ಮರೆಯಾದವರು ಮತ್ತು ಮರೆಯಲಾರದವರು
ಜನಪ್ರಿಯರು, ಖ್ಯಾತರು ಎಂದೆನ್ನಿಸಿಕೊಳ್ಳುವವರೆಲ್ಲ ಶ್ರೇಷ್ಠರಾಗಿರಬೇಕಾಗಿಲ್ಲ. ಹಾಗೆಯೇ ಶ್ರೇಷ್ಠರೆಲ್ಲರೂ ಖ್ಯಾತ, ಜನಪ್ರಿಯ ಎಂದೆನ್ನಿಸಿಕೊಳ್ಳಬೇಕಾಗಿಲ್ಲ. ಜನಪ್ರಿಯ ಎಂಬ ಪದದ ವ್ಯಾಖ್ಯೆ ಬದಲಾಗಿದೆ. ಈಗೀಗ ಜನಪ್ರಿಯತೆ ಎಂದರೆ ಪ್ರಚಾರಪ್ರಿಯತೆ ಎಂದಾಗಿದೆ. ತಮ್ಮ ಪಾಡಿಗೆ ತಾವು ತಮ್ಮ ವೃತ್ತಿಯೋ ಪ್ರವೃತ್ತಿಯೋ ಅಂತೂ ಒಂದು ಬದುಕಿಗೆ ಅಂಟಿಕೊಂಡು ಇರುವವರು ಅನೇಕರಿದ್ದಾರೆ. ಅಂತಹವರಿಗೆ ತಮ್ಮ ಊರೇ ಬನವಾಸಿ. ತಮ್ಮ ಮೂರು ಹೆಜ್ಜೆಯೇ ವಿಶ್ವ. ಹದನಿಧಾನದ ಬದುಕು; ಅಲ್ಲೊಂದಿಷ್ಟು ಸಾಮರಸ್ಯ. ತಾನು ಹಿಂದುಳಿದು ತನ್ನ ಮನಸ್ಸು ಆರೋಗ್ಯವಾಗಿದ್ದರೆ ಸಾಕು. ಬದುಕು ಸಂಪನ್ನವಾಗುತ್ತದೆ.
ಮೊನ್ನೆ 18.11.2024ರಂದು ಡಾ| ಪೈಲೂರು ಗೋಪಾಲಕೃಷ್ಣ ಎಂಬ ನಮ್ಮೂರಿನ ಒಬ್ಬ ಹಿರಿಯ ವೈದ್ಯರು ತಮ್ಮ 93ನೇ ವಯಸ್ಸಿನಲ್ಲಿ ತೀರಿಕೊಂಡರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲಿದ್ದರು. ಅವರ ಆರೋಗ್ಯಪೂರ್ಣ ಬದುಕಿನಂತೆ ಅವರ ಸಾವೂ ತಾಲೂಕಿನ ಹೊರಗೆ ಸುದ್ದಿಯಾಗಲೇ ಇಲ್ಲ. ವಿಶ್ವ- ಹೋಗಲಿ, ತಮ್ಮ ಊರಿನಿಂದ, ಬಂಧುವರ್ಗದಿಂದ ಹೊರಗೆ ಪ್ರಚಾರವಾದದ್ದು ಕಡಿಮೆ. ಆದರೆ ಅವರನ್ನು ಬಲ್ಲವರು ದೂರದಿಂದಾಗಲಿ, ಸಮೀಪದಿಂದಾಗಲಿ, ಅವರ ಮೇರುವ್ಯಕ್ತಿತ್ವವನ್ನು ಕಾಣುತ್ತಿದ್ದರು. ಅದು ಎಷ್ಟೇ ದೂರ ಹೋದರೂ ಮಾಸುತ್ತಿರಲಿಲ್ಲ.
