ಅನ್ನದ ಬಟ್ಟಲಿನಲ್ಲಿ ಚಿಲ್ಲರೆ ‘ಪಡಿತರ’ ರಾಜಕೀಯ
ಪಡಿತರ ನಿರ್ವಹಣೆಯ ವಿಚಾರದಲ್ಲಿ, ಸ್ವತಃ ಭಾರತ ಸರಕಾರದ ನಿಲುವನ್ನೇ ರಾಜ್ಯ ಸರಕಾರವೂ ಕುರುಡಾಗಿ ಅನುಸರಿಸುತ್ತಿದೆಯಾದರೂ, ಭಾರತ ಸರಕಾರದ ಬೆಂಬಲಿಗರಾದ ಬಿಜೆಪಿ, ಜೆಡಿಎಸ್‌ಗಳೇ ಕರ್ನಾಟಕದಲ್ಲಿ ಅದೇ ನಿಲುವನ್ನು ಟೀಕಿಸುತ್ತಿವೆ. ‘‘ರಾಮನ ವೇಷ ಧರಿಸಿದಾಗ ರಾಮ ಸರಿ; ರಾವಣನ ವೇಷ ಧರಿಸಿದಾಗ ರಾವಣ ಸರಿ’’ ಎಂಬ ತಾಳಮದ್ದಲೆ ‘ಬುದ್ಧಿವಂತಿಕೆ’ ಇದು.
ಕರ್ನಾಟಕದಲ್ಲಿ ಏಕಾಏಕಿ ಬಿಪಿಎಲ್ ಕಾರ್ಡುಗಳು ಸುದ್ದಿಯಲ್ಲಿವೆ. ಕರ್ನಾಟಕ ಸರಕಾರವು 11ಲಕ್ಷ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಆಗಿ ಪರಿವರ್ತಿಸುವ ಮೂಲಕ ಬಡವರ ಹೊಟ್ಟೆಗೆ ಹೊಡೆಯಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರವಿವಾರ (ನ. 17) ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಾಜ್ಯ ಪಡಿತರ ಖಾತೆಯ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯು ‘ಪಡಿತರ ವಿತರಣೆ’ ವೋಟು ರಾಜಕಾರಣಕ್ಕೆ ಎಷ್ಟು ಮಹತ್ವದ್ದು ಎಂಬುದನ್ನು ಬೊಟ್ಟು ಮಾಡುತ್ತಿದೆ.
ಸಚಿವ ಮುನಿಯಪ್ಪ ಅವರು, ರಾಜ್ಯದಲ್ಲಿ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಬಿಪಿಎಲ್ (ಬಡತನರೇಖೆಗಿಂತ ಕೆಳಗಿನ) ಕಾರ್ಡುದಾರರಿದ್ದಾರೆ. ರಾಜ್ಯದ 6.5 ಕೋಟಿ ಜನರಲ್ಲಿ 4.35 ಕೋಟಿ ಜನರದು ಬಿಪಿಎಲ್ ಕಾರ್ಡು. ಇದು ಅಸಹಜ. ಹಾಗಾಗಿ, ಕೇಂದ್ರ ಸರಕಾರದ ನೀತಿಗೆ ಅನುಗುಣವಾಗಿಯೇ ತೆರಿಗೆ ಪಾವತಿದಾರರು, ಸರಕಾರಿ ನೌಕರರು, ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವವರು... ಇಂತಹ ಬಿಪಿಎಲ್ ಕಾರ್ಡು ಹೊಂದಲು ಅರ್ಹತೆ ಇಲ್ಲದವರನ್ನು ಮಾತ್ರ ತೆಗೆದು ಹಾಕಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ 13.87ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿದ್ದು, ಅವರಲ್ಲಿ 3.64ಲಕ್ಷ ಬಿಪಿಎಲ್ ಕಾರ್ಡುಗಳನ್ನು ಈಗಾಗಲೇ ಎಪಿಎಲ್‌ಗೆ ಬದಲಾಯಿಸಲಾಗಿದೆಯಂತೆ.
