ಡಿ. ಆರ್. ನಾಗರಾಜ್: ಬೌದ್ಧಿಕ ಪಯಣದ ಆರಂಭ

ಕನ್ನಡದ ಧೀಮಂತ ಚಿಂತಕ
ಡಿ.ಆರ್. ನಾಗರಾಜ್ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಬರೆದ ವೈಯಕ್ತಿಕ-ಸಾಂಸ್ಕೃತಿಕ ಟಿಪ್ಪಣಿಗಳಲ್ಲಿ ಅವರ ಅಪೂರ್ವ ಸಿದ್ಧತೆ, ಪರಿಶ್ರಮ ಹಾಗೂ ಅವರು ಮುಂದೆ ಹಿಡಿಯಲಿದ್ದ ದಿಕ್ಕುಗಳನ್ನು ಕುರಿತ ಕುತೂಹಲಕರ ಹೊಳಹುಗಳಿವೆ...
ಕನ್ನಡದ ಶ್ರೇಷ್ಠ ಸಂಸ್ಕೃತಿ ಚಿಂತಕ-ವಿಮರ್ಶಕರ ಸಾಲಿನಲ್ಲಿ ಮುಂಚೂಣಿ ಹೆಸರಾಗಿರುವ ಡಿ.ಆರ್. (20 ಫೆಬ್ರವರಿ 1954-12 ಆಗಸ್ಟ್ 1998) ನಮ್ಮೊಡನೆ ಇದ್ದಿದ್ದರೆ ಫೆಬ್ರವರಿ 20ಕ್ಕೆ ಅವರಿಗೆ ಎಪ್ಪತ್ತೊಂದು ತುಂಬುತ್ತಿತ್ತು. ಹಿರಿಯ ಮಿತ್ರರಾದ ಅಗ್ರಹಾರ ಕೃಷ್ಣಮೂರ್ತಿಯವರು ಕೊಟ್ಟ ಡಿ.ಆರ್. ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು ಹೊಸ ತಲೆಮಾರುಗಳಲ್ಲಿ ಹೊಸ ಪ್ರೇರಣೆಗಳನ್ನು ಹುಟ್ಟಿಸಬಲ್ಲವು; ಈ ಟಿಪ್ಪಣಿಗಳಿಂದ ಕೆಲವನ್ನು ಇಲ್ಲಿ ಆಯ್ದು ಕೊಟ್ಟಿರುವೆ.
ಡಿ. ಆರ್. ನಾಗರಾಜ್ 1974ರಲ್ಲಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಆ ವರ್ಷದ ತಮ್ಮ ಓದು, ಬರಹ, ಚಿಂತನೆ, ಕ್ರಿಯೆ, ತಲ್ಲಣಗಳನ್ನು ದಾಖಲಿಸಿರುವ ಟಿಪ್ಪಣಿಗಳಿವು. ಆಗ ಡಿ.ಆರ್. ಬೆಂಗಳೂರಿಗೆ 40 ಕಿಲೋಮೀಟರ್ ದೂರವಿರುವ ದೊಡ್ಡಬಳ್ಳಾಪುರದಿಂದ ನಿತ್ಯ ರೈಲಿನಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು; ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎರಡನೇ ಎಂ.ಎ. ಓದುತ್ತಿದ್ದರು. ಹದಿಹರೆಯದಲ್ಲೇ ಉತ್ತಮ ಸಾಹಿತ್ಯ ಕೃತಿಗಳ ಸಂಗದಲ್ಲಿದ್ದ ಡಿ.ಆರ್. ನಿತ್ಯದ ರೈಲು ಪ್ರಯಾಣವನ್ನು ಗಂಭೀರ ಓದಿನ ಸಮಯವನ್ನಾಗಿಸಿಕೊಂಡರು. ಈ ಪಯಣದಲ್ಲಿ ಅಸಲಿ ಗ್ರಾಮೀಣ ಭಾರತವನ್ನು ಕಂಡ ಡಿ.ಆರ್. ಟಿಪ್ಪಣಿ: ‘ಇಲ್ಲಿ ಕಾಣುವ ಪ್ರತಿಯೊಬ್ಬರೂ ಇಂಡಿಯಾದ ಅಗಾಧ ದಾರಿದ್ರ್ಯದ ಅಸ್ಥಿಪಂಜರವಾಗಿ ಕಾಣುತ್ತಾರೆ’.
