ಮೋಡದಲ್ಲಿ ಮೈಕ್ರೋಪ್ಲಾಸ್ಟಿಕ್: ಮಳೆ ಮಾದರಿಗಳು ಬದಲಾಗಬಹುದೇ?
ಈಗ ವಾತಾವರಣದಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಹರಡಿದೆ. ಹೀಗೆ ಹರಡಿದ ಮೈಕ್ರೋಪ್ಲಾಸ್ಟಿಕ್ ಸಹ ಗಾಳಿಯ ಮೂಲಕ ಧೂಳಿನ ಕಣಗಳೊಂದಿಗೆ ಸೇರಿಕೊಂಡು ಮೋಡಗಳಲ್ಲಿ ಸೇರಿಕೊಳ್ಳುತ್ತದೆ. ಒಂದು ವೇಳೆ ಮೈಕ್ರೋಪ್ಲಾಸ್ಟಿಕ್‌ಗಳು ಮೋಡದ ರಚನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದು ಸಾಧಾರಣ ಮಳೆಯಿಂದ ಹಿಡಿದು ಚಂಡಮಾರುತದ ತೀವ್ರತೆಯವರೆಗೆ ಎಲ್ಲವನ್ನೂ ಬದಲಾಯಿಸಬಹುದು.
ಈಗಿನ ಪ್ಲಾಸ್ಟಿಕ್‌ನ ಸಾಮ್ರಾಜ್ಯ ಕೇವಲ ಒಂದು ಪ್ರದೇಶ, ಒಂದು ರಾಜ್ಯ ಅಥವಾ ಒಂದು ದೇಶಕ್ಕೆ ಸೀಮಿತವಾದ ಸಾಮ್ರಾಜ್ಯವಲ್ಲ. ಇಡೀ ಜಗತ್ತನ್ನು ವ್ಯಾಪಿಸಿದ ಸಾಮ್ರಾಜ್ಯ. ಎತ್ತರವಾದ ಹಿಮಾಲಯದಿಂದ ಆಳವಾದ ಮಾರಿಯಾನ ಕಂದಕದವರೆಗೂ ಪ್ಲಾಸ್ಟಿಕ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆ. ಪ್ಲಾಸ್ಟಿಕ್ ತನ್ನ ಪ್ರತಿನಿಧಿಯಾದ ಮೈಕ್ರೋಪ್ಲಾಸ್ಟಿಕ್‌ನ್ನು ಎಲ್ಲೆಡೆ ಕಳಿಸಿದೆ.
ಕಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್ ಇಡೀ ಜಗತ್ತನ್ನು ವ್ಯಾಪಿಸಿ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿದೆ. ಮೈಕ್ರೋಪ್ಲಾಸ್ಟಿಕ್ ಕೇವಲ ಬಾಹ್ಯ ಪ್ರಪಂಚವನ್ನಲ್ಲದೆ ಆಂತರಿಕ ಪ್ರಪಂಚಕ್ಕೂ ಕಾಲಿಟ್ಟಿದೆ. ಮಾನವನ ರಕ್ತವನ್ನೂ ಸೇರಿದೆ. ತಾಯಿಯ ರಕ್ತದ ಮೂಲಕ ಜನಿಸುವ ಹಸುಕೂಸುಗಳನ್ನೂ ಸೇರಿದೆ. ಹೀಗೆ ಎಲ್ಲೆಡೆ ತನ್ನ ಅಧಿಪತ್ಯ ಸ್ಥಾಪಿಸುತ್ತಿರುವ ಮೈಕ್ರೋಪ್ಲಾಸ್ಟಿಕ್ ಈಗ ಆಕಾಶಕ್ಕೂ ಲಗ್ಗೆ ಇಟ್ಟಿದೆ. ಮೈಕ್ರೋಪ್ಲಾಸ್ಟಿಕ್ ಆಕಾಶದಲ್ಲಿ ಅನಿರೀಕ್ಷಿತ ಮಂಜುಗಡ್ಡೆ ತಯಾರಕನಾಗಿ ಕೆಲಸಮಾಡುತ್ತಿದೆ ಎಂದು ಅಮೆರಿಕದ ಪೆನ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ.