ಈ ನಡುವೆ ಸಾಫ್ಟ್‌ವೇರಿನಲ್ಲಿ ಏನೋ ಲೋಪದ ಕಾರಣದಿಂದಾಗಿ ಕೆಲವು ಅರ್ಹರ ಬಿಪಿಎಲ್ ಕಾರ್ಡುಗಳೂ ರದ್ದಾಗಿದ್ದು, ಅದನ್ನು ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿ ವಲಯವನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿಕ್ಕಿದ್ದೇ ಸೀರುಂಡೆ ಎಂದುಕೊಂಡು, ರಾಜ್ಯಸರಕಾರ ಗ್ಯಾರಂಟಿ ನಿರ್ವಹಣೆಯಲ್ಲಿ ದಿವಾಳಿ ಎದ್ದಿದೆ, ಹಾಗಾಗಿ ಹಣ ಹೊಂದಿಸಿಕೊಳ್ಳಲು ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ ಎಂದು ಹರಿಹಾಯಲಾರಂಭಿಸಿದ್ದಾರೆ. ಈ ದಾಳಿಯಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಸರಕಾರ ಮಾತ್ರವಲ್ಲದೇ, ಸ್ವತಃ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಲೇಬೇಕಾದ ಸನ್ನಿವೇಶ ಎದುರಾಗಿದೆ.
ಪಿಡಿಎಸ್ ಕುರಿತು ಭಾರತ ಸರಕಾರದ ಚಿಂತನೆಗಳು
ನಮ್ಮ ರಾಜಕಾರಣಿಗಳು ಬಡವರ ಅನ್ನದ ಬಟ್ಟಲಿನಲ್ಲಿಯೂ ತಮ್ಮ ರಾಜಕಾರಣದ ಚಟ ತೀರಿಸಿಕೊಳ್ಳುತ್ತಿರುವುದು, ದೇಶದ ರಾಜಕಾರಣಕ್ಕೆ ಬಂದಿರುವ ‘ಬುದ್ಧಿ ಬರ’ವನ್ನಷ್ಟೇ ತೋರಿಸುತ್ತದೆ. ಪಡಿತರ ನಿರ್ವಹಣೆಯ ವಿಚಾರದಲ್ಲಿ, ಸ್ವತಃ ಭಾರತ ಸರಕಾರದ ನಿಲುವನ್ನೇ ರಾಜ್ಯ ಸರಕಾರವೂ ಕುರುಡಾಗಿ ಅನುಸರಿಸುತ್ತಿದೆಯಾದರೂ, ಭಾರತ ಸರಕಾರದ ಬೆಂಬಲಿಗರಾದ ಬಿಜೆಪಿ, ಜೆಡಿಎಸ್‌ಗಳೇ ಕರ್ನಾಟಕದಲ್ಲಿ ಅದೇ ನಿಲುವನ್ನು ಟೀಕಿಸುತ್ತಿವೆ. ‘‘ರಾಮನ ವೇಷ ಧರಿಸಿದಾಗ ರಾಮ ಸರಿ; ರಾವಣನ ವೇಷ ಧರಿಸಿದಾಗ ರಾವಣ ಸರಿ’’ ಎಂಬ ತಾಳಮದ್ದಲೆ ‘ಬುದ್ಧಿವಂತಿಕೆ’ ಇದು.
ಯಾಕೆಂದು ವಿವರಿಸುತ್ತೇನೆ. ಸರಕಾರಗಳು ತಮ್ಮ ಆಹಾರ ಸಬ್ಸಿಡಿ ಹೊರೆಯನ್ನು ತಗ್ಗಿಸಿಕೊಳ್ಳಬೇಕು ಎಂಬುದು ಅಭಿವೃದ್ಧಿಶೀಲ ದೇಶಗಳಲ್ಲಿ ಅಭಿವೃದ್ಧಿಯ ಗುತ್ತಿಗೆ ಪಡೆದು ಸಾಲ ನೀಡುತ್ತಿರುವ ವಿಶ್ವಬ್ಯಾಂಕ್, ಎಡಿಬಿಯಂತಹ ಅಂತರ್‌ರಾಷ್ಟ್ರೀಯ ಸಂಸ್ಥೆಗಳ ನಿಲುವು/ಷರತ್ತು. ಇದನ್ನು ಭಾರತ ಸರಕಾರ ಅಲ್ಲಿಂದ ಸಾಲ ಪಡೆಯಲಾರಂಭಿಸಿದಂದಿನಿಂದಲೂ ಪಾಲಿಸುತ್ತಲೇ ಬಂದಿದೆ.