ಕತೆಗಾರ ಕರಿಗೌಡ ಬೀಚನಹಳ್ಳಿ ಒಮ್ಮೆ ಹೇಳಿದಂತೆ,
‘‘ಡಿ.ಆರ್. ಕೆಲವೊಮ್ಮೆ ಬೆಂಗಳೂರಿನ ಬಂಡಿಶೇಷಮ್ಮ ಹಾಸ್ಟೆಲಿನಲ್ಲಿ ಗೆಳೆಯನೊಬ್ಬನಿಗೆ ನಿಗದಿಯಾಗಿದ್ದ
ರೂಮಿನಲ್ಲೋ, ಕಮ್ಯುನಿಸ್ಟರ ‘ಕೆಂಬಾವುಟ’ ಕಚೇರಿಯಲ್ಲೋ ಮಲಗುತ್ತಾ, ಓದುತ್ತಾ, ಬರೆಯುತ್ತಾ ಬೆಳೆದರು.’’ ಡಿ.ಆರ್. ಟಿಪ್ಪಣಿಗಳು ಸೂಚಿಸುವಂತೆ ಆಗ ಅವರ ವ್ಯಕ್ತಿತ್ವದಲ್ಲಿ ಪರಿಶ್ರಮ, ಬೌದ್ಧಿಕ ಕಾಳಜಿ, ಸಾಮಾಜಿಕ ಜವಾಬ್ದಾರಿ, ದಕ್ಷತೆಯ ಹುಡುಕಾಟ ಎಲ್ಲವೂ ವಿಕಾಸಗೊಳ್ಳುತ್ತಿದ್ದವು.
ಈ ಡೈರಿಯ ಪುಟವೊಂದರ ಮೇಲ್ಭಾಗದಲ್ಲಿ ತಿದ್ದಿ ಬರೆದ ಕಮ್ಯುನಿಸ್ಟ್ ಪಕ್ಷದ ಕುಡುಗೋಲು- ಸುತ್ತಿಗೆ, ಕುಡುಗೋಲು-ತೆನೆಗಳ ಚಿಹ್ನೆಗಳಿವೆ. ಲೆನಿನ್, ಕಾರ್ಲ್ ಮಾರ್ಕ್ಸ್ ಉಲ್ಲೇಖಗಳು, ಕಮ್ಯುನಿಸ್ಟ್ ಪರಿಭಾಷೆಗಳು ಈ ಟಿಪ್ಪಣಿಗಳಲ್ಲಿವೆ. ಎಂ.ಡಿ. ನಂಜುಂಡಸ್ವಾಮಿ ಮೊದಲಾದವರು ಹುಟ್ಟು ಹಾಕಿದ್ದ ‘ಸಮಾಜವಾದಿ ಯುವಜನ ಸಭಾ’ (ಸ.ಯು.ಸ.) ಕೂಡ ಡಿ.ಆರ್. ಪ್ರಜ್ಞೆಯನ್ನು ರೂಪಿಸಿದಂತಿದೆ. ಮೈಸೂರಿನಲ್ಲಿ ನಡೆದ ‘ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ದ ಸಭೆಗೆ ಅಪ್ಪನಿಂದ ಹಣ ಪಡೆದು ಹೋದ ಡಿ.ಆರ್. ಬರೆಯುತ್ತಾರೆ: ‘ಕುವೆಂಪು ಭಾಷಣ ನಿಜಕ್ಕೂ ಐತಿಹಾಸಿಕ ಭಾಷಣ. ಯೌವನದಲ್ಲಿ ಅವರಲ್ಲಿ ಜಾಗೃತವಾಗಿದ್ದ ಶೂದ್ರಪ್ರಜ್ಞೆ ಮತ್ತೆ ಅವರಲ್ಲಿ ಚೈತನ್ಯ ಉಕ್ಕಿಸುತ್ತಿದೆ’; ‘ಇನ್ನು ಜಿ.ಎಸ್. ಶಿವರುದ್ರಪ್ಪನವರ ಭಾಷಣ. ಇವರಿಗೆ ಯಾವ ತಾತ್ವಿಕ ಹಕ್ಕು ಇದೆ?’ ‘ದೇವನೂರರ ಪರಿಚಯ ಆಯಿತು, ನಿಜಕ್ಕೂ ಗಟ್ಟಿ ಮನುಷ್ಯ.’
