ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು

Update: 2023-07-10 04:42 GMT

ಜಾಗತಿಕವಾಗಿ ಸಮಾಜವಾದಿ ಸೋವಿಯತ್ ವ್ಯವಸ್ಥೆ ಕುಸಿದ ನಂತರ ಜಾಗತೀಕರಣ, ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಧಾನವಾಗಿ ಕಾರ್ಪೊರೇಟಿಕರಣಗೊಳ್ಳತೊಡಗಿತು.ಉದ್ಯಮಿಗಳು, ಸಕ್ಕರೆ ಕಾರ್ಖಾನೆಗಳ ಮಾಲಕರು, ರಿಯಲ್ ಎಸ್ಟೇಟ್ ದಂಧೆಕೋರರು ಸದನಕ್ಕೆ ಚುನಾಯಿತರಾಗಿ ಬರತೊಡಗಿದರು.ಜನತೆಯ ಹಿತಾಸಕ್ತಿಗಳ ಬಗ್ಗೆ ಮಾತಾಡಬೇಕಾದ ಸದನದಲ್ಲಿ ಉದ್ಯಮ ಪತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸದನವನ್ನು ಬಳಸಿಕೊಳ್ಳತೊಡಗಿದರು. ಹೀಗಾಗಿ ಸದನದ ಘನತೆ ಕುಸಿಯತೊಡಗಿತು.

ಭಾರತ ಸ್ವತಂತ್ರಗೊಂಡು ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಒಪ್ಪಿಕೊಂಡು ಏಳು ದಶಕಗಳು ಗತಿಸಿವೆ.ಈ ಕಾಲಾವಧಿಯಲ್ಲಿ ಅನೇಕ ಚುನಾವಣೆಗಳು,ಉಪ ಚುನಾವಣೆಗಳು, ಈ ದೇಶದಲ್ಲಿ ನಡೆದಿವೆ. ಜಾತಿ ವ್ಯವಸ್ಥೆಯ ಮತ್ತು ಪಾಳೆಯಗಾರಿಯ ಬೇರುಗಳು ತುಂಬಾ ಆಳಕ್ಕಿಳಿದ ಇಲ್ಲಿ ಜನತಾಂತ್ರಿಕ ಅಡಳಿತ ಪದ್ಧತಿ ನಿಧಾನವಾಗಿ ಗಟ್ಟಿಯಾಗುತ್ತಿದೆ. ಬಾಬಾ ಸಾಹೇಬರು ಹೇಳಿದಂತೆ ಸಮಾಜ ಪ್ರಜಾಪ್ರಭುತ್ವಿಯವಾಗದೇ ಆಡಳಿತ ಮಾತ್ರ ಪ್ರಜಾಪ್ರಭುತ್ವವಾದರೆ ಪ್ರಯೋಜನವಿಲ್ಲ. ಆದರೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣೆಯ ಮಟ್ಟಿಗಂತೂ ಯಶಸ್ವಿಯಾಗಿದೆ.

ವಿದೇಶಿ ಆಡಳಿತದಿಂದ ಹೊಸದಾಗಿ ಸ್ವಾತಂತ್ರ್ಯ ಪಡೆದ ಜಗತ್ತಿನ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವೀಕರಿಸಿದ ರೀತಿಯಲ್ಲಿ ಅದನ್ನು ಕಾಪಾಡಿಕೊಂಡು ಹೋಗಲು ಆಗಿಲ್ಲ. ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸೇನೆ ಆಡಳಿತವನ್ನು ವಹಿಸಿಕೊಂಡಿದೆ. ಕೆಲವು ದೇಶಗಳಲ್ಲಿ ಹಿಂದಿನ ರಾಜ ಮಹಾರಾಜರು ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಕೆಲವು ದೇಶಗಳಲ್ಲಿ ನಿರಂತರ ಅರಾಜಕತೆ ತಾಂಡವವಾಡುತ್ತಿದೆ. ನಮ್ಮ ಪಕ್ಕದ ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಅರಾಜಕತೆ ತಾಂಡವವಾಡುತ್ತಿದೆ.ಮತೀಯ ಸಾಮ್ರಾಜ್ಯ ಕಟ್ಟಲು ಹೋದವರು ಮಣ್ಣು ಪಾಲಾಗಿದ್ದಾರೆ.ಆದರೆ ಭಾರತದ ಪ್ರಜಾಪ್ರಭುತ್ವ ಹಲವಾರು ಅಗ್ನಿಪರೀಕ್ಷೆ ಗಳನ್ನು ಎದುರಿಸಿ ಯಶಸ್ವಿಯಾಗಿದೆ.ಇದಕ್ಕೆ ಕಾರಣ ಇದು ಯಾವುದೇ ಒಂದು ಧರ್ಮ, ಭಾಷೆ, ಜನಾಂಗ ಮತ್ತು ಸಂಸ್ಕೃತಿಗೆ ಸೇರಿದ ಭೂ ಪ್ರದೇಶವಲ್ಲ.ಹಲವಾರು ಧರ್ಮ, ಭಾಷೆ, ಜನಾಂಗೀಯ ವೈವಿಧ್ಯತೆಗಳನ್ನು ಒಡಲಲ್ಲಿ ಇರಿಸಿಕೊಂಡ ಒಕ್ಕೂಟ ದೇಶ. ಇದನ್ನೆಲ್ಲ ಅಧ್ಯಯನ ಮಾಡಿದ ಡಾ. ಅಂಬೇಡ್ಕರ್ ಇದಕ್ಕೆ ಸೂಕ್ತವಾದ ಸಂವಿಧಾನವನ್ನು ರೂಪಿಸಿದರು.

ಈ ದೇಶದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದು ಒಕ್ಕೂಟ ಸರಕಾರ ನಡೆಸುವ ಪಕ್ಷಗಳು ಬದಲಾಗಿವೆ. ಗೆದ್ದವರು ಅಧಿಕಾರ ವಹಿಸಿಕೊಂಡಿದ್ದಾರೆ.ಸೋತವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಅಧಿಕಾರ ಹಸ್ತಾಂತರ ಇಲ್ಲಿ ಯಾವುದೇ ಕಲಹ, ರಕ್ತಪಾತವಿಲ್ಲದೇ ಸರಳವಾಗಿ ನಡೆಯುತ್ತ ಬಂದಿದೆ. ಇದು ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ಹಿರಿಯರು ಜತನದಿಂದ ಕಾಪಾಡಿ ಕೊಂಡು ಬಂದ ಈ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ನಿರ್ದಿಷ್ಟವಾಗಿ ಕಳೆದ ಒಂಭತ್ತು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸು ತ್ತಿದೆ. ಪ್ರಜಾಪ್ರಭುತ್ವ ಮತ್ತು ಇದಕ್ಕೆ ಆಧಾರಸ್ತಂಭವಾದ ಸಂವಿಧಾನದ ಬುಡವನ್ನೇ ಅಲ್ಲಾಡಿಸುವ ಮಸಲತ್ತು ಗಳು ಒಳಗೊಳಗೆ ನಡೆಯುತ್ತಿವೆ. ಒಂದು ಕಾಲದಲ್ಲಿ ಕಾನೂನು ಪರಿಣಿತರು, ಚಾರಿತ್ರ್ಯವಂತರು, ಸಾಮಾಜಿಕ ಕಾಳಜಿಯ ಹೋರಾಟಗಾರರಿಂದ ತುಂಬಿರುತ್ತಿದ್ದ ನಮ್ಮ ಸಂಸತ್ತು ಮತ್ತು ರಾಜ್ಯಗಳ ಶಾಸನಸಭೆಗಳಲ್ಲಿ ಈಗ ಸಮಾಜ ವಿರೋಧಿ ಶಕ್ತಿಗಳು, ಕ್ರಿಮಿನಲ್ ಆರೋಪಿತರು, ರಿಯಲ್ ಎಸ್ಟೇಟ್ ಮಾಫಿಯಾಗಳು, ಮೈನಿಂಗ್ ಖದೀಮರ ಪ್ರವೇಶವಾಗಿದೆ. ಹೀಗಾಗಿ ಭಾರತೀಯ ಜನತಾಂತ್ರಿಕ ವ್ಯವಸ್ಥೆ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ನಾನು ನನಗೆ ತಿಳಿದು ಬಂದಾಗಿನಿಂದ ಅಂದರೆ ಎಪ್ಪತ್ತರ ದಶಕದಿಂದ ಸದನದ ಕಲಾಪಗಳನ್ನು ಪತ್ರಿಕೆಗಳ ಮೂಲಕ,ನಂತರ ಬೆಂಗಳೂರಿಗೆ ಹೋದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು, ಪತ್ರಿಕಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನಂತರ ವರದಿಗಾರನಾಗಿ ಸದನದ ಒಳಗೆ ಕುಳಿತು ಹತ್ತಿರದಿಂದ ಗಮನಿಸುತ್ತ ಬಂದಿರುವೆ. ದೇವರಾಜ ಅರಸು ಮುಖ್ಯ ಮಂತ್ರಿಯಾಗಿದ್ದಾಗ ನಂತರ ಗುಂಡೂರಾವ್, ರಾಮಕೃಷ್ಣ ಹೆಗಡೆ,ಬಂಗಾರಪ್ಪ, ಧರಂಸಿಂಗ್, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮೊದಲಾದವರು ಮುಖ್ಯ ಮಂತ್ರಿಗಳಾಗಿದ್ದಾಗ ಕೂಡ ಸದನದ ಕಲಾಪಗಳನ್ನು ಗಮನಿಸಿರುವೆ.ಆದರೆ ಅಂದಿನ ಸದನದ ಕಲಾಪಗಳಿಗೂ ಇಂದಿಗೂ ಹೋಲಿಕೆ ಅಜಗಜಾಂತರ.

ಬಿ.ಡಿ.ಜತ್ತಿಯವರು ಮತ್ತು ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿ ದ್ದಾಗ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವಾಗ್ದಾಳಿ, ನಂತರ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ದೇವೇಗೌಡರು ಪ್ರತಿಪಕ್ಷ ನಾಯಕರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪನವರು ಪ್ರತಿಪಕ್ಷ ನಾಯಕರು. ಆಗ ದೇವೇಗೌಡರ ಟೀಕೆಗಳಿಗೆ ದೇವರಾಜ ಅರಸು ಕೊಡುತ್ತಿದ್ದ ಉತ್ತರ, ರಾಮಕೃಷ್ಣ ಹೆಗಡೆಯವರು ಮತ್ತು ಬಂಗಾರಪ್ಪನವರ ನಡುವಿನ ವಾಗ್ವಾದ, ಯಡಿಯೂರಪ್ಪನವರ ರೋಷಾವೇಶವನ್ನು ವ್ಯಂಗ್ಯದ ಕ್ಝೃಠ್ಛಿಟ್ಟಞ ಎದುರಿಸಿ ತೇಲಿಸಿಬಿಡುತ್ತಿದ್ದ ಜೆ.ಎಚ್.ಪಟೇಲ್ರ ವಿನೋದ ಪ್ರವೃತ್ತಿ, ತಮ್ಮ ಅಧ್ಯಯನ ಶೀಲತೆ ಮತ್ತು ಬೌದ್ಧಿಕ ಸಾಮರ್ಥ್ಯದಿಂದ ಸದನದ ಕಲಾಪದ ಘನತೆಯನ್ನು ಹೆಚ್ಚಿಸುತ್ತಿದ್ದ ಕಮ್ಯುನಿಸ್ಟ್ ಸದಸ್ಯರಾದ ಬಿ.ವಿ.ಕಕ್ಕಿಲ್ಲಾಯರು, ಎಂ.ಎಸ್.ಕಷ್ಣನ್, ಪಿ.ರಾಮಚಂದ್ರರಾವ್, ವಿ.ಎನ್.ಪಾಟೀಲ್, ಗಂಗಾಧರ ನಮೋಶಿ, ಕಾರ್ಮಿಕ ಚಳವಳಿಯಿಂದ ಬಂದು ಅನುಭವದಿಂದ ಎತ್ತರಕ್ಕೆ ಬೆಳೆದ ಪಂಪಾಪತಿ, ಆಗ ಸೋಶಿಯಲಿಸ್ಟ್ ಪಾರ್ಟಿಯಲ್ಲಿದ್ದ ಕೆ.ಎಚ್.ರಂಗನಾಥ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ.

ಈಗ ಸ್ಪೀಕರ್ ಖಾದರ್ ಅವರ ತುಳು, ಬ್ಯಾರಿ ಭಾಷೆಗಳ ಮಿಶ್ರಿತ ಕನ್ನಡವನ್ನು ಲೇವಡಿ ಮಾಡುವವರು ಹಿಂದೆ ಸದನದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಕವಿ ಬಿ.ಎಂ. ಇದಿನಬ್ಬರ ಅಸ್ಖಲಿತ ಕನ್ನಡ ಮಾತುಗಳನ್ನು ಕೇಳಿಲ್ಲ. ಸದನದ ಕಲಾಪಗಳಲ್ಲಿ ಪಾಲ್ಗೊಂಡು ಸದನದಲ್ಲೇ ಕುಳಿತು ಪದ್ಯಗಳನ್ನು ರಚಿಸಿ ಸದನದ ಚರ್ಚೆಯ ಮಧ್ಯೆ ಓದುತ್ತಿದ್ದ ಇದಿನಬ್ಬರು ಅಜಾತ ಶತ್ರು ಎಂದು ಹೆಸರಾಗಿದ್ದರು. ಆಗ ಸದನದ ಕಲಾಪ ವರದಿ ಮಾಡಲು ಹೋದರೆ ಸಂಸದೀಯ ಪದ್ಧತಿಯ ವಿಧಿ ವಿಧಾನಗಳು ಸಹಜವಾಗಿ ಗೊತ್ತಾಗುತ್ತಿದ್ದವು. ಬಿ.ಬಸವಲಿಂಗಪ್ಪನವರ ಖಡಕ್ ಮಾತುಗಳು ಯಾರ ಬಗೆಗೂ ದ್ವೇಷದಿಂದ ಕೂಡಿರುತ್ತಿರಲಿಲ್ಲ.

ಇತ್ತೀಚಿನ ಸದನದ ಕಲಾಪಗಳನ್ನು ಗಮನಿಸಿ ಹಳೆಯದೆಲ್ಲ ನೆನಪಾಯಿತು. ಆಗ ಚುನಾವಣೆಯಲ್ಲಿ ಸೋತವರು ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದರು. ಆದರೆ ಈಗ ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ತಮ್ಮ ನಿರೀಕ್ಷೆಯಂತೆ ಬರಲಿಲ್ಲ ಎಂದು ಅಶೋಕ್ ಮುಂತಾದ ಬಿಜೆಪಿ ಶಾಸಕರು ಅತ್ಯಂತ ಅಸಹನೆಯಿಂದ ವರ್ತಿಸಿದರು. ಜನಾದೇಶವನ್ನು ಒಪ್ಪಲು ತಯಾರಿಲ್ಲದ ಇವರು ಫಲಿತಾಂಶ ಬರುತ್ತಿರುವಾಗಲೇ ಪ್ಲಾನ್ ಎ ಬಿ ಸಿ ಡಿ ಎಂದೆಲ್ಲ ಮಾತಾಡತೊಡಗಿದರು. ಕಾಂಗ್ರೆಸ್ ಇಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಇವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ನಾಯಕರು ಮಾತ್ರವಲ್ಲ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಬರೀ ಎಂಬತ್ತು ಬರಬಹುದು, ಬಿಜೆಪಿ ತೊಂಭತ್ತು ಬಂದರೆ ಉಳಿದ ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದರೆ ಮತ್ತೊಮ್ಮೆ ಮುಖ್ಯ ಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದರು.ಆದರೆ ಫಲಿತಾಂಶ ಉಲ್ಟಾ ಆದಾಗ ಸದನದಲ್ಲಿ ಕುಮಾರಸ್ವಾಮಿ ಅವರು ರೋಷಾವೇಶದಿಂದ ಮಾತಾಡಿ ಮುಖ್ಯಮಂತ್ರಿಗಳನ್ನು ಕೆರಳಿಸಿದ ರೀತಿ ಅವರ ಘನತೆಗೆ ತಕ್ಕುದಾಗಿರಲಿಲ್ಲ.

ಬಿಜೆಪಿಯದು ಇನ್ನೊಂದು ಆಂತರಿಕ ಸಮಸ್ಯೆ. ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಹದಿನೈದು ದಿನ ಝೆಂಡಾ ಊರಿ ಪ್ರತೀ ತಾಲೂಕು, ಹೋಬಳಿಗಳಿಗೆ ಹೋದರೂ ಕೂಡ ಅವರ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಜೆಡಿಎಸ್ ಬೆಂಬಲ ಪಡೆದು ಸರಕಾರ ರಚಿಸಲು ಅಗತ್ಯವಿರುವಷ್ಟು ಸ್ಥಾನಗಳನ್ನೂ ಗೆಲ್ಲಲು ಆಗಲಿಲ್ಲ. ಜನತೆ ನೀಡಿದ ಈ ತೀರ್ಪನ್ನು ಗೌರವಿಸುವ ಜನತಾಂತ್ರಿಕ ಸಭ್ಯತೆಯನ್ನು ತೋರಿಸದ ಬಿಜೆಪಿ ನಾಯಕರು ಫಲಿತಾಂಶ ಬಂದ ಮರುದಿನದಿಂದಲೇ ಗ್ಯಾರಂಟಿ ಯೋಜನೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲು ಹೋಗಿ ಅಪಹಾಸ್ಯಕ್ಕೀಡಾದರು. ಬಹಮತ ಪಡೆದು ಸರಕಾರ ರಚನೆ ಮಾಡಿದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಎಂದು ಮೇಲ್ನೋಟಕ್ಕೆ ಅನಿಸಿದರೂ ತನ್ನ ಆಂತರಿಕ ಒಡಕನ್ನು ಮುಚ್ಚಿಕೊಳ್ಳಲು ಬಿಜೆಪಿಗೆ ಇಂಥ ಬೀದಿ ಪ್ರಹಸನ ಅನಿವಾರ್ಯವಾಗಿತ್ತು. ವಿಧಾನ ಮಂಡಲ ಅಧಿವೇಶನ ಆರಂಭವಾಗಿ ಒಂದು ವಾರದ ನಂತರವೂ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ನಾಯಕ ಯಾರು? ಎಂಬುದನ್ನು ತೀರ್ಮಾನಿಸಲು ಆಗಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆ, ಯಡಿಯೂರಪ್ಪ ಮತ್ತು ಸಂತೋಷ್ ಗುಂಪಿನ ನಡುವಿನ ಕಿತ್ತಾಟದಿಂದಾಗಿ ಪ್ರತಿಪಕ್ಷ ನಾಯಕನ ಆಯ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಪಕ್ಷ ನಾಯಕ ಕೂರುವ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಮಹಾರಾಷ್ಟ್ರದಂತೆ ಇನ್ನೊಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಬಹುದೆಂದು ಆಸೆಗಣ್ಣುಗಳಿಂದ ಕಾಯುತ್ತಿದ್ದಾರೆ. ಅಂದರೆ ಜನತೆ ಏನೇ ಫಲಿತಾಂಶ ನೀಡಲಿ ಅಧಿಕಾರದಲ್ಲಿರುವ ಪಕ್ಷದಲ್ಲಿ ಒಡಕುಂಟಾಗಿ ಮತ್ತೆ ಅಸ್ಥಿರ ಪರಿಸ್ಥಿತಿ ನಿರ್ಮಾಣ ವಾಗಲಿ ಎಂದು ಅವರು ಬಯಸುತ್ತಿದ್ದಾರೆ. ವಾಸ್ತವವಾಗಿ ಆಡಳಿತ ಪಕ್ಷದವರಷ್ಟೇ ಪ್ರಾಮುಖ್ಯತೆ ಪ್ರತಿಪಕ್ಷ ಸದಸ್ಯರಿಗೂ ಇದೆ. ಸರಕಾರದ ಲೋಪ ದೋಷಗಳನ್ನು ಟೀಕಿಸುವ ಅವಕಾಶ ದೊರಕಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ಕರ್ನಾಟಕದಲ್ಲಿ ಇನ್ನೊಬ್ಬ ಅಜಿತ್ ಪವಾರ್ಗಾಗಿ ಕುಮಾರಸ್ವಾಮಿ ಕಾಯುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲ ಭಾರತದ ರಾಜಕಾರಣದ ಇಂದಿನ ದುರಂತ ಸ್ಥಿತಿ.

ಜಾಗತಿಕವಾಗಿ ಸಮಾಜವಾದಿ ಸೋವಿಯತ್ ವ್ಯವಸ್ಥೆ ಕುಸಿದ ನಂತರ ಜಾಗತೀಕರಣ, ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಧಾನವಾಗಿ ಕಾರ್ಪೊರೇಟಿಕರಣಗೊಳ್ಳತೊಡಗಿತು.ಉದ್ಯಮಿಗಳು, ಸಕ್ಕರೆ ಕಾರ್ಖಾನೆಗಳ ಮಾಲಕರು, ರಿಯಲ್ ಎಸ್ಟೇಟ್ ದಂಧೆಕೋರರು ಸದನಕ್ಕೆ ಚುನಾಯಿತರಾಗಿ ಬರತೊಡಗಿದರು.ಜನತೆಯ ಹಿತಾಸಕ್ತಿಗಳ ಬಗ್ಗೆ ಮಾತಾಡಬೇಕಾದ ಸದನದಲ್ಲಿ ಉದ್ಯಮ ಪತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸದನವನ್ನು ಬಳಸಿಕೊಳ್ಳತೊಡಗಿದರು. ಹೀಗಾಗಿ ಸದನದ ಘನತೆ ಕುಸಿಯತೊಡಗಿತು. ಉದಾಹರಣೆಗೆ ಸಕ್ಕರೆ ಕಾರ್ಖಾನೆ ಮಾಲಕನೊಬ್ಬ ಶಾಸಕನಾಗಿ ಸದನಕ್ಕೆ ಬಂದರೆ ಅಕಸ್ಮಾತ್ ಆತ ಮಂತ್ರಿಯಾದರೆ ಅವನಿಗೆ ತನ್ನ ಕಾರ್ಖಾನೆ ಹಿತಾಸಕ್ತಿ ಮುಖ್ಯವಾಗುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ, ಅವರ ಬಾಕಿ ಪಾವತಿ ಬಗ್ಗೆ ಆತ ಮಾತಾಡುವುದಿಲ್ಲ.

ಈ ನಿರಾಶಾದಾಯಕ ವಾತಾವರಣದಲ್ಲೂ ಸ್ವಂತದ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳಿಲ್ಲದ, ಸಮಾಜವಾದಿ ಚಳವಳಿಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂಥವರಿಂದಾಗಿ ಶಾಸನ ಸಭೆಗಳು ಇಂದಿಗೂ ಜನ ಸದನಗಳಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವ್ಯಾಪಾರಿಗಳ ನಡುವೆಯೂ ಕೃಷ್ಣ ಭೈರೇಗೌಡ, ಸತೀಶ್ ಜಾರಕಿಹೊಳಿ ಮೊದಲಾದವರು ತಮ್ಮ ಅಧ್ಯಯನ ಪೂರ್ಣ ಮಾತುಗಳಿಂದ ಸದನದ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ನಿರಾಶೆ ಬೇಡ ಮುಂದೆ ಇಂಥ ಕೆಲವರು ಸದನಕ್ಕೆ ಬರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣಿಗಳು ಚುನಾವಣೆಯ ಸೋಲು ಮತ್ತು ಗೆಲುವುಗಳನ್ನು ಸಹಜವಾಗಿ ತೆಗೆದುಕೊಂಡು ಜನತೆಯ ತೀರ್ಪಿಗೆ ತಲೆಬಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಹಗುರಾಗಿ ಕಾಣುವ, ಪಕ್ಷಾಂತರ ಮಾಡಿಸಿ ಜನರ ತೀರ್ಪನ್ನು ಉಲ್ಟಾಪಲ್ಟಾ ಮಾಡುವ ಮಾತುಗಳನ್ನು ಯಾರೂ ಆಡಬಾರದು. ತಾಳ್ಮೆಯಿಂದ ಕಾಯ್ದರೆ ಮತ್ತೆ ಅವಕಾಶ ಸಿಗಬಹುದು. ಇದೇ ಪ್ರಜಾಪ್ರಭುತ್ವದ ಪವಾಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಬಂಗಾರಪ್ಪ, ಸಿದ್ದರಾಮಯ್ಯನವರಂಥವರು ಉನ್ನತ ಅಧಿಕಾರ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವೆಲ್ಲ ಸೇರಿ ಕಾಪಾಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸನತ್ ಕುಮಾರ ಬೆಳಗಲಿ

contributor

Similar News

ನಾಸ್ತಿಕ ಮದ