ಮೈಕ್ರೊಪ್ಲಾಸ್ಟಿಕ್‌ಗಳ ಕುರಿತು ಕಳೆದ ಎರಡು ದಶಕಗಳಿಂದಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಮೈಕ್ರೋಪ್ಲಾಸ್ಟಿಕ್‌ಗಳಿಂದ ಆಗುವ ತೊಂದರೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಮೈಕ್ರೋಪ್ಲಾಸ್ಟಿಕ್‌ನ ವಿಸ್ತರಣೆ ಜೆಟ್ ವೇಗದಲ್ಲಿದ್ದರೆ, ಆದರೆ ಅವುಗಳನ್ನು ಕಡಿತಗೊಳಿಸುವ ಪ್ರಯತ್ನಗಳು ಮಾತ್ರ ಆಮೆ ವೇಗದಲ್ಲಿವೆ. ಆಕಾಶಕ್ಕೆ ಲಗ್ಗೆ ಇಟ್ಟ ಮೈಕ್ರೋಪ್ಲಾಸ್ಟಿಕ್‌ಗಳು ಮೋಡದ ರಚನೆಯ ಪ್ರಕ್ರಿಯೆಯನ್ನು ಪ್ರಚೋದಿಸಬಹುದು ಎಂದು ಸಂಶೋಧನಾ ತಂಡ ಹೇಳಿದೆ.
ಮೈಕ್ರೋಪ್ಲಾಸ್ಟಿಕ್‌ಗಳು ಮೋಡ ರಚನೆಯ ಪ್ರಕ್ರಿಯೆಯ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಅನ್ವೇಷಿಸಲು, ತಂಡವು ನಾಲ್ಕು ವಿಧದ ಸಾಮಾನ್ಯ ಪ್ಲಾಸ್ಟಿಕ್‌ಗಳ ಮೇಲೆ ಪ್ರಯೋಗವನ್ನು ಕೇಂದ್ರೀಕರಿಸಿತ್ತು. ಕಡಿಮೆ ಸಾಂದ್ರತೆಯ ಪಾಲಿಥಿಲೀನ್ (ಎಲ್‌ಡಿಪಿಇ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಮತ್ತು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ). ತಂಡವು ತಮ್ಮ ಪ್ರಯೋಗಾಲಯದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ನೀರಿನ ಸಣ್ಣ ಹನಿಗಳೊಂದಿಗೆ ಸೇರಿಸಿದರು ಮತ್ತು ಅವುಗಳನ್ನು ತಂಪಾಗಿಸಿದರು. ತಂಪಾಗಿಸಿದ ನಂತರ ಫಲಿತಾಂಶಗಳು ಮಾತ್ರ ತುಂಬಾ ಗಮನಾರ್ಹವಾಗಿದ್ದವು. ಸಾಮಾನ್ಯವಾಗಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿರದ ನೀರಿನ ಹನಿಗಳು ೫ ರಿಂದ ೧೦ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹೆಪ್ಪುಗಟ್ಟುತ್ತವೆ. ಆದರೆ ಮೈಕ್ರೋಪ್ಲಾಸ್ಟಿಕ್ ಹೊಂದಿರುವ ನೀರಿನ ಹನಿಗಳು ಮೈನಸ್ ೨೨ ಡಿಗ್ರಿ ಸೆಲ್ಸಿಯಸ್‌ನಿಂದ ಹೆಪ್ಪುಗಟ್ಟಿರುವುದನ್ನು ಸಂಶೋಧನಾ ತಂಡವು ಕಂಡುಕೊಂಡಿದೆ.
ನಮಗೆ ತಿಳಿದಿರುವಂತೆ ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿ ಮೋಡಗಳು ತುಂಬಾ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಭೂಮಿಯಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಮೂಲಕ ಮತ್ತು ಅದರ ಮೇಲ್ಮೈಗೆ ಹತ್ತಿರವಿರುವ ಶಾಖವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಭೂಮಿಯ ಮೇಲಿನ ಹವಾಮಾನ ನಿರ್ಣಯವಾಗುತ್ತದೆ. ಮೋಡಗಳಲ್ಲಿನ ದ್ರವ ನೀರು ಮತ್ತು ಮಂಜುಗಡ್ಡೆಯ ನಡುವಿನ ಸಮತೋಲನವು ಭೂಮಿಯನ್ನು ತಂಪಾಗಿಸುತ್ತದೆ ಅಥವಾ ಬೆಚ್ಚಗಾಗಿಸುತ್ತದೆಯೇ ಎಂಬುದನ್ನು ನಿರ್ಧರಿಸಲು ಮೋಡಗಳು ಸಹಾಯ ಮಾಡುತ್ತವೆ. ಮೈಕ್ರೋಪ್ಲಾಸ್ಟಿಕ್‌ಗಳು ಈ ಸಮತೋಲನವನ್ನು ಬದಲಾಯಿಸಬಹುದು ಎಂಬುದು ಪ್ರಸಕ್ತ ಸಂಶೋಧನಾ ತಂಡದ ಅಭಿಮತ.
ಈಗ ವಾತಾವರಣದಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಹರಡಿದೆ. ಹೀಗೆ ಹರಡಿದ ಮೈಕ್ರೋಪ್ಲಾಸ್ಟಿಕ್ ಸಹ ಗಾಳಿಯ ಮೂಲಕ ಧೂಳಿನ ಕಣಗಳೊಂದಿಗೆ ಸೇರಿಕೊಂಡು ಮೋಡಗಳಲ್ಲಿ ಸೇರಿಕೊಳ್ಳುತ್ತದೆ. ಒಂದು ವೇಳೆ ಮೈಕ್ರೋಪ್ಲಾಸ್ಟಿಕ್‌ಗಳು ಮೋಡದ ರಚನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದು ಸಾಧಾರಣ ಮಳೆಯಿಂದ ಹಿಡಿದು ಚಂಡಮಾರುತದ ತೀವ್ರತೆಯವರೆಗೆ ಎಲ್ಲವನ್ನೂ ಬದಲಾಯಿಸಬಹುದು.
ಕಲುಷಿತ ಪ್ರದೇಶಗಳಲ್ಲಿ ಮೈಕ್ರೊಪ್ಲಾಸ್ಟಿಕ್ ಸಾಂದ್ರತೆಗಳು ಹೆಚ್ಚಾಗಿದ್ದರೆ, ಮೋಡಗಳು ಹೆಚ್ಚು (ಆದರೆ ಚಿಕ್ಕದಾದ) ಹನಿಗಳನ್ನು ಹೊಂದಿರಬಹುದು. ಇದು ಮಳೆಯನ್ನು ವಿಳಂಬಗೊಳಿಸುತ್ತದೆ. ಮೋಡಗಳು ತಮ್ಮ ತೇವಾಂಶವನ್ನು ಬಿಡುಗಡೆ ಮಾಡಿದಾಗ ಭಾರೀ ಮಳೆಗೆ ಕಾರಣವಾಗುತ್ತದೆ. ಪ್ರಸಕ್ತ ಸಂಶೋಧನೆಯಿಂದ ಪ್ರಾಯೋಗಿಕವಾಗಿ ಹವಾಮಾನ ರಚನೆಯ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳು ಎಷ್ಟು ಪ್ರಭಾವ ಬೀರುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಮೋಡಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ನ ಸ್ಥಿತಿಗತಿಯ ಬಗ್ಗೆ ಭವಿಷ್ಯದ ಅಧ್ಯಯನಗಳು ಹೆಚ್ಚಿನ ಪ್ರಯೋಗಗಳನ್ನು ಮಾಡಬೇಕಾಗುತ್ತದೆ.
