‘ಮನ್ಸ’ ಎಂಬ ಮನುಷ್ಯ ಸೂಚಕ ಪದದ ‘ಜಾತಿ’ ಮತ್ತು ಮೂಲ ಜಾತಿ ನಡುವಿನ ಜಿಜ್ಞಾಸೆ
ಮಾನವ ಶಾಸ್ತ್ರಜ್ಞ ಕೆ.ಎಸ್. ಸಿಂಗ್‌ರ ಪುಸ್ತಕದಂತೆ ನೂರು ವರ್ಷಗಳಿಗೂ ಹಿಂದೆ ಹಲವು ಮಾನವ ಶಾಸ್ತ್ರಜ್ಞರು ಈ ರೀತಿಯ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಆ ಪುಸ್ತಕಗಳಲ್ಲಿ ಎಲ್ಲೂ ಮನ್ಸ ಅಥವಾ ಮನ್ಸರ್ ಬಗ್ಗೆ ದಾಖಲಾಗಿಲ್ಲ ಎಂಬುದು ಬಹು ಮುಖ್ಯ. ಮಾನವ ಶಾಸ್ತ್ರಜ್ಞರು ಈ ಹಿಂದೆ ಜಾತಿಗಳ ವಿವರಗಳನ್ನು ಸಂಗ್ರಹಿಸುವಾಗ ಬಹುಶಃ ಈ ಪದಗಳು ಬಳಕೆಯಲ್ಲಿ ಇರಲಿಲ್ಲ ಎಂದು ತಿಳಿಯಬಹುದು. ಇತ್ತೀಚಿನ ಕೆಲವು ದಶಕಗಳ ಹಿಂದೆ ಈ ಪದಗಳು ಸೃಷ್ಟಿಯಾದಂತೆ ಕಂಡು ಬರುವವು. ತಲೆಮಾರಿನ ಅಂತರವಿರುವ ಹಾಗೆ ಕಂಡು ಬರುತ್ತಿಲ್ಲ.
ಭಾರತದಲ್ಲಿ ಪರಿಶಿಷ್ಟ ಜಾತಿಗಳು ದಬ್ಬಾಳಿಕೆ ಮತ್ತು ಅಸ್ಪಶ್ಯತೆಗೆ ಬಲಿಯಾದ ಜನರ ಗುಂಪು. ಅದು ದೇಶದ ಅನುಕೂಲವಿಲ್ಲದ ಸಾಮಾಜಿಕ ಆರ್ಥಿಕ ಗುಂಪುಗಳಲ್ಲಿ ಒಂದಾಗಿದೆ. ಪರಿಶಿಷ್ಟ ಜಾತಿ ಪದವನ್ನು ಮೊದಲು 1928ರಲ್ಲಿ ಸೈಮನ್ ಆಯೋಗವು ಬಳಸಿತು ಮತ್ತು 1935 ರ ಭಾರತ ಸರಕಾರದ ಕಾಯ್ದೆಯಲ್ಲಿ ಸೇರಿಸಲಾಯಿತು. ಪರಿಶಿಷ್ಟ ಜಾತಿಯನ್ನು ದಲಿತರು ಮತ್ತು ಹರಿಜನರು ಎಂದೂ ಕರೆಯಲಾಗುತ್ತದೆ. 2011ರ ಜನಗಣತಿಯು ಭಾರತದಲ್ಲಿ 16.6 ಕೋಟಿ ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ ಎಂದು ವರದಿ ಮಾಡಿದೆ. ಅದು ದೇಶದ ಜನಸಂಖ್ಯೆಯ ಶೇ.16 ರಷ್ಟಿದೆ. ಹಾಗೆಯೇ ಕರ್ನಾಟಕದಲ್ಲಿ 2011ರಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 1.08 ಕೋಟಿಯಷ್ಟಿತ್ತು. ಈತನಕ ಒಟ್ಟು 101 ಜಾತಿ-ಉಪಜಾತಿಗಳನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪಟ್ಟಿ ಮಾಡಲಾಗಿದೆ. ಅಂತೆಯೇ, ದಕ್ಷಿಣ ಕನ್ನಡದಲ್ಲಿ ಶೇ. 7.09ರಷ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 6.41ರಷ್ಟು ಪರಿಶಿಷ್ಟ ಜಾತಿಯ ಜನಸಂಖ್ಯೆ ಇದೆ. ಇದು ಪರಿಶಿಷ್ಟ ಜಾತಿಯ ಜನಸಂಖ್ಯೆಯ ಕುರಿತ ಒಂದು ಸಂಕ್ಷಿಪ್ತ ಚಿತ್ರಣ.