ಭಾರತ ಸರಕಾರದಿಂದ ಆರ್ಥಿಕ ಸಹಾಯ ಪಡೆದು, ಸಾರ್ವಜನಿಕ ನೀತಿಗಳಿಗೆ ಕುರಿತಂತೆ ಸಂಶೋಧನೆಗಳನ್ನು ನಡೆಸುತ್ತಿರುವ ಇಂಡಿಯನ್ ಕೌನ್ಸಿಲ್ ಆನ್ ಇಂಟರ್‌ನ್ಯಾಷನಲ್ ಇಕನಾಮಿಕ್ ರಿಲೇಷನ್ಸ್ (ಐಸಿಆರ್‌ಐಇಆರ್) ಸಂಸ್ಥೆ ಇದೇ ನವೆಂಬರ್ ತಿಂಗಳಿನಲ್ಲಿ ಒಂದು ಪಾಲಿಸಿ ಪೇಪರ್ ಪ್ರಕಟಿಸಿದೆ. ಅದರ ಪ್ರಕಾರ, ಭಾರತದಲ್ಲಿ ಈಗ 81.35 ಕೋಟಿ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಪಡಿತರ ವಿತರಿಸಲಾಗುತ್ತಿದ್ದು, ಆ ಪಡಿತರ ವಿತರಣೆ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದರೆ, 2022-23ನೇ ಸಾಲಿನಲ್ಲಿ ಶೇ. 28 ಮಂದಿಗೆ ಪಡಿತರ ತಲುಪಿಯೇ ಇಲ್ಲ! ಇದರಿಂದ ಭಾರತ ಸರಕಾರಕ್ಕೆ ಆ ವರ್ಷದಲ್ಲಿ 69,108 ಕೋಟಿ ರೂ. (ಅರ್ಥಾತ್ 2 ಕೋಟಿ ಮೆಟ್ರಿಕ್‌ಟನ್ ಭತ್ತ/ಗೋಧಿ) ನಷ್ಟ ಆದಂತಾಗಿದೆ. ಇಂತಹ ಲೋಪಗಳನ್ನು ಸರಿಪಡಿಸಲು ಮತ್ತು ಅನಗತ್ಯ ವೆಚ್ಚಗಳನ್ನು ನಿವಾರಿಸಿಕೊಳ್ಳಲು ಭಾರತ ಸರಕಾರ ಬಡತನ ರೇಖೆಯಿಂದ ಕೆಳಗಿರುವವರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ವಿಧಾನವನ್ನು ಅನುರಿಸಬೇಕು. ಆಗ ಲೀಕೇಜ್ ಕಡಿಮೆ, ಆಡಳಿತಾತ್ಮಕ ವೆಚ್ಚ ಕಡಿಮೆ ಮತ್ತು ಲಾಭಾರ್ಥಿಗೆ ಲಾಭವೂ ಪೂರ್ಣ ಪ್ರಮಾಣದಲ್ಲಿ ಸಿಕ್ಕಂತಾಗುತ್ತದೆ.
ಈ ವರದಿಯ ಪ್ರಕಾರ, ಪಡಿತರ ವ್ಯವಸ್ಥೆ ಅತ್ಯಂತ ಕಳಪೆ ಇರುವುದು ಈಶಾನ್ಯದ ರಾಜ್ಯಗಳು (ಅರುಣಾಚಲ-ನಾಗಾಲ್ಯಾಂಡ್), ಗುಜರಾತ್, ಹಿಮಾಚಲ, ಉತ್ತರಾಖಂಡ, ಉತ್ತರಪ್ರದೇಶ, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳಲ್ಲಿ. ಅತ್ಯಂತ ಪರಿಣಾಮಕಾರಿ ಇರುವುದು ಬಿಹಾರ, ಪ.ಬಂಗಾಳ, ಕರ್ನಾಟಕ, ತಮಿಳುನಾಡು ಇತ್ಯಾದಿ ರಾಜ್ಯಗಳಲ್ಲಿ.
