ಪರಿಶಿಷ್ಟರಲ್ಲಿ ಕ್ರೀಮಿ ಲೇಯರ್- ಮನುವಾದಿ ಅಧಿಕ ಪ್ರಸಂಗ

Update: 2024-08-08 04:53 GMT
Editor : Ismail | Byline : ಶಿವಸುಂದರ್

ಮೊನ್ನೆಯ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಕೆಲವು ಅನವಶ್ಯಕ ಪ್ರಸ್ತಾವಗಳು ಮತ್ತು ಮನುವಾದಿ ಪೂರ್ವಗ್ರಹಗಳು ಸೇರಿವೆ.

ಬಹುಮತದ ತೀರ್ಪಿಗೆ ಭಿನ್ನಮತ ವ್ಯಕ್ತಪಡಿಸಿರುವ ನ್ಯಾ. ಬೇಲಾ ತ್ರಿವೇದಿಯವರು ಸಂವಿಧಾನದ ಪುರೋಗಾಮಿ ವ್ಯಾಖ್ಯಾನವನ್ನೇ ಸಾರಾಸಗಟು ವಿರೋಧಿಸಿದ್ದಾರೆ.

ಮತ್ತೊಂದು ಕಡೆ ಒಳಮೀಸಲಾತಿ ಪರ ಅಭಿಪ್ರಾಯ ನೀಡಿರುವ ನ್ಯಾ. ಪಂಕಜ್ ಮಿತ್ತಲ್ ಅವರು ಸನಾತನ ಭಾರತದಲ್ಲಿ ಜಾತಿ ಇರಲೇ ಇಲ್ಲ. ಜಾತಿ ರಹಿತ ಭಾರತವಾಗಿತ್ತು. ಭಗವದ್ಗೀತೆಯಲ್ಲಿ ಹೇಳಿದಂತೆ ವರ್ಣಗಳು ಮಾತ್ರ ಇದ್ದವು ಮತ್ತು ಗುಣಕರ್ಮಗಳ ಮೇಲೆ ತೀರ್ಮಾನವಾಗುತ್ತಿತ್ತು. ಆನಂತರ ಅದರ ತಪ್ಪು ವ್ಯಾಖ್ಯಾನ ಜಾತಿಗೆ ಎಡೆ ಮಾಡಿಕೊಟ್ಟಿತು. ಸಂವಿಧಾನವು ಜಾತಿರಹಿತ ಭಾರತದ ಪರಿಕಲ್ಪನೆ ಹೊಂದಿದೆ. ಆದರೆ ತುಳಿತಕ್ಕೊಳಗಾದವರ ಏಳಿಗೆಯ ಉದ್ದೇಶದ ನೆಪವನ್ನೊಡ್ಡಿ ಮತ್ತೊಮ್ಮೆ ವ್ಯವಸ್ಥೆ ಜಾತಿಯನ್ನು ಗಟ್ಟಿಗೊಳಿಸುತ್ತಿದೆ ಎಂದು ತಮ್ಮ ವೈದಿಕ ಹಾಗೂ ಸಂವಿಧಾನದ ಆಶಯಗಳ ವಿರೋಧಿ ಅಭಿಪ್ರಾಯವನ್ನು ಪುಂಖಾನುಪುಂಖವಾಗಿ ದಾಖಲಿಸುತ್ತಾರೆ. ಆ ತರ್ಕದ ಭಾಗವಾಗಿಯೇ ಮೀಸಲಾತಿ ಮತ್ತು ಒಳಮೀಸಲಾತಿಯು ಒಂದು ಪೀಳಿಗೆಗೆ ಮಾತ್ರ ಸೀಮಿತವಾಗಬೇಕು ಎಂಬ ಶೋಷಕ ಜಾತಿಗಳ ಸಲಹೆಯನ್ನು ಒಬ್ಬ ಸುಪ್ರೀಂ ನ್ಯಾಯಮೂರ್ತಿ ಸಲಹೆ ನೀಡುತ್ತಾರೆ.