ಇದು ಅವರ ಕುರಿತ ಅಭಿನಂದನಾ ಅಥವಾ ಸಂಸ್ಮರಣ ಭಾಷಣವಲ್ಲ. ಒಂದು ಐತಿಹ್ಯವೂ ಅಲ್ಲ. ಅವರ ಬದುಕಿನ ವರದಿಯೂ ಅಲ್ಲ. ನಾವು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವಕ್ಕೂ ನಮಗೂ ಇರುವ ಹೊಕ್ಕಳುಬಳ್ಳಿಯ ಸಂಬಂಧ. ಒಂದಿಷ್ಟು ನೆನಪುಗಳು. ಮೆಲುಕುಗಳು. ಅವರು ನನಗೆ ‘ಡಾಕ್ಟರ್‌ಭಾವ’. ಇದು ಸಂಬಂಧದ ಪ್ರಶ್ನೆಯಲ್ಲ. ಏನಾದರೂ ಒಂದು ಹೆಸರು ಹಿಡಿದು ಉಲ್ಲೇಖಿಸಬೇಕಲ್ಲ, ಅವರನ್ನು ಹಾಗೇ ಕರೆಯುತ್ತಿದ್ದೆವು. ಅವರಿದ್ದಾಗ ನಮ್ಮ ಊರಿನಲ್ಲಿ ಅವರೊಡನಾಟದ ಸಂಬಂಧ ಎಷ್ಟು ಗಟ್ಟಿಯಿತ್ತೆಂದರೆ ಅದೀಗ ಹರಿತವಾಗಿ ಕಾಡತೊಡಗಿದೆ. ಅವರನ್ನು ನನ್ನ ಕುತೂಹಲದ ಮುಗ್ಧ ಕಣ್ಣುಗಳಿಂದ ಬಾಲ್ಯದಿಂದಲೇ ಕಂಡವನು ನಾನು. ಆದ್ದರಿಂದ ಅವರ ಬಗ್ಗೆ ಒಂದಿಷ್ಟು:
ಡಾಕ್ಟರ್‌ಭಾವ ಒಂದು ತಕ್ಕಮಟ್ಟಿಗೆ ಶ್ರೀಮಂತ ಕುಟುಂಬವೆಂದು ಹೇಳಬಹುದಾದ ಮನೆತನದಲ್ಲಿ ಹಿರಿಯ ಮಗನಾಗಿ ಹುಟ್ಟಿ ಆಗಿನ ಕಾಲಕ್ಕೆ ವಿಶೇಷವೆನ್ನುವ ವೈದ್ಯಕೀಯ ಶಿಕ್ಷಣವನ್ನು ಮದರಾಸಿನಲ್ಲಿ ಪೂರೈಸಿ ತನ್ನೂರಿನಲ್ಲಿ ನೆಲೆನಿಂತರು. ಸುಮಾರು ಆರು ದಶಕಗಳ ಕಾಲ ನಿರಂತರವಾಗಿ ಅಂದರೆ ಈಗ ಕೆಲವು ವರ್ಷಗಳ ಹಿಂದೆ ವಯೋಸಹಜ ಶೈಥಿಲ್ಯದಿಂದ ಬಳಲುವವರೆಗೂ ಜನಾನುರಾಗಿಯಾಗಿ ಸೇವೆ ಸಲ್ಲಿಸಿದರು.
ಕೆಲವು ವಿಚಾರಗಳು ಡಾಕ್ಟರ್‌ಭಾವನ ಹಸಿರು ನೆನಪನ್ನು ತೇವವಾಗಿಡಲು ಸಹಕಾರಿಯಾಗುತ್ತದೆಂದು ನಂಬಿದ್ದೇನೆ. ಅವರಿದ್ದ ಸ್ಥಳ ಮಾದರಿ ಹಳ್ಳಿಯ ನೋಟವನ್ನು ಬೀರುತ್ತಿತ್ತು. ಶಾಲೆ, ಅಂಚೆ ಕಚೇರಿ, ಸಹಕಾರಿ ಸಂಘ, ಒಂದೆರಡು ಅಂಗಡಿಗಳು ಇದ್ದಾಗ ಅವರು ತಮ್ಮ ವೈದ್ಯ ವೃತ್ತಿಯನ್ನು ಆರಂಭಿಸಿದರು. ಎಂದೂ ತಾನು ಸುಂದರವಾಗಿ ಕಾಣಬೇಕೆಂದು ಬಯಸಿದವರಲ್ಲ. ಪ್ಯಾಂಟನ್ನು ಮಣಿಗಂಟಿನಿಂದ ಮೇಲೆ ಮಡಚಿ, ಕಾಲಿಗೆ ಹವಾಯಿ ಚಪ್ಪಲಿಗಳನ್ನು ಹಾಕಿ ಒಂದು ಇಸ್ತ್ರಿಯೂ ಇಲ್ಲದ ಹತ್ತಿಬಟ್ಟೆಯ ಅಂಗಿ ಹಾಕಿಕೊಂಡರೆ ಅವರ ಉಡುಪು ಮುಗಿಯಿತು. ನಗುತ್ತಾ ಮಾತನಾಡುವಂತೆ ಅವರ ಮುಖಭಂಗಿ. ವೇಗವಾಗಿ ನಡೆಯುತ್ತಿದ್ದರು. (ಅವರಿಗಿದು ಪಿತ್ರಾರ್ಜಿತ; ಅವರ ಅಪ್ಪನೂ ಹೀಗೆಯೇ ನಡೆಯುತ್ತಿದ್ದರು!)