ಒಕ್ಕೂಟದ ಸಭೆ ಡಿ.ಆರ್. ಕ್ರಿಯಾಶೀಲರಾಗಲು ಪ್ರೇರಕವಾಗುತ್ತದೆ. ‘‘ಮೈಸೂರಿನಲ್ಲಿ ನಾನೊಂದು ಅನಿರೀಕ್ಷಿತ ತೀರ್ಮಾನ ಘೋಷಿಸಿದೆ. ನಮ್ಮೂರಿನಲ್ಲಿ ಸಮಾಜವಾದಿ ಯುವಜನ ಸಭಾದ ಶಾಖೆಯೊಂದನ್ನು ತೆರೆಯುವುದು. ದೊಡ್ಡಬಳ್ಳಾಪುರ ನಿಂತ ನೀರಾಗಿದೆ.
ಆ ಕೊಳಚೆಯ ಅಸಹ್ಯ ವಾತಾವರಣದಿಂದ ಹೊರಬರುವ ಆಸೆ ಒಬ್ಬಿಬ್ಬರಿಗಾದರೂ ಇದ್ದೀತು. ಅಸ್ತಿತ್ವವಾದಿಗಳ ತರಹ ಮೊದಲು ‘ತೊಡಗುವುದು’. ನಂತರ ನೋಡೋಣ. ಯಾವಾಗಲೂ ಮೊದಲು ಸ್ಥಿತಿ ನಿರ್ಮಾಣ ಆಗಬೇಕು. ನಂತರ ತತ್ವ.’’
ಹದಿಹರೆಯದ ಡಿ.ಆರ್. ಪಶ್ಚಿಮದ ಸಾಹಿತ್ಯ ವಿಮರ್ಶೆಯ ದೊಡ್ಡ ಪಾಠಗಳನ್ನು ಕಲಿಯುತ್ತಲೇ ವಿಮರ್ಶೆ, ಸಂಶೋಧನೆಗಳ ಜಾಡುಗಳ ಹುಡುಕಾಟದಲ್ಲಿದ್ದರು; ಈ ಘಟ್ಟದ ಕೆಲವು ಟಿಪ್ಪಣಿಗಳು:
‘ಭೈರಪ್ಪ ಒಬ್ಬ ಜನಪ್ರಿಯ ಕಾದಂಬರಿಕಾರ’ ಎನ್ನುತ್ತಾ,
ಡಿ.ಆರ್. ಜನಪ್ರಿಯ ಸಾಹಿತ್ಯ ಕುರಿತು ಮಾಡುವ ವಿಶ್ಲೇಷಣೆ: 1. ಒಬ್ಬ ಲೇಖಕ ತೀರ ಸುಲಭವಾಗಿ ಜನಪ್ರಿಯನಾದ ಎಂದರೆ ಆತ ಹೊಸ ರುಚಿಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕಿಂತ ಒಗ್ಗಿರುವ ರುಚಿಗೇ ಬರೆಯುತ್ತಿದ್ದಾನೆ. 2. ಹೀಗೆ ಜನಪ್ರಿಯವಾಗುವ ಕೃತಿಗಳು ಆ ಜನಾಂಗದ ಮೇಲ್ಪದರದ ಅಭಿರುಚಿಯನ್ನು, ಆಲೋಚನಾ ಕ್ರಮವನ್ನು ಬಿಂಬಿಸುತ್ತವೆ; ಇವು ಸರಳ ಮತ್ತು ಮಾದಕವಾಗಿರುತ್ತವೆ.’