ಅದಕ್ಕಿಂತ ಆತಂಕಕಾರಿಯಾದದ್ದು ಈ ನ್ಯಾಯಪೀಠದ ಏಕೈಕ ದಲಿತ ನ್ಯಾಯಾಧೀಶರಾಗಿರುವ ಜಸ್ಟಿಸ್ ಗವಾಯಿ ಅವರ ಪ್ರಬಲ ಅಭಿಪ್ರಾಯ. ಅವರು ‘‘ಹಿಂದುಳಿದ ಜಾತಿಗಳಿಗೆ ಅನ್ವಯವಾಗುವ ಕ್ರೀಮಿ ಲೇಯರ್-ಕೆನೆಪದರ- ಸಿದ್ಧಾಂತ ಪರಿಶಿಷ್ಟರಿಗೂ ಅನ್ವಯವಾಗಬೇಕು. ಆದರೆ ಅದು ಹಿಂದುಳಿದ ಜಾತಿಗಳ ಮಾನದಂಡಕ್ಕಿಂತ ಭಿನ್ನವಾಗಿರಬಹುದು’’ ಎಂದು ಅಭಿಪ್ರಾಯ ಪಡುತ್ತಾರೆ. ನ್ಯಾ. ಗವಾಯಿ ಅವರ ಅಭಿಪ್ರಾಯವನ್ನು ನ್ಯಾ. ಎಸ್.ಸಿ. ಶರ್ಮಾ ಮತ್ತು ನ್ಯಾ. ವಿಕ್ರಮ್‌ನಾಥ್ ಕೂಡ ಅನುಮೋದಿಸುತ್ತಾರೆ.

ಆದರೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾ. ಮನೋಜ್ ಮಿಶ್ರಾ ಅವರು ಯಾಕೆ ಇಂದ್ರಾ ಸಹಾನಿ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ಪೀಠ ಹಿಂದುಳಿದವರ್ಗಗಳಿಗೆ ಅನ್ವಯವಾಗುವ ಕೆನೆಪದರ ಮಾನದಂಡ ಪರಿಶಿಷ್ಟರಿಗೆ ಅನ್ವಯವಾಗದು ಎಂದು ಅಭಿಪ್ರಾಯ ಪಟ್ಟಿದ್ದರು ಎಂದು ದೀರ್ಘವಾಗಿ ವಿಶ್ಲೇಷಿಸುತ್ತಾರೆ. ಕೆನೆಪದರಕ್ಕೆ ಸೇರುವ ಹಿಂದುಳಿದ ವರ್ಗದೊಳಗಿನ ಮೇಲ್ಚಲನೆ ಪಡೆದ ಕುಟುಂಬಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಮಾನ್ಯವರ್ಗಗಳಿಗೆ ಸಮವಾಗಿ ಬೆಳೆದಿರುತ್ತವೆ. ಆದ್ದರಿಂದ ಆ ಸ್ತರಕ್ಕೆ ಮೀಸಲಾತಿಯ ಅಗತ್ಯ ಬೀಳುವುದಿಲ್ಲ. ಆದರೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆಯ ಕಾರಣದಿಂದ ಪರಿಶಿಷ್ಟರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಎಷ್ಟೇ ಮುಂದುವರಿದರೂ ಸಾಮಾನ್ಯ ವರ್ಗಗಳು ಪರಿಶಿಷ್ಟರನ್ನು ಸಾಮಾಜಿಕವಾಗಿ ಸಮಾನರೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಕೆನೆಪದರ ಅವರಿಗೆ ಅನ್ವಯವಾಗದು ಎಂದು ದಾಖಲಿಸುತ್ತ್ತಾರೆ. ಆದ್ದರಿಂದಲೇ ಜಸ್ಟಿಸ್ ಚಂದ್ರಚೂಡ್ ಮತ್ತು ಮನೋಜ್ ಮಿಶ್ರಾ ಅವರ ಒಳಮೀಸಲು ಪರ ತೀರ್ಪಿನಲ್ಲಿ ಕ್ರೀಮಿ ಲೇಯರ್ ಪ್ರಸ್ತಾವವೇ ಇಲ್ಲ.

ಕ್ರೀಮಿ ಲೇಯರ್ ಪ್ರಶ್ನೆ ಪೀಠದ ಮುಂದೆ ಇರಲೇ ಇಲ್ಲ

ಎಲ್ಲಕ್ಕಿಂತ ಮುಖ್ಯವಾಗಿ ದಲಿತ ಮೀಸಲಾತಿಯೊಳಗೆ ಕ್ರೀಮಿ ಲೇಯರ್ ವಿಧಿಸಬೇಕೇ ಎಂಬ ಪ್ರಶ್ನೆ ಸುಪ್ರೀಂ ಪೀಠದ ಮುಂದೆ ಇರಲಿಲ್ಲ.

