ವಿಧಾನಸಭೆಯಲ್ಲಿ ಅನುಭವ ಮಂಟಪ
ಅದು ನಮ್ಮ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸಿ ಬದಲಿಸದಿದ್ದರೆ ಅದರ ನಿಜಸಂದೇಶ ನಮ್ಮೊಳಗಿಳಿಯಲಾರದು! ಇದು ಶಾಸಕರಿಗಷ್ಟೇ ಅನ್ವಯಿಸುವುದಿಲ್ಲ, ವಚನಗಳನ್ನು ನಿತ್ಯವೂ ಪ್ರವಚನದಲ್ಲಿ ಒದರಿ, ನಂತರ ಜಾತಿವಿಕಾರದ ನೆತ್ತರು ಕುಡಿದವರಂತಾಡುವ ಸ್ವಾಮೀಜಿಗಳಿಗೂ ಅನ್ವಯಿಸುತ್ತದೆ; ತಮ್ಮ ಭಾಷಣದಲ್ಲಿ ಪ್ರತೀ ವಾಕ್ಯಕ್ಕೊಮ್ಮೆ ವಚನಗಳನ್ನು ಉದುರಿಸಿಯೂ ಜಾತಿಹುಳಗಳಾಗಿರುವ ಸಾಹಿತ್ಯ ಪುಢಾರಿಗಳಿಗೂ; ವರ್ಷವಿಡೀ ವಚನ ಪಾಠ ಮಾಡಿಯೂ ಜಾತಿ ಗುಂಪುಗಳಲ್ಲಿ ಕೊಳೆತು ಹೋಗುವ ಮೇಷ್ಟ್ರು, ಮೇಡಂಗಳಿಗೂ; ಜೀವಮಾನವಿಡೀ ವಚನಗಳನ್ನು ಗಂಟಲಿನಲ್ಲಿ ಹಾಡಿಯೂ ಮನದಲ್ಲಿ ಜಾತಿವಿಷ ತುಂಬಿರುವ ಹಾಡುಗಾರ, ಹಾಡುಗಾರ್ತಿಯರಿಗೂ ಇದು ಅನ್ವಯಿಸುತ್ತದೆ!
ಕಳೆದ ವಾರ, 9 ಡಿಸೆಂಬರ್ 2024ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪದ ತೈಲ ಚಿತ್ರ ಅನಾವರಣವಾದದ್ದು ನಿಮಗೆ ನೆನಪಿರಬಹುದು. ಅವತ್ತು ವಚನಗಳಲ್ಲಿ ಅನುಭವ ಮಂಟಪದ ಉಲ್ಲೇಖ ಎಲ್ಲಿದೆ ಎಂದು ‘ವಚನ ಸಂಚಯ.ನೆಟ್’ (https://vachana.sanchaya.net) ಹುಡುಕಿದೆ. ಈ ವೆಬ್‌ಸೈಟ್ ಒಂದೇ ನಿಮಿಷದಲ್ಲಿ ಸಾವಿರಾರು ವಚನಗಳನ್ನು ಹುಡುಕಾಡಿ, ನೀಲಮ್ಮನವರ ವಚನಗಳಲ್ಲಿ ಒಂದೆಡೆ ‘ಅನುಭವ ಮಂಟಪ’ದ ಪ್ರಸ್ತಾವವಿದೆ ಎಂದು ತೋರಿಸಿತು. ಈ ವೆಬ್‌ಸೈಟ್ ಮಾಡಿದವರಿಗೆ ಎಂದಿನಂತೆ ತಲೆ ಬಾಗಿದೆ.
