ಡೂಮ್‌ಸ್ಕ್ರೋಲಿಂಗ್ ಬಿಡಿ, ಹೋಪ್‌ಸ್ಕ್ರೋಲಿಂಗ್ ಮಾಡಿ

ಹೋಪ್‌ಸ್ಕ್ರೋಲಿಂಗ್‌ನಿಂದ ಮನಸ್ಸು ಸಕಾರಾತ್ಮಕ ಚಿಂತನೆಗಳತ್ತ ಹರಿಯುತ್ತದೆ. ಇದರಿಂದ ದಯೆ, ಕರುಣೆ, ಪರಾನುಭೂತಿ, ಸಹಕಾರ ಮನೋಭಾವಗಳು ಬೆಳೆಯುತ್ತವೆ. ಹೋಪ್‌ಸ್ಕ್ರೋಲಿಂಗ್‌ನಿಂದ ಮನಸ್ಸು ಖಿನ್ನತೆಗೆ ಒಳಗಾಗುವ ಬದಲು ಸಕಾರಾತ್ಮಕ ಸುದ್ದಿಗಳನ್ನು ಸಕ್ರಿಯವಾಗಿ ಅನುಸರಿಸುವ ಮೂಲಕ, ಮಾನವ ಸಂಪರ್ಕ, ವೀರರ ಕೃತ್ಯಗಳು ಮತ್ತು ಪ್ರಕೃತಿಯ ಮೆಚ್ಚುಗೆಯನ್ನು ಕೇಂದ್ರೀಕರಿಸುವ ಮೂಲಕ, ನಮ್ಮ ಮನಸ್ಥಿತಿಯನ್ನು ಹಗುರವಾಗಿಸುತ್ತದೆ ಮತ್ತು ಅದರೊಂದಿಗೆ ನಮ್ಮಲ್ಲಿ ಆಶಾವಾದವನ್ನು ಬೆಳೆಸುತ್ತದೆ.