ಡಾಕ್ಟರ್‌ಭಾವನವರಿಗೆ ಆಸಕ್ತಿಗಳೋ ಅಪಾರ. ಅವರ ಕ್ಲಿನಿಕ್ಕಿಗೆ ಹೋದರೆ ಸಾಕು, ಬೇರೆ ರೋಗಿಗಳನ್ನು ಪರೀಕ್ಷಿಸುತ್ತಿದ್ದಂತೆಯೇ ನಮ್ಮಂತಹ ಕ್ರಿಕೆಟ್ ಆಸಕ್ತರನ್ನು ಕಂಡರೆ ಸಾಕು, ‘‘ಎರಡು ವಿಕೆಟ್ ಆಗಲೇ ಹೋಗಿದೆ, ಇನ್ನು ಮಿಡಲ್ ಆರ್ಡರ್ ಹೇಗುಂಟೋ ಗೊತ್ತಿಲ್ಲ..’’ ಎಂದು ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದರು. ಕ್ರಿಕೆಟ್‌ನ ಕರಾರುವಾಕ್ಕು ಮಾಹಿತಿ ಅವರಲ್ಲಿತ್ತು. ಆದರೆ ಇದರಿಂದಾಗಿ ತುರ್ತು ಚಿಕಿತ್ಸೆಯಿರುವವರಿಗೆ ತೊಂದರೆಯಾಗುವಂತೆ ಅವರು ವಿಚಲಿತರಾಗುತ್ತಿರಲಿಲ್ಲ.
ಡಾಕ್ಟರ್‌ಭಾವ ಜ್ಞಾನದಾಹಿ. ಏನನ್ನಾದರೂ ಓದಬೇಕು. ಅಂಚೆಯೊಂದಿಗೆ ಅಲ್ಲಿನ ಪತ್ರಿಕೆಯ ಅಂಗಡಿಗೆ ನಾಲ್ಕಾರು ಪತ್ರಿಕೆಗಳು ಬರುತ್ತಿದ್ದವು. ಯಾರೇ ರೋಗಿಗಳಿರಲಿ, ಅವರನ್ನು ‘‘ಒಂದು ನಿಮಿಷ.. ಈಗ ಬಂದೆ’’ ಎನ್ನುತ್ತ ಅಲ್ಲಿಗೆ ಓಡಿ ಹೋಗಿ ‘ಹಿಂದು’ (ಎಂದು ನೆನಪು) ಪತ್ರಿಕೆಯನ್ನೊಮ್ಮೆ ಓದದೆ ಅವರ ದಿನಚರಿ ಪೂರ್ಣವಾಗುತ್ತಿರಲಿಲ್ಲ.
ಪ್ರಾಯಃ ಆಗಿನ ಎಲ್‌ಐಎಮ್‌ನಂತಹ ಪದವಿಗಳು ಇಂದಿನ ಟ್ರಯಲ್ ಮತ್ತು ಎರರ್ ಪದ್ಧತಿಗಿಂತ ಎಷ್ಟೋ ಮೇಲಿದ್ದವು ಅನ್ನಿಸುತ್ತದೆ. ಒಬ್ಬ ವ್ಯಕ್ತಿಗೆ ಬಂದ ರೋಗ ಏನೆಂದು ಅವರನನ್ನು ಸ್ವತಃ ಪರೀಕ್ಷಿಸಿಯೇ ಗೊತ್ತಾಗುತ್ತಿತ್ತು. ಈಗಿನಂತೆ ಹತ್ತಾರು ಪರೀಕ್ಷೆಗಳಿರಲಿಲ್ಲ. ವೈದ್ಯರ ದಕ್ಷತೆಗೆ ಆಗ ನಿಜವಾದ ಸವಾಲಿತ್ತು. ಅದರಲ್ಲಿ ಅವರು ಅತ್ಯುಚ್ಚ ಮಟ್ಟದಲ್ಲಿ ತೇರ್ಗಡೆಯಾಗಿದ್ದರು ಎಂದನ್ನಿಸುತ್ತದೆ.
ಹಳೆಯ ಕಾಲ ಮತ್ತು ಹಳ್ಳಿಯ ಕಾಲ. ವೈದ್ಯರು ತಮ್ಮ ವೈದ್ಯಕೀಯ ಕಿಟ್ ಹಿಡಿದುಕೊಂಡು ಮಳೆಯಿದ್ದರೆ ಕೊಡೆ ಹಿಡಿದುಕೊಂಡು ರೋಗಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಹಳೆಯ ಕಪ್ಪು-ಬಿಳುಪು ಸಿನೆಮಾಗಳಲ್ಲಿ ಡಾಕ್ಟರುಗಳು ಹೀಗೇ ಸೇವೆಸಲ್ಲಿಸುತ್ತಿದ್ದರು. ಈಗ ಹಾಗಲ್ಲ. ಬ್ಯಾಂಕುಗಳ ಹಾಗೆ: ವೈದ್ಯರ ಸಮಯಕ್ಕೆ ತಕ್ಕ ಹಾಗೆ ರೋಗಿಗಳು ಬಂದು ಚಿಕಿತ್ಸೆ ಪಡೆಯಬೇಕು. ರಜಾದಿನಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ಅಂದು ರೋಗಗಳಿಗೂ ರಜೆ-ಕಡ್ಡಾಯ ರಜೆ. ಸೇವೆಯು ವ್ಯವಹಾರ, ವ್ಯಾಪಾರವಾದರೆ ಹೀಗೆಯೇ.
