‘ಬಿಜೆಪಿ-ಜಗಳ’ ವೆಂಬ ಜೋಡೆತ್ತುಗಳು

Update: 2025-04-07 09:55 IST
‘ಬಿಜೆಪಿ-ಜಗಳ’ ವೆಂಬ ಜೋಡೆತ್ತುಗಳು
  • whatsapp icon

ಬಿಜೆಪಿ ಹುಟ್ಟಿ ನಿನ್ನೆಗೆ (ಎಪ್ರಿಲ್ 6) 45 ವರ್ಷ. ಹುಟ್ಟಿದಾರಭದಿಂದಲೂ ರಾಜ್ಯ ಬಿಜೆಪಿಗೂ ಒಳಜಗಳಕ್ಕೂ ಬಿಡಿಸಲಾರದ ಬಂಧ-ಸಂಬಂಧ. ಮಾತಿಗೆ-ಮೇಲುನೋಟಕ್ಕೆ ಶಿಸ್ತಿನ ಪಕ್ಷ ಎಂದು ಹೇಳಿಕೊಂಡು ಅಂಬೆಗಾಲಿಡುವಾಗಲೇ ಅಂತರ್ಜಗಳವನ್ನು ಅಂತರ್ಗತ ಮಾಡಿಕೊಂಡ ಅಪರೂಪದ ಪಕ್ಷ ಬಿಜೆಪಿ. ನವಜಾತ ಪಕ್ಷದ ಮೊದಲ ಅಧ್ಯಕ್ಷ ಎ.ಕೆ. ಸುಬ್ಬಯ್ಯ ಅವರನ್ನು ನಿರ್ದಾಕ್ಷಿಣ್ಯವಾಗಿ ಉಚ್ಚಾಟನೆ ಮಾಡಿತು. ನಂತರದ ಮೂರು ದಶಕಗಳ ಇತಿಹಾಸದಲ್ಲಿ ಯಡಿಯೂರಪ್ಪ V/s

ಅನಂತಕುಮಾರ್, ಯಡಿಯೂರಪ್ಪ V/s ಬಿ.ಎಲ್. ಸಂತೋಷ್ ಎಂಬ ಮಹಾಸಮರಗಳ ಪರ್ವಗಳಿವೆ. ಸಣ್ಣಪುಟ್ಟ ಕದನ-ಕಿತ್ತಾಟಗಳ ಅಧ್ಯಾಯಗಳಂತೂ ಭರಪೂರ. ಇದಲ್ಲದೆ ಹೊರಜಗತ್ತಿಗೆ ಗೊತ್ತಾಗದ ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಅಂತರ್ಕಲಹಗಳು ಅದೆಷ್ಟೋ?

ಬಿಜೆಪಿ ಕಣ್ಣು ಬಿಟ್ಟಿದ್ದೇParty with a difference ಎಂದು ಹೇಳುತ್ತಾ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳುತ್ತಾ. ಆದರೆ ಹೆಜ್ಜೆ ಹಾಕಿದ್ದು ತದ್ವಿರುದ್ಧವಾಗಿ. ರಾಷ್ಟ್ರಮಟ್ಟದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಪ್ರಮೋದ್ ಮಹಾಜನ್ ಅವರಂಥ ನಾಯಕರು ಮುಂಚೂಣಿಗೆ ಬಂದರು. ರಾಜ್ಯದಿಂದ ಯಡಿಯೂರಪ್ಪ, ಅನಂತಕುಮಾರ್‌ಗೆ

ಅವಕಾಶಗಳಿದ್ದವು. ಅವರೇ ಪರಸ್ಪರ ಕಾಲೆಳೆದುಕೊಂಡರು.