ಮೈಕ್ರೊಪ್ಲಾಸ್ಟಿಕ್‌ಗಳು ಮಂಜುಗಡ್ಡೆಯನ್ನು ನ್ಯೂಕ್ಲಿಯೇಟ್ ಮಾಡುತ್ತವೆ ಎಂಬ ಅಂಶವು ದೂರಗಾಮಿ ಪರಿಣಾಮಗಳನ್ನು ಹೊಂದಿದೆ ಎಂದು ನಮಗೆ ತಿಳಿದಿದೆ ಎಂದು ಸಂಶೋಧನೆಯ ಮುಖ್ಯಸ್ಥ ಹೈಡಿ ಬುಸ್ಸೆ ಹೇಳಿದ್ದಾರೆ. ಸಂಶೋಧಕರು ಈಗ ವಾಯುಮಂಡಲದ ರಸಾಯನಶಾಸ್ತ್ರದ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ದೀರ್ಘಕಾಲೀನ ಪರಿಣಾಮಗಳತ್ತ ಗಮನ ಹರಿಸುತ್ತಿದ್ದಾರೆ. ಪರಿಸರದ ಪ್ಲಾಸ್ಟಿಕ್‌ಗಳು ಬೆಳಕು, ಓರೆನ್ ಮತ್ತು ಇತರ ರಾಸಾಯನಿಕ ಇರುವಿಕೆಯಿಂದಾಗಿ ವಿಘಟವಾಗುತ್ತವೆ. ಹೀಗಾಗಿ ಅವುಗಳು ಮಂಜುಗಡ್ಡೆ ರೂಪಿಸುವ ಸಾಮರ್ಥ್ಯಗಳನ್ನು ಬದಲಾಯಿಸಬಹುದು ಎಂದು ಅವರು ಶಂಕಿಸಿದ್ದಾರೆ.
ಒಟ್ಟಾರೆ ಮೋಡಗಳಲ್ಲಿ ಕಂಡುಬರುವ ಮೈಕ್ರೋಪ್ಲಾಸ್ಟಿಕ್‌ಗಳು ಮೋಡದ ರಚನೆಯ ಮೇಲೆ ಪ್ರಭಾವ ಬೀರಬಹುದು. ವಾತಾವರಣದ ಮಂಜುಗಡ್ಡೆಯ ಹರಳುಗಳು ರೂಪುಗೊಳ್ಳುವ ವಿಧಾನವನ್ನು ಬದಲಾಯಿಸುವ ಮೂಲಕ ಮಳೆಯ ಮಾದರಿಗಳು, ಹವಾಮಾನ ಮುನ್ಸೂಚನೆ ಮತ್ತು ಹವಾಮಾನದ ಮೇಲೆ ಪ್ರಭಾವ ಬೀರಬಹುದು. ಇದು ನ್ಯೂಕ್ಲಿಯೇಶನ್ ಸೈಟ್‌ಗಳಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯದಿಂದಾಗಿ ಮೋಡದ ಜೀವಿತಾವಧಿ, ಸೂರ್ಯನ ಬೆಳಕಿನ ಪ್ರತಿಫಲನ ಮತ್ತು ಮಳೆಯ ಬದಲಾವಣೆಗಳಿಗೆ ಕಾರಣವಾಗಬಹುದು. ಮೂಲಭೂತವಾಗಿ ವಾತಾವರಣದಲ್ಲಿನ ನೀರಿನ ಹನಿಗಳು ಮೋಡದ ಗುಣಲಕ್ಷಣಗಳನ್ನು ಮಾರ್ಪಡಿಸುವ ಮೂಲಕ ವಾತಾವರಣ ಮತ್ತು ಹವಾಮಾನದ ಮೇಲೆ ಪ್ರಭಾವ ಬೀರಬಹುದು.
ಪ್ರಸಕ್ತ ಅಧ್ಯಯನಗಳು ಮೋಡಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಉಪಸ್ಥಿತಿಯನ್ನು ತೋರಿಸಿದ್ದರೂ, ಹವಾಮಾನದ ಮಾದರಿಗಳ ಮೇಲೆ ಅವುಗಳ ಪ್ರಭಾವದ ಪ್ರಮಾಣ ಮತ್ತು ನಿಖರವಾದ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಮೈಕ್ರೋಪ್ಲಾಸ್ಟಿಕ್‌ನ ಸಾಮ್ರಾಜ್ಯ ವಿಸ್ತರಣೆ ಆಗುತ್ತಿರುವುದರಿಂದ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಎಲ್ಲರಿಗೂ ತೊಂದರೆಗಳಾಗುತ್ತಿವೆ. ಆದರೆ ಹೆಚ್ಚು ಬಾಧಿತರಾಗುವುದು ಸಾಮಾನ್ಯ ಜನರು. ಹಾಗಾಗಿ ಆದಷ್ಟೂ ಮೈಕ್ರೋಪ್ಲಾಸ್ಟಿಕ್ ವಾತಾವರಣ ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಶ್ರೀಮಂತರಾದಿಯಾಗಿ ಎಲ್ಲರ ಸಹಕಾರ ಅಗತ್ಯ.