ಈ ಏಳು ನ್ಯಾಯಾಧೀಶರ ಪೀಠ ಸ್ಥಾಪನೆಗೊಂಡಿದ್ದೇ 2020ರಲ್ಲಿ ದವಿಂದರ್ ಸಿಂಗ್ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಪೀಠ ಅದನ್ನು ಉನ್ನತ ಪೀಠಕ್ಕೆ ವರ್ಗಾಯಿಸಿದ್ದಕ್ಕೆ. ಆದರೆ ಆ ಪ್ರಕರಣದಲ್ಲೂ ಇದ್ದದ್ದು ರಾಜ್ಯಗಳಿಗೆ ಒಳಮೀಸಲಾತಿ ವಿಧಿಸುವ ಅಧಿಕಾರವಿದೆಯೇ ಎನ್ನುವ ಪ್ರಶ್ನೆಯೇ ವಿನಃ ಒಳಮೀಸಲಿನೊಳಗೆ ಕೆನೆಪದರದ ಪ್ರಶ್ನೆಯಲ್ಲ. ಆದರೂ ದವಿಂದರ್ ಸಿಂಗ್ ಪ್ರಕರಣವನ್ನು ಉನ್ನತ ಪೀಠಕ್ಕೆ ವರ್ಗಾಯಿಸುವಾಗ ಕೆನೆಪದರದ ಪ್ರಶ್ನೆಯನ್ನು ಅನಗತ್ಯವಾಗಿ ಆ ಪೀಠದ ಮುಖ್ಯ ನ್ಯಾಯಮೂರ್ತಿ ಅರುಣ್ ಮಿಶ್ರಾ ಸೇರಿಸುತ್ತಾರೆ.

ಆದರೆ ಏಳು ನ್ಯಾಯಾಧೀಶರ ಪೀಠವನ್ನು ಮುಖ್ಯ ನ್ಯಾಯಮೂರ್ತಿ ರಚಿಸಿದಾಗ ಪೀಠದ ಸಹನ್ಯಾಯಾಧೀಶರು ಯಾವ ಪ್ರಶ್ನೆಗಳಿಗೆ ನ್ಯಾಯಿಕ ಉತ್ತರ ಹುಡುಕಬೇಕೆಂದು ಪ್ರಶ್ನೆಗಳನ್ನು-ISSUE-ಗಳ ಪಟ್ಟಿಯನ್ನು ಒದಗಿಸುತ್ತಾರೆ.

ಅದು ಮುಖ್ಯನ್ಯಾಯಾಧೀಶರ ಆದೇಶದ 43ನೇ ಪ್ಯಾರಾದಲ್ಲಿ ಹೀಗೆ ಸ್ಪಷ್ಟವಾಗಿ ಹೇಳಲ್ಪಟ್ಟಿದೆ:

43.The Constitution Bench has to adjudicate upon whether the sub-classification of Scheduled Castes for the purpose of providing affirmative action, including reservation is valid. In this context, the following issues arise for consideration:

a. Whether sub-classification of a reserved class is permissible under Articles 14, 15 and 16;

b. Whether the Scheduled Castes constitute a homogenous or a heterogenous grouping;

c. Whether Article 341 creates a homogenous class through the operation of the deeming fiction; and

d. Whether there any limits on the scope of sub-classification

ಸ್ಪಷ್ಟವಾಗಿರುವಂತೆ ಪೀಠದ ಮುಂದೆ ಕ್ರೀಮಿ ಲೇಯರ್ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಅದು ಸದ್ಯಕ್ಕೆ ಆಯಾ ನ್ಯಾಯಾಧೀಶರ ವ್ಯಕ್ತಿಗತ ಅಭಿಪ್ರಾಯಗಳಾಗಿರುತ್ತವೆಯೇ ವಿನಃ ಅಧಿಕೃತ ಆದೇಶದ ಭಾಗವಲ್ಲ. ಅಷ್ಟು ಮಾತ್ರವಲ್ಲ. ಅದರ ಬಗ್ಗೆ ಬಹುಮತದ ಅಭಿಪ್ರಾಯವೂ ಇಲ್ಲ. ಏಕೆಂದರೆ ಒಳಮೀಸಲಾತಿ ಪರ ಆದೇಶ ಕೊಟ್ಟ ಆರು ನ್ಯಾಯಾಧೀಶರಲ್ಲಿ ಇಬ್ಬರು ಇದರ ಬಗ್ಗೆ ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಮೂವರು ಕ್ರೀಮಿ ಲೇಯರ್ ಇರಬೇಕೆಂದು ಹೇಳಿ ಅದರ ಮಾನದಂಡ ಹಿಂದುಳಿದ ವರ್ಗಗಳ ಮಾನದಂಡಕ್ಕಿಂತ ಭಿನ್ನವಾಗಿರಬಹುದು ಎಂದು ‘ಅಭಿಪ್ರಾಯ’ ಪಟ್ಟಿದ್ದಾರೆ. ಒಬ್ಬರು ಮೀಸಲಾತಿ ಒಂದು ಪೀಳಿಗೆಗೆ ಮಾತ್ರ ಸೀಮಿತವಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಅವು ಯಾವೊಂದೂ ಆದೇಶವಾಗುವುದಿಲ್ಲ.