ನಮ್ಮ ಡಾಕ್ಟರ್‌ಭಾವ ನನ್ನ ಅಪ್ಪನ ಚಿಕಿತ್ಸೆಗಾಗಿ ಎಷ್ಟು ಸಲ ಬಂದಿದ್ದರೋ ನೆನಪಾಗುವುದಿಲ್ಲ. ರಸ್ತೆಗಳೇ ಇಲ್ಲದಲ್ಲಿ ಅಡಿಕೆ ತೋಟದ ನಡುವೆ ನಡೆದು ಹೋಗುವಾಗ ಅವರು ನನ್ನಂತಹ ಕಿರಿಯನ ಜೊತೆಗೆ ಸಂಭಾಷಿಸುತ್ತಿದ್ದದ್ದು ನೆನಪಾದರೆ ಈಗಲೂ ಸೋಜಿಗವೆನಿಸುತ್ತದೆ. ಹೆಚ್ಚು ಇಳುವರಿಯಿಲ್ಲದ ನಮ್ಮ ತೋಟದ ಅಡಿಕೆಮರಗಳನ್ನು ಗಮನಿಸಿಕೊಂಡು ಅವರು ಈ ಮರಕ್ಕೆ ಗೊಬ್ಬರ ಕೊಡಬೇಕು ಎಂದು ಗುರುತು ಹಾಕುತ್ತಿದ್ದರು. ಅವರೇ ಸ್ವತಃ ಕೃಷಿಕ. ಕ್ಲಿನಿಕ್‌ನಲ್ಲಿ ರೋಗಿಯನ್ನು ಪರೀಕ್ಷಿಸುತ್ತಿರುವಾಗ ಕಪ್ಪು ಮೋಡ ದಟ್ಟವಾಗಿ ವ್ಯಾಪಿಸಿದರೆ ಅನಿವಾರ್ಯವಲ್ಲದ ಸಂದರ್ಭಗಳಲ್ಲಿ ‘‘ಈಗ ಬಂದೆ..’’ ಎನ್ನುತ್ತ ಅಲ್ಲಿ ಹೋಗಿ ಹರಗದ ಅಡಿಕೆಯನ್ನು ರಾಶಿ ಮಾಡಿ ಅದಕ್ಕೇನಾದರೂ ಮುಚ್ಚಿ ಬರುತ್ತಿದ್ದರು.
1968ರಲ್ಲಿ ಅಂತ ನೆನಪು. ಒಮ್ಮೆ ನನ್ನ ಅಪ್ಪ ಕುಸಿದು ಬಿದ್ದರು. ಒಂದು ಕೈ, ಒಂದು ಕಾಲು ತಮ್ಮ ಶಕ್ತಿಯನ್ನು ಚಲನೆಯನ್ನು ಕಳೆದುಕೊಂಡಿದ್ದವು. ನಾನು ಡಾಕ್ಟರ್‌ಭಾವನವರಲ್ಲಿಗೆ ಹೋಗಿ ಹೇಳಿದೆ. ಅವರು ತಕ್ಷಣ ಬಂದು ಪರೀಕ್ಷೆ ಮಾಡಿದರು. ಆಗೆಲ್ಲ ಎದ್ದು ನಡೆಯಲಾಗದಿದ್ದರೆ ಅದನ್ನು ಪಕ್ಷವಾತ ಅಥವಾ ಕೊಳ್ಪು ಎಂದೆಲ್ಲ ಹೇಳುವುದು ಮತ್ತು ಅದಕ್ಕೆ ಎಣ್ಣೆ ಹಚ್ಚಿ ಬಿಸಿನೀರು ಸ್ನಾನಮಾಡಿಸುವುದು ವಾಡಿಕೆ. ಡಾಕ್ಟರ್‌ಭಾವ ಬಂದು ನೋಡಿ ಅದೇ ಇರಬಹುದು ಎಂಬ ಹಾಗೆ ಹೇಳಿ ‘‘ಯಾವುದಕ್ಕೂ ಒಂದೆರಡು ದಿನ ಕಾಯುವ’’ ಎಂದರು.
