ಬೆರಳು ತೋರಿದರೆ...

ಒಬ್ಬನೇ ಎಂದಾಕ್ಷಣ ಒಂಟಿ, ಏಕಾಂಗಿ ಎಂದು ಅನೇಕರು ತಿಳಿಯುತ್ತಾರೆ. ತಿಳಿಯುತ್ತಾರೆ ಎಂಬುದಕ್ಕಿಂತಲೂ ‘ಭ್ರಮಿಸುತ್ತಾರೆ’ ಎನ್ನಬಹುದು. ಏಕೆಂದರೆ ಕಣ್ಣೆದುರಲ್ಲಿರುವುದೆಲ್ಲವೂ ನಮ್ಮ ಜೊತೆ ನಡೆಯಬೇಕೆಂದಾಗಲೀ, ಸಂಭಾಷಿಸಬೇಕೆಂದೇನೂ ಇಲ್ಲ. ನಾವು ನೋಡಿದ್ದೆಲ್ಲವೂ ಸತ್ಯವೇ ಆಗಬೇಕಾಗಿಲ್ಲ. ಎಲ್ಲರ ನಡುವೆ ಕುಳಿತವನೂ ಅನ್ಯಮನಸ್ಕನಾಗಿ ಕುಳಿತರೆ ಆತ ಒಂಟಿತನವನ್ನು ಅನುಭವಿಸುತ್ತಾನೆ ಎಂದೇ ಅರ್ಥ ಅಥವಾ ಒಬ್ಬನೇ ಕುಳಿತು ತನ್ನ ಭಾವಪ್ರಪಂಚದಲ್ಲಿ ವಿಹರಿಸುವಾಗ ಇಡೀ ಜಗತ್ತೇ ಆತನೊಂದಿಗಿರುತ್ತದೆ. ಹೀಗೆ ವ್ಯಷ್ಟಿಯಲ್ಲಿ ಸಮಷ್ಟಿ ಭಾವ, ಹಾಗೂ ಸಮಷ್ಟಿಯಲ್ಲಿ ವ್ಯಷ್ಟಿ ಭಾವ ಮುಗಿವಿಲ್ಲದಂತೆ ಉರುಳುತ್ತಲೇ ಇರುತ್ತವೆ. ವ್ಯಕ್ತಿ ಬೇರೆ; ಕಾಲ ಬೇರೆ; ಸ್ಥಳ ಬೇರೆ; ಸಂದರ್ಭ ಬೇರೆ.

Update: 2024-01-18 07:33 GMT

ಒಬ್ಬನೇ ಎಂದಾಕ್ಷಣ ಒಂಟಿ, ಏಕಾಂಗಿ ಎಂದು ಅನೇಕರು ತಿಳಿಯುತ್ತಾರೆ. ತಿಳಿಯುತ್ತಾರೆ ಎಂಬುದಕ್ಕಿಂತಲೂ ‘ಭ್ರಮಿಸುತ್ತಾರೆ’ ಎನ್ನಬಹುದು. ಏಕೆಂದರೆ ಕಣ್ಣೆದುರಲ್ಲಿರುವುದೆಲ್ಲವೂ ನಮ್ಮ ಜೊತೆ ನಡೆಯಬೇಕೆಂದಾಗಲೀ, ಸಂಭಾಷಿಸಬೇಕೆಂದೇನೂ ಇಲ್ಲ. ನಾವು ನೋಡಿದ್ದೆಲ್ಲವೂ ಸತ್ಯವೇ ಆಗಬೇಕಾಗಿಲ್ಲ. ಎಲ್ಲರ ನಡುವೆ ಕುಳಿತವನೂ ಅನ್ಯಮನಸ್ಕನಾಗಿ ಕುಳಿತರೆ ಆತ ಒಂಟಿತನವನ್ನು ಅನುಭವಿಸುತ್ತಾನೆ ಎಂದೇ ಅರ್ಥ ಅಥವಾ ಒಬ್ಬನೇ ಕುಳಿತು ತನ್ನ ಭಾವಪ್ರಪಂಚದಲ್ಲಿ ವಿಹರಿಸುವಾಗ ಇಡೀ ಜಗತ್ತೇ ಆತನೊಂದಿಗಿರುತ್ತದೆ. ಹೀಗೆ ವ್ಯಷ್ಟಿಯಲ್ಲಿ ಸಮಷ್ಟಿ ಭಾವ, ಹಾಗೂ ಸಮಷ್ಟಿಯಲ್ಲಿ ವ್ಯಷ್ಟಿ ಭಾವ ಮುಗಿವಿಲ್ಲದಂತೆ ಉರುಳುತ್ತಲೇ ಇರುತ್ತವೆ. ವ್ಯಕ್ತಿ ಬೇರೆ; ಕಾಲ ಬೇರೆ; ಸ್ಥಳ ಬೇರೆ; ಸಂದರ್ಭ ಬೇರೆ.‘ಬೆರಳು ತೋರಿದರೆ ಹಸ್ತ ನುಂಗುವ ಜಾತಿ’ ಎಂಬ ನಾಣ್ಣುಡಿಯಿದೆ. ಸ್ವಲ್ಪ ಹೇಳಿದರೆ ಎಲ್ಲವನ್ನೂ ತಿಳಿಯುವವರು ಅಥವಾ ಇಷ್ಟೇ ಇಷ್ಟು ಸಿಕ್ಕಿದರೆ ಸಾಕು ಎಲ್ಲವನ್ನೂ ದೋಚುವವರು ಹೀಗೆ ಆಯಾಯ ಸಂದರ್ಭಕ್ಕನುಗುಣವಾಗಿ ಒಳಿತು ಕೆಡುಕುಗಳಿಗನುಗುಣವಾಗಿ ಅರ್ಥವಿಸಬಹುದು. ಸಂಘಟನೆಗಳ ತನು-ಮನ-ಧನ ಸಂಗ್ರಹ ಯೋಜನೆಗಳಲ್ಲಿ ಇಂಥವರಿಗೆ ಆದ್ಯತೆ. ಇಂಥವರು ಬುದ್ಧಿವಂತರೂ ಹೌದು; ಅದೃಷ್ಟವಂತರೂ ಹೌದು. ಅವಕಾಶವನ್ನು ಹುಡುಕಿಕೊಂಡು ಹೋಗುತ್ತಾರೆ; ಅವಕಾಶ ಪಡೆಯುತ್ತಾರೆ.