ಪ್ರಸಕ್ತ, ನಾನು ಹೇಳಲು ಹೊರಟಿರುವ ವಿಷಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ ಆದಿ ದ್ರಾವಿಡರನ್ನು ‘ಮನ್ಸ’ ಮತ್ತು ‘ಮನ್ಸರ್’ ಎಂದು ಕರೆಯುತ್ತಿರುವ ಕುರಿತಾದುದು.
ಈಗ್ಗೆ ಕೆಲವು ದಿನಗಳ ಹಿಂದೆ, ‘‘ವ್ಯಕ್ತಿ ಸೂಚಕ ‘ಮನುಷ್ಯ’, ಜಾತಿ ಸೂಚಕವಾಗಿ ‘ಮನ್ಸ’, ‘ಮನ್ಸರ್’ ಎನಿಸಿಕೊಂಡವರ ಕಥೆ-ವ್ಯಥೆ!’’ ಎಂಬ ಲೇಖನವನ್ನು ಯಾವುದೇ ಪೂರ್ವಗ್ರಹವಿಲ್ಲದೆ ವಾಸ್ತವಿಕ ನೆಲೆಗಟ್ಟಿನ ಅಂಶಗಳಿಂದ ಬರೆದಿದ್ದೆ. ಲೇಖನವನ್ನು ಓದಿದ ಪರ ಮತ್ತು ವಿರೋಧ ಇರುವ ಇಬ್ಬರು ವ್ಯಕ್ತಿಗಳು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಅವರಲ್ಲಿ ಒಬ್ಬರು ‘ಮನ್ಸ’ ಮತ್ತು ‘ಮನ್ಸರ್’ ಪರ ಇರುವವರು, ‘‘ಅವರನ್ನು ಅಧಿಕೃತವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಶ್ರಮ ಹಾಕುತ್ತಿದ್ದೇವೆ, ಅದುವೇ ನಮ್ಮ ಗುರಿ’’ ಎಂದರು. ಮತ್ತೆ ತಮ್ಮನ್ನು ಸಮರ್ಥಿಸಿ ಕೊಳ್ಳಲು ಕೆಲವು ಉದಾಹರಣೆಗಳನ್ನೂ ಸಹ ಕೊಟ್ಟರು. ಚರಿತ್ರೆಯ ಪೂರ್ವ ಕಾಲಘಟ್ಟದಲ್ಲಿ ಕೆಲವು ಜಾತಿಗಳು ಮೇಲ್ಜಾತಿ ಮತ್ತು ಮೇಲ್ವರ್ಗದವರ ದರ್ಪದ ಮಾತುಗಳಿಂದಲೇ ಹುಟ್ಟಿಕೊಂಡಿವೆ. ಅಂಥವುಗಳು ಈಗ ಜಾತಿಗಳಾಗಿಯೇ ಪರಿವರ್ತಿತವಾಗಿವೆ ಮತ್ತು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸ್ಥಾನಗಳನ್ನೂ ಸಹ ಪಡೆದಿವೆ ಎಂದರು. ಆ ಬಗ್ಗೆ ನಿಮ್ಮ ಹತ್ತಿರ ಏನಾದರೂ ಬರಹದ ರೂಪದ ದಾಖಲೆಗಳಿದ್ದರೆ ಕಳುಹಿಸಿಕೊಡಿ ಎಂದು ಕೋರಿದೆ. ಆದರೆ ಏನನ್ನೂ ಕಳುಹಿಸಿಕೊಡಲಿಲ್ಲ.