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಆ ಪಕ್ಷದ ನಾಯಕರಿಗಿಂತ ಬೇರೆಯವರೇ ಹೆಚ್ಚು ನೀರು-ಗೊಬ್ಬರ ಹಾಕಿದ್ದಾರೆ. 1985ರಲ್ಲಿ ಕೇವಲ ಇಬ್ಬರು ಶಾಸಕರನ್ನು ಹೊಂದಿದ್ದ ಬಿಜೆಪಿ 1989ರ ವೇಳೆಗೆ ಹೆಚ್ಚಿ

ಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಇನ್ನೆರಡು ಸ್ಥಾನಗಳನ್ನು. ಆನಂತರ ಜನತಾದಳ ಹೋಳಾಗಿ ರಾಮಕೃಷ್ಣ ಹೆಗಡೆ ಬೆಂಬಲಿಗರು ಬಿಜೆಪಿ ಕಡೆ ಬಂದಿದ್ದರಿಂದ 1994ರ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಬಿಜೆಪಿ ಮತ್ತು ಆರೆಸ್ಸೆಸ್‌ನ ನಾಯಕರಲ್ಲಿ ಅಧಿಕಾರದ ಆಸೆ-ದುರಾಸೆ-ದುಷ್ಟತನಗಳೆಲ್ಲವೂ ಮಿಳಿತಗೊಂಡಿದ್ದೂ ಆಗಲೇ. ಪರಿಣಾಮವಾಗಿ 1999ರ ಚುನಾವಣೆಯಲ್ಲಿ ಬಿಜೆಪಿ

4 ಹೆಚ್ಚಿನ ಸ್ಥಾನ ಗೆದ್ದು 44 ಸ್ಥಾನಕ್ಕೆ ಸೀಮಿತಗೊಂಡಿತು. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಸೋತಿದ್ದರಿಂದ ಬಿ.ಬಿ. ಶಿವಪ್ಪ ವಿಪಕ್ಷ ನಾಯಕ ಆಗಬೇಕಿತ್ತು. ಆದರೆ ಯಡಿಯೂರಪ್ಪಆರೆಸ್ಸಸೆಸ್ ನಾಯಕರ ಜೊತೆ ಸೇರಿ ಮತ್ತೊಬ್ಬ ಲಿಂಗಾಯತ ನಾಯಕ ಬೆಳೆಯಬಾರದೆಂದು ಶಿವಪ್ಪ ಅವರ ಅವಕಾಶ ತಪ್ಪಿಸಿದರು. ಆರೆಸ್ಸೆಸ್ ನಾಯಕರು ತಮ್ಮ ಮಾತು ಕೇಳುವ ಜಗದೀಶ್ ಶೆಟ್ಟರ್‌ಗೆ ವಿಪಕ್ಷ ನಾಯಕನ ಪಟ್ಟ ಕಟ್ಟಿ ಆಗಲೇ ಯಡಿಯೂರಪ್ಪಗೆ ಪರ್ಯಾಯ ನಾಯಕನನ್ನು ಹುಟ್ಟುಹಾಕಲೆತ್ನಿಸಿದರು.

ಕಾಲೆಳೆದಾಟದಲ್ಲಿ ತೊಡಗಿದ್ದ ಕಮಲ ಪಾಳೆಯಕ್ಕೆ ಭರವಸೆಯಾಗಿ ಬಂದವರು ಎಸ್. ಬಂಗಾರಪ್ಪ. ದೇವರಾಜ ಅರಸು ನಂತರ ಬಂದ ಜನಪ್ರಿಯ ನಾಯಕ. ಆಗ ಬಿಜೆಪಿ ಇನ್ನೊಂದು ಹಂತಕ್ಕೆ ಬೆಳೆಯಿತು. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿಯ ಈಡಿಗ ಮತಗಳು ಹಾಗೂ ಹಿಂದುಳಿದ ಮತಗಳು ಬಿಜೆಪಿ ಬುಟ್ಟಿ ಸೇರಿದವು. ಇದರಿಂದಾಗಿಯೇ 2004ರ ವಿಧಾನಸಭಾ ಚುನಾವಣೆಲ್ಲಿ ಬಿಜೆಪಿ 79 ಸ್ಥಾನ ಗಳಿಸಿತು. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಬಂಗಾರಪ್ಪ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಬೇಕಿತ್ತು. ಆದರೆ ಹಿಂದುಳಿದ ವರ್ಗದ ನಾಯಕ ಬೆಳೆಯುವುದನ್ನು ಅನಂತಕುಮಾರ್, ಯಡಿಯೂರಪ್ಪ ಮತ್ತಿತರ ಆರೆಸ್ಸೆಸ್ ನಾಯಕರು ಸಹಿಸಲಿಲ್ಲ. ಬಿಜೆಪಿ ನಾಯಕರ ಕಿರುಕುಳ ಸಹಿಸಲಾಗದೆ ಬಂಗಾರಪ್ಪ ಒಂದೇ ವರ್ಷದಲ್ಲಿ ಹೊರನಡೆಯಬೇಕಾಯಿತು.

