ರಬ್ಬರ್ ಬಲೂನ್‌ಗಳಿಗೆ 200ರ ಸಂಭ್ರಮ

ಬಲೂನ್‌ಗಳು ಈಗ ವಿಶ್ವದಾದ್ಯಂತ ಪ್ರಮುಖ ಆಚರಣೆಗಳಲ್ಲಿ ಬಳಸುವ ವಸ್ತುಗಳಾಗಿದ್ದು, ಅದರ ಆವಿಷ್ಕಾರದ ಹಿಂದೆ ಕುತೂಹಲಕಾರಿ ಇತಿಹಾಸವನ್ನು ಹೊಂದಿದೆ. ಈ ಸಂಕ್ಷಿಪ್ತ ಪರಿಶೋಧನೆಯು ಬಲೂನ್‌ಗಳ ಐತಿಹಾಸಿಕ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಕುತೂಹಲದಿಂದ ಸಂತೋಷ ಮತ್ತು ಆಚರಣೆಯ ಸಂಕೇತವಾಗಿ ಬಳಸುವ ಬಲೂನ್ ಅನೇಕ ವೈಜ್ಞಾನಿಕ ರೂಪಾಂತರಗಳನ್ನು ಹೊಂದಿದೆ ಎಂಬುದು ಗಮನಾರ್ಹ.

Update: 2024-09-29 05:42 GMT

ಜಾತ್ರೆ ನೆನಪಾದಾಗಲೆಲ್ಲ ನೆನಪಾಗುವ ಆಟಿಕೆ ಎಂದರೆ ಬಲೂನ್. ನಾವು ಚಿಕ್ಕವರಾಗಿದ್ದಾಗ, ಜಾತ್ರೆಗೆ ಹೋದ ಕೂಡಲೇ ಖರೀದಿಸುತ್ತಿದ್ದ ಆಟಿಕೆ ಅದು. ಅದಕ್ಕೆ ಕಟ್ಟಿದ ರಬ್ಬರ್ ಕೈಯಲ್ಲಿ ಹಿಡಿದು, ಪಟ ಪಟನೆ ಮೇಲೆ ಕೆಳಗೆ ಹೊಡೆಯುತ್ತಾ, ಅದರೊಳಗಿನ ರವೆಯನ್ನು ಸದ್ದು ಮಾಡಿಸುತ್ತಾ, ಆಡುತ್ತಿದ್ದ ಕ್ಷಣ ನೆನಪಾಗುತ್ತದೆ. ಜಾತ್ರೆಯ ಬಲೂನಿನ ಜೊತೆಜೊತೆಗೆ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಕಲಿಸಿದ ವಿರೂಪಾಕ್ಷಪ್ಪ ಮೇಷ್ಟ್ರು ನೆನಪಾಗುತ್ತಾರೆ. ಎರಡು ಬಲೂನನ್ನು ಒಂದೇ ಗಾತ್ರಕ್ಕೆ ಊದಿ, ಒಂದು ಕಡ್ಡಿಯ ಎರಡೂ ಬದಿಗಳಿಗೆ ಕಟ್ಟಿ, ಸಮತೂಕ ಇದೆ ಎಂದು ತೋರಿಸಿ, ನಂತರ ಒಂದು ಬಲೂನಿನ ಗಾಳಿ ತೆಗೆದಾಗ, ಗಾಳಿ ತೆಗೆದ ಬಲೂನ್ ಮೇಲಕ್ಕೆ ಹೋದಾಗ, ಗಾಳಿಗೆ ತೂಕವಿದೆ ಎಂಬುದನ್ನು ತೋರಿಸುತ್ತಿದ್ದುದು ನೆನಪಾಗುತ್ತದೆ. ಪ್ರೌಢಶಾಲೆಯಲ್ಲಿ ಕೊಟ್ರಪ್ಪ ಮೇಷ್ಟ್ರು ಗಾಳಿಯು ಭಾರವನ್ನು ಹೊರಬಲ್ಲದು ಎಂಬುದನ್ನು ಬಲೂನ್ ಬಳಸಿ ಮಾಡಿದ ಪ್ರಯೋಗ ನೆನಪಾಗುತ್ತದೆ. ಈಗಲೂ ಎಲ್ಲಿಯೇ ಬಲೂನ್ ಕಂಡರೆ ಬಾಲ್ಯದ ಸವಿನೆನಪು ಮರುಕಳಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಭೆ ಸಮಾರಂಭ ನಡೆದರೂ ಅಲ್ಲಿ ಬಲೂನ್‌ಗಳದ್ದೇ ಕಾರುಬಾರು. ಬಹುಪಾಲು ವೇದಿಕೆಯ ಅಲಂಕಾರವನ್ನು ಬಲೂನ್ ಆಕ್ರಮಿಸಿರುತ್ತದೆ. ಚಿಕ್ಕ ಮಕ್ಕಳಿಂದ ಮುದುಕರವರೆಗೂ ಹೆಚ್ಚು ಆಪ್ತತೆಯನ್ನು ನೀಡುವ ಏಕೈಕ ಆಟಿಕೆ ಎಂದರೆ ಬಲೂನ್. ಬಲೂನ್‌ನ ಆಯಸ್ಸು ಕ್ಷಣಿಕವಾಗಿದ್ದರೂ ಎಲ್ಲರೂ ಅದನ್ನೇ ಇಷ್ಟಪಡಲು ಅನೇಕ ಕಾರಣಗಳಿವೆ. ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಆಕರ್ಷಕ ಬಣ್ಣ, ಗಾತ್ರ, ಆಕಾರಗಳನ್ನು ಹೊಂದಿದೆ. ಅಂತೆಯೇ ಇದನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸುಲಭವಾಗಿ ಬಳಸಬಹುದು. ಅಲ್ಲದೆ ಇದರ ಸಾಗಣಿಕೆ ತುಂಬಾ ಸುಲಭ ಮತ್ತು ಹಗುರ. ಹಾಗಾಗಿ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಕೇವಲ ಬಲೂನ್ ಒಂದನ್ನು ಇಟ್ಟುಕೊಂಡು ವಿಜ್ಞಾನದ ಅನೇಕ ಪ್ರಯೋಗಗಳನ್ನು ಮಾಡಬಹುದು. ಹಾಗಾಗಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಇದು ತುಂಬಾ ಸಹಕಾರಿ ಸಾಧನವಾಗಿದೆ.

