್ತಿಯಲ್ಲಿ ತೊಡಗುವವರೇ ಹೆಚ್ಚು. ಅದರಲ್ಲೂ ಪ್ರಜ್ಞಾವಂತರು ಎನಿಸಿಕೊಂಡವರೇ ಮತದಾನದಿಂದ ದೂರ ಉಳಿಯುತ್ತಿರುವುದು ಶೋಚನೀಯ ಸಂಗತಿ. ಇನ್ನು ಕೆಲವು ತಾಂತ್ರಿಕ ಕಾರಣಗಳಿಂದ ಸೈನಿಕರು ಹಾಗೂ ಅಧಿಕಾರಿಗಳು ಮತ ಚಲಾವಣೆಯಿಂದ ವಂಚಿತರಾಗುತ್ತಾರೆ.
ಆದರೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವಿಶಿಷ್ಟವಾದ ಮತ ಪ್ರಕ್ರಿಯೆ ದಾಖಲಾಯಿತು. ಅದೇನೆಂದರೆ ನಾಲ್ಕು ಜನ ಗಗನಯಾನಿಗಳು ಬಾಹ್ಯಾಕಾಶದಿಂದ ಮತ ಚಲಾವಣೆ ಮಾಡಿದರು. ಅರೆರೇ! ಇದು ಹೇಗೆ ಸಾಧ್ಯ? ಎಂಬ ಅಚ್ಚರಿ ಎಲ್ಲರಲ್ಲೂ ಮೂಡುವುದು ಸಹಜ.
ಬಾಹ್ಯಾಕಾಶ ಮತದಾನವು ಹೊಸದೇನಲ್ಲ. 1997ರಿಂದ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಮತ ಚಲಾಯಿಸುತ್ತಿದ್ದಾರೆ. 1993ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗಗನಯಾನಿ ಜಾನ್ ಬ್ಲಾಹಾ ದೈಹಿಕವಾಗಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಆಗ ಅವರು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪೂರ್ವವರ್ತಿಯಾದ (ಈಗ ನಿಷ್ಕ್ರಿಯವಾಗಿರುವ) ರಶ್ಯದ ಮಿರ್ ಬಾಹ್ಯಾಕಾಶ ನಿಲ್ದಾಣದಲ್ಲಿದ್ದರು.
ಅಲ್ಲದೆ ಹೆಚ್ಚಿನ ನಾಸಾ ಗಗನಯಾನಿಗಳು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ವಾಸಿಸುತ್ತಿದ್ದು, ಬೇರೆ ಬೇರೆ ಕಾರಣಗಳಿಗಾಗಿ ಇಲ್ಲಿನ ಗಗನಯಾನಿಗಳು ಮತ ಚಲಾವಣೆ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದರು. ಈ ವಿಷಯವು ಟೆಕ್ಸಾಸ್‌ನ ಶಾಸಕರ ಗಮನವನ್ನು ಸೆಳೆಯಿತು. 1996ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಹೊಸ ಮಸೂದೆಗೆ ಸಹಿ ಹಾಕಿದರು. ಅದೇನೆಂದರೆ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಕಾನೂನುಬದ್ಧವಾಗಿ ಮತದಾನ ಮಾಡಬಹುದಾಗಿತ್ತು.
1997ರಲ್ಲಿ ನಡೆದ ಚುನಾವಣೆಯಲ್ಲಿ ಗಗನಯಾನಿ ಡೇವಿಡ್ ವುಲ್ಫ್ ಅವರು ರಶ್ಯದ ಮೀರ್ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿರುವಾಗ ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ವ್ಯಕ್ತಿಯಾದರು. ಟೆಕ್ಸಾಸ್ ಶಾಸಕಾಂಗವು ಗಗನಯಾನಿಗಳಿಗೆ ವಿದ್ಯುನ್ಮಾನ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿದ ನಂತರ ಈ ಪ್ರಕ್ರಿಯೆ ನಡೆಯಿತು. ಆಗ ಬಾಹ್ಯಾಕಾಶದಿಂದ ಚಲಾವಣೆಯಾದದ್ದು ಕೇವಲ ಒಂದು ಮತವಾಗಿದ್ದರೂ, ಅದು ಅವರಿಗೆ ಪ್ರಮುಖ ವ್ಯತ್ಯಾಸವನ್ನುಂಟುಮಾಡಿದೆ ಎಂದು ಡೇವಿಡ್ ವುಲ್ಫ್ ನಂತರದಲ್ಲಿ ಪ್ರತಿಕ್ರಿಯಿಸಿದ್ದರು.
2004ರ ವೇಳೆಗೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅಮೆರಿಕದ ಗಗನಯಾನಿಗಳು ಪ್ರತೀ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರಕ್ರಿಯೆಯು ಜಾರಿಗೆ ಬಂದಿತು. ಅದರನ್ವಯ 2012ರಲ್ಲಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಕೆವಿನ್ ಫೋರ್ಡ್ ಅವರು ಬಾಹ್ಯಾಕಾಶದಿಂದ ಮತ ಚಲಾಯಿಸಿದ್ದರು. ನಾಸಾದ ಗಗನಯಾನಿ ಕೇಟ್ ರೂಬಿನ್ಸ್ ಅವರು ನವೆಂಬರ್ 2020ರಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸಿದ್ದರು.