Update: 2024-09-22 09:55 GMT

ಕಳೆದ ವಾರ ಸಂಬಂಧಿಯೋರ್ವರ ಮನೆಗೆ ಹೋಗಿದ್ದೆ. ಅವರು ಒಂದೆರಡು ವಾರದಿಂದ ಹಾಸಿಗೆ ಹಿಡಿದಿರುವುದು ತಿಳಿಯಿತು. ಕಾರಣ ಏನೆಂದು ಕೇಳಿದಾಗ ಹೇಳಲಿಲ್ಲ. ನಂತರ ಬೇರೆ ಬೇರೆ ವಿಷಯ ಮಾತಾಡುತ್ತಾ ಕುಳಿತಾಗ ಮಗನದ್ದೇ ಚಿಂತೆ ಎಂದು ತಿಳಿಯಿತು. ಚೆನ್ನಾಗಿ ಓದುತ್ತಿದ್ದ ಮಗನಿಗೆ ಮೊಬೈಲ್ ಕೊಡಿಸಿದ್ದೇ ತಪ್ಪಾಯ್ತು ಎಂಬ ತಪ್ಪಿತಸ್ಥ ಭಾವನೆ ಅವರಿಗೆ ಕಾಡುತ್ತಿತ್ತು. ಮೊಬೈಲ್‌ನಿಂದ ಮಗ ಹಾಳಾದ ಎಂಬ ಚಿಂತೆಯಲ್ಲಿಯೇ ಹಾಸಿಗೆ ಹಿಡಿದಿದ್ದರು. ಹೀಗೆ ಮಾತಾಡುತ್ತಾ ಕುಳಿತಿದ್ದಾಗ ಹಾಸಿಗೆ ಹಿಡಿದ ವಿಷಯ ಕೇಳಿ ಬೇಸರವಾಯಿತು. ಅಷ್ಟರಲ್ಲಿ ಅವರ ಮಗನೂ ಅಲ್ಲಿಗೆ ಬಂದ. ಅವನನ್ನು ಕೂರಿಸಿಕೊಂಡು ಮಾತನಾಡಿದೆ. ಮೊಬೈಲ್ ಗೀಳು ಅವನ ಬದುಕನ್ನು ಹಾಳು ಮಾಡಿತ್ತು. ಅವನೊಡನೆ ಮಾತಾಡುತ್ತಾ ಮಾತಾಡುತ್ತಾ ಮೊಬೈಲ್‌ನಲ್ಲಿ ಯಾವ ಕಂಟೆಂಟ್ ಕುರಿತು ಹೆಚ್ಚಾಗಿ ನೋಡುತ್ತಾನೆ ಎಂಬ ವಿಷಯ ಗ್ರಹಿಸಿಕೊಂಡೆ. ಸ್ವಲ್ಪಹೊತ್ತು ಮಾತಾಡಿ ಮನೆಗೆ ಬಂದೆ. ಬಂದ ನಂತರ ಇದೇ ವಿಷಯ ಕುರಿತು ಆಲೋಚಿಸುತ್ತಿರುವಾಗ ಒಂದು ವಿಷಯ ಥಟ್ಟನೆ ಹೊಳೆಯಿತು. ಆ ವಿಷಯ ಕುರಿತು ಇನ್ನಷ್ಟು ವಿಷಯ ತಡಕಾಡಿದಾಗ ಹೊಸ ಹೊಳಹುಗಳು ತಿಳಿದವು. ಅದೇನೆಂಬುದನ್ನು ನೀವೂ ತಿಳಿಯಿರಿ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ದಿನದ ಬಹುಭಾಗ ಸ್ಕ್ರೀನ್‌ಗೆ ಅಂಟಿಕೊಂಡಿರುತ್ತಾರೆ. ಅದರಲ್ಲೂ ಯುವಕರಂತೂ ದಿನದಲ್ಲಿ ಆರು ಗಂಟೆಗಳಿಗಿಂತಲೂ ಅಧಿಕ ಸಮಯ ಸ್ಕ್ರೀನ್‌ನಲ್ಲೇ ಮುಳುಗಿರುತ್ತಾರೆ. ಸ್ಮಾರ್ಟ್‌ಫೋನ್ ಮತ್ತು ವೇಗದ ಇಂಟರ್‌ನೆಟ್ ವ್ಯವಸ್ಥೆ ಬಂದಾಗಿನಿಂದ ಬಹುತೇಕರು ಸ್ಕ್ರೀನ್ ಸ್ಕ್ರಾಲಿಂಗ್ ಅಥವಾ ಸ್ಕ್ರೀನ್ ಸರ್ಫಿಂಗ್‌ನಲ್ಲಿ ಬಂಧಿಯಾಗಿದ್ದೇವೆ. ಒಂದಾದ ನಂತರ ಒಂದು ದೃಶ್ಯರೂಪಿಕೆಗಳನ್ನು ನೋಡುತ್ತಾ ಸ್ಕ್ರೀನ್ ಜೊತೆಜೊತೆಗೆ ಕಾಲವನ್ನೂ ತಳ್ಳುತ್ತಿದ್ದೇವೆ.