‘ಅಡಿಗರು ನಿಜಕ್ಕೂ ರಿಲಿಜಿಯಸ್ ಆಗಿದ್ದಾರೆಯೇ? ಸಾಮಾಜಿಕ ಪ್ರಜ್ಞೆ ಹೆಚ್ಚು ವ್ಯಕ್ತವಾಗುವುದು ಅವರ ಬೇರೆ ಬರಹಗಳಲ್ಲೇ ಅಲ್ಲವೆ? ಹಾಗಿದ್ದರೂ, ಕಾವ್ಯವನ್ನು ಸೃಷ್ಟಿಸುವ ಅಡಿಗ;
ರಾಜಕೀಯದಲ್ಲಿ ಸಮುದಾಯ ವಿರೋಧಿ ಅಡಿಗ -ಇವರಿಬ್ಬರೂ ಬೇರೆಬೇರೆ ಏನಲ್ಲವಲ್ಲ?’; ‘ಅಡಿಗ ರಿವೈವಲಿಸ್ಟ್ ಮನೋಧರ್ಮದ ಕವಿ; ಕಳೆದುದರ ಬಗ್ಗೆ ಹಂಬಲವಿದೆ. ಹಾಗೆಯೇ ಸಮಕಾಲೀನ ಸ್ಥಿತಿಯ ಬಗ್ಗೆ ನಿಷ್ಠುರವಾದ ವ್ಯಂಗ್ಯವಿದೆ.’
ಬೇಂದ್ರೆಯವರ ‘ಜೋಗಿ’ ಪದ್ಯ ಬರೀ ಮಣ್ಣಿನ ಪದಗಳಿಂದಲೇ, ಜಾನಪದ ಬಂಧದಿಂದಲೇ ‘ಅಮೂರ್ತ’ದೊಡನೆ ಸಂಬಂಧ ಸ್ಥಾಪಿಸುವ ರೀತಿಯನ್ನು, ಭಾಷೆಯ ‘ಒಳವಿನ್ಯಾಸ’ವನ್ನು ಡಿ.ಆರ್. ಗಮನಿಸುತ್ತಾರೆ. ಬೇಂದ್ರೆ ಬೂಸಾ ಚರ್ಚೆಯನ್ನು ಗ್ರಹಿಸದೆ ಉಡಾಫೆಯಿಂದ ಮಾತಾಡಿದಾಗ ಡಿ.ಆರ್. ಪ್ರತಿಕ್ರಿಯೆ: ‘ಅವರ ಕಾವ್ಯ ಸೃಷ್ಟಿಯ ಬಗ್ಗೆ ಅಪಾರ ಗೌರವವಿದೆ; ಆದರೆ ಅವರ ಕವಿತೆ ಮತ್ತು ಆಲೋಚನೆ ಎರಡೂ ಭಿನ್ನವಾದುದೇ? ಶೂದ್ರ ಸಮುದಾಯದ ಸಂಪರ್ಕವಿಲ್ಲದಿದ್ದ ವೈದಿಕ ಸಾಹಿತ್ಯ ಬೂಸಾವಲ್ಲದೆ ಮತ್ತೇನು?’
‘ಆತ್ಮರತ ಪ್ರವೃತ್ತಿಯ ಅನಂತಮೂರ್ತಿ; ಸಮಾಜವನ್ನು ಭಾಷೆಯಲ್ಲಿ ಪುನರ‌್ರಚಿಸುವ ತೇಜಸ್ವಿ- ಇವರ ನಡುವಿನ ವ್ಯತ್ಯಾಸ ಮಹತ್ವದ್ದು.’ ‘ಸಂಸ್ಕಾರದ ಪ್ರಾಣೇಶಾಚಾರ್ಯನ ಯೋಚನೆಗಳೆಲ್ಲ ಅಸ್ತಿತ್ವವಾದದ ತದ್ರೂಪುಗಳು. ಅದಕ್ಕೆಂದೇ ಅವನು ಬ್ರಾಹ್ಮಣ ಅಗ್ರಹಾರದ ನಡುವೆ ಕಿತ್ತಿಟ್ಟ ಪಾಶ್ಚಾತ್ಯ ತತ್ವಶಾಸ್ತ್ರಜ್ಞನಾಗುತ್ತಾನೆ.’ ‘‘ತೇಜಸ್ವಿಯವರ ‘ನಿಗೂಢ ಮನುಷ್ಯರು’ ಯಶಸ್ವೀ ಕತೆ ಎನಿಸಿದರೂ ಅದರ ಯಶಸ್ಸಿನ ಕಾರಣಗಳ ಬಗ್ಗೆ ಮಾತ್ರ ಅನುಮಾನ ಬರುತ್ತಿದೆ.’’