ನೀಲಮ್ಮ ಅಥವಾ ನೀಲಾಂಬಿಕೆ ತಾವು ಬಸವಣ್ಣನವರ ವಿಚಾರಪತ್ನಿ ಎಂದು ಬಣ್ಣಿಸಿಕೊಳ್ಳುತ್ತಾರೆ. ಬಸವಣ್ಣನವರ ಬಗ್ಗೆ ಅತ್ಯಂತ ಆತ್ಮೀಯವಾದ ವಚನಗಳನ್ನೂ ನೀಲಮ್ಮ ಬರೆದಿದ್ದಾರೆ. ‘ಮಡದಿ ಎನಲಾಗದು ಬಸವಂಗೆ ಎನ್ನನು. ಪುರುಷನೆನಲಾಗದು ಬಸವನ ಎನಗೆ. ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು, ಬಸವನೆನ್ನ ಶಿಶುವಾದನು’ ಎಂಬಂಥ ಸುಂದರ ವರ್ಣನೆಗಳು ನೀಲಮ್ಮನವರ ವಚನಗಳಲ್ಲಿವೆ. ನೀಲಮ್ಮ, ‘ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು’ ಎಂದು ಶುರುವಾಗುವ ತಮ್ಮ ಸುದೀರ್ಘ ವಚನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಕಟ್ಟಿದ ಘಟ್ಟಗಳನ್ನು ವಿವರಿಸುತ್ತಾ ಹೇಳುತ್ತಾರೆ:
ಚೆನ್ನಬಸವನೆಂಬ ಪ್ರಸಾದಿಯ ಪಡೆದು,
ಅನುಭವಮಂಟಪವನುಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
ಹನ್ನೆರಡನೆಯ ಶತಮಾನದ ಅನುಭವ ಮಂಟಪದ ವಾಸ್ತವರೂಪ ಹೇಗಾದರೂ ಇರಲಿ, ‘ಅದೊಂದು ಮೆಟಫರ್’ ಎನ್ನುವ ಒ.ಎಲ್. ನಾಗಭೂಷಣಸ್ವಾಮಿಯವರಂತೆಯೇ ಕನ್ನಡ ಪ್ರತಿಭಾವಿಲಾಸ ಕೂಡ ಅದನ್ನು ಮೂಲತಃ ಒಂದು ರೂಪಕವಾಗಿಯೇ ಕಂಡಿದೆ. ಇವತ್ತಿಗೂ ಕನ್ನಡಿಗರ ತಲೆಯಲ್ಲಿ ಅನುಭವ ಮಂಟಪ ಹಲವು ಜಾತಿ ವರ್ಗಗಳ ಗಂಡು ಹೆಣ್ಣುಗಳು ಸೇರಿ ನೈತಿಕ, ಆಧ್ಯಾತ್ಮಿಕ, ಸಾಮಾಜಿಕ ವಿಚಾರಗಳನ್ನು ಸೂಕ್ಷ್ಮವಾಗಿ ಚರ್ಚಿಸಿದ ತಾಣ ಎಂಬ ಆದರ್ಶ ಚಿತ್ರ ಹಾಗೇ ಉಳಿದಿದೆ. ನಮ್ಮ ಕಾಲದ ಎಲ್ಲ ಜಾತಿಗಳ ಸೂಕ್ಷ್ಮ ಚಿಂತಕ, ಚಿಂತಕಿಯರು ಅನುಭವ ಮಂಟಪವನ್ನು ‘ತಮ್ಮದು’ ಎಂದುಕೊಂಡೇ ಇದ್ದಾರೆ; ಅದು ಒಂದು ಜಾತಿಗಷ್ಟೇ ಮೀಸಲು ಎಂದು ಕನ್ನಡ ಚಿಂತನಾವಲಯ ಎಂದೂ ಭಾವಿಸಿಲ್ಲ. ‘ಮಂಟಪ ಮುಕ್ತವಾದುದು; ‘ಮಠ’ದಲ್ಲಿ ಮುಚ್ಚಿದ ಕಟ್ಟಡದ ಕಲ್ಪನೆಯಿದೆ’ ಎಂದಿದ್ದ ಕಲಬುರ್ಗಿಯವರ ವಿಶಿಷ್ಟ ಒಳನೋಟ ಕೂಡ ಇಲ್ಲಿ ನೆನಪಾಗುತ್ತದೆ.