ಅದೆಲ್ಲಾ ಸರಿ. ಬಾಹ್ಯಾಕಾಶ ಮತದಾನವು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದು ಎಲ್ಲರನ್ನು ಚಿಂತನೆಗೆ ಹಚ್ಚಿದೆ. ನಮ್ಮ ದೇಶದ ಗಡಿ ಕಾಯುವ ಯೋಧರು, ಕೇಂದ್ರೀಯ ಮೀಸಲು ಪಡೆಯ ಯೋಧರು ಫ್ರಾಕ್ಸಿ ಮತದಾನದ ಮೂಲಕ (ತಮ್ಮ ಕುಟುಂಬದಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ವ್ಯಕ್ತಿಯಿಂದ) ಮತ ಚಲಾಯಿಸುವಂತೆ ಅಮೆರಿಕದ ಮತದಾರರ ಪಟ್ಟಿಯಲ್ಲಿ ದಾಖಲಾದ ಗಗನಯಾನಿಗಳು ಬಾಹ್ಯಾಕಾಶದಿಂದ ಮತ ಚಲಾಯಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಗಗನಯಾನಿಗಳು ತಮ್ಮ ಸ್ಥಳೀಯ ವೋಟಿಂಗ್ ಆಫೀಸ್‌ಗೆ ಮತಪತ್ರವನ್ನು ವಿನಂತಿಸುವ ಅರ್ಜಿಯನ್ನು ಸಲ್ಲಿಸುತ್ತಾರೆ. ಕಾಗದದ ಮತಪತ್ರ ಅಥವಾ ಪ್ರಮಾಣಿತ ಇಲೆಕ್ಟ್ರಾನಿಕ್ ರೂಪದ ಬದಲಿಗೆ, ಗಗನಯಾತ್ರಿಗಳ ಮತಗಳನ್ನು ಗೌಪ್ಯವಾಗಿ ಮತ್ತು ಪ್ರತ್ಯೇಕವಾಗಿ ಮಾಡಲಾಗುತ್ತದೆ ಮತ್ತು ನಾಸಾದ ಅತ್ಯಂತ ಸುರಕ್ಷಿತ ಸಂವಹನ ವ್ಯವಸ್ಥೆಗಳ ಮೂಲಕ ರವಾನಿಸಲಾಗುತ್ತದೆ.
ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾದ ಗಗನಯಾತ್ರಿಗಳು ಗೈರುಹಾಜರಿ ಮತಪತ್ರಗಳ ಮೂಲಕ ಸಾಮಾನ್ಯ ಚುನಾವಣೆಗಳಲ್ಲಿ ಮತ ಚಲಾಯಿಸಲು, ಅವರು ವಾಸಿಸುವ ಕೌಂಟಿ ಗುಮಾಸ್ತರ ಕಚೇರಿಯೊಂದಿಗೆ ಸಮನ್ವಯದೊಂದಿಗೆ ಆರಂಭಿಕ ಮತದಾನದ ಅವಕಾಶವನ್ನು ಹೊಂದಿರುತ್ತಾರೆ. ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಾಹ್ಯಾಕಾಶ ನಿಲ್ದಾಣ ಮತ್ತು ಮಿಷನ್ ಕಂಟ್ರೋಲ್ ಸೆಂಟರ್ ನಡುವೆ ರವಾನೆಯಾಗುವ ಹೆಚ್ಚಿನ ಡೇಟಾದಂತೆಯೇ, ಏಜೆನ್ಸಿಯ ನಿಯರ್ ಸ್ಪೇಸ್ ನೆಟ್‌ವರ್ಕ್ ಮೂಲಕ ಬಾಹ್ಯಾಕಾಶ ಪ್ರಯಾಣದಲ್ಲಿ ಮತಪತ್ರಗಳನ್ನು ನೀಡಲಾಗುತ್ತದೆ. ಇದನ್ನು ಮೇರಿಲ್ಯಾಂಡ್‌ನ ಗ್ರೀನ್‌ಬೆಲ್ಟ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ನಿರ್ವಹಿಸುತ್ತದೆ. ಬಾಹ್ಯಾಕಾಶ ನಿಲ್ದಾಣ ಸೇರಿದಂತೆ ಸಂವಹನ ಮತ್ತು ನ್ಯಾವಿಗೇಷನ್ ಸೇವೆಗಳೊಂದಿಗೆ ಭೂಮಿಯ 1.2 ಮಿಲಿಯನ್ ಮೈಲುಗಳೊಳಗಿನ ಕಾರ್ಯಾಚರಣೆಗಳನ್ನು ನೆಟ್‌ವರ್ಕ್ ಸಂಪರ್ಕಿಸುತ್ತದೆ.