‘ಮಾರ್ಕ್ಸ್‌ವಾದ, ಲೋಹಿಯವಾದದ ಬಗೆಗೆ ತಾಕಲಾಟ’ದಲ್ಲಿದ್ದ ವಿದ್ಯಾರ್ಥಿ ಡಿ.ಆರ್. ‘‘ಲೋಹಿಯರ ‘ಮಾರ್ಕ್ಸ್ ಗಾಂಧಿ ಸಮಾಜವಾದ’ ಪುಸ್ತಕ ಮತ್ತೆ ಲೋಹಿಯ ಕಂಬಕ್ಕೆ ನನ್ನ ಕಟ್ಟಿತು’’ ಎಂದು ಬರೆಯುತ್ತಾರೆ. ಕಮ್ಯುನಿಸಂ ಕಡೆಗೆ ವಾಲುತ್ತಲೇ ಹೀಗೆಂದುಕೊಳ್ಳುತ್ತಾರೆ: ‘ಕಮ್ಯುನಿಸ್ಟನಾದರೆ ಜೀವನದ ಎಷ್ಟೋ ನಿಗೂಢ ಬಾಗಿಲು
ಗಳು ಶಾಶ್ವತವಾಗಿ ಮುಚ್ಚಿ ಹೋಗಿಬಿಡಬಹುದೇನೋ ಎಂಬ ಭಯ ನನ್ನನ್ನು ಕಮ್ಯುನಿಸ್ಟ್ ಆಗಲು ಬಿಟ್ಟುಕೊಟ್ಟಿಲ್ಲ.’
ಕತೆ, ಕಾದಂಬರಿ ಬರೆಯುವ ಕಾತರ ಡಿ.ಆರ್. ಅವರಲ್ಲಿ ಸುಳಿಯುತ್ತದೆ. ಮಿತ್ರ ವಾಸುದೇವಯ್ಯನ ಅನುಭವ ಕೇಳುತ್ತಿರುವಾಗ, ‘ನನ್ನಲ್ಲಿ ಸೃಷ್ಟಿಸುವ ತಾಕತ್ತಿದ್ದರೆ ಈತ ಮಹಾಕೃತಿಯೊಂದರ ಮೂಲದ್ರವ್ಯವಾದಾನು’ ಎನ್ನಿಸುತ್ತದೆ; ವಾಸುವಿನ ಮೂಲಕ ‘ಬರೇ ಅವನ ಕತೆಯಲ್ಲ- ಊರಿನ ಕತೆ, ಅದರ ನೋವು, ನಲಿವನ್ನು ಬಿಡಿಸಬೇಕೆಂಬ ಛಲ ಕೂಡ ಇದೆ. ಆದರೆ ಅದನ್ನು ಛಲ ಎನ್ನಲಾರೆ- ಅದಿಲ್ಲದಿದ್ದರೆ ಸಾಹಿತ್ಯ ಸೃಷ್ಟಿ ಸಾಧ್ಯವೇ ಇಲ್ಲ. ಆ ಛಲ ಬರುವ ತನಕ ಕಾಯುವುದೋ ಅಥವಾ ಕ್ರಿಯೆಯಲ್ಲಿಯೇ ರೂಢಿಸಿಕೊಳ್ಳುವುದೋ?’ ಎಂದುಕೊಳ್ಳುತ್ತಾರೆ. ಮುಂದೊಮ್ಮೆ ‘ನಿಜವಾದ
ಸೋಶಲಿಸ್ಟ್ ಕತೆಗಾರ ನಾನಾಗುತ್ತೇನೆಯೋ ಇಲ್ಲವೋ ನನಗಂತೂ ಅನುಮಾನ ಇದೆ’ ಎಂಬ ಸ್ವಪರೀಕ್ಷೆಯೂ ಇಲ್ಲಿದೆ. ಲಾರೆನ್ಸ್, ಹೆಮಿಂಗ್ವೆ, ಕಾರಂತ ಥರದ ಕಾದಂಬರಿಕಾರರು ಇಪ್ಪತ್ತರ ಹರೆಯದ ಈ ಬುದ್ಧಿಜೀವಿಯನ್ನು ಕತೆಯ ದಿಕ್ಕಿಗೆ ಒಯ್ದರೆ, ಆಲ್ಡಸ್ ಹಕ್ಸ್ಲಿ, ಗುನ್ನರ್ ಮಿರ್ಡಾಲ್, ಲುಕಾಚ್ಸ್, ಸಾರ್ತರ್, ಕ್ರಿಸ್ಟಫರ್ ಕಾಡ್‌ವೆಲ್ ಥರದ ಚಿಂತಕರು ವಿಮರ್ಶೆ, ಸಿದ್ಧಾಂತಗಳೆಡೆಗೆ ಜಗ್ಗುತ್ತಿದ್ದರೇನೋ!