ಕನ್ನಡ ಪ್ರತಿಭೆ ರೂಪಿಸಿಕೊಂಡಿರುವ ಅನುಭವ ಮಂಟಪದ ಚಿತ್ರ ಅಥವಾ ‘ನಿರ್ಮಿತಿ’ (ಕಾನ್ಸ್ಟ್ರಕ್ಟ್) ಈಗ ಚಿರಪರಿಚಿತ: ನಾಡಿನ ಮೂಲೆಮೂಲೆಗಳಿಂದ ಬಂದ ಹಲವು ಜಾತಿ, ವರ್ಗಗಳ ಗಂಡು, ಹೆಣ್ಣುಗಳು, ಹಲವು ವೃತ್ತಿಯವರು ಅನುಭವ ಮಂಟಪದಲ್ಲಿ ಸೇರಿ, ತಂತಮ್ಮ ಅನುಭವಗಳ ಮೂಲಕ ಅಲ್ಲಿ ಮಾತಾಡಿದರು; ಮುಕ್ತವಾಗಿ ಚರ್ಚಿಸಿದರು. ತಂತಮ್ಮ ಭಾಷೆಯನ್ನು, ತಂತಮ್ಮ ವೃತ್ತಿಯ ನುಡಿಗಟ್ಟುಗಳನ್ನು ಬಳಸಿ ವಚನಗಳನ್ನು ನುಡಿದರು. ಉದಾಹರಣೆಗೆ, ಈ ಬಣ್ಣನೆಗಳನ್ನು ಗಮನಿಸಿ:
ಕದಿರ ರೆಮ್ಮವ್ವೆ: ‘ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತು ನೂಲು.’
ಡಕ್ಕೆಯ ಬೊಮ್ಮಣ್ಣ: ‘ಕಾಯವೆಂಬ ಡಕ್ಕೆ, ಕ್ರೀಭಾವವೆಂಬ ಹೊದಕೆ, ಅರಿವೆಂಬ ನೇಣಿನಲ್ಲಿ ಸ್ಥೂಲ ಸೂಕ್ಷ್ಮವೆಂಬ ಹೊಡೆಚೆಂಡು ಕಟ್ಟಿ ಹೊಯ್ಯುತ್ತಿದೆ ಡಕ್ಕೆ’
ಮಾದಾರ ಧೂಳಯ್ಯ: ‘ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು’
ಈ ಎಲ್ಲರಿಗಿಂತ ಮೊದಲೇ ಆದ್ಯ ವಚನಕಾರರಾದ ಮಾದಾರ ಚೆನ್ನಯ್ಯನವರು ‘ಆಗುಚೇಗು ಎಂಬ ದಡಿಗೋಲಿನಲ್ಲಿ ಅಗಡದ ಎಮ್ಮೆಯ ಚರ್ಮವ ತೆಗೆದು’ ಎಂದು ಬರೆದಾಗಲೇ ವೃತ್ತಿಭಾಷೆಯನ್ನು ಕಾವ್ಯ ಭಾಷೆಯನ್ನಾಗಿಸುವ ಮಾದರಿಯನ್ನು ತೋರಿಸಿಕೊಟ್ಟಿದ್ದರು.