ಗಗನಯಾತ್ರಿಗಳು ಗೈರುಹಾಜರಿ ಮತಪತ್ರವನ್ನು ವಿನಂತಿಸಲು ಫೆಡರಲ್ ಪೋಸ್ಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡುತ್ತಾರೆ. ಗಗನಯಾನಿಯು ತಾವಿರುವ ಬಾಹ್ಯಾಕಾಶ ಸ್ಥಳದಿಂದಲೇ ಇಲೆಕ್ಟ್ರಾನಿಕ್ ಮತಪತ್ರವನ್ನು ತುಂಬಿದ ನಂತರ, ಮಾಹಿತಿಯು ನಾಸಾದ ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಉಪಗ್ರಹ ವ್ಯವಸ್ಥೆಯ ಮೂಲಕ ನ್ಯೂ ಮೆಕ್ಸಿಕೋದ ಲಾಸ್ ಕ್ರೂಸಸ್‌ನಲ್ಲಿರುವ ಏಜೆನ್ಸಿಯ ವೈಟ್ ಸ್ಯಾಂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಭೂಪ್ರದೇಶದ ಆಂಟೆನಾಕ್ಕೆ ವರ್ಗಾವಣೆಯಾಗುತ್ತದೆ.
ನ್ಯೂ ಮೆಕ್ಸಿಕೋದಿಂದ ನಾಸಾವು ಮತಪತ್ರವನ್ನು ಜಾನ್ಸನ್‌ನಲ್ಲಿರುವ ನಾಸಾದ ಮಿಷನ್ ಕಂಟ್ರೋಲ್ ಸೆಂಟರ್‌ಗೆ ವರ್ಗಾಯಿಸುತ್ತದೆ ಮತ್ತು ಆ ಮತಪತ್ರವು ಅಲ್ಲಿನ ಜವಾಬ್ದಾರಿಯುತ ಕೌಂಟಿ ಕ್ಲರ್ಕ್‌ಗೆ ವರ್ಗಾಯಿಸುತ್ತದೆ. ಮತದ ಗೌಪ್ಯತೆಯನ್ನು ಕಾಪಾಡಲು, ಮತಪತ್ರವನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಅದು ಚಲಾಯಿಸಿದವರಿಗೆ ಮತ್ತು ಮತ ಎಣಿಕೆ ಮಾಡುವವರಿಗೆ ಮಾತ್ರ ತಿಳಿದಿರುತ್ತದೆ.
ಪ್ರಸಕ್ತ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡಾನ್ ಪೆಟ್ಟಿಟ್, ನಿಕ್ ಹೇಗ್, ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈ ನಾಲ್ಕು ಅಮೆರಿಕನ್ ಗಗನಯಾನಿಗಳು ಬಾಹ್ಯಾಕಾಶದಿಂದಲೇ ತಮ್ಮ ಮತವನ್ನು ಚಲಾಯಿಸಿದ್ದಾರೆ. ‘‘ನಾಗರಿಕರಾಗಿ ನಾವು ಹೊಂದಿರುವ ಅತ್ಯಂತ ಪ್ರಮುಖ ಕರ್ತವ್ಯ ಎಂದರೆ ಮತ ಚಲಾಯಿಸುವುದು. ಈ ಬಾರಿ ನಾನು ಬಾಹ್ಯಾಕಾಶದಿಂದಲೇ ಮತ ಚಲಾಯಿಸುವೆ. ಇದು ನನಗೆ ಅತ್ಯಂತ ಸಂತಸದ ಸಂಗತಿ’’ ಎಂದು ಸೆಪ್ಟಂಬರ್‌ನಲ್ಲಿ ವರದಿಗಾರರೊಂದಿಗಿನ ಕರೆಯಲ್ಲಿ ಸುನೀತಾ ವಿಲಿಯಮ್ಸ್ ಹೇಳಿದ್ದರು.
ಬಾಹ್ಯಾಕಾಶದಿಂದ ಚಲಾಯಿಸಲಾಗುವ ಮತದಾನವು ಮತ ಚಲಾವಣೆಯ ಹೊಸ ಸಂಪ್ರದಾಯವನ್ನೇ ಹುಟ್ಟು ಹಾಕಿದೆ. ಬಾಹ್ಯಾಕಾಶದ ಮತದಾನವು ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ಸಾಧನೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ನಾವಿರುವ ಸ್ಥಳದಿಂದಲೇ ಅಂದರೆ ನಮ್ಮ ಕಚೆೇರಿ, ಮನೆಗಳು ಹಾಗೂ ಇನ್ನಿತರ ವಸತಿ ಸ್ಥಳದಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಬಂದರೂ ಅಚ್ಚರಿಪಡಬೇಕಾಗಿಲ್ಲ ಅಲ್ಲವೇ? ಆ ಮೂಲಕವಾದರೂ ಮತ ಚಲಾವಣೆ ಮಾಡುವವರ ಸಂಖ್ಯೆ ಹೆಚ್ಚಾದೀತು. ಅಲ್ಲವೇ?