ಹೀಗಾಗಿ ಪೀಠದ ಕೆಲವು ನ್ಯಾಯಾಧೀಶರ ಆದೇಶದಲ್ಲಿ ಉಲ್ಲೇಖವಾಗಿರುವ ಕ್ರೀಮಿ ಲೇಯರ್ ವಿಷಯದ ಬಗ್ಗೆ ಸದ್ಯಕ್ಕೆ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಅದು ನ್ಯಾಯಾಧೀಶರು ಇಂಥ ಸೂಕ್ಷ್ಮ ವಿಷಯಗಳ ಬಗ್ಗೆಯೂ ಎಷ್ಟು ಬೇಕಾಬಿಟ್ಟಿ ಅಭಿಪ್ರಾಯ ಹೊಂದಿರುತ್ತಾರೆ ಎಂಬುದರ ಬಗ್ಗೆಯಂತೂ ಆತಂಕ ಹುಟ್ಟಿಸುತ್ತದೆ.

ಸೂಕ್ತ ಪ್ರಾತಿನಿಧ್ಯ ಮತ್ತು ಕ್ರೀಮಿ ಲೇಯರ್

ಏಕೆಂದರೆ ಕ್ರೀಮಿ ಲೇಯರ್ ವಿಷಯ ಕಪ್ಪು ಬಿಳುಪಿನಷ್ಟು ನೇರವಾಗಿರುವ ಸಮಸ್ಯೆಯಲ್ಲ. ಅದು ಸಂಕೀರ್ಣವಾದ ಆಳವಾದ ಚಿಂತನೆ ಕೇಳುವ ಸಂಕೀರ್ಣ ಸಮಸ್ಯೆ. ಒಂದೆಡೆ ಪರಿಶಿಷ್ಟರ ಮೀಸಲಾತಿಯನ್ನು ಅನುಭವಿಸಿದ ಕುಟುಂಬಗಳೇ ಅನುಭವಿಸುತ್ತಿವೆ. ಸಮುದಾಯಗಳ ಉಳಿದವರಿಗೆ ತಲುಪುತ್ತಿಲ್ಲ ಎಂಬ ವಾದದಲ್ಲೂ ತಥ್ಯವಿದೆ. ಆದರೆ ಬ್ರಾಹ್ಮಣ ಹಾಗೂ ಪ್ರಬಲ ಜಾತಿಗಳು ಸಾವಿರಾರು ವರ್ಷಗಳ ಕಾಲ ಜ್ಞಾನ, ಸಂಪತ್ತು ಮತ್ತು ಅಧಿಕಾರದ ಮೀಸಲಾತಿಯನ್ನು ತಮ್ಮ ಜಾತಿಗೆ ಉಳಿಸಿಕೊಂಡಿರುವುದರಿಂದಲೇ ಅಲ್ಲವೇ ಅವರಿಗೆ ಈಗ ಮೀಸಲಾತಿಯ ಅಗತ್ಯ ಬೀಳದಿರುವುದು. (ಆದರೂ ಅವರಿಗೂ ಈಗ ಮೀಸಲಾತಿ ಕೊಡುತ್ತಿರುವುದು ಬೇರೆ ವಿಷಯ.) ಹಾಗಿರುವಾಗ 75 ವರ್ಷಗಳಲ್ಲಿ ಎರಡು ಮೂರು ಪೀಳಿಗೆಗಳು ಮೀಸಲಾತಿ ಪಡೆದ ತಕ್ಷಣ ಮೀಸಲಾತಿಯಿಂದ ಹೊರಹಾಕಿದರೆ ಸಮುದಾಯಗಳ ಬೆಳವಣಿಗೆಯನ್ನೇ ಕಡಿತಗೊಳಿಸಿದಂತೆ ಆಗುವುದಿಲ್ಲವೇ? ಅಷ್ಟು ಮಾತ್ರವಲ್ಲ. ಮೀಸಲಾತಿಯ ಅಸಲಿ ಉದ್ದೇಶ ಸರಕಾರದಲ್ಲಿ ಆಯಾ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಉನ್ನತ ಸರಕಾರಿ ಹುದ್ದೆಗಳಿಗೆ ತಲುಪಬೇಕೆಂದರೆ ಅದರ ಹಿಂದಿನ ಹುದ್ದೆಯ ತನಕವಾದರೂ ದಲಿತ ಅಭ್ಯರ್ಥಿಗಳು ತಲುಪಬೇಕಲ್ಲವೇ? ಆರ್ಥಿಕ ಮಾನದಂಡದ ಕ್ರೀಮಿ ಲೇಯರ್ ಅನ್ವಯಿಸಿ ಅವರನ್ನು ಸ್ಪರ್ಧೆಯಿಂದ ಹೊರಹಾಕಿದರೆ ಆ ಹುದ್ದೆಗಳು ಸೂಕ್ತ ಅಭ್ಯರ್ಥಿಯ ಕೊರತೆಯ ಕಾರಣದಿಂದಾಗಿ ಒಂದೋ ಬ್ಯಾಕ್ ಲಾಗ್ ಆಗುವುದು ಅಥವಾ ಜನರಲ್ ಕ್ಯಾಟಗರಿಗೆ ವರ್ಗಾಯಿಸಲ್ಪಡುವುದು. ಇದು ಮೀಸಲಾತಿಯನ್ನೇ ಅನರ್ಥಗೊಳಿಸುವುದಲ್ಲವೇ?

