ಕನ್ನಡ ನಿಘಂಟು ಕ್ಷೇತ್ರದ ಮೇರುಪುರುಷ: ರೆವರೆಂಡ್ ಎಫ್. ಕಿಟೆಲ್

ಭಾರತೀಯ ಭಾಷೆಗಳಲ್ಲಿ ಯಾಸ್ಕನ ಸಂಸ್ಕೃತ ನಿಘಂಟು ನಿರುಕ್ತ(4ನೇ ಶತಮಾನ), ಕನ್ನಡದಲ್ಲಿ ರನ್ನಕವಿಯ(ಕ್ರಿ.ಶ.10ನೇ ಶತಮಾನ) ಹನ್ನೆರಡುವರೆ ಕಂದಪದ್ಯಗಳ ರನ್ನಕಂದವೇ ಮೊತ್ತಮೊದಲ ನಿಘಂಟುಗಳು. ನಡುಗನ್ನಡದ ವಿರಕ್ತತೋಂಟದಾರ್ಯನ ಕರ್ಣಾಟಕ ಶಬ್ದಮಂಜರಿ ಪದ್ಯರೂಪದ ನಿಘಂಟು. ಅಂದಿನಿಂದ ಇಂದಿನವರೆಗೆ ನಿಘಂಟು ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಅವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಕನ್ನಡ-ಕನ್ನಡ ನಿಘಂಟು (9,000 ಪುಟ; 8ಸಂಪುಟ; 4 ಲಕ್ಷ ಕನ್ನಡ ಪದಗಳು; 1995) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು (6,500 ಪುಟ; 4 ಸಂಪುಟ; 1.06 ಪದಗಳು; 2006) ಪ್ರಮುಖವಾದವು. ನಿಘಂಟು ರಚನಾ ಶಾಸ್ತ್ರಕ್ಷೇತ್ರದಲ್ಲಿ ಅಗಾಧ ಪರಿಶ್ರಮ ವಹಿಸಿ ಹೊಸಮಾರ್ಗವನ್ನು ಹಾಕಿಕೊಟ್ಟವರಲ್ಲಿ ವಿದೇಶೀಯ ವಿದ್ವಾಂಸರೇ ಮೊದಲಿಗರೆನ್ನಬೇಕು.
ಹತ್ತೊಂಭತ್ತನೆಯ ಶತಮಾನದ ಆದಿಭಾಗದಲ್ಲಿ ಧರ್ಮಪ್ರಸಾರ, ವ್ಯಾಪಾರೋದ್ದೇಶಗಳಿಂದ ಭಾರತಕ್ಕೆ ಬಂದ ವಿದೇಶೀಯರು ಅನಿವಾರ್ಯವಾಗಿ ದೇಶೀಯ ಭಾಷೆಗಳನ್ನು ಕಲಿಯಬೇಕಾಯಿತು. ಪರಿಣಾಮವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯ ಭಂಡಾರ ಸಮೃದ್ಧವಾಯಿತು. ಇಂತಹ ಮಹನೀಯರಲ್ಲಿ ರೆವರೆಂಡ್ ಫರ್ಡಿನಂಡ್ ಕಿಟೆಲ್ ಪ್ರಮುಖರು. ಎಪ್ರಿಲ್ 7ರಂದು ಕಿಟೆಲ್‌ರ 193ನೆಯ ಜನ್ಮದಿನ ಅವರ ಕನ್ನಡ-ಇಂಗ್ಲಿಷ್ ನಿಘಂಟಿಗೆ 131 ವರ್ಷಗಳು. ಕನ್ನಡ ಭಾಷೆ ಜೀವಂತವಿರುವವರೆಗೂ ಉಳಿಯಬಲ್ಲ ಗ್ರಂಥವಿದು ಎಂಬ ಹಿರಿಯ ವಿದ್ವಾಂಸ ಎಸ್.ಕೆ.ಹಾವನೂರರ ಮಾತು ನಿತ್ಯಸತ್ಯ. ಕಿಟೆಲ್ ಅವರನ್ನು ಕನ್ನಡ ನಿಘಂಟುಶಾಸ್ತ್ರದ ಪಿತಾಮಹರೆಂದರೆ ಲವಲೇಶವೂ ಉತ್ಪ್ರೇಕ್ಷೆಯಿಲ್ಲ.
ಜರ್ಮನಿಯ ಗಾಟ್ ಫ್ರೀಟ್ ಕಿಟೆಲ್ ಮತ್ತು ಟ್ಯೂಡೋವ್ ಹೆಲೆನ್ ಹ್ಯೂಬರ್ಟ್ ದಂಪತಿಯ ಐವರು ಮಕ್ಕಳಲ್ಲಿ ಮೊದಲನೆಯ ಮಗನಾಗಿ ರೆಸ್ಟರ್‌ಹಾವೆನ್‌ನ ಫ್ರಿಸಿಯಾದಲ್ಲಿ ಜನಿಸಿದ ಕಿಟೆಲ್ ತಮ್ಮೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣವನ್ನು ಔರಿಕ್ ಮತ್ತು ಸ್ವಿಟ್ಸರ್‌ಲ್ಯಾಂಡಿನ ಬಾಸೆಲ್ ನಗರದ ಮತಪ್ರಚಾರೋದ್ದೇಶದ ಮಿಷನ್ ಕಾಲೇಜಿನಲ್ಲಿ 1850ರಲ್ಲಿ ಪೂರೈಸಿದರು. ಭಾರತಕ್ಕೆ ಬರುವ ಮುನ್ನವೇ ಅವರಿಗೆ ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್, ಇಂಗ್ಲಿಷ್ ಗೊತ್ತಿತ್ತು. 1853ರಲ್ಲಿ ಭಾರತಕ್ಕೆ ಪಾದ್ರಿಯಾಗಿ ಬಂದ ಕಿಟೆಲ್ ಧಾರವಾಡದಲ್ಲಿ ನೆಲೆಸಿದರು. ಆನಂತರ ಮಂಗಳೂರಿನಲ್ಲಿ ಕನ್ನಡವನ್ನು ಕಲಿಯಲಾರಂಭಿಸಿ ಕನ್ನಡದಲ್ಲಿ ಆಳವಾದ ಪಾಂಡಿತ್ಯವನ್ನು ಪಡೆದರಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನೂ ಕರಗತಮಾಡಿಕೊಂಡರು. ಹುಬ್ಬಳ್ಳಿ, ಧಾರವಾಡ, ಮಡಿಕೇರಿ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡಿದರು. 1860ರಲ್ಲಿ ಪಾಲಿನ್ ಎಫ್ ಐತ್ ಎಂಬ ಜರ್ಮನ್ ಕನ್ಯೆಯೊಂದಿಗೆ ವಿವಾಹವಾದರು. ನಂತರದ ನಾಲ್ಕೈದು ವರ್ಷಗಳಲ್ಲಿ ಆಕೆ ಮಂಗಳೂರಿನಲ್ಲಿ ನಿಧನರಾದರು. ಮಡದಿಯ ಅಗಲಿಕೆಯಿಂದ ಕುಗ್ಗಿದ ಕಿಟೆಲ್ ಅವರಿಗೆ ಇಲ್ಲಿನ ಹವೆ ಒಗ್ಗಲಿಲ್ಲವಾದ ಕಾರಣ 1866ರಲ್ಲಿ ಆರೋಗ್ಯ ಸುಧಾರಣೆಗಾಗಿ ಸ್ವದೇಶಕ್ಕೆ ತೆರಳಿ, ಆರೋಗ್ಯ ಸುಧಾರಿಸುತ್ತಲೇ ತಮ್ಮ ಹೆಂಡತಿಯ ತಂಗಿ ಜ್ಯೂಲಿಯನ್ನು ಮದುವೆಯಾಗಿ, ಮರುವರ್ಷವೇ 1867ರಲ್ಲಿ ಭಾರತಕ್ಕೆ ಮರಳಿ ಬಂದರು.
ನಿಘಂಟು ರಚನೆಗೆ ಪ್ರೇರಣೆ
1872ರಲ್ಲಿ ಕಿಟೆಲ್ ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ ಶಬ್ದಮಣಿದರ್ಪಣ ಕಿಟೆಲ್ ಕೋಶದ ರಚನೆಗೆ ನಾಂದಿಯಾಯಿತು. ಕಿಟೆಲ್‌ರ ಕಾರ್ಯಕ್ಷಮತೆಯಿಂದ ಚೋದ್ಯರಾದ ಡಾ. ಮೊಗ್ಲಿಂಗ್ ಮತ್ತು ಸರ್ ವಾಲ್ಟರ್ ಎಲಿಯೆಟ್ ಮುಂತಾದ ಆಂಗ್ಲ ಅಧಿಕಾರಿಗಳು ಕನ್ನಡ-ಇಂಗ್ಲಿಷ್ ನಿಘಂಟು ರಚನೆಯ ಅವಶ್ಯಕತೆಯನ್ನು ತಿಳಿಸಿ, ಅಗತ್ಯವಾದ ನೆರವನ್ನೊದಗಿಸುವ ಭರವಸೆಯನ್ನೂ ನೀಡಿದರು. 1828ರಲ್ಲಿಯೇ ವಿಲಿಯಂ ರೀವ್ ಅವರ ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ ಶಬ್ದಕೋಶಗಳು ಬಂದಿದ್ದರೂ, ಅವುಗಳಲ್ಲಿನ ಲೋಪದೋಷಗಳಿಂದಾಗಿ ಅವನ್ನು ಪರಿಷ್ಕರಿಸಿ ಹೊಸದಾದ ನಿಘಂಟನ್ನು ರಚಿಸಬೇಕೆಂದು ಕಿಟೆಲ್ ಆಲೋಚಿಸಿದರು. ಹೀಗೆ ಒಂದರ್ಥದಲ್ಲಿ ಕಿಟೆಲ್‌ರ ಶಬ್ದಕೋಶ ರಚನೆಗೆ ಅವರ ನಿಘಂಟು ತಳಹದಿಯಾಯಿತೆನ್ನಬಹುದು.
ಕನ್ನಡ-ಇಂಗ್ಲಿಷ್ ನಿಘಂಟು
ಸರಕಾರದ ಆಹ್ವಾನವನ್ನೊಪ್ಪಿದ ಕಿಟೆಲ್ ನಿಘಂಟಿನ ರೂಪರೇಷೆಗಳನ್ನು ಸಿದ್ಧಗೊಳಿಸಿ 1872ರಲ್ಲಿ ರಚನೆಗೆ ತೊಡಗಿದರು. ಆದರೆ ಅನಾರೋಗ್ಯದಿಂದಾಗಿ 1877ರಲ್ಲಿ ಜರ್ಮನಿಗೆ ಹೋಗಿ ಎಸ್ಲಿಂಗ್‌ನಲ್ಲಿ 1883ರವರೆಗೆ ಅಪಾರ ಪರಿಶ್ರಮದಿಂದ ಅಲ್ಲಿಯೇ ನಿಘಂಟಿನ ಪ್ರಥಮ ಕರಡನ್ನು ಸಿದ್ಧಪಡಿಸಿದರು. ಕನ್ನಡ ವಿದ್ವಾಂಸರ ಜೊತೆ ಚರ್ಚಿಸಿ ಅಂತಿಮ ಪ್ರತಿಯನ್ನು ಸಿದ್ಧಪಡಿಸಲು 1883ರಲ್ಲಿ ಪುನಃ ಧಾರವಾಡಕ್ಕೆ ಬಂದರು. ಪಂಡಿತರ ಸಹಕಾರದಿಂದ ಪ್ರಾಚೀನ ಕನ್ನಡ ಗ್ರಂಥಗಳ ಶಬ್ದಸಂಪತ್ತಿಯನ್ನು ಸಿದ್ಧಪಡಿಸಿ, ದ್ರಾವಿಡ ಜ್ಞಾತಿಶಬ್ದಗಳನ್ನು ಸಂಗ್ರಹಿಸಿ ಅವುಗಳಿಗೆ ನಿಷ್ಪತ್ತಿಯನ್ನು ಬರೆದರು. ಗ್ರಂಥಸ್ಥ ಉದಾಹರಣೆಗಳೊಂದಿಗೆ ಆಡುನುಡಿಗಳನ್ನು, ಗಾದೆಗಳನ್ನು ಸಂಗ್ರಹಿಸಿದರು. ‘ಹಲವಾರು ಪದಾರ್ಥಗಳನ್ನು ಕಿಸೆಯಲ್ಲಿಟ್ಟುಕೊಂಡು ಧಾರವಾಡ, ಹುಬ್ಬಳ್ಳಿಗಳ ಬೀದಿಗಳಲ್ಲಿ, ಸಂತೆಗಳಲ್ಲಿ ಸಂಚರಿಸಿ ಹಳ್ಳಿಗರನ್ನು ಕೇಳಿ ಅರ್ಥಸಂಗ್ರಹ ಮಾಡುತ್ತಿದ್ದರು’ ಎಂಬ ಮಾತು ಅವರು ಕ್ಷೇತ್ರಕಾರ್ಯಕ್ಕೆ ನೀಡಿದ್ದ ಮಹತ್ವವನ್ನು ಬಿಂಬಿಸುತ್ತದೆ. ಹೀಗೆ 70,000 ಶಬ್ದಗಳನ್ನು ಒಳಗೊಂಡ ಹಸ್ತಪ್ರತಿ 1892ರಲ್ಲಿ ಸಿದ್ಧವಾಯಿತು. ಅದರ ಮುದ್ರಣ ಕಾರ್ಯವನ್ನು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನವರಿಗೆ ಒಪ್ಪಿಸಿದರು. ಅನಾರೋಗ್ಯದಿಂದಾಗಿ ಮತ್ತೆ ಯುರೋಪಿಗೆ ತೆರಳಿದರು. ಅಲ್ಲಿಂದಲೇ ಶಬ್ದಕೋಶವನ್ನು ಪರಿವೀಕ್ಷಿಸಿ 22, ಜುಲೈ 1893ರಲ್ಲಿ 47ಪುಟಗಳ ಮೊದಲ ಮಾತುಗಳನ್ನು ಬರೆದರು. 1894ರಲ್ಲಿ 1,752 ಪುಟಗಳ ಬೃಹತ್ ಕಿಟೆಲ್ ಕನ್ನಡ-ಇಂಗ್ಲಿಷ್ ನಿಘಂಟು ಅಚ್ಚಾಗಿ ಬಿಡುಗಡೆಯಾಯಿತು.
ವೈಜ್ಞಾನಿಕ ದೃಷ್ಟಿಕೋನ ಹಾಗೂ ಶಾಸ್ತ್ರೀಯವಾಗಿ ಸಿದ್ಧಪಡಿಸಿದ ಈ ಬಗೆಯ ನಿಘಂಟು ಭರತಖಂಡದ ಯಾವ ದೇಶಭಾಷೆಗಳಲ್ಲೂ ಇಲ್ಲವೆಂದು ವಿದ್ವಾಂಸರು ವ್ಯಕ್ತಪಡಿಸಿರುವ ಅಭಿಪ್ರಾಯ ಕಿಟೆಲ್‌ರನ್ನು ನಿಘಂಟು ಕ್ಷೇತ್ರದ ಮೇರುಪುರುಷರನ್ನಾಗಿಸಿದೆ. ಇವರ ಈ ಮಹತ್ಕಾರ್ಯಕ್ಕೆ ಟ್ಯೂಬಿಂಗನ್ನಿನ ವಿಶ್ವವಿದ್ಯಾನಿಲಯ 1896ರಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿ ಗೌರವಿಸಿತು. ಇದು ಕನ್ನಡದ ಕೆಲಸಕ್ಕೆ ದೊರೆತ ಮೊದಲ ವಿದೇಶೀಯ ಡಾಕ್ಟರೇಟ್ ಗೌರವವಾಗಿದೆ.
ಕಿಟೆಲ್ ನಿಘಂಟು ರಚನೆಯ ಜೊತೆಗೆ ಇತರ ಕ್ಷೇತ್ರಗಳಲ್ಲೂ ಕೃಷಿ ಮಾಡಿದ್ದಾರೆ. ದೇ. ಜವರೇಗೌಡ ಅವರು ‘ಕನ್ನಡ ಗ್ರಂಥ ಸಂಪಾದನೆ ಹಾಗೂ ಸಂಶೋಧನೆಗಳಿಗೆ ಗುದ್ದಲಿ ಪೂಜೆ ಮಾಡಿ ಭದ್ರಬುನಾದಿಯನ್ನು ಹಾಕಿದವರಲ್ಲಿ ಕಿಟೆಲ್ ಅವರೇ ಪ್ರಥಮರು. ಕನ್ನಡ ವಿದ್ವತ್ ಪ್ರಪಂಚದ ಮೊದಲ ಆಚಾರ್ಯ ಪುರುಷರು’ ಎಂದೂ, ನಡೆದಾಡುವ ಶಬ್ದಕೋಶವೆಂದೇ ಖ್ಯಾತರಾದ ಡಿ.ಎಲ್. ನರಸಿಂಹಾಚಾರ್ ‘ಕಿಟೆಲ್ ಕನ್ನಡದ ಋಷಿಗಳಲ್ಲಿ ಒಬ್ಬರು’ ಎಂದಿದ್ದಾರೆ.