ಬಲೂನ್‌ಗಳು ಈಗ ವಿಶ್ವದಾದ್ಯಂತ ಪ್ರಮುಖ ಆಚರಣೆಗಳಲ್ಲಿ ಬಳಸುವ ವಸ್ತುಗಳಾಗಿದ್ದು, ಅದರ ಆವಿಷ್ಕಾರದ ಹಿಂದೆ ಕುತೂಹಲಕಾರಿ ಇತಿಹಾಸವನ್ನು ಹೊಂದಿದೆ. ಈ ಸಂಕ್ಷಿಪ್ತ ಪರಿಶೋಧನೆಯು ಬಲೂನ್‌ಗಳ ಐತಿಹಾಸಿಕ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಕುತೂಹಲದಿಂದ ಸಂತೋಷ ಮತ್ತು ಆಚರಣೆಯ ಸಂಕೇತವಾಗಿ ಬಳಸುವ ಬಲೂನ್ ಅನೇಕ ವೈಜ್ಞಾನಿಕ ರೂಪಾಂತರಗಳನ್ನು ಹೊಂದಿದೆ ಎಂಬುದು ಗಮನಾರ್ಹ.

ನಾವು ಇಂದು ಬಳಸುವ ರಬ್ಬರ್ ಬಲೂನ್‌ಗಳಿಗೆ 200 ವರ್ಷಗಳ ಸಂಭ್ರಮ. ಈಗಿನ ಪ್ರತೀ ಬಲೂನ್ ಕಂಪೆನಿಯು ರಬ್ಬರ್ ಬಲೂನ್ ತಯಾರಿಕೆಗೆ ಕಾರಣವಾದ ವ್ಯಕ್ತಿಗೆ ತನ್ನ ಪಾಲನ್ನು ನೀಡಬೇಕಿದೆ. ಇಂದು ನಾವು ಬಳಸುವ ಬಲೂನ್‌ಗಳು 1824ರಲ್ಲಿ ಮೈಕೆಲ್ ಫ್ಯಾರಡೆಯವರ ವೈಜ್ಞಾನಿಕ ಆವಿಷ್ಕಾರದಲ್ಲಿ ಬೇರುಗಳನ್ನು ಹೊಂದಿವೆ. ಪ್ರಸಿದ್ಧ ವಿಜ್ಞಾನಿಯಾಗಿದ್ದ ಮೈಕೆಲ್ ಫ್ಯಾರಡೆ ಅವರು 1824ರಲ್ಲಿ ಮೊದಲ ರಬ್ಬರ್ ಬಲೂನ್ ರಚಿಸಿದಾಗ, ಪಾರ್ಟಿಗಳು ಅಥವಾ ಆಚರಣೆಗಳ ಬಗ್ಗೆ ಯೋಚಿಸಿರಲಿಲ್ಲ. ಅವರ ಗುರಿ ಹೆಚ್ಚು ವೈಜ್ಞಾನಿಕವಾಗಿತ್ತು. ಲಂಡನ್‌ನ ರಾಯಲ್ ಇನ್‌ಸ್ಟಿಟ್ಯೂಷನ್‌ನಲ್ಲಿ ಹೈಡ್ರೋಜನ್‌ನೊಂದಿಗೆ ಪ್ರಯೋಗಗಳಿಗಾಗಿ ಬಲೂನ್‌ಗಳನ್ನು ತಯಾರಿಸಿದರು. ಫ್ಯಾರಡೆಯ ಬಲೂನ್‌ಗಳು ಸರಳವಾಗಿದ್ದವು. ಎರಡು ರಬ್ಬರ್ ಹಾಳೆಗಳನ್ನು ಒಟ್ಟಿಗೆ ಒತ್ತಿ ಹೈಡ್ರೋಜನ್ ಅನಿಲದಿಂದ ತುಂಬಿ, ಅಂಚುಗಳಲ್ಲಿ ಮುಚ್ಚಲಾಗುತ್ತಿತ್ತು.