ಆದರೆ ಈ ಸಮಸ್ಯೆಯ ಮತ್ತೊಂದು ಮುಖವಿದೆ. ಮೀಸಲಾತಿಯ ಫಲ ಪಡೆದ ಒಂದು ಸ್ತರವೇ ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಳ್ಳುತ್ತಾ ಹೋಗುವುದು ಹಾಗೂ ಈಗಾಗಲೇ ಈ ವರ್ಗಗಳು ಅವಕಾಶ ಲಪಟಾಯಿಸಿರುವುದರಿಂದ ಅದೇ ಸಮುದಾಯದ ಅರ್ಹ ಹಾಗೂ ಅಗತ್ಯವಿರುವ ಬಹುಸಂಖ್ಯಾತರಿಗೆ ಮೀಸಲಾತಿಯ ಸೌಲಭ್ಯ ಎಂದೆಂದಿಗೂ ಸಿಗದೇ ಹೋಗುವುದು.

ಎರಡೂ ಕೂಡ ಗಂಭೀರ ಸಮಸ್ಯೆಯೇ. ಅದರಲ್ಲೂ ಸರಕಾರವು ಶಿಕ್ಷಣ, ಆರೋಗ್ಯ, ಉದ್ಯೋಗ ಏನನ್ನು ಕೊಡದಿರುವ ಈ ನವ ಉದಾರವಾದಿ ಸಂದರ್ಭದಲ್ಲಿ ಈ ಸಮಸ್ಯೆ ಇನ್ನೂ ಮೂಲಭೂತ ಹಾಗೂ ಸಮಗ್ರ ಪರಿಹಾರವನ್ನು ಕೇಳುತ್ತದೆ.

ನ್ಯಾಯಾಲಯ ಸಮಸ್ಯೆಯ ಸಮಗ್ರತೆ ಮತ್ತು ಬಹುಮುಖತೆಯನ್ನು ಅರ್ಥ ಮಾಡಿಕೊಳ್ಳದೆ ಬೇಕಾಬಿಟ್ಟಿ ಪ್ರಸ್ತಾವಗಳನ್ನು ಮಾಡುವುದು ಸಮಾಜದಲ್ಲಿ ಗೊಂದಲಗಳಿಗೆ ಮಾತ್ರವಲ್ಲದೆ ಶೋಷಕ ಶಕ್ತಿಗಳು ಅದನ್ನು ದುರ್ಬಳಕೆ ಮಾಡಿಕೊಳ್ಳಲೂ ಅವಕಾಶಮಾಡಿಕೊಟ್ಟಂತಾಗುತ್ತದೆ. ನ್ಯಾಯಾಲಯ ಇಂತಹ ಅಧಿಕಪ್ರಸಂಗಗಳನ್ನು ಮಾಡಬಾರದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಶಿವಸುಂದರ್

contributor

Similar News