‘ಸ್ಫೂರ್ತಿಗಾಗಿ ಕಾಯುವುದು ಸೋಮಾರಿಗಳ ಕೆಲಸ’ ಎಂದುಕೊಳ್ಳುವ ಡಿ.ಆರ್.ಗೆ, ‘ಒಳ್ಳೆಯ ಮಾನಸಿಕ ಸ್ಥಿತಿ ಇಲ್ಲದಿದ್ದರೆ ಬರೆಯುವ ಗದ್ಯವೂ ಕಚಡಾ’ ಎಂಬುದು ಅರಿವಿಗೆ ಬರುತ್ತದೆ. ‘ವಾಸ್ತವವಾಗಿ ಮೊದಲಿನಿಂದ ಗಂಭೀರ ಅಭ್ಯಾಸಕ್ಕೆ ಹೆಚ್ಚು ಗಮನ ಕೊಟ್ಟಿದ್ದರೆ ಇನ್ನಷ್ಟು ಗಾಢ ವ್ಯಕ್ತಿತ್ವ ಇರುತ್ತಿತ್ತೇನೋ’ ಎನ್ನಿಸುತ್ತದೆ.
ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದ ಕರ್ನಾಟಕದ ತೀವ್ರ ವೈಚಾರಿಕ ಮಂಥನದ ಕಾಲಘಟ್ಟದಲ್ಲಿ ದಾಖಲಾಗುತ್ತಿದ್ದ ಡಿ.ಆರ್. ಟಿಪ್ಪಣಿಗಳು ತಾರುಣ್ಯಕ್ಕೆ ಅಡಿಯಿಡುತ್ತಿರುವ ಕಡು ಜಾಣ ವಿದ್ಯಾರ್ಥಿಯೊಬ್ಬನ ಆಳದ ಹುಡುಕಾಟ, ಗೊಂದಲ, ತಲ್ಲಣ, ಸಾಮರ್ಥ್ಯ ಎಲ್ಲವನ್ನೂ ಸೂಚಿಸುತ್ತವೆ. ನಿಷ್ಠುರ ಸ್ವ-ಟೀಕೆಗಳು, ತಿದ್ದಿಕೊಳ್ಳುವ ಕಾತರಗಳೂ ಇಲ್ಲಿವೆ. ತಾರುಣ್ಯಕ್ಕೆ ಅಡಿಯಿಡುವ ಹೊತ್ತಿಗಾಗಲೇ ಡಿ.ಆರ್.ಗೆ ಇದ್ದ ಕನ್ನಡ ಭಾಷೆಯ ಮೇಲಿನ ಹಿಡಿತ; ಆಲೋಚನೆಗೆ ತಕ್ಕ ನುಡಿಗಟ್ಟು; ತಾತ್ವಿಕ ಪರಿಕಲ್ಪನೆಗಳ ಸ್ಪಷ್ಟತೆ; ನೋಟಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದ ಕ್ರಮ; ಜಗತ್ತಿನ ಹಲವು ದಿಕ್ಕಿನ ಸಾಹಿತ್ಯ, ವಿಮರ್ಶೆ, ಸಿದ್ಧಾಂತಗಳನ್ನು ಗ್ರಹಿಸಲು
ಇಂಗ್ಲಿಷ್ ಭಾಷೆಯನ್ನು ದಕ್ಷವಾಗಿ ಕಲಿಯಲೆತ್ನಿಸುತ್ತಿದ್ದ ರೀತಿ ಇವೆಲ್ಲವೂ ಅವರು ಮುಂದೆ ಗಂಭೀರ