ಡಾಕ್ಟರ್‌ಭಾವ ವಾರಕ್ಕೊಮ್ಮೆ ತಮ್ಮ ಜೀಪಿನಲ್ಲಿ ತಾವೇ ಡ್ರೈವ್ ಮಾಡಿ ಮಂಗಳೂರಿಗೆ ಹೋಗಿ ಅಲ್ಲಿನ ಫಾರ್ಮಸಿಯಿಂದ ತಮಗೆ ಅಗತ್ಯವಿರುವ ಔಷಧಿಯನ್ನು ಸಗಟಾಗಿ ತರುತ್ತಿದ್ದರು. ಆ ವಾರಾಂತ್ಯಕ್ಕೂ ಅವರು ಅಲ್ಲಿಗೆ ಹೋಗಿದ್ದರು. ತಮ್ಮ ಖರೀದಿ ಮುಗಿಸಿ ಬಾವುಟಗುಡ್ಡೆಯ ಬಳಿಯಿದ್ದ ಕಸ್ತೂರ್‌ಬಾ ಮಡಿಕಲ್ ಕಾಲೇಜಿನ ಬಳಿ ಬರುವಾಗ ಅಲ್ಲಿ ಆಗಷ್ಟೇ ಲಂಡನ್‌ನಿಂದ ಮರಳಿದ ಹೃದ್ರೋಗತಜ್ಞ ವೈದ್ಯರೊಬ್ಬರ ಉಪನ್ಯಾಸವಿದೆಯೆಂದು ಓದಿದರು. ಅಲ್ಲೇ ಜೀಪ್ ನಿಲ್ಲಿಸಿ ಹೋಗಿ ಆಲಿಸಿದರು. ಅವರು ತಮ್ಮ ಭಾಷಣದಲ್ಲಿ ಮಾತನಾಡುತ್ತ ‘‘ನಮ್ಮಲ್ಲಿ ಪಕ್ಷವಾತ ಮುಂತಾದ ರೋಗಗಳ ಬಗ್ಗೆ ಸರಿಯಾದ ಅಧ್ಯಯನ ಅಥವಾ ಚಿಕಿತ್ಸೆಯಿಲ್ಲ; ಅದು ಹೃದಯದ ರಕ್ತನಾಳದ ವ್ಯೆಹಕ್ಕೆ ಸಂಬಂಧಿಸಿದ್ದು’’ ಎಂದು ವಿವರಣೆ ನೀಡಿದರು.
ಮರುದಿನ ಬೆಳಗ್ಗೆ ಅವರು ನಮ್ಮ ಮನೆಯಲ್ಲಿ ಪ್ರತ್ಯಕ್ಷ. ಬಂದವರೇ ಗಡಿಬಿಡಿಯಿಂದ ನನ್ನ ಅಪ್ಪನಲ್ಲಿ ‘‘ನಿಮಗೆ ಆದದ್ದು ಪಕ್ಷವಾತ ಅಲ್ಲ; ಅದು ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ರೋಗ. ಅದನ್ನು ನಾವು ಅದೇ ಹೃದ್ರೋಗತಜ್ಞರಲ್ಲಿ ತೋರಿಸುವ’’ ಎಂದರು. ಅವರ ಯೋಜನೆಯಂತೆ ಮಂಗಳೂರಿಗೆ ಹೋದೆವು. ಆ ವೈದ್ಯರನ್ನು ಕಂಡೆವು. ಹೌದು. ಅದು ರಕ್ತನಾಳಕ್ಕೆ ಸಂಬಂಧಿಸಿ ರಕ್ತದ ಹರಿವು ನಿಂತು ಕೈಕಾಲಿನ ಚಲನೆ ನಿಲ್ಲುವ, ನನಗೆ ಸರಿಯಾಗಿ ನೆನಪಾಗುವುದಿಲ್ಲ, ಎಂಡೋಕಾರ್ಡೈಟಿಸ್ ಎಂದೇನೋ ಹೇಳುವ, ಹ್ಯಾಮರೇಜ್‌ಗೆ ಸಮೀಪದ ಒಂದು ಆರೋಗ್ಯ ದುರವಸ್ಥೆ. ಅದಕ್ಕೆ ದೀರ್ಘ ಚಿಕಿತ್ಸೆ ನಡೆದು/ಪಡೆದು ಅಪ್ಪ ಗುಣಮುಖರಾದರು. ಇದು ಸುಮಾರು ಆರು ದಶಕಗಳ ಹಿಂದಿನ ಬೆಳವಣಿಗೆ, ಅದೂ ಹಳ್ಳಿಯ ಎಲ್‌ಐಎಮ್ ವೈದ್ಯರೊಬ್ಬರ ಅಧ್ಯಯನಶೀಲತೆಯ ಫಲವೆಂದು ನನಗೆ ಯಾವಾಗಲೂ ಅನ್ನಿಸುತ್ತದೆ.
ನನ್ನ ಅಪ್ಪನೂ ಅಷ್ಟೇ: ಹಾಸ್ಯಪ್ರವೃತ್ತಿಯವರು. ಆ ಮಂಗಳೂರಿನ ತಜ್ಞವೈದ್ಯರಲ್ಲಿ ಮಾತನಾಡುವಾಗ ಅವರು ‘‘ನೋಡಿ, ನೀವು ಇನ್ನು ಎರಡು ತಿಂಗಳ ಕಾಲ ನಿಮ್ಮ ಆಸ್ತಿ, ಕುಟುಂಬ ಇವನ್ನೆಲ್ಲ ಮರೆಯಬೇಕು’’ ಎಂದರು. ಆಗ ‘‘ಅಪ್ಪ ಹೌದೇ? ಹಾಗಾದರೆ ನನಗೆ ಚಿಕಿತ್ಸೆಯೇ ಬೇಡ’’ ಎಂದರು. ‘‘ಯಾಕೆ ಹೀಗೆ ಹೇಳುತ್ತೀರಿ?’’ ಎಂದದ್ದಕ್ಕೆ ಅಪ್ಪ ‘‘ನಾನು ಬದುಕುವುದೇ ನನ್ನ ಕುಟುಂಬ ಆಸ್ತಿ ಇವುಗಳ ಪೋಷಣೆಗೆ, ಅವನ್ನು ಮರೆತು ಬದುಕಿ ಏನಾಗಬೇಕು?’’ ಎಂದಾಗ ಆ ತಜ್ಞರೂ ಮನಸ್ವೀ ನಕ್ಕು ‘‘ಹೆದರಬೇಡಿ’’ ಎಂದರು. ಮತ್ತೊಮ್ಮೆ ನನ್ನ ಅಪ್ಪನಿಗೆ ಬೆನ್ನುಹುರಿಯ ರೋಗ ಬಂದಿತ್ತು. ಆಗ ಡಾಕ್ಟರ್‌ಭಾವನವರ ಸಲಹೆಯಂತೆ ಮಣಿಪಾಲದ ಹಿರಿಯ ಮೂಳೆತಜ್ಞರಲ್ಲಿ ಚಿಕಿತ್ಸೆಮಾಡಿಸಲಾಯಿತು. ಗುಣವಾಯಿತು. ಅದಾಗಿ ಕೆಲವು ವರ್ಷಗಳವರೆಗೆ ನನ್ನಪ್ಪ ನಮ್ಮೂರಿನಿಂದ ಪುತ್ತೂರಿಗೆ, ಅಲ್ಲಿಂದ ಮಂಗಳೂರಿಗೆ, ಅಲ್ಲಿಂದ ಉಡುಪಿಗೆ, ಅಲ್ಲಿಂದ ಮಣಿಪಾಲ ಹೀಗೆ ಬಸ್ಸಿನಲ್ಲಿ ಸುಮಾರು 150 ಕಿಲೋಮೀಟರಿಗೂ ಹೆಚ್ಚು ಪ್ರಯಾಣಿಸಿ ಅಲ್ಲಿ ಈಗ ಹೇಳಿದ ಮೂಳೆ ತಜ್ಞರಿಗೆ ನಮ್ಮ ಮನೆಯಲ್ಲಿ ಅಪ್ಪ ಕೃಷಿಮಾಡಿ ಸಂಗ್ರಹಿಸಿದ ಒಂದು ಬಾಟಲ್ ಜೇನನ್ನು ಕೊಟ್ಟುಬರುತ್ತಿದ್ದರು. ಆ ವೈದ್ಯರು ‘‘ಅಯ್ಯೋ, ಈ ಒಂದು ಬಾಟಲ್ ಜೇನಿಗೆ ನೀವು ಇಷ್ಟು ದೂರ ಬರುವುದು ಯಾಕೆ?’’ ಎಂದು ಹೇಳಿದರೂ ಅಪ್ಪ ಬಗ್ಗಲಿಲ್ಲ. ತನ್ನ ಕಾಯಕ ನಿಲ್ಲಿಸಲಿಲ್ಲ. ಕೆಲವು ವರ್ಷಗಳ ನಂತರ ಆ ವೈದ್ಯರು ಅಲ್ಲಿಂದ ಎಲ್ಲಿಗೋ ತೆರಳಿದರು. ಇದು ಆಗ ವೈದ್ಯರ ಕುರಿತು ರೋಗಿಗಳಿಗಿದ್ದ ವಿಶ್ವಾಸ, ಪ್ರೀತಿ.
ಇತ್ತೀಚೆಗಿನ ವರೆಗೂ ನಾನು ಊರಿಗೆ ಹೋಗಿದ್ದಾಗ ಡಾಕ್ಟರ್‌ಭಾವ ಎಲ್ಲಾದರೂ ಸಿಗುತ್ತಿದ್ದರು. ಮದುವೆ ಮುಂತಾದ ಸಮಾರಂಭಗಳಲ್ಲಿ ಎಷ್ಟು ಹೊತ್ತಿಗಾದರೂ ಹಾಜರಾಗುತ್ತಿದ್ದರು. ಅಲ್ಲೇನಾದರೂ ಪತ್ರಿಕೆಯೊಂದು ಸಿಕ್ಕಿದರೆ ಅದರಲ್ಲಿ ಮಗ್ನರಾಗುತ್ತಿದ್ದರು. ಒಂದು ಸೂಕ್ಷ್ಮ ಬದಲಾವಣೆಯೆಂದರೆ ನಾನೆಷ್ಟೇ ಹೇಳಿದರೂ ಅವರು ನನ್ನನ್ನು ‘ನೀನು’ ಎನ್ನುವ ಬದಲು ‘ನೀವು’ ಎಂದು ಸಂಬೋಧಿಸಲು ಆರಂಭಿಸಿದರು. ನನಗದು ಹಿತವಾಗಲೇ ಇಲ್ಲ.
ಊರಿನ ಎಲ್ಲ ಶ್ರೀಮಂತ-ಬಡವರಿಂದ ಗೌರವವನ್ನು ಸಂಪಾದಿಸಿದ ಡಾಕ್ಟರ್‌ಭಾವನಿಗೆ ಇಳಿವಯಸ್ಸಿನಲ್ಲಿ ‘ಅಜ್ಜಡಾಕ್ಟ್ರು’ ಎಂಬ ಅಮರಸಿಂಧೂದ್ಭವನ ಸ್ಥಾನ ಲಭಿಸಿತ್ತು. ಈಚೆಗೆ ಊರಿನಲ್ಲಿ ಯಾವುದೋ ಸಂಘಟನೆ ಅವರನ್ನು ಸನ್ಮಾನಿಸಿದ್ದನ್ನು ಪತ್ರಿಕೆಯಲ್ಲಿ ಓದಿ ತಿಳಿದೆ. ಯಾಕೋ ಮನಸ್ಸು ತುಂಬಿ ಬಂತು. ಹಳ್ಳಿಯ, ನಾವೆಲ್ಲ ಸಣ್ಣದೆಂದು ತಿಳಿದ ಗುಡ್ಡ ಬೆಟ್ಟದಂತೆ ಕಂಡಿತು.
ಮನ್ನಣೆಯ ದಾಹಕ್ಕೆ ಬಲಿಯಾಗಿ ಪ್ರಚಾರದ ಗೀಳನ್ನು ಅಂಟಿಕೊಂಡು, ನೆಚ್ಚಿಕೊಂಡು ತಾವೇ ಶ್ರೇಷ್ಠರೆಂದು ಬೀಗುವವರನ್ನು ಹತ್ತಿರದಿಂದ ಬಲ್ಲವರು ಅವರನ್ನು ಲೆಕ್ಕಿಸುವುದಿಲ್ಲ. ಅಂತಹವರು ನಿಕಟರಿಂದ ತಪ್ಪಿಸಿಕೊಂಡು ದೂರದಲ್ಲಿರುವವರನ್ನು ಮೆಚ್ಚಿಸುವ ರೀತಿಯಲ್ಲಿ ಗಾಳಿಪಟದಂತೆ ಹಾರಾಡುತ್ತಾರೆ. ದೂರದ ಬೆಟ್ಟಗಳು ಹತ್ತಿರ ಹೋದಂತೆ ದುರ್ಗಮದ ದರಿದ್ರ ಕಾಡಾಗಿ ಪರಿವರ್ತನೆಯಾಗುತ್ತವೆ.
ಬದುಕಿನ ಸಾಧನೆಯೇನು? ಪತ್ರಿಕೆಯಲ್ಲಿ ಹೆಸರು ಬರುವುದೇ? ಅತ್ತು ಕರೆದು ಔತಣ ಹಾಕಿಸಿಕೊಳ್ಳುವುದೇ? ಇಂದಿನ ಕಾಲದಲ್ಲಿ ಎದುರಿನಿಂದ ಯಾರೂ ದೂರುವುದಿಲ್ಲ. ಹೊಗಳುವವರೇ ಎಲ್ಲ. ಈ ಹೊಗಳುಭಟರ ಬಿನ್ನಾಣದ ದಿಬ್ಬಣದಲ್ಲಿ ಮದುಮಗನಂತೆ ಶೋಭಿಸುವುದೇ ಹಲವರಿಗೆ ಬದುಕಿನ ಸಾಧನೆ. ವಿಷಾದವೆಂದರೆ ಇಂತಹ ಪ್ರವೃತ್ತಿ ಸಂವೇದನಾಶೀಲರೆಂದು ಹೇಳಿಕೊಳ್ಳುವ ಬರೆಹಗಾರರಲ್ಲಿ, ಕಲಾವಿದರಲ್ಲಿ ಹೆಚ್ಚು.