ಈ ವಚನಕಾರ, ವಚನಕಾರ್ತಿಯರು ಬಳಸುತ್ತಿರುವ ಭಾಷೆಯ ಬಳಕೆಯಲ್ಲಿ ನಮಗೊಂದು ಸುಂದರ ಪಾಠವಿದೆ: ನಾವು ನಿತ್ಯ ತೊಡಗುವ ವೃತ್ತಿಯ ಭಾಷೆಯೇ ಬರವಣಿಗೆಯ, ಕಾವ್ಯದ, ಚಿಂತನೆಯ ಭಾಷೆಯಾಗುವ ಸಹಜ ಮಾದರಿಯನ್ನು ಈ ಪ್ರಯೋಗಗಳು ಹೇಳಿಕೊಡುತ್ತವೆ. ಮಾದಾರ ಚೆನ್ನಯ್ಯನವರ ಈ ಮಾದರಿಯನ್ನು ಕನ್ನಡ ದಲಿತ ಸಾಹಿತ್ಯ ದೊಡ್ಡ ಮಟ್ಟದಲ್ಲಿ ಹಬ್ಬಿಸಿತು ಎಂಬುದು ದಲಿತ ಸಾಹಿತ್ಯದಲ್ಲಿ ನಡೆದ ವಚನಯುಗದ ಭಾಷಿಕ ಮುಂದುವರಿಕೆಯನ್ನೂ ಸೂಚಿಸುತ್ತದೆ. ‘ಸಮುದಾಯ’ ರಂಗಭೂಮಿ ಚಳವಳಿಯಲ್ಲಿ, ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಎಲ್ಲ ಜಾತಿಗಳ ಗಂಡು, ಹೆಣ್ಣುಗಳು ಬಂದು ಸೇರಿ ಚಿಂತನೆ, ಬರವಣಿಗೆ ಮಾಡಿದ್ದು ಕೂಡ ‘ಅನುಭವ ಮಂಟಪ’ ರೂಪಕದ ಈ ಕಾಲದ ಒಂದು ರೂಪದಂತೆಯೂ ಕಾಣುತ್ತದೆ. ಗಿರೀಶ್ ಕಾರ್ನಾಡ್ ತಮ್ಮ ‘ತಲೆದಂಡ’ ನಾಟಕದ ವಸ್ತುವಿಕ್ಕೆ ತಕ್ಕಂತೆ ಹನ್ನೆರಡನೆಯ ಶತಮಾನವನ್ನು ವಿವರಿಸಲು ಬಳಸಿದ ನೊಂದ ಹಲ್ಲಿನ ರೂಪಕವನ್ನು ಗಿಳಿಪಾಠದಂತೆ ಒಪ್ಪಿಸುವವರು ಅನುಭವ ಮಂಟಪದ ಸಾಧನೆಯನ್ನೇ ಹಿನ್ನೆಲೆಗೆ ತಳ್ಳಿ, ಕಲ್ಯಾಣ ಪತನ ಕುರಿತ ನಿಟ್ಟುಸಿರನ್ನೇ ಆನಂದಿಸುವಂತೆ ಕಾಣುತ್ತದೆ!
ಇವತ್ತು ತಂತಮ್ಮ ಮನೆಮಾತನ್ನು, ತಮ್ಮ ಸಮುದಾಯಗಳ ಭಾಷೆಯನ್ನು, ತಮ್ಮ ಕಸುಬಿನ ಭಾಷೆಯನ್ನು ಬಳಸಿ ಬರೆಯಬಯಸುವ ಲೇಖಕ, ಲೇಖಕಿಯರಿಗೆ ತಂತಮ್ಮ ವಿಶಿಷ್ಟ ಭಾಷೆಯನ್ನು ಬಳಸುವುದನ್ನು ಹೇಳಿಕೊಟ್ಟ ವಚನಕಾರ, ವಚನಕಾರ್ತಿಯರೇ ನಿಜವಾದ ಗುರುಗಳು. ಇವರಲ್ಲಿ ಹಲವರು ಅನುಭವ ಮಂಟಪದಲ್ಲೇ ಹುಟ್ಟಿದ ಚಿಂತನೆಗಳಿಗೆ ಅಲ್ಲೇ ಪ್ರಾಮಾಣಿಕವಾಗಿ ಉತ್ತರ ಕೊಟ್ಟು, ವಚನಕ್ಕೊಂದು ವಚನ ಕಟ್ಟಿ, ಎಲ್ಲರೂ ಒಟ್ಟಾಗಿ ಸತ್ಯವನ್ನು ಹುಡುಕಾಡುವ ಮಾರ್ಗವನ್ನೂ ತೋರಿಸಿಕೊಟ್ಟರು. ಇದರರ್ಥ, ವಚನಗಳೆಲ್ಲ ಅನುಭವ ಮಂಟಪದಲ್ಲೇ ಹುಟ್ಟಿದವು ಎಂದಲ್ಲ. ಅಲ್ಲಿ ವಚನ ರಚನೆಯ ಕಲೆ ಆಳವಾಯಿತು, ಪರಿಪೂರ್ಣವಾಯಿತು ಎನ್ನಬಹುದು. ಜನಜೀವನದ ವರ್ತನೆಗಳನ್ನು ವಿಮರ್ಶಿಸುವ, ತಿದ್ದುವ ನೈತಿಕ ಚರ್ಚೆಗಳು ಕೂಡ ಇಲ್ಲಿ ನಡೆದಿವೆ. ಅನುಭವ ಮಂಟಪವನ್ನು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎನ್ನುವುದು ಈಗ ಚಿರಪರಿಚಿತವಾಗಿದೆ. ಈ ತಾಣವನ್ನು ಜಗತ್ತಿನ ಮೊದಲ ಸಾಂಸ್ಕೃತಿಕ ಪಾರ್ಲಿಮೆಂಟ್ ಎಂದರೆ ಇನ್ನಷ್ಟು ಕರಾರುವಾಕ್ಕಾದ ಬಣ್ಣನೆಯಾಗಬಲ್ಲದು.
ಇಂಥ ಅನನ್ಯ ಸಾಂಸ್ಕೃತಿಕ ಚರಿತ್ರೆಯಿರುವ ಕರ್ನಾಟಕದ ಬೆಳಗಾವಿಯ ವಿಧಾನಸಭೆಯಲ್ಲಿ ಅನುಭವ ಮಂಟಪದ ಚಿತ್ರ ಅನಾವರಣಗೊಂಡಿದ್ದು ಅರ್ಥಪೂರ್ಣವಾಗಿದೆ. ನಮ್ಮ ವಿಧಾನಸಭೆ ನಿಜಕ್ಕೂ ಅನುಭವಮಂಟಪವಾಗುವ ಸಾಧ್ಯತೆಗಳು ಇವತ್ತಿಗೂ ಬತ್ತಿಲ್ಲ ಎಂದು ನಂಬಲು ನನಗೆ ಇಷ್ಟ. ಯಾಕೆಂದರೆ, ವಿಧಾನಸಭೆಯಲ್ಲಿ ಹಲವು ಜಾತಿ, ವರ್ಗಗಳ ಗಂಡು ಹೆಣ್ಣುಗಳಿದ್ದಾರೆ. ತಂತಮ್ಮ ಊರಿನ ಸಮುದಾಯದ ಅನುಭವವನ್ನು ತಮ್ಮ ಭಾಷೆಯಲ್ಲೇ ಮಂಡಿಸಬಲ್ಲವರಿದ್ದಾರೆ. ಇಲ್ಲಿ ಇಂಗ್ಲಿಷಿನ, ಹಿಂದಿಯ ಅಥವಾ ಶಿಷ್ಟ ಕನ್ನಡದ ದಬ್ಬಾಳಿಕೆಯಿಲ್ಲ. ಅವರವರ ಭಾವಕ್ಕೆ, ಅವರವರ ಭಾಷೆಗೆ ತಕ್ಕಂತೆ ನುಡಿವ ಸ್ವಾತಂತ್ರ್ಯ ಇಲ್ಲಿದೆ. ಇಲ್ಲಿ ಸಿದ್ದರಾಮಯ್ಯನವರ ಸಿದ್ದರಾಮನಹುಂಡಿಯ ಜವಾರಿ ಶೈಲಿ, ಅರಸೀಕೆರೆ ತಾಲೂಕಿನ ಗಂಡಸಿ ಕಡೆಯ ಕುಡಕುಂದಿಯ ಶಿವಲಿಂಗೇಗೌಡರ ಹಳ್ಳಿ ಸ್ಟೈಲ್, ಝಮೀರ್ ಅಹ್ಮದರ ಬೆಂಗಳೂರು ಕನ್ನಡದ ಖದರ್ ಎಲ್ಲವೂ ಮಿಂಚುತ್ತವೆ.