ಈ ಹಂತದಲ್ಲಿ ಸ್ವತಃ ಯಡಿಯೂರಪ್ಪ ಬಿಜೆಪಿ ಬಿಡಲು ಸಿದ್ಧರಾಗಿದ್ದರು. ಮಂತ್ರಿ ಸ್ಥಾನ ಕೊಟ್ಟರೆ ಜೆಡಿಎಸ್ ಸೇರುವ ಸುಳಿವು ನೀಡಿದ್ದರು. ಪರಿಸ್ಥಿತಿ ಬದಲಾಗಿ 2006ರಲ್ಲಿ ಜೆಡಿಎಸ್ ಜೊತೆ ಸೇರಿ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ಆಂತರ ಕುಮಾರಸ್ವಾಮಿ ಒಪ್ಪಂದದ ಪ್ರಕಾರ ಯಡಿಯೂರಪ್ಪಗೆ ಅಧಿಕಾರ ಬಿಟ್ಟುಕೊಡಲಿಲ್ಲ. ವಚನಭ್ರಷ್ಟತೆಯ ಅಸ್ತ್ರ ಇದ್ದೂ 2008ರಲ್ಲಿ ಬಿಜೆಪಿ ಗಳಿಸಿದ್ದು 110 ಸ್ಥಾನಗಳನ್ನು ಮಾತ್ರ. ಆಮೇಲೆ ಆಪರೇಷನ್ ಕಮಲ ಮಾಡಿ ಸರಕಾರ ಉಳಿಸಿಕೊಂಡರೂ 2011ರಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಬೇಕಾಯಿತು. ಅದಕ್ಕೆ ಬಿಜೆಪಿ ನಾಯಕರೇ ಕಾರಣರಾಗಿದ್ದರು. 2019ರಲ್ಲಿ ಯಡಿಯೂರಪ್ಪ ಮತ್ತೆ ಸಿಎಂ ಆಗಿ ಮತ್ತೆ ರಾಜೀನಾಮೆ ಕೊಟ್ಟರು. ಆಗಲೂ ಬಿಜೆಪಿ ನಾಯಕರೇ ಕಾರಣರಾಗಿದ್ದರು. ಇದು ಬಿಜೆಪಿಯ ಅಂತರ್ಕಲಹದ ಇನ್ನೊಂದು ಮಹತ್ವದ ಘಟ್ಟ. ಕಾಂಗ್ರೆಸ್ ಕಡೆ ನೋಡಿದರೆ 45 ವರ್ಷಗಳಲ್ಲಿ ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರ ಅನುಪಸ್ಥಿತಿ ಇಂದು ನೆನಪೇ ಆಗದಂತಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಂಥ ಮೇರು ನಾಯಕರಿದ್ದಾರೆ. ಎರಡನೇ ಸಾಲಿನಲ್ಲಿ ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಂಥವರಿದ್ದಾರೆ. ಮುಂದೆ ಸಾಗಿದರೆ ಪ್ರಿಯಾಂಕಾ ಖರ್ಗೆ, ಸಂತೋಷ್ ಲಾಡ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಕಾಣಸಿಗುತ್ತಾರೆ. ಒಬ್ಬೊಬ್ಬರೂ ಒಂದೊಂದು ಜಾತಿ-ವರ್ಗ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸಿನಲ್ಲೂ ಕಿತ್ತಾಟವಿದೆ. ಅದರ ಹೊರತಾಗಿಯೂ ಒಂದಿಷ್ಟು ನಾಯಕರು ಹೊರಹೊಮ್ಮಿದ್ದಾರೆ. ಬಿಜೆಪಿಗೆ ಇಂಥ ಒಬ್ಬ ನಾಯಕನನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ.

► ಸಮಾಪ್ತಿಯಾಗದ ಸಂಘರ್ಷ

ಇದೀಗ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆದರೂ ರಾಜ್ಯ ಬಿಜೆಪಿಯ ಸಂಘರ್ಷ ಸಮಾಪ್ತಿಯಾಗಿಲ್ಲ. ಉಚ್ಚಾಟನೆ ಅಸ್ತ್ರದ ಮೂಲಕ ಭಿನ್ನಮತ ಶಮನ ಮಾಡಬಹುದೆಂಬ ನಿರೀಕ್ಷೆ ನಿಜವಾಗಿಲ್ಲ. ಯತ್ನಾಳ್ ಬಣದವರು ಮತ್ತೆ ಸಭೆ ನಡೆಸಿದ್ದಾರೆ. ವಿಜಯೇಂದ್ರ ಕೆಳಗಿಳಿಸುವ ಗುರಿಯಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಯತ್ನಾಳ್ ಉಚ್ಚಾಟನೆ ಹಿಂಪಡೆಯಿರಿ ಎಂಬ ಒತ್ತಡ ಹಾಕುತ್ತಿದ್ದಾರೆ. ಯತ್ನಾಳ್ ಗೆ ಸಿಗುತ್ತಿದ್ದ ಪ್ರಚೋದನೆ, ಪ್ರೋತ್ಸಾಹಗಳು ಈಗಲೂ ಮುಂದುವರಿದಿದೆ. ಪಕ್ಷಕ್ಕೆ ವಾಪಸ್ ತರುವ ವಾಗ್ದಾನವೂ ಸಿಕ್ಕಿದೆ. ಇದರಿಂದ ಪ್ರೇರೇಪಿತಗೊಂಡಿರುವ ಯತ್ನಾಳ್ ತಮ್ಮ ಕತ್ತಿಗೆ ಮತ್ತೆ ಮತ್ತೆ ಸಾಣೆ ಹಿಡಿಯುತ್ತಿದ್ದಾರೆ. ಇನ್ನೊಂದೆಡೆ ಯತ್ನಾಳ್ ಉಚ್ಚಾಟನೆಯನ್ನು ಸಂಭ್ರಮಿಸುವ ಮೂಲಕ ವಿಜಯೇಂದ್ರ ಬಣದವರು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಬೆಂಕಿ ಹೊರಗೆ ಕಾಣುತ್ತಿಲ್ಲ. ಅದರ ಅರ್ಥ ಒಳಗೆ ಬೇಯುತ್ತಿಲ್ಲ ಎಂದಲ್ಲ.

► ವಿಜಯೇಂದ್ರ v/s ಅಶೋಕ್

ರಾಜ್ಯ ಬಿಜೆಪಿ ಸಾಗುತ್ತಿರುವ ರೀತಿ ವಿಜಯೇಂದ್ರ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ. ಬಿಜೆಪಿ ಮುಖಂಡರೊಬ್ಬರ ಪ್ರಕಾರ ಹೈಕಮಾಂಡ್ ನಾಯಕರು ಬಸವರಾಜ ಬೊಮ್ಮಾಯಿ ಹೆಸರು ಕೇಳಿದರೆ ಸಾಕು ಕೆಂಡವಾಗುತ್ತಿದ್ದರು. ಆದರೂ ಸಿದ್ದರಾಮಯ್ಯ ಮತ್ತಿತರರನ್ನು ನೀತಿ-ನಿರೂಪಣೆ ವಿಷಯದಲ್ಲಿ ಕಟ್ಟಿಹಾಕಬಲ್ಲ ಮಲ್ಲ ಇಲ್ಲ ಎಂದು ಬೊಮ್ಮಾಯಿ ವಿಪಕ್ಷ ನಾಯಕನಾಗಲಿ ಎಂದಿದ್ದರು. ಆಗ ಹಠ ಹಿಡಿದು ಅಶೋಕ್ ಗೆ ಅವಕಾಶ ಕೊಡಿಸಿದ್ದು ಯಡಿಯೂರಪ್ಪ. ಅದು ಅಶೋಕ್ ಮೇಲಿನ ಪ್ರೀತಿಯಿಂದಲ್ಲ. ಬದಲಿಗೆ ಯಾವುದೇ ವಿಷಯದ ಬಗ್ಗೆ ಅಧ್ಯಯನ-ಜ್ಞಾನ ಇಲ್ಲದಿರುವುದರಿಂದ ಅಶೋಕ್ ಯಶಸ್ವಿಯಾಗಲ್ಲ. ಸದನದ ಒಳ-ಹೊರಗೆ ವಿಜಯೇಂದ್ರ ಕೇಂದ್ರಿತ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕೆ.

ಇದೇ ಕಾರಣಕ್ಕೆ ಯಡಿಯೂರಪ್ಪ ಪಾಳೆಯದಲ್ಲಿದ್ದ ಅಶೋಕ್ ಈಗ ಬೊಮ್ಮಾಯಿ ಬಣಕ್ಕೆ ನೆಗೆದಿದ್ದಾರೆ. ವಿಜಯೇಂದ್ರ ಹೇಳಿದ್ದನ್ನು ನಾನೇಕೆ ಕೇಳಬೇಕು ಎನ್ನುತ್ತಿದ್ದಾರೆ. ಇನ್ನೊಂದೆಡೆ ವಿಜಯೇಂದ್ರ ಬೆಂಗಳೂರಿನ ವಿಷಯದಲ್ಲಿ ಅಶೋಕ್ ಅವರನ್ನು ನಗಣ್ಯ ಮಾಡಿದ್ದಾರೆ. ವಿಜಯೇಂದ್ರ-ಅಶೋಕ್ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಬಿರುಸಾಗುತ್ತಿತ್ತು. ವಿಧಾನಸಭೆ ಅಧಿವೇಶನದ ವೇಳೆ ಬಯಲಾಯಿತು. ವಿಜಯೇಂದ್ರ ಮುಸ್ಲಿಮರಿಗೆ ಕಾಮಗಾರಿಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ಕೊಡುವ ಬಗ್ಗೆ ಹೋರಾಟ ಮಾಡಬೇಕು ಎಂದರೆ ಅಶೋಕ್ ಬೇಡ ಎಂದರು. ಕಾರಣ ತಮ್ಮ ವಿರುದ್ಧ ಯಲಹಂಕದ ವಿಶ್ವನಾಥ್ ಅವರನ್ನು ಎತ್ತಿ ಕಟ್ಟುತ್ತಿರುವುದೇ ವಿಜಯೇಂದ್ರ ಎಂಬ ಗುಮಾನಿ. ಅಧಿವೇಶನದ ವೇಳೆ ತಮ್ಮನ್ನು ಬಿಟ್ಹಾಕಿ ಬೆಂಗಳೂರಿನ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರೆಂಬ ಸಿಟ್ಟು. ಹನಿಟ್ರ್ಯಾಪ್ ಹೋರಾಟದ ಬಗ್ಗೆಯೂ ಇದೇ ಪರಿಸ್ಥಿತಿ.

► ಅಶೋಕ್ v/s ಸುನೀಲ್ ಕುಮಾರ್

ಅಶೋಕ್ ಮತ್ತು ಶಾಸಕ ಸುನೀಲ್ ಕುಮಾರ್ ನಡುವಿನ ಜಗಳ ಇನ್ನೊಂದು ರೀತಿಯದ್ದು. ಸುನೀಲ್ ಕುಮಾರ್ ವಿರೋಧ ಪಕ್ಷದ ನಾಯಕ ಆಗಬೇಕು ಎಂಬ ಕನಸು ಕಂಡಿದ್ದರು. ನನಸಾಗಲಿಲ್ಲ. ಅದರಲ್ಲಿ ಅಶೋಕ್ ಪಾತ್ರ ಇಲ್ಲದಿದ್ದರೂ ಇವರಿಂದ ತನ್ನ ಆಸೆ ಈಡೇರಲಿಲ್ಲ ಎಂಬ ಕೊರಗು-ಮುನಿಸು. ಅಶೋಕ್ ಯಾವೊಂದು ವಿಷಯವನ್ನು ತಿಳಿದುಕೊಳ್ಳಲ್ಲ. ತಿಳಿದುಕೊಂಡರೂ ಮಾತನಾಡಲ್ಲ. ನಾವು ಇಂಥವರ ಜೊತೆ ಕೆಲಸ ಮಾಡಬೇಕು ಎಂಬ ಅಸಮಾಧಾನ.

ಸುನೀಲ್ ಕುಮಾರ್‌ಗೆ ವಿಜಯೇಂದ್ರ ಹೇಳಿದಂತೆ ಮುಸ್ಲಿಮರ ಮೀಸಲಾತಿ ಬಗ್ಗೆ ಹೋರಾಟ ಮಾಡುವುದು ಬೇಕಿರಲಿಲ್ಲ. ಅಶೋಕ್ ಹೇಳಿದಂತೆ ಸುಮ್ಮನಿರುವುದೂ ಬೇಕಿರಲಿಲ್ಲ. ಅವರಿಗೆ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡಬೇಕಿತ್ತು. ಏಕೆಂದರೆ ಬಿ.ಎ.ಲ್ ಸಂತೋಷ್ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡುವಂತೆ ಸೂಚಿಸಿದ್ದರು. ವಿಪಕ್ಷ ನಾಯಕನಾಗದ ಅವರ ಗುರಿ ಈಗ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ. ಇವತ್ತಲ್ಲ, ನಾಳೆ ವಿಜಯೇಂದ್ರ ವಿರುದ್ಧದ ಅವಿಶ್ವಾಸ ಬಯಲಾಗುತ್ತೆ. ಅಧ್ಯಕ್ಷಗಾದಿ ಬದಲಾಗುತ್ತೆ. ಹಿಂದುತ್ವ, ಹಿಂದುಳಿದ ವರ್ಗ, ಯುವಕ ಮತ್ತಿತರ ಮಾನದಂಡಗಳ ಆಧಾರದ ಮೇಲೆ ನನ್ನನ್ನು ಹುಡುಕಿಕೊಂಡು ಬರುತ್ತೆ ಎಂಬ ವಿಶ್ವಾಸ ಅವರದು. ಅದಕ್ಕೆ ಅವರು ನಂಬಿರುವುದು ಬಿ.ಎ.ಲ್ ಸಂತೋಷ್, ಪ್ರಹ್ಲಾದ್ ಜೋಶಿ ಮತ್ತು ಆರೆಸ್ಸೆಸ್ ಎಸ್ ನಾಯಕರನ್ನು. ಅಂದರೆ ಯಡಿಯೂರಪ್ಪ-ವಿಜಯೇಂದ್ರ ವಿರೋಧಿಗಳನ್ನು.

► ಪ್ರತಿಭಟನೆಯಲ್ಲೂ ವಿಘಟನೆ

ಮಳೆ ನಿಂತರೂ ಹನಿ ನಿಲ್ಲದೆಂಬಂತೆ ರಾಜ್ಯ ಬಿಜೆಪಿ ನಾಯಕರ ಗುದ್ದಾಟ ನಿಂತಿಲ್ಲ. ತಮ್ಮ ಒಡಕಿನಿಂದಾಗಿ ಬೆಲೆ ಏರಿಕೆ ಎಂಬ ಅಸ್ತ್ರ ಪ್ರಯೋಗಿಸಿ ರಾಜ್ಯ ಸರಕಾರವನ್ನು ಅಲುಗಾಡಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ವಿಜಯೇಂದ್ರ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಗೆ ಕರೆ ಕೊಟ್ಟರೆ ಅದೇ ದಿನ ಅಶೋಕ್ ಶಾಸಕರ ಅಮಾನತು ಖಂಡಿಸಿ ಪ್ರತ್ಯೇಕ ಪ್ರತಿಭಟನೆಗೆ ಆಹ್ವಾನಿಸುತ್ತಾರೆ. ದಿನ ಒಂದೇ, ಜಾಗಗಳು ಬೇರೆ, ವಿಷಯಗಳೂ ಬೇರೆ. ವಿಜಯೇಂದ್ರ ಶಾಸಕರ ಅಮಾನತು ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರೆ, ಅಶೋಕ್ ಸ್ಪೀಕರ್ ಗೆ

ತಮ್ಮ ನಿರ್ಧಾರ ವಾಪಸ್ ಪಡೆಯಿರಿ ಎಂಬ ವಿನಮ್ರ ಮನವಿ ಮಾಡುತ್ತಾರೆ. ಅಶೋಕ್ ಮತ್ತು ವಿಜಯೇಂದ್ರಗೆ ಸರಕಾರ ಅಥವಾ ಕಾಂಗ್ರೆಸ್ ನಡೆಗಳನ್ನು ಖಂಡಿಸಬೇಕು ಎನ್ನುವುದಕ್ಕಿಂತ ತಮ್ಮ ಪಕ್ಷದ ಎದುರಾಳಿಯ ಕೈ ಮೇಲಾಗಬಾರದೆಂಬ ಉದ್ದೇಶವೇ ಮುಖ್ಯವಾಗಿದೆ.

► ಯತ್ನಾಳ್ ವಿಷಯದಲ್ಲೂ ಮತ್ತದೇ?

ರಾಜ್ಯ ಬಿಜೆಪಿಯಲ್ಲಿ ಈಗ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ್ದು ಸರಿಯೋ ತಪ್ಪೋ ಎಂಬ ಚರ್ಚೆ ನಡೆಯುತ್ತಿದೆ. ಸರಿಯಾದ ಕ್ರಮ ಎನ್ನುವ ಸಮರ್ಥನೆ ವಿಜಯೇಂದ್ರ ಬಣದ್ದು. ವಿರೋಧಿ ಬಣ ಸರಿಯಲ್ಲ ಎನ್ನುತ್ತಿದೆ. ಇವುಗಳ ಹೊರತಾಗಿ ವಿಜಯೇಂದ್ರ ಹಠ ಹಿಡಿದು ಯತ್ನಾಳ್ ಉಚ್ಚಾಟನೆ ಮಾಡಿಸಬಾರದಿತ್ತು. ಅದರ ಅಗತ್ಯ ಇರಲಿಲ್ಲ ಎಂದು ಅಶೋಕ್ ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಇದು ವಿಜಯೇಂದ್ರ ಕಿವಿಗೆ ಬಿದ್ದಿದೆ. ಈ ಮೂಲಕ ನಾನೇ ಯತ್ನಾಳ್ ಉಚ್ಚಾಟನೆ ಮಾಡಿಸಿದೆ ಎಂಬ ಸಂದೇಶ ರವಾನೆಯಾಗುತ್ತಿದೆ ಎಂದು ಅಶೋಕ್ ವಿರುದ್ಧ ವಿಜಯೇಂದ್ರ ಮತ್ತೊಮ್ಮೆ ಸೆಟೆದುಕೊಂಡಿದ್ದಾರೆ. ಅದಕ್ಕಾಗಿ ರಾಜ್ಯ ಪ್ರವಾಸದ ಬಗ್ಗೆ ಅಶೋಕ್ ಜೊತೆ ಚರ್ಚಿಸಿಲ್ಲ ಎಂಬಿತ್ಯಾದಿ ಮಾಹಿತಿಗಳು ಉಕ್ಕಿ ಉಕ್ಕಿ ಬರುತ್ತಿವೆ.

► ಅಶೋಕ್ v/s ಸಿ.ಟಿ. ರವಿ

ರಾಜಕಾರಣದಲ್ಲಿ ಸೋಲಿಗೂ ಸಾಮರ್ಥ್ಯ ಉಂಟು. ಒಂದೇ ಒಂದು ಸೋಲು ಡಾ. ಜಿ. ಪರಮೇಶ್ವರ್ ಅವರ ಸಿಎಂ ಆಗುವ ಜೀವಮಾನದ ಕನಸಿಗೆ ಕೊಳ್ಳಿ ಇಟ್ಟಿತ್ತು. ಸಿ.ಟಿ. ರವಿ ವಿಷಯದಲ್ಲೂ ಅದೇ ಆಗಿದೆ. ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿಗಾದಿಯೇ ತನ್ನ ಗುರಿ ಎನ್ನುತ್ತಿದ್ದ ಸಿ.ಟಿ. ರವಿ ಬಳಿ ಈಗ ಎಂಎಲ್ಸಿ ಸ್ಥಾನ ಬಿಟ್ಟರೆ ಬೇರೇನಿಲ್ಲ. ರವಿಗೆ ಸದ್ಯಕ್ಕೆ ಬಿಜೆಪಿಯಲ್ಲಿ ಅದರಲ್ಲೂ ಒಕ್ಕಲಿಗರಲ್ಲಿ ಅಶೋಕ್, ಅಶ್ವಥನಾರಾಯಣ್ ಮತ್ತು ಶೋಭಾ ಕರಂದ್ಲಾಜೆ ಪ್ರತಿಸ್ಪರ್ಧಿಗಳು. ಅವಕಾಶ ಸಿಕ್ಕಾಗಲೆಲ್ಲಾ ಈ ತ್ರಿಮೂರ್ತಿಗಳ ವಿರುದ್ಧ್ದ ರವಿ ಸೀಟಿ ಊದುತ್ತಲೇ ಇರುತ್ತಾರೆ. ಇತ್ತೀಚೆಗೆ ‘ಬೆಂಗಳೂರಿನಲ್ಲಿ ಚದರಡಿಗೆ ಮಾಮೂಲಿ ಫಿಕ್ಸ್ ಮಾಡಿದ್ದು ಡಿಕೆಶಿ ಅಂತ ತಿಳಿಸಣ್ಣ ಅಶೋಕಣ್ಣ’ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಅಶೋಕ್ ಮಾತನಾಡಲ್ಲ ಎಂಬ ಸಂದೇಶ ಕಳುಹಿಸಲು ಮುಂದಾಗಿದ್ದಾರೆ.

► ವಿಜಯೇಂದ್ರ v /s ಅರವಿಂದ ಬೆಲ್ಲದ್

ಶಾಸಕರ ಅಮಾನತು ಖಂಡಿಸಿ ನಡೆಸುವ ಪ್ರತಿಭಟನೆಯಲ್ಲಿ ಶಾಸಕರೆಲ್ಲರೂ ಪಾಲ್ಗೊಳ್ಳಬೇಕೆಂದು ಅಶೋಕ್ ಕರೆ ಕೊಟ್ಟಿದ್ದರು. ಆದರೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರೇ ಇರಲಿಲ್ಲ. ವಿಜಯೇಂದ್ರ ಕರೆ ಕೊಟ್ಟಿದ್ದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲೂ ಪಾಲ್ಗೊಂಡಿರಲಿಲ್ಲ. ವಿಜಯೇಂದ್ರ ಮತ್ತು ಅಶೋಕ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ದಿಲ್ಲಿಯಲ್ಲಿ ಸಿಎಂ ಜೊತೆ ಕರ್ನಾಟಕ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯ ನಾಯಕರ ವಿರುದ್ಧ ವರದಿ ನೀಡಿದ್ದಾರೆ. ಯಾರಾದರೂ ವರದಿ ಕೇಳಿದ್ದರಾ ಅಥವಾ ಇವರೇ ಮುತುವರ್ಜಿ ವಹಿಸಿ ಕೊಟ್ಟಿದ್ದಾರಾ ಎನ್ನುವುದು ಮಾತ್ರ ಗೊತ್ತಾಗಿಲ್ಲ.

► ಅತಂತ್ರವಾದ ಛಲವಾದಿ

ಬಿ.ಎಲ್. ಸಂತೋಷ್ ಪಾಳೆಯದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಅಶೋಕ್ ಮಾತು ಕೇಳಬೇಕೋ ಅಥವಾ ವಿಜಯೇಂದ್ರ ಮಾತು ಕೇಳಬೇಕೋ ಎಂಬ ಗೊಂದಲ. ಅವರ ಪರ ಇದ್ದಾರೆ ಅಂತಾ ಇವರು, ಇವರ ಪರ ಇದ್ದಾರೆ ಅಂತಾ ಅವರು ಯಾರೂ ಇವರನ್ನು ಯಾವ ವಿಷಯಕ್ಕೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲವಂತೆ. ಈ ನಡುವೆ ಪ್ರತಿಭಟನೆಗೆ ಕರೆದಿಲ್ಲ ಅಂತಾ ಜೆಡಿಎಸ್ ತಗಾದೆ. ಅದು ಇನ್ನೊಂದು ಅಧ್ಯಾಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಧರಣೀಶ್ ಬೂಕನಕೆರೆ

contributor

Similar News