ನಾನು ಹೇಳಿದ ಬೆರಳ ಸೂಚನೆ ಬೇರೆ. ಅದು ಒಂದು ಝೆನ್ ಉಕ್ತಿಯದ್ದು: ಚಂದಿರನೆಡೆಗೆ ಬೆರಳು ತೋರಿದರೆ ಸೂಚಿಸಿದ ದಿಕ್ಕನ್ನು ನೋಡುವ ಬುದ್ಧಿವಂತರ ಮತ್ತು ಬೆರಳಿನತುದಿ ನೋಡಿದ ದಡ್ಡರ ಕುರಿತು ಇರುವ ಮಾತು. ಇದು ನಿತ್ಯಾನುಭವದ ಮಾತು. ಎಷ್ಟೇ ಉದಾತ್ತ ವಿಚಾರವನ್ನು ಹೇಳಿ ಜನರ ಜೀವನಮಟ್ಟವನ್ನು, ಮಾನಸಿಕ, ಬೌದ್ಧಿಕ ಮಟ್ಟವನ್ನು ಎತ್ತಲು ಪ್ರಯತ್ನಿಸಿದರೂ ಬಹುತೇಕ ಜನರು ಹೀಗೆ ಪ್ರಯತ್ನಿಸುವವರನ್ನು ವೈಭವೀಕರಿಸಿ ಅವರಿಗೆ ಖುಷಿಯಾಗುವಂತೆ ವರ್ತಿಸುತ್ತಾರೆಯೇ ಹೊರತು ಅವರು ಹೇಳಿದ ವಿಚಾರಗಳ ಕುರಿತಲ್ಲ. ಇದು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಒಂದೇ ವ್ಯಾಖ್ಯಾನಕ್ಕೆ ಒಳಪಡುವುದು ಒಂದು ಅಚ್ಚರಿಯ ವಿಷಯ.

ಒಂದೆರಡು ಸೈದ್ಧಾಂತಿಕ ಮನಸ್ಥಿತಿಗಳನ್ನು ವಿವರಿಸಲು ಪ್ರಯತ್ನಿಸುತ್ತೇನೆ: ಮನುಷ್ಯರೆಲ್ಲ ಒಂದೇ ರೀತಿಯಲ್ಲಿ ಒಂದೇ ಮಟ್ಟದಲ್ಲಿ ಇರುವುದು ಅಸಾಧ್ಯ. ಅದು ಒಂದು ಪಿರಮಿಡ್ನಂತೆ ಜನರನ್ನು ಒಳಗೊಳ್ಳುವ ಸಮಾಜ. ಕೆಳಹಂತ ವಿಸ್ತಾರವಾಗಿರುತ್ತದೆ. ಅಲ್ಲಿ ಹೆಚ್ಚು ಮಂದಿ ಇರುತ್ತಾರೆ. ಅವರಿಗಿಂತ ಸ್ವಲ್ಪ ಹೆಚ್ಚು ಎತ್ತರದಲ್ಲಿ ಇನ್ನೊಂದಷ್ಟು ಮಂದಿ ಇರುತ್ತಾರೆ. ಹೀಗೆ ಪಿರಮಿಡ್ನ ತುದಿಯ ವರೆಗೂ ಜನ ಹಂಚಿಹೋಗುತ್ತಾರೆ. ತುತ್ತತುದಿಯಲ್ಲಿ ಒಬ್ಬನೇ ನಿಲ್ಲುವಷ್ಟು ಜಾಗ ಇರುತ್ತದಲ್ಲವೇ? ಅದು ಶಿಖರಾಗ್ರ ಎನ್ನಿಸುವ ಜಾಗ. ಶಿಖರವೆಂದು ನಾವು ಹೇಳುವ ಪರ್ವತ-ಬೆಟ್ಟದ ತುದಿ ಇಷ್ಟು ಚೂಪಾಗಿರುವುದಿಲ್ಲ. ಆದ್ದರಿಂದ ಅಲ್ಲಿ ತೇನ್ಸಿಂಗ್ ಮತ್ತು ಎಡ್ಮಂಡ್ ಹಿಲೆರಿ ಇಬ್ಬರಿಗೂ ಜಾಗವಿತ್ತು. ಪಿರಮಿಡ್ನಂತಹ ರಚನೆಯಾಗಿರುತ್ತಿದ್ದರೆ ಅಲ್ಲಿ ಇಬ್ಬರಿಗೆ ಜಾಗವಿರುತ್ತಿರಲಿಲ್ಲ. ಇದ್ದರೆ ಅದು ತುದಿಯಾದೀತು ಹೇಗೆ? ಆದರೂ ಇಂತಹ ತುದಿಯ ದುರಂತವೆಂದರೆ ಅಲ್ಲಿಗೆ ತಲುಪುವವನು ಒಂಟಿಯಾಗುತ್ತಾನೆ. ಅವನಿಗೆ ಮೇಲೆ ಆಕಾಶ; ಉಳಿದ ಎಲ್ಲವೂ ಕಾಲಕೆಳಗಿನ ನೋಟ.

ಹೀಗೆ ತುತ್ತತುದಿಯನ್ನಲ್ಲದಿದ್ದರೂ ಸಾಮಾನ್ಯವಾಗಿ ಅತೀ ಎತ್ತರವನ್ನು ತಲುಪುವ ಮಹಾನುಭಾವರು ಹೆಚ್ಚಿರುವುದಿಲ್ಲ. ಇತರರು ತಮ್ಮ ತಮ್ಮ ಸಮುದಾಯದ ನಡುವೆ ಒಂದಿಷ್ಟು ಜ್ಞಾನಗೌರವವನ್ನು ಸಂಪಾದಿಸುತ್ತಾರೆ. ಅವರು ತಮ್ಮ ನುಡಿ-ನಡತೆಯಿಂದ ತಮಗಿಂತ ಕಡಿಮೆ ಅಥವಾ ಕೆಳಹಂತದಲ್ಲಿರುವವರಿಗೆ ಸಾಮಾಜಿಕ ಪಾಠಗಳನ್ನು ಹೇಳುತ್ತಾರೆ. ಇವು ಶಿಕ್ಷಣದ ವ್ಯವಸ್ಥೆಯಲ್ಲಿ ಗುರುಗಳು ಶಿಷ್ಯರಿಗೆ ಹೇಳುವುದಿರಬಹುದು, ಊರ ಬುದ್ಧಿವಂತನೊಬ್ಬ ತನ್ನ ಸಮುದಾಯವನ್ನು ಉದ್ದೇಶಿಸಿ ಹೇಳುವುದಿರಬಹುದು, ಮಾಧ್ಯಮದ ಮೂಲಕ ತನ್ನ ಚಿಂತನೆಗಳನ್ನು ಪ್ರಸಾರ ಮಾಡುವುದಿರಬಹುದು ಅಥವಾ ಭವಿಷ್ಯದ ಪೀಳಿಗೆ ಗಮನಿಸಲಿ ಎಂದು ಏಕಾಂತದಲ್ಲಿ ಸಂಗ್ರಹಿಸಿದ ಜ್ಞಾನಭಂಡಾರವಿರಬಹುದು, ಅಂತೂ ಹಂಚುವುದಕ್ಕೇ ಇರುವ ಫಲಗಳುಳಿವನ್ನು ಕಂಡವರು, ಕೇಳಿದವರು, ಅನುಭವಿಸಿದವರು ಒಂದಿಷ್ಟಾದರೂ ಬೆಳೆದರೆ ಅಂತಹ ಹಂಚಿಕೆ ಸಾರ್ಥಕ. ಇಂತಹ ಸೂಚನೆ ಯಾರಿಂದಲೇ ಬಂದರೂ ಅದನ್ನು ಗ್ರಹಿಸುವ ಮನಸ್ಸು ಬೇಕು. ಹೇಳುವವನ ನಡತೆ ಪ್ರಶ್ನಾತೀತವಾಗಿ ಆತನ ಮಾತಿನ ಮೇಲೆ ನಂಬಿಕೆಯಿದ್ದರೆ, ಆತನ ಜೀವನಸ್ಥಾನ-ಮಾನ ಸಮಸ್ಯೆಯಾಗುವುದಿಲ್ಲ. ಅದನ್ನು ವಿಮರ್ಶಿಸದೆ ಅನುಸರಿಸಬಹುದು. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಶಬರಿಯಂತಹ ಸಾಮಾನ್ಯಳೂ ತನ್ನ ಬದುಕಿನ ಕೊನೆಯನ್ನು ರಾಮನ ಸಾನ್ನಿಧ್ಯದಲ್ಲಿ ಕಳೆದಾಗಲೂ ಆತನಿಗೆ ಹಿತವಾಗುವ, ಅಂದರೆ ಸೀತಾನ್ವೇಷಣೆಗೆ ಸಹಾಯವಾಗಬಲ್ಲ ಋಷ್ಯಮೂಕದ ದಿಕ್ಕುದೆಸೆಯನ್ನು ತೋರಿಸುತ್ತಾಳೆ. ಅದರ ಆಸುಪಾಸಿನ ಮತಂಗಮುನಿ ಕಾನನ, ಪಂಪಾ ಸರೋವರ, ತುಂಗಭದ್ರೆ, ಕಿಷ್ಕಿಂಧೆ, ಮುಂತಾದ ಪರಿಸರವನ್ನು ಸೂಚಿಸುತ್ತಾಳೆ. ಮಾಳ್ಪ ಕಜ್ಜಂ ನಿನಗೆ ಮುಂದೆ ಬೆಟ್ಟವಿದೆ: ಎಂಬಾಗಲೂ ಈ ಬೆಟ್ಟ ನೆನಪಾಗಬೇಕು. (ಸೀತೆಯ ಕುರಿತು ಆಕೆೆ ಕಂಡ ಕನಸು ಕವಿಸಮಯದಲ್ಲೂ ಪ್ರಕ್ಷೇಪವೇ!) ಆಕೆ ಮರೆಯಾದರೂ ಆಕೆಯ ಸಲಹೆ ಮರೆತುಹೋಗುವುದಿಲ್ಲ.

ಆದರೆ ಬಹಳಷ್ಟು ಜನರು ಈ ವಿಚಾರಗಳನ್ನು ಗಮನಿಸುವುದಕ್ಕೆ, ಮನನ ಮಾಡುವುದಕ್ಕೆ ಯತ್ನಿಸುವುದೇ ಇಲ್ಲ. ಅವರಿಗೆ ಹಿತ ಸೂಚನೆಗಿಂತ ಹೆಚ್ಚಾಗಿ ಎಲ್ಲರನ್ನೂ ‘ಚೆನ್ನಾಗಿಟ್ಟುಕೊಳ್ಳಬೇಕು’ ಇಲ್ಲವೇ ‘ಮೆಚ್ಚಿಸಬೇಕು’ ಎಂಬ ಆಸೆಯಿರುತ್ತದೆ. ಜೊತೆಗೆ ತನ್ನ ಪ್ರತಿಷ್ಠೆಗೆ ಅಂತಹ ಪರಿಚಯ, ವೇದಿಕೆ ನೆರವಾಗುವುದಾದರೆ ಯಾರಿಗೆ ಬೇಡ? ಈ ಮೊದಲೇ ಹೇಳಿದ ಹಿರಿಯರು ಏನನ್ನು ಹೇಳಿದರೂ ಅದನ್ನು ಗ್ರಹಿಸದೆ ಬದಲಾಗಿ ತನಗೆ ಅನುಕೂಲವಾಗಬಲ್ಲ ವ್ಯಕ್ತಿಯನ್ನು ಓಲೈಸುವುದೇ ತನ್ನ ಸಾಧನೆಯೆಂದು ತಿಳಿಯುತ್ತಾರೆ. ಬಹಳಷ್ಟು ಮಂದಿ ನೀವು ಯಾವನೇ ದೊಡ್ಡ ಮನುಷ್ಯನ ಹೆಸರು ಹೇಳಿ, ‘‘ಅವರಾ? ನನಗೆ ಚೆನ್ನಾಗಿ ಗೊತ್ತಿದ್ದವರು, ನಾನು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ’’ ಅಂತಲೋ, ‘‘ಅವರು ನನಗೆ ಹೇಳಿಕೊಟ್ಟದ್ದರಿಂದಲೇ ನಾನು ಈಗ ಇಷ್ಟು ದೊಡ್ಡವನಾಗಿದ್ದೇನೆ’’ ಎಂತಲೋ ಹೇಳುತ್ತಾರೆ. ಗೋಪಾಲಕೃಷ್ಣ ಅಡಿಗರು ತಮ್ಮ ‘ನನ್ನ ಅವತಾರ’ ಕವಿತೆಯಲ್ಲಿ ಹೇಳಿದಂತೆ ರಾಮನ ಜೊತೆಗಿದ್ದವರೆಲ್ಲ ರಾಮರಾಗಲಿಲ್ಲ; ಬುದ್ಧನ ಜೊತೆಗಿದ್ದವರೆಲ್ಲ ಬುದ್ಧರಾಗಲಿಲ್ಲ; ಗಾಂಧಿಯ ಜೊತೆಗಿದ್ದವರೆಲ್ಲ ಗಾಂಧಿಗಳಾಗಲಿಲ್ಲ. ಅವರು ಬೆರಳ ತುದಿಯನ್ನೇ ನೋಡಿ ತಾವೆಲ್ಲಿದ್ದರೋ ಅಲ್ಲೇ ಉಳಿದರು. ತಮ್ಮ ಸೀಮಿತ ಮಿತಿಯನ್ನು, ವ್ಯಾಪ್ತಿಯನ್ನು ದಾಟಿ ಮುಂದೆ ಹೋಗಲೇ ಇಲ್ಲ.