ನೀವೂ ನೋಡಿರಬಹುದು: ಅನುಭವಮಂಟಪದ ಚಿತ್ರದ ಅನಾವರಣದ ದಿನ ಅಪರೂಪಕ್ಕೆ ಕರ್ನಾಟಕದ ವಿಧಾನಸಭೆಯಲ್ಲಿ ಕೆಲಕಾಲ ಪ್ರಶಾಂತ ವಾತಾವರಣವಿತ್ತು! ಸಿದ್ದರಾಮಯ್ಯನವರು ಅನುಭವ ಮಂಟಪದ ಚರ್ಚೆಯನ್ನು ಅಂಬೇಡ್ಕರ್, ಲೋಹಿಯಾವರೆಗೂ ತಂದರು. ಹಲವರು ಅನುಭವ ಮಂಟಪ ಕುರಿತು ಮಾತಾಡಿದರು. ಇದನ್ನು ನೋಡಿದ ನನಗೆ ಕಳೆದ ಏಳು ದಶಕಗಳ ಕರ್ನಾಟಕದ ವಿಧಾನಸಭೆಯಲ್ಲಿ ಅನುಭವ ಮಂಟಪದ ಹೊಳಹುಗಳು ಆಗಾಗ ಮೂಡಿದ್ದು ನೆನಪಾಯಿತು: ವಿರೋಧ ಪಕ್ಷಗಳಲ್ಲಿದ್ದ ಶಾಂತವೇರಿ ಗೋಪಾಲಗೌಡ, ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ, ಎಂ.ಡಿ. ನಂಜುಂಡಸ್ವಾಮಿ; ಮಂತ್ರಿಗಳಾದ ಕೆ.ಎಚ್. ರಂಗನಾಥ್, ಬಿ. ಬಸವಲಿಂಗಪ್ಪ; ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಬಂಗಾರಪ್ಪನವರಿಂದ ಹಿಡಿದು ಇವತ್ತಿನ ಸಿದ್ದರಾಮಯ್ಯನವರ ಸದನದ ಭಾಷಣಗಳವರೆಗೂ ಇಲ್ಲಿ ಸಮುದಾಯದ ಅನುಭವಗಳ ಮಂಡನೆಯಾಗುತ್ತಾ ಬಂದಿದೆ. ಇಂಥ ಭಾಷಣಗಳ ಪಟ್ಟಿ ಬೆಳೆಯುತ್ತಾ ಹೋಗಬಲ್ಲದು.
ಇದೇ ವಿಧಾನಸಭೆ ಹಿಂದುಳಿದ ವರ್ಗಗಳ ಮೀಸಲಾತಿ, ಮಹಿಳೆಯರ ಆಸ್ತಿ ಹಕ್ಕಿನ ಜಾರಿ, ‘ಉಳುವವನೇ ನೆಲದೊಡೆಯ’ ಮೊದಲಾದ ವಿಚಾರಗಳನ್ನು ಗಂಭೀರವಾಗಿ ಚರ್ಚಿಸಿದೆ. ಈ ಚರ್ಚೆಗಳು, ನಿರ್ಣಯಗಳು ಕನ್ನಡನಾಡಿನ ಜನರ ಭವಿಷ್ಯವನ್ನು ನಿರ್ಣಾಯಕವಾಗಿ ಬದಲಿಸಿವೆ. ಮೀಸಲಾತಿ, ಜಾತಿಪದ್ಧತಿ, ಪಂಚಾಯತ್ ವ್ಯವಸ್ಥೆ, ಸಬಲೀಕರಣ, ಜಾಗತೀಕರಣ, ಧರ್ಮ ಇವೆಲ್ಲದರ ಬಗ್ಗೆ ಇಲ್ಲಿ ಆಳವಾದ ಚರ್ಚೆಗಳು ನಡೆದಿವೆ. ಕವಿ ಸಿದ್ಧಲಿಂಗಯ್ಯನವರು ಅಂತರ್ಜಾತಿಯ ವಿವಾಹಿತರಿಗೆ ಮೀಸಲಾತಿ ಕುರಿತ ಖಾಸಗಿ ನಿರ್ಣಯವೊಂದನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ್ದು ನೆನಪಾಗುತ್ತದೆ.