19ನೇ ಶತಮಾನದ ಅಂತ್ಯದವರೆಗೂ ಬಲೂನ್‌ಗಳನ್ನು ಕೇವಲ ಪ್ರಯೋಗಗಳಿಗಾಗಿ ಬಳಸಲಾಗುತ್ತಿತ್ತು. ಆದರೆ 19ನೇ ಶತಮಾನದ ಅಂತ್ಯದಲ್ಲಿ ಬಲೂನ್‌ಗಳು ಪಾರ್ಟಿ ಪರಿಕರಗಳಾಗಿ ವಿಕಸನಗೊಂಡವು. ಇದಕ್ಕಾಗಿ ಕೈಗಾರಿಕಾ ಕ್ರಾಂತಿಗೆ ಧನ್ಯವಾದಗಳನ್ನು ಹೇಳಲೇಬೇಕು. ಕೈಗಾರಿಕಾ ಕ್ರಾಂತಿಯಿಂದ ರಬ್ಬರ್ ಉತ್ಪಾದನೆಯು ಸುಧಾರಿಸಿದಾಗ ಪಾರ್ಟಿ ಬಲೂನ್‌ನ ಬಳಕೆ ಪ್ರಗತಿಗೆ ಬಂದಿತು. ಬಲೂನ್‌ಗಳನ್ನು ಹೆಚ್ಚು ಸ್ಥಿರವಾಗಿ ಮತ್ತು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಸುಲಭವಾಯಿತು. 1825ರಲ್ಲಿ, ಇಂಗ್ಲಿಷ್ ಸಂಶೋಧಕ ಮತ್ತು ರಬ್ಬರ್ ತಯಾರಕ ಥಾಮಸ್ ಹ್ಯಾನ್ಕಾಕ್, ಫ್ಯಾರಡೆಯ ಪರಿಕಲ್ಪನೆಯನ್ನು ತೆಗೆದುಕೊಂಡು ಪಾರ್ಟಿ ಬಲೂನ್ ತಯಾರಿಕೆಯನ್ನು ಶುರು ಮಾಡಿದರು. ಇದು ಜಗತ್ತಿನೆಲ್ಲೆಡೆ ಕ್ರಾಂತಿಯನ್ನುಂಟು ಮಾಡಿತು. ಇದರಿಂದ ಜಗತ್ತಿನೆಲ್ಲೆಡೆ ಜನರು ತಮ್ಮದೇ ಆದ ರಬ್ಬರ್ ಬಲೂನ್‌ಗಳನ್ನು ತಯಾರಿಸಲು ಅವಕಾಶ ಮಾಡಿಕೊಟ್ಟಿತು. ನಂತರದ ದಿನಗಳಲ್ಲಿ ಬಲೂನ್‌ಗಳು ನಿಧಾನವಾಗಿ ಮನರಂಜನಾ ಉದ್ದೇಶಗಳಿಗಾಗಿ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದವು.

ಮೈಕೆಲ್ ಫ್ಯಾರಡೆ ರಬ್ಬರ್ ಬಲೂನ್ ರಚಿಸುವುದಕ್ಕೂ ಮೊದಲೇ ಬಲೂನ್‌ನ ಬಳಕೆ ಇತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ರಬ್ಬರ್‌ನ ಬಳಕೆ ಬರುವುದಕ್ಕೂ ಮೊದಲು ಪ್ರಾಣಿಗಳ ಮೂತ್ರಕೋಶಗಳಿಂದ ಬಲೂನುಗಳನ್ನು ತಯಾರಿಸಲಾಗುತ್ತಿತ್ತು. ಗಾಳಿಯ ತೂಕವನ್ನು ಅಳೆಯುವ ಪ್ರಯೋಗದಲ್ಲಿ ಗೆಲಿಲಿಯೋ ಹಂದಿಯ ಮೂತ್ರಕೋಶವನ್ನು ಬಳಸಿದ್ದನ್ನು ಗಮನಿಸಬಹುದು. ನಂತರ ಕೆಲವು ಪ್ರಾಣಿಗಳ ಕರುಳನ್ನು ಬಲೂನ್‌ನ ರೀತಿಯಲ್ಲಿ ಬಳಸುತ್ತಿದ್ದರು ಎಂಬುದು ತಿಳಿದುಬರುತ್ತದೆ. ಹೀಗೆ ವಿವಿಧ ರೂಪಾಂತರಗಳ ಮೂಲಕ ಬಲೂನ್ ಇಂದು ವೈವಿಧ್ಯಮಯ ರೂಪ ಮತ್ತು ಬಳಕೆಗಳೊಂದಿಗೆ ಹೆಚ್ಚು ಜನಜನಿತವಾಗಿದೆ.

1783ರಲ್ಲಿ, ಮಾಂಟ್ಗೋಲ್ಫಿಯರ್ ಸಹೋದರರು ಆರೋಹಣ ಮಾಡಿದ ಬಿಸಿ ಗಾಳಿಯ ಬಲೂನ್‌ನೊಂದಿಗೆ ವಿಶ್ವವು ವಾಯುಯಾನ ಇತಿಹಾಸದ ಜನನಕ್ಕೆ ಸಾಕ್ಷಿಯಾಯಿತು. ಜಾಕ್ವೆಸ್ ಚಾರ್ಲ್ಸ್ ಮತ್ತು ರಾಬರ್ಟ್ ಸಹೋದರರು ಮೊದಲ ಹೈಡ್ರೋಜನ್ ಬಲೂನ್ ಅನ್ನು ಆಗಸ್ಟ್ 26-27, 1783 ರಂದು ಈಗಿನ ಐಫೆಲ್ ಟವರ್‌ನ ಸ್ಥಳವಾಗಿರುವ ಪ್ಯಾರಿಸ್‌ನ ಮಿಲಿಟರಿ ಕವಾಯತು ಮೈದಾನವಾದ ಚಾಂಪ್ ಡಿ ಮಾರ್ಸ್‌ನಲ್ಲಿ ಹಾರಿಸಿದರು. ಮಾನವ ರಹಿತ ಬಲೂನ್ 45 ನಿಮಿಷಗಳ ಕಾಲ ಉತ್ತರಾಭಿಮುಖವಾಗಿ ಹಾರಿ ಗೊನೆಸ್ಸೆ ಗ್ರಾಮದಲ್ಲಿ ಇಳಿಯಿತು. ಬಲೂನ್ ನೋಡಿ ಭಯಗೊಂಡ ಅಲ್ಲಿನ ಗ್ರಾಮಸ್ಥರು ಅದನ್ನು ನಾಶಪಡಿಸಿದರು. ಇದು ಕೇವಲ ಹಾರಾಟವಾಗಿರಲಿಲ್ಲ. ವಾಯುಯಾನದಲ್ಲಿನ ಒಂದು ಮಾದರಿ ಬದಲಾವಣೆಯಾಗಿದ್ದು, ಬಿಸಿ ಗಾಳಿಗಿಂತ ಹೆಚ್ಚು ಸಮರ್ಥನೀಯ ವಿಧಾನವನ್ನು ಬಳಸಿಕೊಂಡು ಗಾಳಿಗಿಂತ ಹಗುರವಾದ ಪ್ರಯಾಣದ ಕಾರ್ಯಸಾಧ್ಯತೆಯನ್ನು ಸಾಬೀತುಪಡಿಸಿತ್ತು.