ಕಲೆ, ಸಾಹಿತ್ಯದಲ್ಲೂ ಇಂತಹ ಸಂದರ್ಭಗಳು ಉದ್ಭವಿಸುತ್ತವೆ. ಒಬ್ಬ ಸಾಹಿತಿಯೋ ಕಲಾವಿದನೋ ಉನ್ನತಿಗೆ ಏರಿದನೆಂದರೆ ಆತನ ಸುತ್ತ ಸುತ್ತುವ ಜನರು ತುಂಬಾ ಇರುತ್ತಾರೆ. ಆ ಮಹಾನುಭಾವ ಏನನ್ನು ಸಾಧಿಸಿದ್ದಾನೋ ಅದನ್ನು ಸಾಧಿಸುವ ಛಲ ಕೆಲವೇ ಮಂದಿಗೆ. ಉಳಿದವರು ಆತನನ್ನು ಬಲ್ಲೆವೆೆಂಬ ಒಣ, ಪೊಳ್ಳು ಬಿಗುಮಾನದಿಂದ ಬದುಕುತ್ತಾರೆ. ದೀಪದ ಸುತ್ತ ಹಾರುವ ಹುಳಗಳು ದೀಪಕ್ಕೇ ಬಲಿಯಾಗುವುದು ಅವುಗಳ ದೋಷವಲ್ಲ; ಅವುಗಳಿಗೆ ಆ ದೀಪದ ಬೆಳಕಿನ/ಬೆಂಕಿಯ ಸೆಳೆತ ಅಷ್ಟು. ಆ ರೀತಿಯ ಸೆಳೆತ ನಮಗೆ ಒಂದು ವಿಚಾರದ ಕುರಿತು, ಒಂದು ಕೃತಿಯ ಕುರಿತು ಇರಬೇಕು. ಆದರೆ ಇಂದು ನಾವು ನೋಡುವ ವಿಮರ್ಶೆಗಳೂ ವಸ್ತುಕೇಂದ್ರಿತವಾಗುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಕೇಂದ್ರಿತವಾಗಿರುತ್ತವೆ. ಕೃತಿಗಿಂತ ಹೆಚ್ಚಾಗಿ ಕೃತಿಕಾರನ ಮನೋಭಾವ, ಸಾಧನೆ ಮತ್ತು ನಮಗೆ ಆತ ಯಾಕೆ ಇಷ್ಟ ಎಂದು ಹೇಳುವವರೇ ಹೆಚ್ಚು. ಕೃತಿಯ ಪ್ರಾಮಾಣಿಕ ವಿಮರ್ಶೆಯು ಕೃತಿಕಾರನನ್ನು ಅಳೆದಂತೆಯೇ. ಇಷ್ಟೊಂದು ಮೋಹಕ ಶಿಲ್ಪವನ್ನು ಕೆತ್ತಿದವನು ಎಷ್ಟು ದೊಡ್ಡವನು ಎಂಬ ಅಭಿಮಾನ ಮೂಡಬೇಕು. ಪುರುಷೋತ್ತಮನ ರೂಪ-ರೇಖೆಯನ್ನು ಕೆತ್ತಬೇಕಾದರೆ ಚಿತ್ತ ಹುತ್ತಗಟ್ಟಬೇಕು ಎಂದು ತಾನೇ ಇದರ ಪರಮಾರ್ಥ?

ರಾಜಕಾರಣದಲ್ಲಂತೂ ಅಧಿಕಾರವಿರುವ ವರೆಗೆ ನಾಯಕನನ್ನು ಆರಾಧನಾಭಾವದಿಂದ ನೋಡುವವರೇ ಹೆಚ್ಚು. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುತ್ತೇವಲ್ಲ! ತೋಳವೇ ಆಗಬೇಕಾಗಿಲ್ಲ, ಧೀಮಂತ ಸಜ್ಜನನಾದರೂ ಇದೇ ಪಾಡು.

ಸಾಮಾನ್ಯ ಉದಾಹರಣೆಗಳ ಬಗ್ಗೆ ಬರೋಣ: ರಸ್ತೆಯಲ್ಲಿ ಮೈಲುಕಲ್ಲನ್ನು ನೋಡುತ್ತೇವಲ್ಲ, ಅದು ಎಂದಾದರೂ ಪ್ರಯಾಣದ ಸಾರ್ಥಕತೆಯನ್ನು ಅನುಭವಿಸುತ್ತದೆಯೇ? ಇಲ್ಲ. ಅದು ಇಂದು ಎಷ್ಟು ಮೈಲೋ ನಾಳೆಯೂ ಅಷ್ಟೇ. ಆ ಕಡೆಯಿಂದ ಬಂದರೆ ಒಂದು ಅಳತೆ, ಈ ಕಡೆಯಿಂದ ಹೋದರೆ ಇನ್ನೊಂದು ಅಳತೆ. ಬದುಕಿನಲ್ಲಿ, ಸಾಧನೆಗಳಲ್ಲಿ ‘ಮೈಲಿಗಲ್ಲು’ ಎಂಬ ಪದವನ್ನು ಬಳಸುತ್ತೇವಲ್ಲ, ಅದು ನಿಜಕ್ಕೂ ಒಂದು ಸಾಧನೆಯ ಅಥವಾ ಅಳತೆಯ ಗುರುತೇ ಎಂಬುದನ್ನು ನಾನಿನ್ನೂ ನಿಶ್ಚಿತಗೊಳಿಸಿಲ್ಲ. ಅಲ್ಲಿ ನಡೆದವರೆಲ್ಲ ಸಾಧಕರಲ್ಲ. ರಸ್ತೆಯಿರುವುದೇ ಪಯಣಿಸುವುದಕ್ಕೆ. ಗುರಿಯಿದ್ದರೆ ನಡೆಯುವವರಿಗೆ ಅದು ಮೈಲಿಗಲ್ಲು. ಉಳಿದವರಿಗೆ ಕಲ್ಲು. ಮತ್ತೇಕೆ ನಡೆಯುತ್ತೇನೆಂಬ, ಪಯಣಿಸುತ್ತೇನೆಂಬ ಅಹಂಕಾರ? ಹರಿವ ನದಿ ಸಮುದ್ರವನ್ನು ಸೇರುವ ತವಕದಲ್ಲಿ ಹರಿಯುವಾಗ ಯಾರನ್ನೂ ಲೆಕ್ಕಿಸಲಾರದು. ಆದರೆ ಅದು ಅಹಂಕಾರಕ್ಕೆ ಸಾಕ್ಷಿಯಾಗದೆ ಆತ್ಮಸಾಕ್ಷಿಯ ಸಂಕೇತವಾಗುತ್ತದೆ. ನಮ್ಮ ಪಯಣವೂ ಹೀಗೆಯೇ. ಅದನ್ನು ಉದಾತ್ತವಾಗಿಸಲು ಬೇಕು ದಾರಿದೀಪಗಳು.

ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಈ ಜಿಜ್ಞಾಸೆಯಿದೆ. ನಾವು ಗುರುತಿಸುವ ವಸ್ತು ನಮ್ಮಿಂದ ಎಷ್ಟು ದೂರವಿದೆ ಮತ್ತು ಅದು ಎಷ್ಟು ದೊಡ್ಡದಿದೆ ಮತ್ತು ಎಷ್ಟು ಮಹತ್ವದ್ದಾಗಿದೆ ಎಂಬುದರಿಂದ ಅದರ ಮತ್ತು ನೋಟಕನ ಅಳತೆಯಾಗುತ್ತದೆ. ಎಲ್ಲವನ್ನೂ ತಿಳಿದಿರಬೇಕಾಗಿಲ್ಲ. ಆದರೆ ತಿಳಿದದ್ದನ್ನು ಚೆನ್ನಾಗಿ ತಿಳಿದಿರಬೇಕು. ಎಲ್ಲರೂ ಸರ್ವಜ್ಞ ಪೀಠವನ್ನು ಏರಲಾಗುವುದಿಲ್ಲ. ಅದರ ಸನಿಹದಲ್ಲೆಲ್ಲಾದರೂ ಇರಬೇಕಲ್ಲ! ಅದಕ್ಕೂ ಗುರಿ, ಪ್ರತಿಭೆ, ಯೋಗ, ಪರಿಶ್ರಮ ಬೇಕು. ಆಗ ಮಾತ್ರ ನಮಗೆ ಬೇಕಾದ್ದನ್ನು ಪಡೆಯಬಹುದೇನೋ? ಯೋಗ್ಯತೆ ಅನೇಕ ಬಾರಿ ನಿಶ್ಚಯಗೊಳ್ಳುವುದು ಯೋಗದಿಂದ. ನಾನು ಇಂದು ಪ್ರಸಿದ್ಧಿಗೆ ಬಂದಿರುವ ನಮ್ಮ ಪ್ರಾಚೀನ ಯೋಗಪದ್ಧತಿಯ ಕುರಿತು ಹೇಳುತ್ತಿಲ್ಲ. ಯೋಗಾಯೋಗವೆಂಬ ಸಂದರ್ಭವನ್ನು ಹೇಳುತ್ತಿದ್ದೇನೆ.

ಗುರುವಾದವನು ತೋರಿಸಿದ ಹಾದಿಯಲ್ಲೇ ಹೋಗುವುದು ಪರಂಪರೆಯ ಸೀಮಿತ ಗುರಿ. ಅದೇ ಅಂತಿಮವಾದವನು ಏನನ್ನೂ ಸಾಧಿಸಲಾರ. ಏಕೆಂದರೆ ಅದೂ ಅನೇಕರು ನಡೆದು ಹೋಗಿ ಸವೆದಿರುತ್ತದೆ. ಹೊಸ ಹಾದಿಯನ್ನು ಕ್ರಮಿಸಲು ದಾರಿಮಾಡಿಕೊಡುವ ಪಾಠವಷ್ಟೇ ಬದುಕಿನ ಒಳ್ಳೆಯ ಪಾಠ. ಒಬ್ಬ ತತ್ವಶಾಸ್ತ್ರಜ್ಞನು ‘‘ನಾನು ಯೋಚಿಸಿದಂತೆ ನೀನು ಯೋಚಿಸಬೇಕೆಂದು ನಾನು ಬಯಸುತ್ತಿಲ್ಲ, ಆದರೆ ನೀನು ಯೋಚಿಸಬೇಕು ಎಂದಷ್ಟೇ ನಾನು ಬಯಸುತ್ತೇನೆ’’ ಎಂದನಂತೆ. ರಾಬರ್ಟ್ ಫ್ರಾಸ್ಟ್ ತನ್ನ ‘ರೋಡ್ ನಾಟ್ ಟೇಕನ್’ ಕವಿತೆಯಲ್ಲೂ ಇದನ್ನೇ ಸೂಚಿಸಿದ್ದಾನೆ. ಎಲ್ಲರೂ ಹೋದ ಹಾದಿ ತನಗೆ ಬೇಡ, ತಾನು ಯಾರೂ ಹಿಡಿಯದ ಹಾದಿಯಲ್ಲಿ ನಡೆಯಲು ಇಚ್ಛಿಸುತ್ತೇನೆ ಎಂಬ ಸಂದೇಶವನ್ನು ಬಿಟ್ಟುಹೋಗಿದ್ದಾನೆ. ಅದೂ ಒಂದು ಹಾದಿಯೇ; ಯಾರೂ ಹೋಗದ ಆದರೆ ತನ್ನ ಮನಸ್ಸಾಕ್ಷಿ ಸೂಚಿಸಿದ ಹಾದಿ. ಕವಿ ರವೀಂದ್ರರು- ಅವರು ಕವಿಯೂ ಹೌದು, ತತ್ವಶಾಸ್ತ್ರಜ್ಞರೂ ಹೌದು, ಕಲಾವಿದರೂ ಹೌದು, ಕಥೆಗಾರ, ಕಾದಂಬರಿಕಾರ ಎಲ್ಲವೂ ಹೌದು!- ಇದನ್ನೇ ತಮ್ಮ ‘ಎಕ್ಲ ಚಲೋರೇ’ ಎಂಬ ಜನಪ್ರಿಯ ಕವಿತೆಯಲ್ಲಿ ತಾತ್ವಿಕವಾಗಿ, ಮಾರ್ಮಿಕವಾಗಿ ಹೇಳಿದ್ದಾರೆ. ‘ನಿನಗೆ ಸರಿಯೆಂದು ಕಂಡ ಹಾದಿಯಲ್ಲಿ ನಡೆ; ನಿನ್ನ ಜೊತೆ ಸೇರಲು ಇತರರನ್ನೂ ಕರೆ; ಆದರೆ ಯಾರೂ ಬರಲಿಲ್ಲ ಎಂಬುದಕ್ಕಾಗಿ ನಿನ್ನ ಸಾಧನೆಯ ಹಾದಿಯನ್ನು ತೊರೆಯದಿರು, ನೀನೊಬ್ಬನೇ ಆದರೂ ಅದರಲ್ಲಿ ನಡೆದು ಗುರಿ ಸೇರು’ ಎನ್ನುತ್ತದೆ ಆ ಕವಿತೆ.

ಒಬ್ಬನೇ ಎಂದಾಕ್ಷಣ ಒಂಟಿ, ಏಕಾಂಗಿ ಎಂದು ಅನೇಕರು ತಿಳಿಯುತ್ತಾರೆ. ತಿಳಿಯುತ್ತಾರೆ ಎಂಬುದಕ್ಕಿಂತಲೂ ‘ಭ್ರಮಿಸುತ್ತಾರೆ’ ಎನ್ನಬಹುದು. ಏಕೆಂದರೆ ಕಣ್ಣೆದುರಲ್ಲಿರುವುದೆಲ್ಲವೂ ನಮ್ಮ ಜೊತೆ ನಡೆಯಬೇಕೆಂದಾಗಲೀ, ಸಂಭಾಷಿಸಬೇಕೆಂದೇನೂ ಇಲ್ಲ. ನಾವು ನೋಡಿದ್ದೆಲ್ಲವೂ ಸತ್ಯವೇ ಆಗಬೇಕಾಗಿಲ್ಲ. ಎಲ್ಲರ ನಡುವೆ ಕುಳಿತವನೂ ಅನ್ಯಮನಸ್ಕನಾಗಿ ಕುಳಿತರೆ ಆತ ಒಂಟಿತನವನ್ನು ಅನುಭವಿಸುತ್ತಾನೆ ಎಂದೇ ಅರ್ಥ ಅಥವಾ ಒಬ್ಬನೇ ಕುಳಿತು ತನ್ನ ಭಾವಪ್ರಪಂಚದಲ್ಲಿ ವಿಹರಿಸುವಾಗ ಇಡೀ ಜಗತ್ತೇ ಆತನೊಂದಿಗಿರುತ್ತದೆ. ಹೀಗೆ ವ್ಯಷ್ಟಿಯಲ್ಲಿ ಸಮಷ್ಟಿ ಭಾವ, ಹಾಗೂ ಸಮಷ್ಟಿಯಲ್ಲಿ ವ್ಯಷ್ಟಿ ಭಾವ ಮುಗಿವಿಲ್ಲದಂತೆ ಉರುಳುತ್ತಲೇ ಇರುತ್ತವೆ. ವ್ಯಕ್ತಿ ಬೇರೆ; ಕಾಲ ಬೇರೆ; ಸ್ಥಳ ಬೇರೆ; ಸಂದರ್ಭ ಬೇರೆ.

ಇವೆಲ್ಲ ಉಂಟಾಗುವುದು ಮಹಾನುಭಾವರ ಜೀವನದಿಂದ, ನಡೆ-ನುಡಿಯಿಂದ ಏನನ್ನೂ ಕಲಿಯದಿದ್ದಾಗ. ನಾವೂ ಉದಾರ ಚರಿತರಾಗಬೇಕು, ಎಂದರೆ ಉದಾತ್ತ ಧ್ಯೇಯವನ್ನು ಹೊಂದಿರಬೇಕು. ಇತರರಿಂದ ಏನನ್ನೂ ಕಲಿಯಬಹುದು. ನಮ್ಮ ಇಷ್ಟಾರ್ಥಗಳೇನೆಂಬುದು ಮುಖ್ಯ. ಋಗ್ವೇದದಲ್ಲಿ ‘ಆನೋ ಭದ್ರೋ ಯಾಂತು ವಿಶ್ವತಃ’ (‘‘Let noble thoughts come to us from every side’) ಎಂಬ ಮಾತಿದೆ. ಅಂದರೆ ಒಳ್ಳೆಯ ಚಿಂತನೆಗಳು ನಮಗೆ ಎಲ್ಲ ಕಡೆಯಿಂದ ಬರಲಿ ಎಂದರ್ಥ. ಅವೆಲ್ಲ ಚದುರಿದ ಮೋಡಗಳಂತೆ ನಾವು ದಿಟ್ಟಿಸುವ ಆಕಾಶದಲ್ಲಿ ಮೆರೆಯಲಿ, ನೆರೆಯಲಿ, ಒಂದಷ್ಟು ಹನಿಗಳು ನಮ್ಮ ಮೇಲೂ ಬೀಳಲಿ ಎಂದು ಆಶಿಸಬೇಕು.

ಬೆರಳು ತೋರಿದರೆ ಅದು ಸೂಚಿಸುವ ದಿಕ್ಕನ್ನು ಕಾಣುವ ಕಣ್ಣು ನಮಗೆ ಸಿಗಲಿ. ರಾಮಲಕ್ಷ್ಮಣರಿಗೆ ಸೀತಾಪಹಾರದ ಬಳಿಕ ದೃಷ್ಟಿಗೋಚರವಾದದ್ದು-ಅದಕ್ಕೆ ನೆಪ, ನಿಮಿತ್ತ ಶಬರಿಯೇ ಇರಲಿ, ಯಾರೇ ಇರಲಿ,-ಋಷ್ಯಮೂಕ; ಕಿಷ್ಕಿಂಧೆ. ಅದನ್ನು ದಾಟದೆ ಸೀತಾನ್ವೇಷಣೆಯೂ ಇಲ್ಲ; ಲಂಕೆಯೂ ಇಲ್ಲ. ನಮ್ಮ ಬದುಕೂ ಈ ಒಳ್ಳೆಯ ಚಿಂತನೆಗಳತ್ತ ದಾರಿತೋರುವ ಬೆರಳುಗಳನ್ನು ಹುಡುಕೋಣ; ಬೆರಳಿನ ತುದಿಯನ್ನು ಮರೆತು ಅದು ತೋರಿಸಿದ ದೊಡ್ಡ ವಿಚಾರಗಳ ಬಗ್ಗೆ ದೃಷ್ಟಿ ಹಾಯಿಸೋಣ; ಬೆರಳು ಅಲ್ಲೇ ಇರಲಿ.

Writer - ವಾರ್ತಾಭಾರತಿ

contributor

Editor - Safwan

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News