ಮೂಕನಾಯಕ ಮಹಾನಾಯಕನಾದ ಕತೆ

1920ರಲ್ಲಿ ಅಂಬೇಡ್ಕರ್ ಆರಂಭಿಸಿದ ‘ಮೂಕನಾಯಕ’ದ ಮೊದಲ ಸಂಚಿಕೆಯ ಮುಖಪುಟದಲ್ಲಿ ಧ್ಯೇಯವಾಕ್ಯವಾಗಿ ಕವಿ ತುಕಾರಾಮರ ‘ಅಭಂಗ್’ ಇತ್ತು. ‘ಭಂಗ’ವಾಗದ, ತಡೆಯಿಲ್ಲದ, ನಿರಂತರವಾಗಿ ಹರಿಯುವ ಕಾವ್ಯವನ್ನು ಮರಾಠಿ ‘ಅಭಂಗ್’ ಪ್ರತಿನಿಧಿಸುತ್ತದೆ. ತುಕಾರಾಮರ ಅಭಂಗ್ನ ಸರಳಾನುವಾದ:
ನಾನೇಕೆ ನಾಚಿಕೆ ಪಡಬೇಕು?
ನಾ ಹಿಂಜರಿಕೆ ಬದಿಗಿಟ್ಟು ಬಾಯಿ ತೆರೆದಿರುವೆ.
ಈ ಭುವಿಯಲ್ಲಿ ಮೂಕ ಪ್ರಾಣಿಗಳನ್ನು ಯಾರೂ ಗಮನಿಸುವುದಿಲ್ಲ
ಅತಿ ವಿನಯದಿಂದ ನಿಜವಾದ ಒಳಿತನ್ನು ಯಾರೂ ಸಾಧಿಸುವುದಿಲ್ಲ.
ಮೊನ್ನೆ ಜನವರಿ 31ರಂದು ‘ಮೂಕನಾಯಕ’ ಪತ್ರಿಕೆಯ ಜನ್ಮದಿನ ಎಂದು ಗೆಳೆಯನೊಬ್ಬ ನೆನಪಿಸಿದಾಗ, ಅಶೋಕ್ ಗೋಪಾಲ್ ಬರೆದ ‘ಎ ಪಾರ್ಟ್ ಅಪಾರ್ಟ್: ದ ಲೈಫ್ ಆ್ಯಂಡ್ ಥಾಟ್ ಆಫ್ ಬಿ. ಆರ್. ಅಂಬೇಡ್ಕರ್’ ಪುಸ್ತಕದಲ್ಲಿ ಹಿಂದೆ ಗುರುತು ಹಾಕಿದ್ದ ಪುಟಗಳತ್ತ ಕಣ್ಣಾಡಿಸಿದೆ. ಆ ಕಾಲಘಟ್ಟದಲ್ಲಿ ಆಡಬೇಕಾದ ಮಾತುಗಳನ್ನು ಆಡಲೇಬೇಕಾಗಿದ್ದ ಅಂಬೇಡ್ಕರ್, ಕವಿ ತುಕಾರಾಮರ ಸಾಲುಗಳನ್ನು ತಮ್ಮ ಪತ್ರಿಕೆಯ ಧ್ಯೇಯವಾಕ್ಯವಾಗಿ ಆರಿಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಆ ಕಾಲದಲ್ಲಷ್ಟೇ ಅಲ್ಲ, ಎಲ್ಲ ಕಾಲಕ್ಕೂ, ಎಲ್ಲರಿಗೂ ಪ್ರೇರಣೆ ನೀಡಬಲ್ಲ ಮಾತುಗಳಿವು.
ಕೊಲ್ಹಾಪುರದ ಶಾಹು ಮಹಾರಾಜರಿಗೆ ಅಂಬೇಡ್ಕರ್ ಅವರ ವಿದ್ವತ್ತು ಹಾಗೂ ಅಸ್ಪಶ್ಯರ ಬಗೆಗಿನ ಕಾಳಜಿ ಕುರಿತು ಅಪಾರ ಗೌರವವಿತ್ತು. 1919ರಲ್ಲಿ ಒಂದು ದಿನ ಶಾಹು ಮಹಾರಾಜರು ಅಂಬೇಡ್ಕರ್ ಅವರ ಮನೆಗೆ ಬಂದು, ಪತ್ರಿಕೆಯೊಂದನ್ನು ಆರಂಭಿಸಲು ಅಂಬೇಡ್ಕರ್ಗೆ
2,500 ರೂಪಾಯಿಗಳನ್ನು ಕೊಟ್ಟರು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಆಗ ಅಂಬೇಡ್ಕರ್ ಕೆಲಸ ಮಾಡುತ್ತಿದ್ದ ಕಾಲೇಜನ್ನು ಸರಕಾರ ನಡೆಸುತ್ತಿದ್ದುದರಿಂದ ಅವರ ನಂಬಿಕಸ್ಥ ಗೆಳೆಯ ಪಾಂಡುರಂಗ ಭಾಟ್ಕರ್ ‘ಮೂಕನಾಯಕ’ದ ಸಂಪಾದಕರಾದರು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತಿದ್ದ ಎಂಟು ಪುಟಗಳ ಈ ಟ್ಯಾಬ್ಲಾಯ್ಡ್ನ ವಾರ್ಷಿಕ ಚಂದಾ 2ರೂ 25 ಪೈಸೆ. ಐದನೇ ಸಂಚಿಕೆಯಲ್ಲಿ ಗೋದ್ರೇಜ್ ಆ್ಯಂಡ್ ಬಾಯ್ಸ್ ಜಾಹೀರಾತು ಸಿಕ್ಕಿತು; ಆಗಾಗ ಕೊಲ್ಹಾಪುರದಲ್ಲಿ ಫುಟ್ವೇರ್ ಅಂಗಡಿ ನಡೆಸುತ್ತಿದ್ದ ಕುಟುಂಬದ ದತ್ತೋಬಾ ಪವಾರ್ ಅವರ ಜಾಹೀರಾತು. ಇಷ್ಟೇ ಈ ಪತ್ರಿಕೆಯ ಜಾಹೀರಾತು ಆದಾಯ. ಬಹುತೇಕ ಬರಹಗಳನ್ನು ಅಂಬೇಡ್ಕರ್ ಅವರೇ ಬರೆಯುತ್ತಿದ್ದರು.
ಮೂವತ್ತರ ಹರೆಯದ ಅಂಬೇಡ್ಕರ್ ತಮ್ಮ ಮುಂದಿನ ಮುಖ್ಯ ಗುರಿ ಭಾರತೀಯ ಸಮಾಜ ಹಾಗೂ ಭಾರತೀಯ ಮನಸ್ಸನ್ನು ಆಳುತ್ತಿದ್ದ ಜಾತಿಪದ್ಧತಿಯ ನಿರ್ಮೂಲ ಎಂಬುದನ್ನು ಮೊದಲ ಮುಖಪುಟ ಬರಹದಲ್ಲೇ ಖಚಿತವಾಗಿ ಸೂಚಿಸಿದ್ದರು: ‘ಯುರೋಪಿಯನ್ ಒಬ್ಬನನ್ನು ‘ನೀನು ಯಾರು?’ ಎಂದು ಕೇಳಿದರೆ, ‘ನಾನು ಇಂಗ್ಲಿಷ್’, ‘ನಾನು ಜರ್ಮನ್’, ‘ನಾನು ಫ್ರೆಂಚ್’, ‘ನಾನು ಇಟಾಲಿಯನ್’ ಈ ಥರದ ಉತ್ತರ ಸಾಕಾಗುತ್ತದೆ. ಆದರೆ ಹಿಂದೂಗಳ ರೀತಿಯೇ ಬೇರೆ. ‘ನಾನು ಹಿಂದೂ’ ಎಂದರೆ ಅವರಿಗೆ ಸಾಕಾಗುವುದಿಲ್ಲ. ಇಲ್ಲಿ ಒಬ್ಬ ವ್ಯಕ್ತಿ ಜಾತಿಯನ್ನು ಖಚಿತವಾಗಿ ಹೇಳಲೇಬೇಕು. ಅಂದರೆ, ಹಿಂದೂವೊಬ್ಬ ತನ್ನ ಮಾನವ ಐಡೆಂಟಿಟಿ ಯಾವುದು ಎಂದು ಹೇಳಬೇಕೆಂದರೆ ಪ್ರತೀ ಹಂತದಲ್ಲೂ ಅವನು ತನ್ನ ಅಸಮಾನ ಸ್ಥಾನವನ್ನು ಹೇಳುತ್ತಲೇ ಇರಬೇಕಾಗುತ್ತದೆ.’ ‘ಅಂಬೇಡ್ಕರ್ ಅವರ ಒಂದು ಪ್ರಖ್ಯಾತ ರೂಪಕಾತ್ಮಕ ಹೇಳಿಕೆ ಕೂಡ ಈ ಸಂಚಿಕೆಯಲ್ಲೇ ಪ್ರಕಟವಾಯಿತು: ‘ಹಿಂದೂ ಸಮಾಜವೆನ್ನುವುದು ಮೆಟ್ಟಿಲುಗಳಿಲ್ಲದ, ಪ್ರವೇಶದ್ವಾರವಿಲ್ಲದ ಹಲವು ಅಂತಸ್ತುಗಳ ಗೋಪುರ. ಆಯಾ ಅಂತಸ್ತಿನಲ್ಲಿರುವವರು ಅಲ್ಲೇ ಸಾಯುವರು.’
ಆನಂತರ, 1920ರ ಫೆಬ್ರವರಿ 18ರ ಸಂಚಿಕೆಯಲ್ಲಿ ಬಾಲಗಂಗಾಧರ ತಿಲಕರ ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂಬ ಜನಪ್ರಿಯ ಘೋಷಣೆಯನ್ನು ಅಂಬೇಡ್ಕರ್ ದೊಡ್ಡ ಮಟ್ಟದಲ್ಲೇ ಎದುರಿಸಿದರು. ಮರಾಠಿ ಭಾಷೆಯಲ್ಲಿ ಹೊರಹೊಮ್ಮಿದ್ದ ತಿಲಕರ ಘೋಷಣೆಯನ್ನು ವಿಗ್ರಹಭಂಜಕ ಅಂಬೇಡ್ಕರ್ ಮರಾಠಿಯಲ್ಲೇ ಮುಖಾಮುಖಿಯಾಗಿದ್ದರು: ‘ಸ್ವರಾಜ್ಯ ಯಾರ ಕೈಗೆ ಹೋಗುತ್ತದೆ ಹಾಗೂ ಸ್ವರಾಜ್ಯದ ಉದ್ದೇಶವೇನು ಎಂಬುದು ಗೊತ್ತಾಗುವವರೆಗೂ ನಾವು ಈ ಬೇಡಿಕೆಗೆ ದನಿಗೂಡಿಸುವುದಿಲ್ಲ’ ಎಂದು ಅಂಬೇಡ್ಕರ್ ಬರೆದರು.
ಅಷ್ಟೊತ್ತಿಗಾಗಲೇ ಅಂಬೇಡ್ಕರ್ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾ ನಿಲಯದಲ್ಲಿ ಒಂದು ಘಟ್ಟದ ವಿದ್ಯಾಭ್ಯಾಸ ಮುಗಿಸಿ ಮರಳಿ ಭಾರತಕ್ಕೆ ಬಂದಿದ್ದರು; ತಮ್ಮ ಬರಹಗಳನ್ನು ಬಹುತೇಕ
ಇಂಗ್ಲಿಷ್ನಲ್ಲೇ ಬರೆಯುತ್ತಿದ್ದರು. ಅವರು ‘ಮೂಕನಾಯಕ’ದಲ್ಲಿ ಬರೆದ ಬರಹಗಳನ್ನು ಮೊದಲು ಇಂಗ್ಲಿಷಿ ನಲ್ಲಿ ಬರೆದು, ನಂತರ ಮರಾಠಿಗೆ ಅನುವಾದಿಸಿ ಕೊಡುತ್ತಿದ್ದರು ಎಂದು ಅಂಬೇಡ್ಕರ್ ಜೀವನಚರಿತ್ರೆಕಾರ ಖೈರ್ಮೋಡೆ ಹೇಳುತ್ತಾರೆ. ಮುಂದೆ 1927ರ ಹೊತ್ತಿಗೆ ಮರಾಠಿ ಸಾಹಿತ್ಯವನ್ನು ಆಳವಾಗಿ ಓದಿಕೊಂಡ ಅಂಬೇಡ್ಕರ್ ತಮ್ಮ ಮರಾಠಿ ಭಾಷೆಯನ್ನು ಹೊಸದಾಗಿ ಸಜ್ಜು ಗೊಳಿಸಿಕೊಂಡರು; ಮರಾಠಿಯಲ್ಲೇ ಬರೆಯಲು ಶುರುಮಾಡಿದರು. ಇದು ಮರಾಠಿ ಭಾಷೆಯನ್ನಾಡುವ ಎಲ್ಲ ಜಾತಿ, ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು ಅವರಿಗೆ ನೆರವಾಯಿತು. ಜೀವಮಾನವೆಲ್ಲ ಕರ್ನಾಟಕದಲ್ಲಿದ್ದರೂ, ಕನ್ನಡದಲ್ಲಿ ಬರೆಯುವುದು ಕಷ್ಟ ಎನ್ನುವ
ಇಂಗ್ಲಿಷ್ ಪರಪುಟ್ಟರು-ಪ್ಯಾರಾಸೈಟುಗಳು- ಅಂಬೇಡ್ಕರ್
ಇಂಗ್ಲಿಷ್ನಂತೆ ಮರಾಠಿಯಲ್ಲೂ ದಕ್ಷವಾಗಿ ಬರೆಯತೊಡಗಿದ ಈ ಘಟ್ಟದಿಂದ ಮುಖ್ಯ ಪಾಠವೊಂದನ್ನು ಕಲಿಯುವ ಅಗತ್ಯವಿದೆ. ಹಾಗೆಯೇ, ಬರೆವ ಕಾತರವಿದ್ದರೂ ಬರವಣಿಗೆ ಆರಂಭಿಸಲು ಜೀವಮಾನವಿಡೀ ಹಿಂಜರಿಯುವವರಿಗೂ ಅಂಬೇಡ್ಕರ್ ಅವರ ಈ ಶಿಸ್ತುಬದ್ಧ ಸ್ವ-ತರಬೇತಿಯಲ್ಲಿ ಪಾಠಗಳಿವೆ.
ಲೇಖಕನೊಬ್ಬ ಒಂದು ಬೃಹತ್ ಸಮುದಾಯದ ಭಾಷೆಯನ್ನು ಮಾತಿನಲ್ಲೂ ಬರಹದಲ್ಲೂ ಬಳಸಲೇಬೇಕು ಎನ್ನುವ ಪ್ರಾಥಮಿಕ ಅರಿವು, ಜವಾಬ್ದಾರಿಗಳಿಂದ ಅಂಬೇಡ್ಕರ್ ತಮ್ಮನ್ನು ತಾವು ಮರಾಠಿ ಭಾಷೆಯ ಲೇಖಕನಾಗಿ ತಯಾರು ಮಾಡಿಕೊಂಡ ಈ ರೀತಿ ಅನನ್ಯವಾಗಿದೆ. ಸಮುದಾಯವನ್ನು ತಿದ್ದುವ, ಮುನ್ನಡೆಸುವ ಆಳದ ಜವಾಬ್ದಾರಿಯಿಂದ ಮೂವತ್ತರ ಹರೆಯದ ನಂತರ ಅಂಬೇಡ್ಕರ್ ಮೈಗೂಡಿಸಿಕೊಂಡ ಹೊಸ ಕಲಿಕೆ ಇದು. ಮೂಕ ಸಮುದಾಯಕ್ಕೆ ದನಿ ಕೊಡುವ ನಾಯಕನಾಗಲು ಹೊರಟ ಪತ್ರಿಕೆಯೊಂದರ ಅನುಭವದ ಮೂಲಕ ಮೂಕ ಸಮುದಾಯದ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ಅಂಬೇಡ್ಕರ್ ಅವರ ಮರಾಠಿ ಬರವಣಿಗೆಯ ಕಲಿಕೆ ಎಲ್ಲ ಕಾಲದ ಚಿಂತಕ-ನಾಯಕರಿಗೂ ಅಪೂರ್ವ ಮಾದರಿಯಾಗಿದೆ.
‘ಮೂಕನಾಯಕ’ ಶುರುವಾದ ಕೆಲವು ತಿಂಗಳ ನಂತರ ವಿದ್ಯಾಭ್ಯಾಸ ಮುಂದುವರಿಸಲು ಅಂಬೇಡ್ಕರ್ ಲಂಡನ್ಗೆ ಹೊರಟರು. 1923ರಲ್ಲಿ ಅವರು ಮರಳಿ ಬರುವ ಹೊತ್ತಿಗೆ ‘ಮೂಕನಾಯಕ’ ನಿಂತುಹೋಗಿತ್ತು. ಮಹಾಡ್ ಸತ್ಯಾಗ್ರಹದ ಹೊತ್ತಿಗೆ ಅವರ ಮತ್ತೊಂದು ಪತ್ರಿಕೆ ‘ಬಹಿಷ್ಕೃತ ಭಾರತ’ ಪ್ರಕಟವಾಗತೊಡಗಿತು. ನಂತರ ‘ಜನತಾ’, ‘ಪ್ರಬುದ್ಧ ಭಾರತ’ ಪತ್ರಿಕೆಗಳನ್ನು ಅಂಬೇಡ್ಕರ್ ಮುನ್ನಡೆಸಿದರು.
‘ಮೂಕನಾಯಕ’ ಪತ್ರಿಕೆಯಿಂದ ಶುರುವಾದ ಅಂಬೇಡ್ಕರ್ ಅವರ ಒಟ್ಟು ಪತ್ರಿಕೋದ್ಯಮದ ಐತಿಹಾಸಿಕ ಸಾಹಸ ಎಲ್ಲ ಕಾಲದ ಲೇಖಕ, ಲೇಖಕಿಯರಿಗೆ, ಪತ್ರಿಕೋದ್ಯಮಿಗಳಿಗೆ ಗಂಭೀರ ಪಾಠಗಳನ್ನು ಹೇಳಿಕೊಡಬಲ್ಲದು. ಈ ಪತ್ರಿಕೆಗಳು ರೂಪುಗೊಂಡ ಕಾಲ ಭಾರತದಲ್ಲಿ ಆಧುನಿಕ ಗದ್ಯ ರೂಪುಗೊಂಡ ಕಾಲ ಕೂಡ. ಪತ್ರಿಕೋದ್ಯಮ ಹಾಗೂ ಲಾಯರ್ ವೃತ್ತಿ ಎರಡನ್ನೂ ‘ನೊಬಲ್ ಪ್ರೊಫೆಶನ್’ ಎಂದು ಭಾರತ ನಂಬಿದ್ದ ಕಾಲ ಅದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ
ರೂಪುಗೊಂಡ ಭಾರತೀಯ ಪತ್ರಿಕೋದ್ಯಮವನ್ನು ಸ್ವಾತಂತ್ರ್ಯ ಚಳವಳಿ ಹಾಗೂ ಸಮಾಜ ಸುಧಾರಣೆಯ ಚಳವಳಿ ಇವೆರಡೂ ರೂಪಿಸಿದ ಕತೆ ಕೂಡ ಅನನ್ಯವಾಗಿದೆ.
ಈ ಘಟ್ಟದ ಪತ್ರಿಕೋದ್ಯಮದ ಚರಿತ್ರೆಯನ್ನು ಗಮನಿಸಿ: ಆಧುನಿಕ ಭಾರತದ ದಿಕ್ಕನ್ನು ಬದಲಿಸಿದ ಗಾಂಧಿ, ಅಂಬೇಡ್ಕರ್, ಲೋಹಿಯಾ ಮೂವರೂ ಹಲವು ಪತ್ರಿಕೆಗಳ ಸಂಪಾದಕರಾಗಿದ್ದರು. ಗಾಂಧಿ ಹಾಗೂ ಅಂಬೇಡ್ಕರ್ ಲಾಯರ್ ಕೂಡ ಆಗಿದ್ದರು. ಲೋಹಿಯಾ ತಮ್ಮ ಬಂಧನವಾದಾಗ ತನ್ನ ಪರವಾಗಿ ತಾನೇ ವಾದಿಸುತ್ತಿದ್ದರು. ಭಾರತದ ಚಿಂತಕ-ನಾಯಕರಲ್ಲಿ ಕಾನೂನಿನ ಜ್ಞಾನ ಮತ್ತು ಪತ್ರಿಕೋದ್ಯಮ ಎರಡೂ ಬೆರೆತ ಈ ಘಟ್ಟ ಭಾರತದಲ್ಲಿ ಎರಡು ಬಗೆಯ ಆದರ್ಶಗಳು ಬೆರೆತ ಅಪೂರ್ವ ಘಟ್ಟ ಕೂಡ. ಈ ಅಂಶಗಳು ನವಭಾರತ ನಿರ್ಮಾಣದಲ್ಲಿ ಪತ್ರಿಕೋದ್ಯಮ ಮಾಡಿದ ಕೆಲಸ ಎಷ್ಟು ಮಹತ್ವದ್ದು ಎಂಬುದನ್ನು ಇವತ್ತಿನ ಪತ್ರಿಕೋದ್ಯಮದ ಹೊಸಬರಿಗೆ ಮತ್ತೆ ಮತ್ತೆ ನೆನಪಿಸುತ್ತಿರಲಿ. ಚರಿತ್ರೆಯ ಆ ಘಟ್ಟ ಇವತ್ತಿನ ಲಾಯರುಗಳಿಗೆ ಹಾಗೂ ಪತ್ರಿಕೋದ್ಯಮಿಗಳಿಗೆ ಮಾದರಿಗಳನ್ನು, ಮಾರ್ಗದರ್ಶನಗಳನ್ನು ನೀಡಬಲ್ಲದು.
ಇಂಥ ಚರಿತ್ರೆಯಿರುವ ಭಾರತದ ಪತ್ರಿಕೋದ್ಯಮದಲ್ಲಿ ಸ್ವಾತಂತ್ರ್ಯ ಚಳವಳಿಯ ವಿವಿಧ ಎಳೆಗಳು ಬೇರೆ ಬೇರೆ ರೂಪದಲ್ಲಿ ಸದಾ ಇದ್ದೇ ಇರುತ್ತವೆ ಹಾಗೂ ಇರಲೇಬೇಕಾಗುತ್ತದೆ. ‘ಮೂಕನಾಯಕ’ ಪತ್ರಿಕೆಯು ದಲಿತ ದನಿ, ದಲಿತ ದೃಷ್ಟಿಕೋನವನ್ನು ಕೇಂದ್ರಕ್ಕೆ ತಂದ ರೀತಿಯನ್ನು 1970ರ ದಶಕದಿಂದೀಚೆಗೆ ಕನ್ನಡದಲ್ಲಿ ಬಂದ ‘ಪಂಚಮ’, ‘ಸಂವಾದ’ ಮುಂತಾದ ಕಿರುಪತ್ರಿಕೆಗಳು ಮುಂದುವರಿಸಿದವು. ಕೆಲವು ದಿನಪತ್ರಿಕೆಗಳು, ವಾರಪತ್ರಿಕೆಗಳು ಕೂಡ ಮೂಕ ಸಮಾಜದ ದನಿಯನ್ನು ಬಿಂಬಿಸಲೆತ್ನಿಸಿವೆ. ದಲಿತ್ ಮೀಡಿಯಾ ವಾಚ್ ಥರದ ಹತ್ತಾರು ದಲಿತ ಪರ ವೆಬ್ ಪೋರ್ಟಲ್ಗಳು ಈ ಕೆಲಸ ಮಾಡುತ್ತಿವೆ. ಈಚಿನ ವರ್ಷಗಳ ‘ಅಂಬೇಡ್ಕರ್ವಾದ’ ಪತ್ರಿಕೆ ಕೂಡ ಈ ಕೆಲಸ ಮುಂದುವರಿಸಿದೆ. ಇವೆಲ್ಲದರ ಹಿಂದೆ ‘ಮೂಕನಾಯಕ’ದ ಪ್ರೇರಣೆ ಎಲ್ಲೋ ಒಳನದಿಯಂತೆ ಹರಿಯುತ್ತಿದೆಯೆಂದೇ ನನ್ನ ನಂಬಿಕೆ. ಅಂಬೇಡ್ಕರ್ ನೂರು ವರ್ಷಗಳ ಹಿಂದೆ ಆರಂಭಿಸಿದ ‘ಮೂಕನಾಯಕ’ ತನಗರಿವಿಲ್ಲದೆಯೇ, ಮೌನವಾಗಿಯೇ ಪತ್ರಿಕೋದ್ಯಮದ ಮಹಾನಾಯಕನಾದ ಅಚ್ಚರಿಯ ಚರಿತ್ರೆ ಇದು. ಇದನ್ನು ಪತ್ರಿಕೋದ್ಯಮ ಹಾಗೂ ನವಮಾಧ್ಯಮಗಳ ಹೊಸ ತಲೆಮಾರಿನ ಹುಡುಗ, ಹುