ಮಾನವ ಕೃಷಿಗೆ ಇರುವೆಗಳಿಂದ ಪಾಠ!

66 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹವು ಡೈನೋಸಾರ್ಗಳು ಸೇರಿದಂತೆ ಅನೇಕ ಜೀವಿಗಳ ನಾಶಕ್ಕೆ ಕಾರಣವಾಯಿತು. ಇದರಿಂದ ಬದುಕುಳಿದಿದ್ದ ಇರುವೆಗಳಂತಹ ಕೆಲವು ಜೀವಿಗಳು ಆಹಾರದ ಸಮಸ್ಯೆಯನ್ನು ಎದುರಿಸಬೇಕಾಯಿತು. ಆಗ ಇರುವೆಗಳು ಅನಿವಾರ್ಯವಾಗಿ ತಮ್ಮ ಆಹಾರ ವನ್ನು ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಶಿಲೀಂಧ್ರಗಳನ್ನು ಬೆಳೆಸುವ ಪ್ರಯತ್ನದಲ್ಲಿ ಸಫಲವಾದವು. ಇದು ಕಾಲಾನಂತರದಲ್ಲಿ ಮಾನವನ ಕೃಷಿಗೆ ಪ್ರೇರಣೆಯಾಗಿರಬಹುದೆಂಬುದು ಆ್ಯಂಡ್ರೆ ರೊಡ್ರಿಗಸ್ ಅವರ ಅಭಿಮತ.

Update: 2024-10-27 07:59 GMT

ಮೊನ್ನೆ ಮಧ್ಯಾಹ್ನ ಕೈ ಮತ್ತು ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸುತ್ತಾ ಕುಳಿತಿದ್ದೆ. ಕತ್ತರಿಸುವುದು ಮುಗಿಯುವ ವೇಳೆ ಅಲ್ಲಿಗೆ ಬಂದ ನನ್ನ ತಾಯಿ ಅವುಗಳನ್ನು ಇರುವೆ ಗೂಡಿನಲ್ಲಿ ಹಾಕು ಎಂದಳು. ಯಾಕೆ ಎಂದು ಕೇಳಿದ್ದಕ್ಕೆ ಇರುವೆಗಳು ಉಗುರುಗಳ ತುಂಡಿನಿಂದ ಆಹಾರವನ್ನು ಬೆಳೆದುಕೊಳ್ಳುತ್ತವೆ ಎಂದಳು. ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಕೇವಲ ಐದನೇ ತರಗತಿ ಓದಿದ್ದ ತಾಯಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ನಂತರ ಅದರ ಹಿಂದಿನ ತಾತ್ಪರ್ಯವನ್ನು ಅರಿತಾಗ ನಿಜಕ್ಕೂ ನಿಬ್ಬೆರಗಾದೆ.

ಕಾಡಿನಲ್ಲಿ ಒಬ್ಬಂಟಿಯಾಗಿ ಅಂಡಲೆಯುತ್ತಿದ್ದ ಮನುಷ್ಯ ತನ್ನ ಪರಿಸರದಲ್ಲಿನ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳಿಂದ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಅಲೆಮಾರಿಯಾಗಿದ್ದ ಮಾನವ ಪ್ರಾಕೃತಿಕ ವಿಕೋಪಗಳು ಹಾಗೂ ಕ್ಷಾಮದಿಂದ ತಪ್ಪಿಸಿಕೊಳ್ಳಲು ನೀರಿನ ಆಶ್ರಯವಿರುವ ಸ್ಥಳಗಳನ್ನು ಹುಡುಕಿ ಒಂದೆಡೆ ನೆಲೆ ನಿಂತ. ಒಂದೆಡೆ ನೆಲೆ ನಿಂತ ಮನುಷ್ಯನಿಗೆ ನಿರಂತರವಾಗಿ ಆಹಾರದ ಲಭ್ಯತೆ ಕಡಿಮೆಯಾಯಿತು. ಇದನ್ನು ಸರಿದೂಗಿಸಲು ಆಹಾರದ ಸಸ್ಯಗಳನ್ನು ಬೆಳೆಯಲು ಪ್ರಾರಂಭಿಸಿದ. ಇದೇ ಮಾನವನ ಮೊದಲ ಕೃಷಿಗೆ ಕಾರಣವಾಯಿತು. ಆನಂತರ ಕೃಷಿಗಾಗಿ ಪ್ರಾಣಿಗಳನ್ನು ಸಾಕತೊಡಗಿದ. ಹೀಗೆ ಶುರುವಾದ ಕೃಷಿಯು ಸುಮಾರು 10,000 ವರ್ಷಗಳ ಹಿಂದೆಯೇ ಪ್ರಾರಂಭವಾಗಿರಬಹುದೆಂದು ಅಂದಾಜಿಸುತ್ತೇವೆ. ಆದರೆ ಇದಕ್ಕೂ ಸಾಕಷ್ಟು ಮೊದಲೇ ಭೂಮಿಯ ಮೇಲೆ ಕೃಷಿಯು ಪ್ರಾರಂಭವಾಗಿತ್ತು ಎಂಬುದನ್ನು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

ಕೃಷಿಯ ಅಭಿವೃದ್ಧಿಯನ್ನು ಸಾಮಾನ್ಯವಾಗಿ ಮಾನವ ನಾಗರಿಕತೆಯ ಪ್ರಾರಂಭವೆಂದು ಪರಿಗಣಿಸಲಾಗುತ್ತದೆ. ಮಾನವ ನಾಗರಿಕತೆಗಳು ಪ್ರಾರಂಭವಾಗುವುದಕ್ಕಿಂತ ಮೊದಲೇ ಕೃಷಿಯು ಇತ್ತೆಂಬುದಕ್ಕೆ ಕೆಲ ನಿದರ್ಶನಗಳಿವೆ. ಭೂಮಿಯ ಮೇಲಿನ ಮೊದಲ ಕೃಷಿಕರೆಂದರೆ ಇರುವೆಗಳು. ಹೌದು ಇಡೀ ಜಗತ್ತಿಗೆ ಕೃಷಿಯ ಮಾದರಿಯನ್ನು ಪರಿಚಯಿಸಿದ್ದು ಇರುವೆಗಳು. ಇರುವೆಗಳು ತಮ್ಮ ಆಹಾರಕ್ಕಾಗಿ ಬೆಳೆಸಿದ ಶಿಲೀಂಧ್ರಗಳು ಜಗತ್ತಿನ ಮೊದಲ ಬೆಳೆಗಳು.

ರಿಯೊದ ಸಾವೊ ಪಾಲೊ ಸ್ಟೇಟ್ ಯೂನಿವರ್ಸಿಟಿಯ ಇನ್ಸ್ಟಿಟ್ಯೂಟ್ ಆಫ್ ಬಯೋಸೈನ್ಸ್ನ ಪ್ರೊಫೆಸರ್ ಆ್ಯಂಡ್ರೆ ರೊಡ್ರಿಗಸ್ ಮತ್ತು ತಂಡದವರು ನಡೆಸಿದ ಸಂಶೋಧನೆಯು ಕೃಷಿಯ ಕುರಿತ ಹೊಸ ಒಳನೋಟಗಳನ್ನು ನೀಡಿದೆ. ಡೈನೋಸಾರ್ಗಳನ್ನು ಕೊನೆಗೊಳಿಸಿದ ಉಲ್ಕೆಯ ಪ್ರಭಾವವು ಇರುವೆಗಳು ಕೃಷಿ ಕಾಯಕದಲ್ಲಿ ತೊಡಗಲು ಕಾರಣವಾಯಿತೆಂಬುದು ಸಂಶೋಧನೆಯ ತಿರುಳು. ಇರುವೆ ಮತ್ತು ಶಿಲೀಂಧ್ರಗಳ ನಡುವಿನ ಪರಸ್ಪರ ಸಂಬಂಧವನ್ನು ಹುಟ್ಟುಹಾಕಲು ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಶೋಧನೆ ಎತ್ತಿ ತೋರಿಸುತ್ತದೆ. ಇದು ಮಾನವರು ಕೃಷಿ ಮಾಡುವ ಮೊದಲೇ ಕೃಷಿಯ ಆರಂಭಿಕ ರೂಪವನ್ನು ಗುರುತಿಸುತ್ತದೆ.

66 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹವು ಡೈನೋಸಾರ್ಗಳು ಸೇರಿದಂತೆ ಅನೇಕ ಜೀವಿಗಳ ನಾಶಕ್ಕೆ ಕಾರಣವಾಯಿತು. ಇದರಿಂದ ಬದುಕುಳಿದಿದ್ದ ಇರುವೆಗಳಂತಹ ಕೆಲವು ಜೀವಿಗಳು ಆಹಾರದ ಸಮಸ್ಯೆಯನ್ನು ಎದುರಿಸಬೇಕಾಯಿತು. ಆಗ ಇರುವೆಗಳು ಅನಿವಾರ್ಯವಾಗಿ ತಮ್ಮ ಆಹಾರವನ್ನು ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಶಿಲೀಂಧ್ರಗಳನ್ನು ಬೆಳೆಸುವ ಪ್ರಯತ್ನದಲ್ಲಿ ಸಫಲವಾದವು. ಇದು ಕಾಲಾನಂತರದಲ್ಲಿ ಮಾನವನ ಕೃಷಿಗೆ ಪ್ರೇರಣೆಯಾಗಿರಬಹುದೆಂಬುದು ಆ್ಯಂಡ್ರೆ ರೊಡ್ರಿಗಸ್ ಅವರ ಅಭಿಮತ.

ಡೈನೋಸಾರ್ಗಳನ್ನು ಕೊಂದ ಉಲ್ಕಾಪಾತದ ಪ್ರಭಾವದಿಂದ ಉಂಟಾದ ಕಡಿಮೆ ಬೆಳಕಿನ ಪರಿಸರವು ಸಾವಯವ ಪದಾರ್ಥಗಳನ್ನು ತಿನ್ನುವ ಶಿಲೀಂಧ್ರಗಳ ಹರಡುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಿತು. ಇದು ಹಿಂಡು ಹಿಂಡಾಗಿ ಸಾಯುತ್ತಿದ್ದ ಕೆಲವು ಜೀವಿಗಳ ಉಳಿವಿಗೆ ಕಾರಣವಾಯಿತು. ಇರುವೆಗಳ ಶಿಲೀಂಧ್ರ ಕೃಷಿ ಮೂಲವನ್ನು ತುಲನಾತ್ಮಕವಾಗಿ ಚೆನ್ನಾಗಿ ಅರ್ಥಮಾಡಿಕೊಂಡ ತಂಡವು ವಿವಿಧ ಪ್ರದೇಶದಲ್ಲಿ ಇರುವೆಗಳಿಂದ ಫಂಗಸ್ ಬೆಳೆಸುವ ಪ್ರಯತ್ನವನ್ನು ಕೈಗೊಂಡಿತು.

ಇರುವೆಗಳಿಂದ ಬೆಳೆಸಲ್ಪಟ್ಟ ಮತ್ತು ಅಮೆರಿಕದ ವಿವಿಧ ಭಾಗಗಳಿಂದ ಸಂಗ್ರಹಿಸಿದ 475 ಶಿಲೀಂಧ್ರಗಳ ಜಾತಿಗಳ ಜೀನೋಮ್ಗಳ ಅಲ್ಟ್ರಾಕನ್ಸರ್ವ್ಡ್ ಎಲಿಮೆಂಟ್ಸ್ ಎಂದು ಕರೆಯಲ್ಪಡುವ ವಿಶ್ಲೇಷಣೆಯನ್ನು ಮಾಡುವ ಮೂಲಕ ಈ ಕಾಲಾವಧಿಯನ್ನು ನಿರ್ಧರಿಸಲು ಸಾಧ್ಯವಾಯಿತು ಎನ್ನುತ್ತಾರೆ ಸಂಶೋಧಕರು. ಅಲ್ಟ್ರಾಕನ್ಸರ್ವ್ಡ್ ಎಲಿಮೆಂಟ್ಸ್ಗಳು ಒಂದು ಗುಂಪಿನ ವಿಕಾಸದ ಉದ್ದಕ್ಕೂ ಜೀನೋಮ್ನಲ್ಲಿ ಉಳಿ ಯುವ ಪ್ರದೇಶಗಳಾಗಿವೆ. ಇವುಗಳು ಅವುಗಳ ಪ್ರಾಚೀನ ಪೂರ್ವಜರಿಂದ ಬಂದವುಗಳಾಗಿವೆ.

ಈ ವಿಧಾನವನ್ನು ಬಳಸಿಕೊಂಡ ಸಂಶೋಧಕರು, 66 ದಶಲಕ್ಷ ವರ್ಷಗಳ ಹಿಂದೆ ಇಂದಿನ ಲೀಫ್ಕಟರ್ ಇರುವೆಗಳ ಅದೇ ಪೂರ್ವಜರಿಂದ ಎರಡು ವಿಭಿನ್ನ ಶಿಲೀಂಧ್ರಗಳನ್ನು ಬೆಳೆಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಇಂದಿನ ಕೃಷಿಯು 66 ದಶಲಕ್ಷ ವರ್ಷಗಳಿಂದ ನಡೆದುಬಂದಿದೆ ಎಂಬುದನ್ನು ತೀರ್ಮಾನಿಸಿದ್ದಾರೆ.

ಇರುವೆಗಳು ಈಗಾಗಲೇ 60 ದಶಲಕ್ಷ ವರ್ಷಗಳಿಂದ ದಕ್ಷಿಣ ಅಮೆರಿಕದ ಮಳೆಕಾಡುಗಳಲ್ಲಿ ಶಿಲೀಂಧ್ರಗಳನ್ನು ಬೆಳೆಸುತ್ತಿವೆ. ಹವಾಮಾನ ವೈಪ್ಯರಿತ್ಯ ಹಾಗೂ ಇನ್ನಿತರ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಈ ಕೃಷಿಯು ಕ್ಷೀಣಿಸುತ್ತಿದೆ. ಇದನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ಪ್ರಸಕ್ತ ಸಂಶೋಧಕರ ತಂಡವು ಹೊಸ ಹೆಜ್ಜೆಗಳನ್ನು ಇರಿಸಿತ್ತು. ಅದರ ಭಾಗವಾಗಿ ಇರುವೆಗಳು ಬಳಸುತ್ತಿದ್ದ ಕೃಷಿ ತಂತ್ರವನ್ನೇ ಬಳಸಿ ಶಿಲೀಂಧ್ರಗಳನ್ನು ಬೆಳೆಸಿತು. ಅದು ಯಶಸ್ವಿಯಾಯಿತು. ಅಷ್ಟಕ್ಕೆ ತೃಪ್ತಿಪಡದ ತಂಡವು ಅಮೆರಿಕದ ಬೇರೆ ಬೇರೆ ಸ್ಥಳಗಳಲ್ಲಿ ಈ ಪ್ರಯೋಗಗಳನ್ನು ಮಾಡಿ ಪ್ರಸಕ್ತ ಸಂಶೋಧನೆಯನ್ನು ಮುಂದುವರಿಸಿದೆ.

ಶಿಲೀಂಧ್ರಗಳು ಕಾಲದಿಂದ ಕಾಲಕ್ಕೆ ರೂಪಾಂತರಗೊಳ್ಳುತ್ತಲೇ ಇವೆ. ಅಂತೆಯೇ ಇರುವೆ ವಂಶಾವಳಿಯು ಸಹ ಗಮನಾರ್ಹವಾಗಿ ರೂಪಗೊಂಡಿರುವುದನ್ನು ಗಮನಿಸಬಹುದು. ಬೇಟೆಯಾಡುವಿಕೆ ಮತ್ತು ಆಹಾರ ಸಂಗ್ರಹಣೆ ಕಾಲದಿಂದ ಕಾಲಕ್ಕೆ ಬದಲಾಗಿದೆ. ಇದು ಇರುವೆಗಳಿಗೂ ಅನ್ವಯಿಸುತ್ತದೆ. ಇರುವೆಗಳು ಆಹಾರ ಸಂಗ್ರಹಣೆಯಿಂದ ಕೃಷಿಗೆ ಸ್ಥಳಾಂತರಗೊಂಡಾಗ ಅವುಗಳ ಜೀನೋಮ್ಗಳು ಸ್ಥಳಾಂತರಗೊಂಡವು. ಅದೇ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ಮೈಕಾಲಜಿಸ್ಟ್ಗಳು ಇರುವೆಗಳು ಶಿಲೀಂಧ್ರಗಳನ್ನು ಬೆಳೆಸಿದ ಮಾದರಿಯ ಬಗ್ಗೆ ಸಂಶೋಧನೆಯನ್ನು ಮುಂದುವರಿಸಿದರು.

ಇರುವೆ ಕೃಷಿಯು ನಾವು ನಿರೀಕ್ಷಿಸಿದಂತೆ ಕೆಲವು ಸ್ಪಷ್ಟ ವಿಧಾನಗಳಲ್ಲಿ ಮಾನವ ಪ್ರಯತ್ನಗಳಿಂದ ಭಿನ್ನವಾಗಿದೆ. ಬಹುತೇಕ ಇಂದಿನ ಮಾನವ ಕೃಷಿಯು ರಸಗೊಬ್ಬರ ಹಾಗೂ ಯಂತ್ರಗಳನ್ನು ಅವಲಂಬಿಸಿದೆ. ಆದರೆ ಇರುವೆ ಕೃಷಿಯು ಸಂಪೂರ್ಣವಾಗಿ ಸಾವಯವ ಕೃಷಿ ಆಗಿತ್ತೆಂಬುದು ಗಮನಾರ್ಹ. ಗೆದ್ದಲು, ಜೀರುಂಡೆಗಳು ಮತ್ತು ಜೇನುನೊಣಗಳನ್ನು ಒಳಗೊಂಡಂತೆ, ಪ್ರಕೃತಿಯ ಕೆಲವು ಇತರ ಜೀವಿಗಳು ತಮ್ಮ ಆಹಾರಕ್ಕಾಗಿ ಯಾವ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿವೆ, ತಮ್ಮ ಬೆಳೆಗಳನ್ನು ಹೇಗೆ ಸಂಸ್ಕರಿಸುತ್ತವೆ ಎಂಬುದನ್ನು ಗಮನಿಸುವುದರಿಂದ ನಾವು ಹೊಸ ಹೊಸ ಅಂಶಗಳನ್ನು ಕಲಿಯಬಹುದು.

ಶಿಲೀಂಧ್ರ ಕೃಷಿಯಿಂದ ಇರುವೆಗಳು ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತವೆ. ಆದಾಗ್ಯೂ ಅವು ಆನುವಂಶಿಕ ವೈವಿಧ್ಯವನ್ನು ಕಳೆದುಕೊಂಡಾಗ ಮಾನವ ಬೆಳೆಗಳಿಗೆ ಅಪಾಯವನ್ನುಂಟು ಮಾಡುವ ರೋಗ ಅಥವಾ ಕೀಟಗಳಂತಹ ವೈರಿಗಳಿಗೆ ಬಲಿಯಾಗದಂತೆ ಕುಶಲತೆಯಿಂದ ಬೆಳೆಗಳನ್ನು ನಿರ್ವಹಿಸುತ್ತವೆ. ಇರುವೆಗಳು ರೋಗದ ಸಾಧ್ಯತೆಯನ್ನು ಮಿತಿಗೊಳಿಸಲು ತಮ್ಮ ಭೂಗತ ತೋಟದ ಕೋಣೆಗಳನ್ನು ನಿರ್ಮಲವಾಗಿ ಇಟ್ಟುಕೊಳ್ಳುವುದರ ಮೂಲಕ ಮತ್ತು ಒಂದು ರೀತಿಯ ನೈಸರ್ಗಿಕ ಪ್ರತಿಜೀವಕವನ್ನು ಉತ್ಪಾದಿಸುವ ಮೂಲಕ ಕೀಟನಾಶಕವಾಗಿ ಕಾರ್ಯನಿರ್ವಹಿಸಿ ತಮ್ಮ ಆಹಾರದ ಮೂಲವನ್ನು ಅಪಾಯಕ್ಕೆ ಒಡ್ಡುವ ಪರಾವಲಂಬಿಗಳಿಂದ ರಕ್ಷಿಸಿಕೊಳ್ಳುತ್ತವೆ. ಈ ತಂತ್ರಗಳು ಪರಿಣಾಮಕಾರಿಯಾಗಿ ರೋಗಕಾರಕಗಳನ್ನು ನಿಯಂತ್ರಣದಲ್ಲಿ ಇಡುತ್ತವೆ. ಮಾನವರು ಇದೇ ತಂತ್ರವನ್ನು ಬಳಸಿಕೊಂಡಲ್ಲಿ ಬಹುತೇಕ ಬೆಳೆಗಳಿಗೆ ತಗಲುವ ರೋಗಗಳಿಂದ ಬೆಳೆಗಳನ್ನು ರಕ್ಷಿಸಬಹುದು. ಸ್ಥಳೀಯ ಪರಿಸರ ವ್ಯವಸ್ಥೆಯಲ್ಲಿ ಇರುವೆಗಳ ವಸಾಹತು ಸ್ಥಳವು ಮಾನವ ಕೃಷಿಕರಿಗೆ ಕೆಲವು ಪಾಠಗಳನ್ನು ಕಲಿಸುತ್ತವೆ. ಇವುಗಳನ್ನು ಅರಿತು ಕೃಷಿ ಮಾಡಿದರೆ ನಾವು ಉತ್ತಮ ಬೆಳೆಗಳನ್ನು ಪಡೆಯಬಹುದು ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಬಿ. ಗುರುಬಸವರಾಜ

contributor

Similar News