ಕೇವಲ ಮನೋರಂಜನೆಗಾಗಿ ಸೀಮಿತವಾಗಿದ್ದ ಸ್ಕ್ರೀನ್ ಟೈಮ್ ಈಗೀಗ ಪರಸ್ಪರ ತೇಜೋವಧೆ, ಮಾನಹಾನಿ, ದ್ವೇಷ, ಹಿಂಸೆ, ಅಪರಾಧಗಳಂತಹ ಕುಕೃತ್ಯಕ್ಕೆ ಬಳಕೆಯಾಗುತ್ತಿರುವುದು ಶೋಚನೀಯ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಮಾತು, ತಪ್ಪು ಮಾಹಿತಿ, ಹಿಂಸಾತ್ಮಕ ದೃಶ್ಯಗಳು, ಅಪರಾಧ ಮತ್ತು ದುರಂತ ಘಟನೆಗಳನ್ನು ಎತ್ತಿ ತೋರಿಸುವ ಪೋಸ್ಟ್‌ಗಳ ಆವರ್ತನವು ನಾಟಕೀಯವಾಗಿ ಹೆಚ್ಚುತ್ತಿದೆ. ಏಕೆಂದರೆ ಅಂತಹ ನಕಾರಾತ್ಮಕ ವಿಷಯಗಳನ್ನು ಅನೇಕ ಬಾರಿ ಮರುಪೋಸ್ಟ್ ಮಾಡಲಾಗುತ್ತಿದೆ ಮತ್ತು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ನಕಾರಾತ್ಮಕ ಸುದ್ದಿಗಳುಳ್ಳ ಪೋಸ್ಟ್‌ಗಳನ್ನು ಪದೇ ಪದೇ ನೋಡುವ ಮನೋಸ್ಥಿತಿಯನ್ನು ಡೂಮ್‌ಸ್ಕ್ರೋಲಿಂಗ್ ಎನ್ನಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ನಾವು ಯಾವುದನ್ನು, ಎಷ್ಟು ಹೊತ್ತು ವೀಕ್ಷಿಸುತ್ತೇವೆ ಎಂಬುದನ್ನು ಅಲ್ಗಾರಿದಮ್‌ಗಳು ಲೆಕ್ಕಾಚಾರ ಹಾಕುತ್ತಿರುತ್ತವೆ. ನಮಗೆ ಎನು ಇಷ್ಟ ಎಂಬುದನ್ನು ನಮ್ಮ ಸ್ಕ್ರೀನ್‌ಗೆ ತಳ್ಳುತ್ತವೆ. ನಮಗರಿವಿಲ್ಲದೇ ಅದನ್ನು ನೋಡುತ್ತಾ ಟೈಂಪಾಸ್ ಮಾಡುತ್ತೇವೆ. ನಾವು ನಕಾರಾತ್ಮಕ ಅಂಶಗಳನ್ನು ಹೆಚ್ಚಾಗಿ ನೋಡುತ್ತಿದ್ದರೆ, ಅಲ್ಗಾರಿದಮ್‌ಗಳು ಅವನ್ನೇ ಹೆಚ್ಚಾಗಿ ನಮಗೆ ಒದಗಿಸುತ್ತವೆ, ಸಕಾರಾತ್ಮಕ ಅಂಶಗಳನ್ನು ಹೆಚ್ಚಾಗಿ ನೋಡಿದವರೆ ಅವುಗಳನ್ನೇ ಸ್ಕ್ರೀನ್‌ಗೆ ತಳ್ಳುತ್ತವೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಅಪಹಾಸ್ಯ, ಹಿಂಸಾಚಾರದಂತಹ ಹುಸಿ-ಹಸಿ ಮಸಾಲೆಭರಿತ ದೃಶ್ಯಗಳೇ ಹೆಚ್ಚು ತುಂಬಿಕೊಂಡಿವೆ. ನೀವು ಒಳ್ಳೆಯದನ್ನು ಹುಡುಕುವುದೇ ಕಷ್ಟವಾಗಿದೆ.

ಡೂಮ್‌ಸ್ಕ್ರೋಲಿಂಗ್ ಅಥವಾ ಡೂಮ್‌ಸರ್ಫಿಂಗ್ ಎಂಬುದು ತುಂಬಾ ಅಪಾಯಕಾರಿ ವ್ಯಸನವಾಗಿದೆ. ಮಾನವನ ಮೆದುಳು ಪದೇ ಪದೇ ನಕಾರಾತ್ಮಕ ಸುದ್ದಿಗೆ ಒಡ್ಡಿಕೊಂಡಾಗ ಅಂತಹದ್ದೇ ಸುದ್ದಿಗಳನ್ನು ಹುಡುಕುವ ಬಯಕೆಯಲ್ಲಿ ಸಿಲುಕಿಕೊಳ್ಳುತ್ತವೆ. ಆಗ ನಮಗರಿವಿಲ್ಲದೇ ನಕಾರಾತ್ಮಕತೆಯತ್ತ ಸೆಳೆಯಲ್ಪಡುತ್ತೇವೆ. ಇದನ್ನೇ ಡೂಮ್‌ಸ್ಕ್ರೋಲಿಂಗ್ ಎನ್ನುತ್ತಾರೆ.

ಡೂಮ್‌ಸ್ಕ್ರೋಲಿಂಗ್ ಗುಣಲಕ್ಷಣವು ಭಾವನಾತ್ಮಕ ಅಸ್ಥಿರತೆಗೆ ಸಂಬಂಧಿಸಿದ ವ್ಯಕ್ತಿತ್ವವನ್ನು ವಿವರಿಸುತ್ತದೆ ಮತ್ತು ಮಾನಸಿಕ ಯಾತನೆ ಅನುಭವಿಸುವ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಡೂಮ್‌ಸ್ಕ್ರೋಲ್ ಮಾನಸಿಕ ಆರೋಗ್ಯವನ್ನು ಘಾಸಿಗೊಳಿಸುತ್ತದೆ. ಆತಂಕ, ದುಃಖ ಮತ್ತು ಕೋಪ, ಭವಿಷ್ಯದ ಬಗ್ಗೆ ಅನಿಶ್ಚಿತತೆಯಂತಹ ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆ ಭಾವನೆಗಳು ನಿದ್ರೆ, ಹಸಿವು, ಪ್ರೇರಣೆ ಅಥವಾ ಸಾಮಾನ್ಯವಾಗಿ ಆನಂದಿಸುವ ವಿಷಯಗಳನ್ನು ದೂರ ಮಾಡುತ್ತದೆ. ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದವರು ಡೂಮ್‌ಸ್ಕ್ರೋಲಿಂಗ್‌ಗೆ ಪ್ಯಾನಿಕ್ ಅಟ್ಯಾಕ್ ಆಗಬಹುದು.

ಇಂತಹ ಆಘಾತಕಾರಿ ಅಂಶಗಳಿಂದ ದೂರವಿರಲು ಇರುವ ಮಾರ್ಗವೆಂದರೆ ಡೂಮ್‌ಸ್ಕ್ರೋಲಿಂಗ್‌ಗೆ ಬದಲಾಗಿ ಹೋಪ್‌ಸ್ಕ್ರೋಲಿಂಗ್ ಮಾಡುವುದು. ಇದೂ ಸಹ ಸ್ಕ್ರೋಲಿಂಗ್ ಮಾಡುವ ವಿಧಾನವೇನೋ ಸರಿ. ಆದರೆ ಇಲ್ಲಿ ಮನಸ್ಸಿನ ಭಾವನೆಗಳು ಕೆರಳುವ ಬದಲಾಗಿ ಅರಳುತ್ತವೆ. ಇಲ್ಲಿ ಸಂತೋಷದ ಇಮೋಜಿಗಳು, ನಗು ಮುಖಗಳು, ಹೃದಯಗಳು, ಚಪ್ಪಾಳೆ ತಟ್ಟುವ ಕೈಗಳು ಮತ್ತು ಉಲ್ಲಾಸದ ಸಂತೋಷದ ಕಣ್ಣೀರಿನ ಮುಖಗಳು ಕಾಣಸಿಗುತ್ತವೆ. ಮನಸ್ಸು ಚೇತೋಹಾರಿಯಾಗುತ್ತದೆ. ಹೊಸ ಹೊಸ ಕಲಿಕೆಯತ್ತ, ಸೃಜನಶೀಲ ಚಟುವಟಿಕೆಯತ್ತ ಮನಸ್ಸು ತುಡಿಯುತ್ತದೆ.

ಹೋಪ್‌ಸ್ಕ್ರೋಲಿಂಗ್‌ನಿಂದ ಮನಸ್ಸು ಸಕಾರಾತ್ಮಕ ಚಿಂತನೆಗಳತ್ತ ಹರಿಯುತ್ತದೆ. ಇದರಿಂದ ದಯೆ, ಕರುಣೆ, ಪರಾನುಭೂತಿ, ಸಹಕಾರ ಮನೋಭಾವಗಳು ಬೆಳೆಯುತ್ತವೆ. ಹೋಪ್‌ಸ್ಕ್ರೋಲಿಂಗ್‌ನಿಂದ ಮನಸ್ಸು ಖಿನ್ನತೆಗೆ ಒಳಗಾಗುವ ಬದಲು ಸಕಾರಾತ್ಮಕ ಸುದ್ದಿಗಳನ್ನು ಸಕ್ರಿಯವಾಗಿ ಅನುಸರಿಸುವ ಮೂಲಕ, ಮಾನವ ಸಂಪರ್ಕ, ವೀರರ ಕೃತ್ಯಗಳು ಮತ್ತು ಪ್ರಕೃತಿಯ ಮೆಚ್ಚುಗೆಯನ್ನು ಕೇಂದ್ರೀಕರಿಸುವ ಮೂಲಕ, ನಮ್ಮ ಮನಸ್ಥಿತಿಯನ್ನು ಹಗುರವಾಗಿಸುತ್ತದೆ ಮತ್ತು ಅದರೊಂದಿಗೆ ನಮ್ಮಲ್ಲಿ ಆಶಾವಾದವನ್ನು ಬೆಳೆಸುತ್ತದೆ.

ಹೋಪ್ ಎಂದರೆ ಭರವಸೆ. ನಮ್ಮ ಬದುಕಿಗೆ ಭರವಸೆ ಮುಖ್ಯವಾದುದು. ಏಕೆಂದರೆ ಅದು ಪ್ರಸಕ್ತ ಕ್ಷಣವನ್ನು ಸಹಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ನಾಳೆ ಉತ್ತಮವಾಗಿರುತ್ತದೆ ಎಂದು ನಂಬುವಂತೆ ಮಾಡುವ ಮತ್ತು ಬದುಕಿನಲ್ಲಿ ಆಶಾವಾದವನ್ನು ಉನ್ನತೀಕರಿಸಲು ಭರವಸೆ ಮುಖ್ಯ. ಹಾಗಾಗಿ ಸಕಾರಾತ್ಮಕ ಅಂಶಗಳುಳ್ಳ ಮಾಹಿತಿಯನ್ನು ಹುಡುಕುವ ಮತ್ತು ನೋಡುವ ಮೂಲಕ ಉತ್ತಮ ನಾಳೆಗಾಗಿ ಭರವಸೆಯನ್ನು ಹೊಂದುವುದೇ ಹೋಪ್‌ಸ್ಕ್ರೋಲಿಂಗ್.

ಹೋಪ್‌ಸ್ಕ್ರೋಲಿಂಗ್ ನಮ್ಮ ಆಲೋಚನೆಗಳನ್ನು ಮೀರಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ವಾಸ್ತವದ ಋಣಾತ್ಮಕ ಗ್ರಹಿಕೆಯನ್ನು ತಡೆಯುತ್ತದೆ. ನಕಾರಾತ್ಮಕ ಘಟನೆಗಳು ಸಂಭವಿಸಬಹುದಾದರೂ, ನಮ್ಮ ಸುತ್ತಲೂ ಸಾಕಷ್ಟು ಸಕಾರಾತ್ಮಕತೆ ಇದೆ ಎಂದು ನೆನಪಿಸುವ ಮೂಲಕ ಇದು ನಮ್ಮ ದೃಷ್ಟಿಕೋನವನ್ನು ಸಮತೋಲನಗೊಳಿಸುತ್ತದೆ. ಸಕಾರಾತ್ಮಕ ವಿಷಯಗಳನ್ನು ಗ್ರಹಿಸಿದಾಗ, ನಮ್ಮ ದೇಹದಲ್ಲಿ ಹಾರ್ಮೋನ್‌ಗಳು ಸುರಕ್ಷತೆಯ ಭಾವನೆಯನ್ನು ಉತ್ತೇಜಿಸುತ್ತವೆ. ಸುರಕ್ಷತೆ ನಮ್ಮ ದೇಹಕ್ಕೆ ಒಳ್ಳೆಯದು. ನಿರಂತರವಾಗಿ ಸ್ಕ್ರೋಲಿಂಗ್ ಮಾಡಿದಾಗ ಹೆಚ್ಚು ಧನಾತ್ಮಕ ಭಾವನೆ ಮೂಡುತ್ತದೆ. ಆಗ ನಮ್ಮಲ್ಲಿ ಒತ್ತಡ ಕಡಿಮೆಯಾಗಿ ಹೆಚ್ಚು ಶಾಂತತೆಯತ್ತ ವಾಲುತ್ತೇವೆ.

ಹೋಪ್‌ಸ್ಕ್ರೋಲಿಂಗ್‌ನ ಮೊದಲ ಹೆಜ್ಜೆ ಎಂದರೆ ಸಂತೋಷ ಮತ್ತು ಧನಾತ್ಮಕ ಭಾವನೆಯನ್ನು ಉಂಟುಮಾಡುವ ವಿಷಯವನ್ನು ಹುಡುಕುವುದು ಮತ್ತು ಇಷ್ಟಪಡುವುದನ್ನು ಪ್ರಾರಂಭಿಸುವುದು ಆಗಿದೆ. ಸಕಾರಾತ್ಮಕ ಭಾವನೆ ಹೆಚ್ಚಿಸುವ ಪೋಸ್ಟ್‌ಗಳು ಯಾವುವು? ಎಂಬ ಪ್ರಶ್ನೆ ಬರುವುದು ಸಹಜ. ನಮ್ಮ ಮನಸ್ಸಿನಲ್ಲಿನ ನಶ್ವರತೆಯನ್ನು ದೂರಮಾಡಿ, ಬದುಕಿನಲ್ಲಿ ಆಶಾವಾದವನ್ನು ಉಂಟುಮಾಡುವಂತಹ ದೃಶ್ಯರೂಪಕಗಳೇ ಸಕಾರಾತ್ಮಕ ಪೋಸ್ಟ್‌ಗಳಾಗಿವೆ. ಮನಸ್ಸಿಗೆ ಚೈತನ್ಯ ನೀಡುವ ಅನುಭವ ಮತ್ತು ಅನುಭಾವದ ಮಾತುಗಳು, ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ದೃಶ್ಯಿಕೆಗಳು, ಸೃಜನಶೀಲತೆಯನ್ನು ಎತ್ತಿ ಹಿಡಿಯುವ ವೀಡಿಯೊಗಳು, ಮತ್ತೆ ಮತ್ತೆ ಆನಂದವನ್ನು ಸವಿಯುವಂತೆ ಮಾಡುವ ಸಂಗೀತಗಳು ಹೀಗೆ ಒಟ್ಟಾರೆ ಮನಸ್ಸಿಗೆ ಮುದ/ಸಂತೋಷ ನೀಡುವ ವೀಡಿಯೊ ಅಥವಾ ಮಾಹಿತಿಗಳನ್ನು ಹುಡುಕುವುದೇ ಹೋಪ್‌ಸ್ಕ್ರೋಲಿಂಗ್ ಆಗಿದೆ. ನಮ್ಮ ಜೀವನ, ನಮ್ಮ ಭವಿಷ್ಯ ಉತ್ತಮವಾಗಿರಬೇಕು, ನಮ್ಮ ನಡೆ-ನುಡಿಗಳು ಶುದ್ಧವಾಗಿರಬೇಕು, ನಮ್ಮ ಸುತ್ತಲೂ ಇರುವ ಜೀವಿಗಳಿಗೆ ಪ್ರೀತಿಯನ್ನು ಉಣಬಡಿಸಬೇಕು ಎಂದಾದರೆ ಡೂಮ್‌ಸ್ಕ್ರೋಲಿಂಗ್ ಬಿಟ್ಟು, ಹೋಪ್‌ಸ್ಕ್ರೋಲಿಂಗ್ ಹಿಡಿಯುವುದು ಅಗತ್ಯವಿದೆ ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಆರ್. ಬಿ. ಗುರುಬಸವರಾಜ

contributor

Similar News