ಕಿಟೆಲ್ ಅವರು 1872ರಲ್ಲಿ ಮಡಿಕೇರಿಯಲ್ಲಿದ್ದಾಗ ಸಂಪಾದಿಸಿ ಪ್ರಕಟಿಸಿದ ಕೇಶಿರಾಜನ ಶಬ್ದಮಣಿದರ್ಪಣ, ಈ ಹಿಂದೆ ಜಾನ್ ಗ್ಯಾರಟ್ ಪ್ರಕಟಿಸಿದ್ದ ಶಬ್ದಮಣಿದರ್ಪಣದ ಆವೃತ್ತಿಯಲ್ಲಿದ್ದ ಹಲವು ದೋಷಗಳನ್ನು ಸರಿಪಡಿಸಿದ ಪರಿಷ್ಕೃತ ಆವೃತ್ತಿ. ಇದರಲ್ಲಿನ ಅವರ 26 ಪುಟಗಳ ಪ್ರಸ್ತಾವನೆ ಕನ್ನಡ ಭಾಷೆ, ಸಾಹಿತ್ಯಗಳ ಮೇಲಿನ ಅವರ ಪ್ರಭುತ್ವ, ವಿದ್ವತ್ತನ್ನು ಪ್ರಕಟಪಡಿಸಿದೆ. ಕರ್ನಾಟಕ ಕಾವ್ಯ ಮಾಲೆ (1874), 1875ರಲ್ಲಿ ಪ್ರಥಮವಾಗಿ ಸಂಪಾದಿಸಿ ಪ್ರಕಟಿಸಿದ ನಾಗವರ್ಮನ ಛಂದೋಂಬುಧಿಗಳು ವೈಜ್ಞಾನಿಕ ರೀತಿಯ ಗ್ರಂಥಸಂಪಾದನೆಯ ವಿಧಾನ ಹಾಗೂ ಕನ್ನಡ ಸಂಶೋಧನೆಗೆ ಹಾಕಿದ ಅಡಿಗಲ್ಲುಗಳಾಗಿವೆ. ಛಂದೋಂಬುಧಿಯಲ್ಲಿ ಕನ್ನಡ ಸಾಹಿತ್ಯವನ್ನು ಕುರಿತು ಬರೆದ ಆ್ಯನ್ ಎಸ್ಸೆ ಆನ್ ಕ್ಯಾನರೀಸ್ ಲಿಟರೇಚರ್ ಮತ್ತು ಇಂಗ್ಲಿಷ್‌ನಲ್ಲಿ ಬರೆದ ಗ್ರ್ಯಾಮರ್ ಆಫ್ ದಿ ಕ್ಯಾನರೀಸ್ ಲಾಂಗ್ವೇಜ್ (1903) ಇವು ಮಹತ್ವವಾದವು. ಕನ್ನಡ ಪಂಚತಂತ್ರ, ಪರಮಾತ್ಮಜ್ಞಾನ ಮತ್ತು ಷಟ್ಪದಿ ಛಂದಸ್ಸಿನಲ್ಲಿ ಏಸುಕ್ರಿಸ್ತನ ಚರಿತ್ರೆಯನ್ನು ಇಂಡಿಯನ್ ಆ್ಯಂಟಿಕ್ವೆರಿಯಲ್ಲಿ ಇಂಡಿಯನ್ ಆವೆಂಜಲಿಕಲ್ ರಿವ್ಯೆ, ಎಪಿಗ್ರಾಫಿಯಾ ಇಂಡಿಕಾಗಳಲ್ಲಿ ಇಂಗ್ಲಿಷ್‌ನಲ್ಲಿ ಬರೆದ 24 ಲೇಖನಗಳ ಪಟ್ಟಿಯನ್ನು ನೋಡಿದರೆ ಅವರ ಬಹುಶ್ರುತತ್ವದ ಅರಿವಾಗದಿರದು. ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ಮೇರುಪುರುಷ ಎಪ್ಪತ್ತೊಂದನೆಯ ವಯಸ್ಸಿನಲ್ಲಿ, 19, ಡಿಸೆಂಬರ್ 1903ರಂದು ನಮ್ಮನ್ನಗಲಿದರು.