ಮತ್ತೊಬ್ಬರು ಅಂದರೆ ಆ ಪದಗಳ ವಿರುದ್ಧ ಇರುವವರು, ‘‘ಆ ಪದಗಳನ್ನು ಜಾತಿ ಸೂಚಕವಾಗಿ ಬಳಸುತ್ತಿಲ್ಲ ಈಗಾಗಲೇ ಕಾಲದಿಂದಲೂ ‘ಆದಿ ದ್ರಾವಿಡ’ ಪದ ನಮ್ಮಲ್ಲಿ ಚಾಲ್ತಿಯಲ್ಲಿದ್ದು ಅದೇ ಹೆಸರಲ್ಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರಕಾರದಿಂದ ಸಿಗುವ ಸೌಲಭ್ಯ- ಸವಲತ್ತುಗಳನ್ನು ಪಡೆದುಕೊಂಡು ಬರಲಾಗುತ್ತಿದೆ’’ ಎಂದು ಹೇಳಿಕೊಂಡರು. ಆ ಮಾತಿನಲ್ಲಿ ಸ್ವಲ್ಪ ಅರ್ಥವೂ ಇದೆ. ಏಕೆಂದರೆ ಮನ್ಸ ಅಥವಾ ಮನ್ಸರ್ ಪದಗಳು ಜಾತಿಯ ಅಧಿಕೃತ ಪಟ್ಟಿಯಲ್ಲಿ ಇಲ್ಲದ ಕಾರಣ, ಎಲ್ಲರೂ ಅನಿವಾರ್ಯವಾಗಿ ಆದಿ ದ್ರಾವಿಡ ಎಂಬ ವಾಡಿಕೆಯಲ್ಲಿರುವ ಜಾತಿಯನ್ನೇ ದಾಖಲೆಯಾಗಿಸಿಕೊಂಡು ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಕ್ಕೆ ಉಪಯೋಗಿಸುತ್ತಿದ್ದಾರೆ. ಇವರೂ ಕೂಡ ಯಾವ ದಾಖಲೆಗಳನ್ನು ಕಳುಹಿಸಿಕೊಡಲಿಲ್ಲ.
ಪರಿಸ್ಥಿತಿ ಹೀಗಿರುವಲ್ಲಿ, ಆದಿ ದ್ರಾವಿಡ ಪದವನ್ನು ಬಳಕೆಯಿಂದ ಕೈ ಬಿಟ್ಟು, ನಿಂದನೆ ಮತ್ತು ಕೀಳು ಎಂದು ಪರಿಗಣಿಸಲ್ಪಡುವ ಹಾಗೂ ಉಪಯೋಗಿಸುತ್ತಿರುವ ಮನ್ಸ ಮತ್ತು ಮನ್ಸರ್ ಎಂಬೆರಡು ಪದಗಳನ್ನು ಅಧಿಕೃತವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಶ್ರಮಿಸುವುದು ಅಜ್ಞಾನ ಮತ್ತು ಮೂಢನಂಬಿಕೆಗೆ ಒತ್ತು ಕೊಟ್ಟಂತಲ್ಲದೆ ಸಾಮಾಜಿಕವಾಗಿ ಹೀನಾಯವಾಗಿ ‘‘ಹೇ ಮನ್ಸ ಬಾ’’ ಎಂದು ಕರೆದ ನುಡಿಗಟ್ಟುಗಳನ್ನು ‘ಜಾತಿ’ಯಾಗಿ ತೀರ್ಮಾನಿಸಿದಂತಾಗುವುದು. ಇದು ಸಲ್ಲದ ಹಾಗೂ ಬಹುಜನ ಒಪ್ಪದ ತೀರ್ಮಾನ. ಈ ರೀತಿ ಈಗಾಗಲೇ ಹೇಳಿದ ವಿರೋಧಿಯೊಬ್ಬರ ಅನಿಸಿಕೆಗಳು.
‘ಮನ್ಸ’ ಪರ ಇರುವ ಮತ್ತೊಬ್ಬರು ಮೇಲ್ಜಾತಿ - ವರ್ಗದ ಜನ ಈಗಾಗಲೇ ಆದಿ ದ್ರಾವಿಡ ಎಂದು ಪರಿಗಣಿಸಿರುವ ಹಾಗೂ ಚಾಲ್ತಿಯಲ್ಲಿರುವ ಜಾತಿ ಪದಗಳ ಬದಲಾಗಿ ದರ್ಪ - ದಬ್ಬಾಳಿಕೆ ಮನೋಭಾವದಿಂದ ಕರೆಯುತ್ತಿರುವ ಕೀಳು ಪದಗಳು ಎಂದು ಪರಿಗಣಿತವಾಗಿರುವ ಮನ್ಸ ಮತ್ತು ಮನ್ಸರ್ ಎಂಬ ಪದಗಳನ್ನು ಅಸ್ಮಿತೆಗಾಗಿ ಅಧಿಕೃತವಾಗಿ ಮುಂದುವರಿಸಿಕೊಂಡು ಹೋಗಲು ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿರುವರು.
ಮಾನವ ಶಾಸ್ತ್ರಜ್ಞ ಕೆ.ಎಸ್. ಸಿಂಗ್ 2003ರಲ್ಲಿ ‘ಠಿeoಠಿಟe oಜಿ Iಟಿಜiಚಿ’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಪುಸ್ತಕದಲ್ಲಿ ‘ಮನ್ಸರ್’ ಅವರ ಬಗ್ಗೆ ಬರೆಯಲಾಗಿದೆ. ಅವರು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿದ್ದಾರೆ. ಅವರನ್ನು ಹೊಲೆಯ ಎಂದು ಕರೆಯುತ್ತಾರೆ. ಮನ್ಸರ್ ಅವರನ್ನು ಆದಿ ದ್ರಾವಿಡ ಎಂದು ಕರೆದುಕೊಳ್ಳಲು ಆದ್ಯತೆ ನೀಡುವರು. ಅದು ಅಧಿಕೃತ ದಾಖಲೆಯಾಗಿದೆ. ಆದಿ ದ್ರಾವಿಡ ಜಾತಿಯ ಅಡಿಯಲ್ಲಿ ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಹೇಳಿಕೊಳ್ಳುವರು. ಮನ್ಸರ್ ಅಳಿಯ ಸಂತಾನ ನಿಯಮವನ್ನು ಪಾಲಿಸುವರು. ಸೋದರಿಯರ ಮತ್ತು ಅವರ ಮಕ್ಕಳ ನಡುವೆ ಆಸ್ತಿಯನ್ನು ಸಮನಾಗಿ ಹಂಚಿ ಕೊಳ್ಳುವರು. ಚರ್ಮದಿಂದ ಬೇರೆ ಯಾವ ಉಪಕರಣಗಳನ್ನು ತಯಾರು ಮಾಡದಿದ್ದರೂ ‘ದುಡಿ’ ಎಂಬ ಚರ್ಮ ವಾದ್ಯವನ್ನು ತಯಾರು ಮಾಡಿಕೊಳ್ಳುವರು. ಚರ್ಮವನ್ನು ಮೋಚಿ ಜಾತಿಯವರಿಗೆ ಮಾರಾಟ ಮಾಡುವರು. ಆದಿ ದ್ರಾವಿಡ ಸಂಘಟನೆಯ ಮೂಲಕ ಮನ್ಸರ್ ಅವರು ಪಂಜುರ್ಲಿ, ಗುಳಿಗ, ಕಲ್ಲುರ್ಟಿ, ಬ್ರೆಮ್ಮೆರು ಮತ್ತು ಬೊಬ್ಬರ್ಯ ಭೂತಗಳನ್ನು ಆರಾಧಿಸುವರು. ಮಹಿಳೆಯರು ಮತ್ತು ಪುರುಷರಿಬ್ಬರೂ ಪಾಡ್ದನ ಎಂಬ ಜನಪದ ಗೀತೆಗಳನ್ನು ಹಾಡುವರು. ‘ದುಡಿ’ಯನ್ನು ನುಡಿಸುವುದರಲ್ಲಿ ನಿಷ್ಣಾತರು. ಮುಂಡಾಳ ಮತ್ತು ಬಾಕುಡ ಸಮುದಾಯದವರು ಮನ್ಸರ್‌ಗಿಂತ ತಾವು ಮೇಲಿನವರು ಎಂದು ಹೇಳಿ ಕೊಳ್ಳುವರು. ಕೃಷಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುವುದರಿಂದ ಅವರನ್ನು ‘ಮುಕ್ಕುಳು’ ಎಂದು ಕರೆಯುತ್ತಾರೆ. ಈ ಪುಸ್ತಕದಲ್ಲಿ ಮನ್ಸರ್ ಪದದ ಹುಟ್ಟಿನ ಬಗ್ಗೆ ಏನೂ ಹೇಳಿರುವುದಿಲ್ಲ.ಈ ಪುಸ್ತಕ 2003ರಲ್ಲಿ ಪ್ರಕಟವಾಗಿರುವುದರಿಂದ ಮನ್ಸರ್ ಎಂದು ಹೇಳಿಕೊಳ್ಳುವವರ ಇತಿಹಾಸ ಬಹಳ ದೊಡ್ಡದೇನಿಲ್ಲ. ನೂರು ವರ್ಷಗಳಿಗೂ ಹಿಂದೆ ಹಲವು ಮಾನವ ಶಾಸ್ತ್ರಜ್ಞರು ಈ ರೀತಿಯ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಆ ಪುಸ್ತಕಗಳಲ್ಲಿ ಎಲ್ಲೂ ಮನ್ಸ ಅಥವಾ ಮನ್ಸರ್ ಬಗ್ಗೆ ದಾಖಲಾಗಿಲ್ಲ ಎಂಬುದು ಬಹು ಮುಖ್ಯ. ಮಾನವ ಶಾಸ್ತ್ರಜ್ಞರು ಈ ಹಿಂದೆ ಜಾತಿಗಳ ವಿವರಗಳನ್ನು ಸಂಗ್ರಹಿಸುವಾಗ ಬಹುಶಃ ಈ ಪದಗಳು ಬಳಕೆಯಲ್ಲಿ ಇರಲಿಲ್ಲ ಎಂದು ತಿಳಿಯಬಹುದು. ಇತ್ತೀಚಿನ ಕೆಲವು ದಶಕಗಳ ಹಿಂದೆ ಈ ಪದಗಳು ಸೃಷ್ಟಿಯಾದಂತೆ ಕಂಡು ಬರುವವು. ತಲೆಮಾರಿನ ಅಂತರವಿರುವ ಹಾಗೆ ಕಂಡು ಬರುತ್ತಿಲ್ಲ.
ಜಾತಿ ಒಂದರ ವಿಷಯದಲ್ಲಿ ಹೀಗೆ ಪರ- ವಿರೋಧ ಇರುವಲ್ಲಿ ಯಾವ ಮಧ್ಯಸ್ಥಗಾರರು ‘ಇದು ಹೀಗಿದೆ’ ಎಂದು ತಿಳಿ ಹೇಳಲಾಗುವುದಿಲ್ಲ. ಯಾವ ಸಮಜಾಯಿಷಿಯನ್ನು ಅವರು ಒಪ್ಪುವುದಿಲ್ಲ ಕೂಡ.
ಅವರೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದನ್ನು ಎಲ್ಲರೂ ಒಪ್ಪುವರು. ಅದಕ್ಕೆ ಪುರಾವೆ ಎಂದರೆ ದಾಖಲೆಗಳು. ದಾಖಲೆಗಳಲ್ಲಿ ಈಗಾಗಲೇ ಆದಿ ದ್ರಾವಿಡ ಎಂದು ಕಾಣಿಸಿರುವುದು. ಆದಿ ದ್ರಾವಿಡ ಎಂಬ ಜಾತಿ ಪದವು ಈಗಾಗಲೇ ಅಧಿಕೃತವಾಗಿ ಜಾತಿ ಪಟ್ಟಿಯಲ್ಲಿ ಸೇರಿದೆ. ಆದರೆ ‘ಮನ್ಸ’ ಮತ್ತು ‘ಮನ್ಸರ್’ ಎಂಬ ಎರಡೂ ಪದಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆ ಮಾಡಬೇಕೆಂದರೆ, ಅದಕ್ಕೆ ತನ್ನದೇ ಆದ ತುಸು ಕಠಿಣವೆನ್ನುವ ನಿಯಮಗಳಿವೆ.
ಮೊದಲಿಗೆ ಆ ಎರಡೂ ಪದಗಳಿಗೆ ಅನ್ವಯಿಸುವ ಹಾಗೆ ಯಾವುದಾದರೂ ಒಂದು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಮಾನವ ಕುಲಶಾಸ್ತ್ರಜ್ಞರಿಂದ ಕುಲ ಶಾಸ್ತ್ರೀಯ ಅಧ್ಯಯನವನ್ನು ಸರಕಾರ ಕೈಗೆತ್ತಿಕೊಳ್ಳಬೇಕು. ಸಾರೋದ್ಧಾರವಾಗಿ ಕುಲಶಾಸ್ತ್ರೀಯ ಅಧ್ಯಯನ ಕಾರ್ಯ ವಿಶ್ವವಿದ್ಯಾನಿಲಯ ಕೈಗೊಳ್ಳುವುದು. ಆ ಎರಡು ಪದಗಳಿಗೂ ಮತ್ತು ಆದಿ ದ್ರಾವಿಡ ಜಾತಿ ಪದಕ್ಕೂ ಸಾಮ್ಯತೆ ಇದೆಯೇ? ಬಳಕೆಯಲ್ಲಿ ಆ ಜನಾಂಗಕ್ಕೆ ಅನ್ವಯಿಸುವ ಹಾಗೆ ಆ ಪದಗಳು ಇವೆಯೇ ಎಂಬುದು ಬಹಳ ಮುಖ್ಯವಾದ ಸಂಗತಿಯಾಗುತ್ತದೆ. ಅಧ್ಯಯನ ಕಾರ್ಯ ಮುಗಿಸಿದ ಮೇಲೆ ಅಧ್ಯಯನವನ್ನು ಒಳಗೊಂಡ ಪುಸ್ತಕವನ್ನು ಪರಿಶಿಷ್ಟ ಜಾತಿ ಸಂಶೋಧನಾ ಸಂಸ್ಥೆಗೆ ಒಪ್ಪಿಸಬೇಕು. ಸಂಸ್ಥೆಯು ಮತ್ತೊಮ್ಮೆ ಪರಿಣಿತರಿಂದ ಪರಾಮರ್ಶನೆಗೆ ಒಳಪಡಿಸುವುದು. ಪರಾಮರ್ಶನ ಕಾರ್ಯದಲ್ಲಿ ಯಾವುದೇ ಲೋಪವಿಲ್ಲ ಎಂಬುದು ಕಂಡು ಬಂದಲ್ಲಿ ಅದನ್ನು ಸರಕಾರಕ್ಕೆ ಕಳುಹಿಸಿ ಕೊಡುವರು. ಸರಕಾರದಲ್ಲಿ ಪರಾಮರ್ಶನ ಗ್ರಂಥವನ್ನು ಕೂಲಂಕಷವಾಗಿ ಅವಲೋಕಿಸಿ, ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದ ನಂತರ, ವರದಿಯನ್ನು ಕೇಂದ್ರ ಸರಕಾರದ ಅಧೀನದಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಇವರಿಗೆ ಶಿಫಾರಸನ್ನು ಸರಕಾರ ಮಾಡುವುದು. ಆರ್.ಜಿ.ಐ. ಅಧ್ಯಯನ ಕೈಗೊಂಡು, ಕುಲ ಶಾಸ್ತ್ರೀಯ ಅಧ್ಯಯನ ಸಮರ್ಪಕವಾಗಿದ್ದಲ್ಲಿ ಮಾತ್ರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಕಳುಹಿಸಿ ಕೊಡುವುದು. ಆಯೋಗ ಅದನ್ನು ಪುನರ್‌ಪರಿಶೀಲಿಸಿ, ಕೇಂದ್ರ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಬಲೀಕರಣ ಇಲಾಖೆಗೆ ರವಾನಿಸಿದ ನಂತರ ಸಚಿವ ಸಂಪುಟದ ಮುಂದೆ ವಿಷಯ ಚರ್ಚೆಗೆ ಬರುವುದು. ಸಚಿವ ಸಂಪುಟದಲ್ಲಿ ಅನುಮೋದನೆಯಾದ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದ ನಂತರವಷ್ಟೇ ರಾಷ್ಟ್ರಪತಿಗಳ ಸಹಿಗೆ ಕಳುಹಿಸಿ ಕೊಡಲಾಗುವುದು. ರಾಷ್ಟ್ರಪತಿಗಳ ಸಹಿಯಾದ ನಂತರ ಅಂಥ ಜಾತಿಗಳು ಅಧಿಕೃತ ಪಟ್ಟಿಗೆ ಸೇರಲ್ಪಡುತ್ತವೆ. ಇದು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರುವ ಉದ್ದೇಶಿತ ಜಾತಿಗಳಿಗೆ ಅನ್ವಯಿಸುವ ಸಂಕ್ಷಿಪ್ತ ವಿವರಣೆಯ ವಿಧಾನ. ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ಯಾರ ಅಡ್ಡಿಯೂ ಇರಲಾರದು.
ನಿಜಾಂಶವನ್ನು ಆಧರಿಸಿರುವ, ಪೂರ್ವಕಲ್ಪಿತವಲ್ಲದ ವಿಷಯಗಳಿವು, ಆದುದರಿಂದ ಯಾರೂ ಅನ್ಯತಾ ಭಾವಿಸುವ ಅಗತ್ಯವಿಲ್ಲ. ಮತ್ತೆ ಸಂಬಂಧಿಸಿದ ಸಮುದಾಯದ ಮೇಲೆ ಬೆಳಕು ಚೆಲ್ಲುವುದೂ ಕೂಡ ಇದರ ಉದ್ದೇಶ ಆಗಿದೆ.