1914ರಲ್ಲಿ, ಚಿಂತನಶೀಲ ಅಗ್ನಿಶಾಮಕ ಸಿಬ್ಬಂದಿ ಅಪಾಯದ ಕಾರಣ ನೀಡಿ ಆಟಿಕೆ ಬಲೂನ್‌ಗಳಲ್ಲಿ ಹೈಡ್ರೋಜನ್ ಬಳಕೆಯನ್ನು ನಿಷೇಧಿಸಲು ಪ್ರಯತ್ನಿಸುತ್ತಿದ್ದರು. ಅದರ ಭಾಗವಾಗಿ 1922ರಲ್ಲಿ ಹೈಡ್ರೋಜನ್ ಬಲೂನ್ ಬಳಕೆಗೆ ಕಡಿವಾಣ ಹಾಕಲಾಯಿತು. ನ್ಯೂಯಾರ್ಕ್ ನಗರವು ಅಧಿಕೃತ ಸುಗ್ರೀವಾಜ್ಞೆಯ ಮೂಲಕ ಹೈಡ್ರೋಜನ್ ತುಂಬಿದ ಆಟಿಕೆ ಬಲೂನ್‌ಗಳನ್ನು ನಿಷೇಧಿಸಿತು. ಇದರಿಂದ ಬಲೂನ್‌ಗಳಲ್ಲಿ ಹೈಡ್ರೋಜನ್‌ಗೆ ಬದಲಾಗಿ ಹೀಲಿಯಂ ಬಳಸುವ ಪರಿಪಾಠ ಬೆಳೆಯಿತು. ಹೀಗೆ ಹೀಲಿಯಂ ಬಲೂನ್‌ಗಳು ಎಲ್ಲೆಡೆ ರಾರಾಜಿಸಲು ಪ್ರಾರಂಭಿಸಿದವು. ಇಂದು ಬಹುತೇಕ ಕಡೆಗಳಲ್ಲಿ ಬಳಸುವ ಜಾಹೀರಾತು ಬಲೂನ್‌ಗಳಲ್ಲಿ ಹೀಲಿಯಂ ತುಂಬಲಾಗಿರುತ್ತದೆ.

ಫ್ಯಾರಡೆಯ ರಬ್ಬರ್ ಬಲೂನ್ ಪರಿಕಲ್ಪನೆಗೆ ಹ್ಯಾನ್ಕಾಕ್ ವರ್ಣಮಯ ಆಟಿಕೆಯ ರೂಪ ನೀಡಿದರು. 1931ರಲ್ಲಿ, ಟಿಲೋಟ್ಸನ್ ರಬ್ಬರ್ ಕಂಪನಿಯು ಬಲೂನ್ ತಂತ್ರಜ್ಞಾನದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿತು. ರಬ್ಬರ್ ಮರದ ರಸದಿಂದ ಮಾಡಿದ ಮೊದಲ ಆಧುನಿಕ ಲ್ಯಾಟೆಕ್ಸ್ ಬಲೂನನ್ನು ಅವರು ರಚಿಸಿದರು. ಇಂದು ಬಳಸಲಾಗುವ ನೈಸರ್ಗಿಕ ರಬ್ಬರ್ ಲ್ಯಾಟೆಕ್ಸ್ ಮಲೇಶ್ಯದಲ್ಲಿ ಬೆಳೆಯುವ ರಬ್ಬರ್ ಮರ ಹೆವಿಯಾ ಬ್ರೆಸಿಲಿಯೆನ್ಸಿಸ್‌ನ ರಸದಿಂದ ಬಂದಿದೆ. ಮರದಿಂದ ತೆಗೆದ ರಸವನ್ನು ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ.

1930ರ ದಶಕದ ನಂತರ ಬಲೂನ್‌ಗಳು ನಿಜವಾಗಿಯೂ ಟೇಕ್‌ಆಫ್ ಆಗಲು ಪ್ರಾರಂಭಿಸಿದವು. ಪಾರ್ಟಿಗಳು ಮತ್ತು ಆಚರಣೆಗಳಲ್ಲಿ ಜನಪ್ರಿಯ ಅಂಶವಾಗಿ ಎಲ್ಲೆಡೆ ಜನಪ್ರಿಯವಾದವು. ಈ ಜನಪ್ರಿಯತೆಯ ಏರಿಕೆಯು 1931ರಲ್ಲಿ ನೀಲ್ ಟಿಲೋಟ್ಸನ್ ಪರಿಚಯಿಸಿದ ಲ್ಯಾಟೆಕ್ಸ್ ಬಲೂನ್‌ಗಳ ಸಾಮೂಹಿಕ ಉತ್ಪಾದನೆಯೊಂದಿಗೆ ಏರಿಕೆ ಕಂಡಿತು. ಈ ಬಲೂನ್‌ಗಳು ಹೆಚ್ಚು ಬಾಳಿಕೆ ಉಳ್ಳವುಗಳಾಗಿದ್ದವು ಮತ್ತು ಎಲ್ಲೆಡೆ ಹೊಂದಿಕೊಳ್ಳುವಂತಹದ್ದಾಗಿದ್ದವು. ಉತ್ಪಾದನಾ ತಂತ್ರಗಳು ಸುಧಾರಿಸಿದಂತೆ, ವ್ಯಾಪಕವಾದ ಬಣ್ಣಗಳಲ್ಲಿ ಬಲೂನ್‌ಗಳು ಬರಲು ಪ್ರಾರಂಭಿಸಿದವು. ಈ ವೈವಿಧ್ಯತೆಯು ಜನರು ತಮ್ಮ ಪಕ್ಷಗಳ ಥೀಮ್‌ಗಳಿಗೆ ಬಲೂನ್‌ಗಳನ್ನು ಹೊಂದಿಸಲು ಅವಕಾಶ ಮಾಡಿಕೊಟ್ಟಿತು. ಅದು ಸರಳವಾದ ಹುಟ್ಟುಹಬ್ಬ, ಮದುವೆ ಅಥವಾ ರಾಷ್ಟ್ರೀಯ ರಜಾದಿನದ ಆಚರಣೆಗಳಿಗೆ ಬಳಕೆಯಾಗತೊಡಗಿದವು. ಬಲೂನ್‌ಗಳು ಗಾತ್ರ ಮತ್ತು ಆಕಾರಗಳಲ್ಲೂ ಸಹ ವೈವಿಧ್ಯಮಯವಾಗಿವೆ. ವಿವಿಧ ಪ್ರಾಣಿ-ಪಕ್ಷಿಗಳು, ಚಿಟ್ಟೆ-ಕೀಟಗಳ ರೂಪಗಳಲ್ಲಿ ಬಂದ ಬಲೂನ್‌ಗಳು ಮನಸೂರೆಗೊಂಡವು.

ಬಲೂನ್‌ಗಳು ಹೆಚ್ಚು ಜನಪ್ರಿಯವಾಗಲು ಮತ್ತೊಂದು ಗಮನಾರ್ಹ ಕಾರಣವೆಂದರೆ ಪರಿಸರ ಸ್ನೇಹಿಯಾಗಿರುವುದು. ಜನರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿರುವುದರಿಂದ ಜೈವಿಕ ವಿಘಟನೀಯ ಬಲೂನ್‌ಗಳಿಗೆ ಬೇಡಿಕೆ ಹೆಚ್ಚಿದೆ. ಬಲೂನ್‌ಗಳು ಸಾಮಾನ್ಯವಾಗಿ ನೈಸರ್ಗಿಕ ಲ್ಯಾಟೆಕ್ಸ್‌ನಿಂದ ತಯಾರಿಸಲಾಗುತ್ತದೆ. ಇವು ಬೇಗನೇ ವಿಘಟನೆ ಹೊಂದಿ ಮಣ್ಣಿನಲ್ಲಿ ಕೊಳೆಯುತ್ತವೆ. ಇವುಗಳಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ.

ಬಲೂನ್‌ಗಳ ಬಳಕೆಯು ಕೇವಲ ಆಟಿಕೆ, ಪಾರ್ಟಿ ಅಥವಾ ಮನೋರಂಜನೆಗಳಿಗೆ ಸೀಮಿತವಾಗಿ ಉಳಿದಿಲ್ಲ. ಅನೇಕ ದೇಶಗಳಲ್ಲಿ ಯುದ್ಧಗಳಲ್ಲಿ ನೌಕೆಯ ರೀತಿಯಲ್ಲಿ ಬಲೂನ್ ಬಳಕೆಯಾಗಿರುವುದನ್ನು ಗಮನಿಸಬಹುದು. 1794ರಲ್ಲಿ ಫ್ರೆಂಚ್‌ನ ಫ್ಲ್ಯೂರಸ್ ಕದನದಲ್ಲಿ ಬಲೂನ್‌ನ್ನು ಮೊದಲ ಬಾರಿಗೆ ಮಿಲಿಟರಿಯಲ್ಲಿ ಬಳಸಲಾಗಿತ್ತು. ಅದಕ್ಕಾಗಿ ಅವರು ವಿಶೇಷ ಸೈನ್ಯ ಪಡೆಗಳನ್ನು ರಚಿಸಿದ್ದರು. 1861ರಲ್ಲಿ ಅಮೆರಿಕದ ಅಂತರ್ಯುದ್ಧದ ಸಮಯದಲ್ಲಿ ಯೂನಿಯನ್ ಆರ್ಮಿಯು ಬಲೂನ್‌ಗಳನ್ನು ಬಳಸಿತ್ತು. ಹೀಗೆ ಫ್ರೆಂಚ್, ಅಮೆರಿಕ, ರಶ್ಯ ಸೇರಿದಂತೆ ಅನೇಕ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಯಲ್ಲಿ ಬಲೂನ್‌ಗಳನ್ನು ಬಳಸಿರುವುದು ಗಮನಾರ್ಹ.

ಬೆಚುವಾನಾಲ್ಯಾಂಡ್ ದಂಡಯಾತ್ರೆ (1885), ಸುಡಾನ್ ದಂಡಯಾತ್ರೆ (1885) ಮತ್ತು ಆಂಗ್ಲೋ ಬೋಯರ್ ಯುದ್ಧದ ಸಮಯದಲ್ಲಿ (1899-1802) ವಿಚಕ್ಷಣ ಮತ್ತು ವೀಕ್ಷಣಾ ಉದ್ದೇಶಗಳಿಗಾಗಿ ರಾಯಲ್ ಇಂಜಿನಿಯರ್‌ಗಳು ಬಲೂನ್‌ಗಳನ್ನು ಬಳಸಿದ್ದರು. ಹೈಡ್ರೋಜನ್ ತುಂಬಿದ ಬಲೂನ್‌ಗಳನ್ನು ಮೊದಲ ಜಾಗತಿಕ ಯುದ್ಧದ (1914-1918) ಸಮಯದಲ್ಲಿ ಶತ್ರು ಸೈನ್ಯದ ಚಲನೆಯನ್ನು ಪತ್ತೆಹಚ್ಚಲು ಮತ್ತು ಫಿರಂಗಿ ಗುಂಡಿನ ದಾಳಿಗೆ ಬಳಸಲಾಗುತ್ತಿತ್ತು. ಹೀಗೆ ಯುದ್ಧದಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಬಲೂನ್ ಬಳಕೆಯಾಗುತ್ತಿದ್ದವು.

ಇತ್ತೀಚಿನ ವರ್ಷಗಳಲ್ಲಿ ಗ್ರಹಗಳ ಅನ್ವೇಷಣೆಗೂ ಬಲೂನ್‌ಗಳು ಬಳಕೆಯಾಗುತ್ತಿರುವುದು ವಿಶಿಷ್ಟ ಎನಿಸಿದೆ. ಗ್ರಹಗಳ ಅನ್ವೇಷಣೆಗಾಗಿ ಬಲೂನ್‌ಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ. ಅವುಗಳನ್ನು ತೂಕದಲ್ಲಿ ಹೆಚ್ಚು-ಕಡಿಮೆ ಮಾಡಬಹುದು ಮತ್ತು ತುಲನಾತ್ಮಕವಾಗಿ ಅಗ್ಗವಾಗಿವೆ. ಬಲೂನ್‌ಗಳು ಹೆಚ್ಚಿನ ಭೂಪ್ರದೇಶವನ್ನು ಬಳಸಬಹುದಾದ್ದರಿಂದ ಕೃತಕ ಉಪಗ್ರಹಗಳು ನೋಡುವ ಕಕ್ಷಾ ನೋಟದಲ್ಲಿ ಭೂಪ್ರದೇಶದ ವಿಶಾಲ ವ್ಯಾಪ್ತಿಯನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ ಅಂತರಿಕ್ಷ ಪರಿಶೋಧನಾ ಕಾರ್ಯಗಳಲ್ಲಿ ದಿಕ್ಕಿನ ನಿಯಂತ್ರಣದ ಸಾಪೇಕ್ಷ ಕೊರತೆಯು ಅಡಚಣೆಯಾಗಿರುವುದಿಲ್ಲ. ಏಕೆಂದರೆ ಅವುಗಳನ್ನು ನಿರ್ದಿಷ್ಟ ಸ್ಥಳಕ್ಕೆ ನಿರ್ದೇಶಿಸುವ ಅಗತ್ಯವಿಲ್ಲ. ಜೂನ್ 1985ರಲ್ಲಿ, ರಶ್ಯದ ಬಾಹ್ಯಾಕಾಶ ಶೋಧಕಗಳಾದ ವೆಗಾ-1 ಮತ್ತು ವೆಗಾ-2 ಪ್ರತಿಯೊಂದೂ ಏರೋಬೋಟ್ (ಬಲೂನ್ ತರಹದ ರೋಬೋಟ್) ಅನ್ನು ಶುಕ್ರದ ವಾತಾವರಣಕ್ಕೆ ಬಿಡುಗಡೆ ಮಾಡಿತು. ಮೊದಲ ಬಲೂನ್‌ನಿಂದ ಸಿಗ್ನಲ್‌ಗಳು ಕೇವಲ 56 ನಿಮಿಷಗಳವರೆಗೆ ಸ್ವೀಕರಿಸಲ್ಪಟ್ಟವು, ಎರಡನೆಯದು ಅದರ ಬ್ಯಾಟರಿಗಳು ಖಾಲಿಯಾಗುವವರೆಗೆ ಅಂದರೆ ಸುಮಾರು ಎರಡು ಭೂಮಿಯ ದಿನಗಳವರೆಗೆ ಸಿಗ್ನಲ್‌ಗಳು ರವಾನೆಯಾದವು.

ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ಬಲೂನ್ ಬಳಕೆಯಾಗುತ್ತಿವೆ. ಆಂಜಿಯೋಪ್ಲ್ಯಾಸ್ಟಿ ಸೇರಿದಂತೆ ಇನ್ನಿತರ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಬಲೂನ್‌ಗಳನ್ನು ಬಳಸಲಾಗುತ್ತದೆ. ಇಂತಹ ಅಪರಿಮಿತ ಬಳಕೆ ಹೊಂದಿದ ಬಲೂನ್ ಮಾನವರಿಗೆ ಅದ್ಭುತವಾದ ಜೀವನಪಾಠ ಕಲಿಸುತ್ತದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ, ಎಷ್ಟೇ ಎತ್ತರಕ್ಕೆ ಹೋದರೂ ಯಾವುದೇ ಕ್ಷಣದಲ್ಲೂ ಅವನ ಜೀವನ ಅಸ್ತವ್ಯಸ್ತಗೊಳ್ಳಬಹುದು ಎಂಬ ಕಟುಸತ್ಯವನ್ನು ತಿಳಿಸುತ್ತವೆ. ಇದು ವಾಸ್ತವ ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News