ಪಿಎಚ್.ಡಿ. ಸಂಶೋಧಕರಾಗಲು ನೆರವಾಗಿವೆ. ಕನ್ನಡ ಕಾವ್ಯದ ಆಳವಾದ ಸಂಶೋಧನೆಯಿಂದ ರೂಪುಗೊಂಡ ಅವರ ಅನನ್ಯ ವಿಮರ್ಶಾ ಪುಸ್ತಕ ‘ಶಕ್ತಿ ಶಾರದೆಯ ಮೇಳ’ ದಲ್ಲಿ ಹಲವು ಶಿಸ್ತುಗಳು ಅವರ ಸಾಹಿತ್ಯ ವಿಮರ್ಶೆಗೆ ಒದಗಿ ಬಂದಿರುವುದರ ಹಿಂದಣ ಸಿದ್ಧತೆ, ಪರಿಶ್ರಮಗಳು ಅವರ ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳಲ್ಲಿವೆ.
ತಾವು ತೊಡಗಬಯಸಿದ್ದ ವಿಭಿನ್ನ ಕ್ಷೇತ್ರಗಳ ಬಗ್ಗೆ ಸ್ಪಷ್ಟತೆ ಬೆಳೆಸಿಕೊಳ್ಳಲೆತ್ನಿಸುತ್ತಿದ್ದ ವಿದ್ಯಾರ್ಥಿ ಡಿ.ಆರ್. ಮುಂದಿನ ಎರಡು ದಶಕಗಳಲ್ಲಿ ಈ ಎಲ್ಲ ದಿಕ್ಕುಗಳಲ್ಲಿ ಕವಲಾಗಿ ಅಧ್ಯಯನ ಮಾಡಿದರು; ಅವನ್ನೆಲ್ಲ ಬೆಸೆದು ದೊಡ್ಡ ಲೇಖಕರಾದರು. ಡಿ.ಆರ್. ಮುಂದೆ ರೂಪಿಸಿಕೊಂಡ ನಿರ್ವಸಾಹತೀಕರಣ ಥಿಯರಿ, ಜಾಗತೀಕರಣ ಕುರಿತ ಚಿಂತನೆಗಳನ್ನು ಬಿಟ್ಟರೆ ಅವರ ಬೌದ್ಧಿಕ ಜೀವನದ ಉಳಿದೆಲ್ಲ ಬಗೆಯ ವಿಮರ್ಶೆ, ಸಾಮಾಜಿಕ ವಿಶ್ಲೇಷಣೆಗಳ ಬೇರುಗಳೂ ಅವರ ಆರಂಭಿಕ ಟಿಪ್ಪಣಿಗಳಲ್ಲಿ ಕಾಣುತ್ತವೆ. ಇಪ್ಪತ್ತರ ವಯಸ್ಸಿಗೆ ಇಂಥ ಸಿದ್ಧತೆಯ ಹಾದಿಯಲ್ಲಿದ್ದ
ಡಿ.ಆರ್. ನಲವತ್ತನೆಯ ವಯಸ್ಸಿಗಾಗಲೇ ಭಾರತದ ಪ್ರಖರ ಚಿಂತಕರಾಗಿ ವಿಕಾಸಗೊಂಡಿದ್ದರು. ಹದಿಹರೆಯದಿಂದ ತಾರುಣ್ಯಕ್ಕೆ ಅಡಿಯಿಡುತ್ತಿದ್ದ ಕಾಲದ ಡಿ.ಆರ್. ಬೌದ್ಧಿಕ ಪಯಣ ಎಲ್ಲ ಕಾಲದ ಸೂಕ್ಷ್ಮ ಜೀವಿಗಳಿಗೂ ನಿತ್ಯ ಸ್ಫೂರ್ತಿಯಂತಿದೆ.