ಈ ಹಿನ್ನೆಲೆಯಲ್ಲಿ ಈಗ ವಿಧಾನಸಭೆಯಲ್ಲಿ ಅನುಭವ ಮಂಟಪದ ಚಿತ್ರದ ಭಿತ್ತಿಯಲ್ಲಿ ಮಾತಾಡುವವರು ಅನುಭವ ಮಂಟಪದ ಸ್ಪಿರಿಟ್ಟನ್ನು ಮರುಜೀವಗೊಳಿಸಬಹುದು ಎಂಬ ಆಸೆ ನಮ್ಮಂಥವರೊಳಗೆ ಇಣುಕಿದರೆ ಅಚ್ಚರಿಯಲ್ಲ. ಆದರೆ ಮೊನ್ನೆ ಅನುಭವಮಂಟಪದ ಅನಾವರಣದ ಚಾರಿತ್ರಿಕ ಗಳಿಗೆಯನ್ನು ಮಂಕಾಗಿಸುವಂತೆ ಪಂಚಮಸಾಲಿ ಮೀಸಲಾತಿ ಪ್ರತಿಭಟನೆ ಶುರುವಾಯಿತು. ಅನುಭವ ಮಂಟಪದ ವಾರಸುದಾರರೆಂದುಕೊಳ್ಳುವ ಪಂಚಮಸಾಲಿಗಳು ಅನುಭವ ಮಂಟಪದ ಚಿತ್ರ ಅನಾವರಣಗೊಂಡ ಘಟ್ಟದಲ್ಲಿ ಅನುಭವ ಮಂಟಪದ ಮುಕ್ತ ಚರ್ಚೆಯ ವಾತಾವರಣವನ್ನು ನಿರ್ಮಿಸಬಹುದಿತ್ತು. ಇದಾದ ನಂತರ, ಅನುಭವ ಮಂಟಪದ ಚಿತ್ರದ ಅನಾವರಣಕ್ಕೆ ಸಾಕ್ಷಿಯಾಗಿದ್ದ ಕೆಲವು ಶಾಸಕರು ಅನುಭವಮಂಟಪದ ಸಂದೇಶವನ್ನು ಒಂದೇ ದಿನಕ್ಕೆ ಮರೆತವರಂತೆ ಹಳೆಯ ಧಾಟಿಗೆ ಇಳಿದುಬಿಟ್ಟರು!
ಇದರರ್ಥ ಇಷ್ಟೇ: ಎಂಥದೇ ದೊಡ್ಡ ಚಾರಿತ್ರಿಕ ಪ್ರತಿಮೆಯಾಗಲಿ, ಅನನ್ಯ ಸಾಂಸ್ಕೃತಿಕ ಸಂಕೇತವಾಗಲಿ, ಅದು ನಮ್ಮ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸಿ ಬದಲಿಸದಿದ್ದರೆ ಅದರ ನಿಜಸಂದೇಶ ನಮ್ಮೊಳಗಿಳಿಯಲಾರದು! ಇದು ಶಾಸಕರಿಗಷ್ಟೇ ಅನ್ವಯಿಸುವುದಿಲ್ಲ, ವಚನಗಳನ್ನು ನಿತ್ಯವೂ ಪ್ರವಚನದಲ್ಲಿ ಒದರಿ, ನಂತರ ಜಾತಿವಿಕಾರದ ನೆತ್ತರು ಕುಡಿದವರಂತಾಡುವ ಸ್ವಾಮೀಜಿಗಳಿಗೂ ಅನ್ವಯಿಸುತ್ತದೆ; ತಮ್ಮ ಭಾಷಣದಲ್ಲಿ ಪ್ರತೀ ವಾಕ್ಯಕ್ಕೊಮ್ಮೆ ವಚನಗಳನ್ನು ಉದುರಿಸಿಯೂ ಜಾತಿಹುಳಗಳಾಗಿರುವ ಸಾಹಿತ್ಯ ಪುಢಾರಿಗಳಿಗೂ; ವರ್ಷವಿಡೀ ವಚನ ಪಾಠ ಮಾಡಿಯೂ ಜಾತಿ ಗುಂಪುಗಳಲ್ಲಿ ಕೊಳೆತು ಹೋಗುವ ಮೇಷ್ಟ್ರು, ಮೇಡಂಗಳಿಗೂ; ಜೀವಮಾನವಿಡೀ ವಚನಗಳನ್ನು ಗಂಟಲಿನಲ್ಲಿ ಹಾಡಿಯೂ ಮನದಲ್ಲಿ ಜಾತಿವಿಷ ತುಂಬಿರುವ ಹಾಡುಗಾರ, ಹಾಡುಗಾರ್ತಿಯರಿಗೂ ಇದು ಅನ್ವಯಿಸುತ್ತದೆ!
ಅನುಭವ ಮಂಟಪ ಎನ್ನುವುದು ಗತಕಾಲದ ಸುಂದರ ಸಾಂಸ್ಕೃತಿಕ ರೂಪಕ ಮಾತ್ರ ಎಂದು ನಾವು ಹಿಂಗಣ್ಣರಾಗಬೇಕಾಗಿಲ್ಲ. ಮೈಸೂರಿನಲ್ಲಿ ಕನ್ನಡದ ಮುಖ್ಯ ಲೇಖಕರು ಸಾಹಿತ್ಯದ ಗಂಭೀರ ಚರ್ಚೆ ಮಾಡುತ್ತಿದ್ದ ಕಾಫೀ ಹೌಸ್, ಏಳೆಂಟು ಜನ ಸಮಾಜವಾದಿ ತರುಣರು ಬೆಂಗಳೂರಿನ ರಾಮಕೃಷ್ಣ ಲಾಡ್ಜ್‌ನಲ್ಲಿ ಎಂ.ಡಿ. ನಂಜುಂಡಸ್ವಾಮಿಯವರ ಜೊತೆ ಸೇರಿ ರೂಪಿಸುತ್ತಿದ್ದ ಕರಪತ್ರ, ಪ್ರತಿಭಟನೆಗಳು; ದಲಿತ ಸಂಘರ್ಷ ಸಮಿತಿ, ರೈತಸಂಘ, ಕಮ್ಯುನಿಸ್ಟ್ ಪಕ್ಷಗಳ ಶಿಬಿರಗಳು, ಕಮ್ಮಟಗಳು; ಗಂಭೀರವಾದ ಸಾಹಿತ್ಯ-ಸಾಂಸ್ಕೃತಿಕ ಕಮ್ಮಟಗಳು; ಬಯಲು ಬಳಗ, ಜಂಗಮ ಕಲೆಕ್ಟಿವ್? ಇವೆಲ್ಲವೂ ನಮ್ಮ ಕಾಲದ ಅನುಭವಮಂಟಪದ ವಿವಿಧ ರೂಪಗಳೇ. ಅಷ್ಟೇ ಯಾಕೆ, ನಿಮ್ಮೂರಿನಲ್ಲಿ ಗೆಳೆಯ, ಗೆಳತಿಯರು ಸೇರಿ ಮುಕ್ತವಾಗಿ ಚರ್ಚಿಸುವ ಸಣ್ಣಪುಟ್ಟ ವೇದಿಕೆಗಳೂ ಕೂಡ ಅನುಭವ ಮಂಟಪಗಳೇ ತಾನೆ?