ಜನಪ್ರಿಯರು, ಖ್ಯಾತರು ಎಂದೆನ್ನಿಸಿಕೊಳ್ಳುವವರೆಲ್ಲ ಶ್ರೇಷ್ಠರಾಗಿರಬೇಕಾಗಿಲ್ಲ. ಹಾಗೆಯೇ ಶ್ರೇಷ್ಠರೆಲ್ಲರೂ ಖ್ಯಾತ, ಜನಪ್ರಿಯ ಎಂದೆನ್ನಿಸಿಕೊಳ್ಳಬೇಕಾಗಿಲ್ಲ. ಜನಪ್ರಿಯ ಎಂಬ ಪದದ ವ್ಯಾಖ್ಯೆ ಬದಲಾಗಿದೆ. ಈಗೀಗ ಜನಪ್ರಿಯತೆ ಎಂದರೆ ಪ್ರಚಾರಪ್ರಿಯತೆ ಎಂದಾಗಿದೆ. ತಮ್ಮ ಪಾಡಿಗೆ ತಾವು ತಮ್ಮ ವೃತ್ತಿಯೋ ಪ್ರವೃತ್ತಿಯೋ ಅಂತೂ ಒಂದು ಬದುಕಿಗೆ ಅಂಟಿಕೊಂಡು ಇರುವವರು ಅನೇಕರಿದ್ದಾರೆ. ಅಂತಹವರಿಗೆ ತಮ್ಮ ಊರೇ ಬನವಾಸಿ. ತಮ್ಮ ಮೂರು ಹೆಜ್ಜೆಯೇ ವಿಶ್ವ. ಹದನಿಧಾನದ ಬದುಕು; ಅಲ್ಲೊಂದಿಷ್ಟು ಸಾಮರಸ್ಯ. ತಾನು ಹಿಂದುಳಿದು ತನ್ನ ಮನಸ್ಸು ಆರೋಗ್ಯವಾಗಿದ್ದರೆ ಸಾಕು. ಬದುಕು ಸಂಪನ್ನವಾಗುತ್ತದೆ.
ಮಹಾಭಾರತದಲ್ಲಿ ಗುಹ, ಶಬರಿ ಮುಂತಾದವರ ಪಾತ್ರಗಳು ಒಂದೊಂದು ದೃಶ್ಯದಲ್ಲಿ ಬಂದು ಹೋಗುತ್ತವೆ. ಆದರೆ ಅವರನ್ನು ಮರೆಯು ವಂತಿಲ್ಲ. ರಾಮ-ಲಕ್ಷ್ಮಣ-ಸೀತೆಯರು ಎಷ್ಟು ಮುಖ್ಯರೋ ಅಷ್ಟೇ ಮುಖ್ಯ ಈ ಪಾತ್ರಗಳು. ಪ್ರಾಯಃ ಪೂರ್ಣಚಂದ್ರ ತೇಜಸ್ವಿಯವರ ಗಮನಕ್ಕೆ ನಮ್ಮ ಈ ಡಾಕ್ಟರ್‌ಭಾವ ಬಿದ್ದಿದ್ದರೆ ಅವರು ಅಮರಕಥೆಯಾಗಿ ನಾಡಿನ ಎಲ್ಲ ಓದುಗರ ನಡುವೆ ನಡೆದಾಡುವ ಪಾತ್ರವಾಗುತ್ತಿದ್ದರೇನೋ? ಮಹಾಭಾರತದಲ್ಲಿ ಗುಹ, ಶಬರಿ ಮುಂತಾದವರ ಪಾತ್ರಗಳು ಒಂದೊಂದು ದೃಶ್ಯದಲ್ಲಿ ಬಂದು ಹೋಗುತ್ತವೆ. ಆದರೆ ಅವರನ್ನು ಮರೆಯು ವಂತಿಲ್ಲ. ರಾಮ-ಲಕ್ಷ್ಮಣ-ಸೀತೆಯರು ಎಷ್ಟು ಮುಖ್ಯರೋ ಅಷ್ಟೇ ಮುಖ್ಯ ಈ ಪಾತ್ರಗಳು. ಪ್ರಾಯಃ ಪೂರ್ಣಚಂದ್ರ ತೇಜಸ್ವಿಯವರ ಗಮನಕ್ಕೆ ನಮ್ಮ ಈ ಡಾಕ್ಟರ್‌ಭಾವ ಬಿದ್ದಿದ್ದರೆ ಅವರು ಅಮರಕಥೆಯಾಗಿ ನಾಡಿನ ಎಲ್ಲ ಓದುಗರ ನಡುವೆ ನಡೆದಾಡುವ ಪಾತ್ರವಾಗುತ್ತಿದ್ದರೇನೋ?