ಅಂದರೆ ಭಾರತ ಸರಕಾರದ ಕಡೆಯಿಂದ ತನ್ನ ರೆವೆನ್ಯೂ ವೆಚ್ಚಗಳ ಶೇ. 8.3ರಷ್ಟಿರುವ ಆಹಾರ ಸಬ್ಸಿಡಿಯನ್ನು ತಗ್ಗಿಸಿಕೊಳ್ಳುವತ್ತ ಚಿಂತನೆ ನಡೆಯುತ್ತಿದ್ದು, ಅದರ ಭಾಗವಾಗಿಯೇ ಈ ಎಲ್ಲ ಬೆಳವಣಿಗೆಗಳು ಸಂಭವಿಸುತ್ತಿವೆ. ಇದರ ನೀತ್ಯಾತ್ಮಕ ಮಗ್ಗುಲುಗಳ ಸರಿ-ತಪ್ಪು ಬೇರೆಯದೇ ಪ್ರಶ್ನೆ. ಆದರೆ ಅದನ್ನು ಮೇಲುಪದರದ ರಾಜಕೀಯ ಮೈಲೇಜಿಗೆ ಬಳಸಿಕೊಳ್ಳುವಂತಹ ಕ್ಷುದ್ರ ರಾಜಕಾರಣ ಹೊಲಸು. ಸಾರ್ವಜನಿಕರಿಗೆ ಪಡಿತರ ತಲುಪುತ್ತಿಲ್ಲ ಎಂಬ ಕಾರಣಕ್ಕೆ, ಆ ವ್ಯವಸ್ಥೆಯನ್ನು ಬಲಪಡಿಸುವ ಬದಲು, ವ್ಯವಸ್ಥೆಯನ್ನೇ ಬದಲಿಸಿ ‘ನಗದು’ ವಿತರಿಸುವ ತೀರ್ಮಾನಕ್ಕೆ ಸಿದ್ಧತೆ ನಡೆದಿದ್ದರೆ, ಅದಕ್ಕೆ ಫಲಾನುಭವಿಗಳ ಅಭಿಪ್ರಾಯ ಅಗತ್ಯವಿಲ್ಲವೆ?
ಹಿನ್ನೆಲೆಯ ಬೆಳವಣಿಗೆಗಳು
ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಕಾರ್ಯಾರಂಭಿಸಿದ್ದು, 1939ರ ಎರಡನೇ ವಿಶ್ವಯುದ್ಧ ಮತ್ತು ಆ ಬಳಿಕದ ಬಂಗಾಳದ ಮಹಾಕ್ಷಾಮದ ವೇಳೆ. ಸಾರ್ವತ್ರಿಕವಾಗಿದ್ದ ಈ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಉದಾರೀಕರಣದ ಆರಂಭದ ಹಂತದಲ್ಲಿ (1997), ಸಬ್ಸಿಡಿ ಹೊರೆ ತಗ್ಗಿಸಿಕೊಳ್ಳುವುದಕ್ಕಾಗಿ ಗುರಿನಿರ್ದಿಷ್ಟ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಆಗಿ ರೂಪಿಸಲಾಯಿತು. ಅದಕ್ಕಾಗಿ ಫಲಾನುಭವಿಗಳನ್ನು ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಎಂಬ ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿತ್ತು. ಆದರೆ 2013ರಲ್ಲಿ ಯುಪಿಎ ಸರಕಾರ ಆಹಾರ ಭದ್ರತಾ ಕಾಯ್ದೆಯನ್ನು ತಂದ ಹಿನ್ನೆಲೆಯಲ್ಲಿ ಮತ್ತೆ ಆಹಾರ ಸಬ್ಸಿಡಿಯ ಹೊರೆ ಏರಿತು. ಎನ್‌ಡಿಎ ಸರಕಾರ ಬಂದಬಳಿಕ, 2014ರಲ್ಲಿ ಪಿಡಿಎಸ್ ವ್ಯವಸ್ಥೆಯನ್ನು ಮತ್ತೆ ಸ್ಟ್ರೀಮ್‌ಲೈನ್ ಮಾಡಲು ಅಂದಿನ ಸರಕಾರದ ಪಿಡಿಎಸ್ ಸಚಿವ ಶಾಂತಾಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಆ ಸಮಿತಿ 2015ರಲ್ಲಿ ವರದಿ ಸಲ್ಲಿಸಿದಾಗಲೇ ಶೇ. 46 ಪಡಿತರ ತಲುಪಬೇಕಾದಲ್ಲಿಗೆ ತಲುಪುತ್ತಿಲ್ಲ. ಹಾಗಾಗಿ, ನೇರ ನಗದು ವರ್ಗಾವಣೆಯೇ ಸೂಕ್ತ ಪರಿಹಾರ ಎಂಬ ತೀರ್ಮಾನಕ್ಕೆ ಬಂದಿತ್ತು. ಆ ಬಳಿಕ ಆಧಾರ್-ಪಿಡಿಎಸ್ ವ್ಯವಸ್ಥೆ ಲಿಂಕ್ ಮಾಡಿ ಒಂದಷ್ಟು ಕಾರ್ಯಕ್ಷಮತೆ ಸಾಧಿಸಲಾಯಿತು. ಮುಂದೆ 2019ರಲ್ಲಿ ಕೋವಿಡ್ ಜಗನ್ಮಾರಿ ಅಪ್ಪಳಿಸಿದ ಬಳಿಕ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆವೈ) ಮತ್ತೆ ಆಹಾರ ಸಬ್ಸಿಡಿ ಹೊರೆಯನ್ನು ಹೆಚ್ಚಿಸಿದೆ. ಹಾಗಾಗಿ ಸರಕಾರಗಳಿಗೆ ಇದು ಮತ್ತೆ ತಲೆನೋವು ಅನ್ನಿಸತೊಡಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳು ತಮ್ಮ ಆಹಾರ ಸಬ್ಸಿಡಿ ಹೊರೆಯ ಕುರಿತು ತಲೆ ಕೆಡಿಸಿಕೊಂಡಿರುವಷ್ಟು ಆಳವಾಗಿ ಜನರ ಬಡತನ, ಖರೀದಿ ಸಾಮರ್ಥ್ಯದ ಕೊರತೆಯ ಕುರಿತು ತಲೆ ಕೆಡಿಸಿಕೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.
ತಮಾಷೆ ಎಂದರೆ, ವಿಶ್ವ ಬ್ಯಾಂಕಿನ 2022ರ ಡೇಟಾ ಪ್ರಕಾರ ಭಾರತದಲ್ಲಿ ಶೇ. 12.9 ಜನ ಕಡುಬಡತನದಲ್ಲಿ (ದಿನಕ್ಕೆ 159ರೂ.ಗಿಂತ ಕಡಿಮೆ ಆದಾಯದಲ್ಲಿ) ಬದುಕುತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ, ನೀತಿ ಆಯೋಗವು ನರೇಂದ್ರ ಮೋದಿ ಆಡಳಿತದ 9 ವರ್ಷಗಳಲ್ಲಿ 2.48 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲಾಗಿದೆ ಎಂದು ಹೇಳಿಕೊಂಡಿದ್ದು, ಈ ವಿಚಾರವನ್ನು ಭಾರತ ಸರಕಾರ ತನ್ನ ಬೆನ್ನು ತಟ್ಟಿಕೊಳ್ಳಲು ಧಾರಾಳವಾಗಿ ಬಳಸಿಕೊಂಡಿತ್ತು. ಇದು ನಿಜಕ್ಕೂ ನಡೆದಿರುವುದು ಹೌದೆಂದಾದರೆ, ಅಷ್ಟೊಂದು ಜನರನ್ನು ದೇಶದಲ್ಲಿ ಪಿಡಿಎಸ್ ವ್ಯವಸ್ಥೆಯಿಂದ ಹೊರಗಿರಿಸುವುದು ತಾರ್ಕಿಕ ಅಲ್ಲವೇ? ಅಥವಾ ಜನ ಬಡತನ ರೇಖೆಯಿಂದ ಮೇಲೆ ಬಿದ್ದಿರುವುದು ಕೇವಲ ಕಾಗದದ ಮೇಲಿನ ಬೊಗಳೆಯೇ?!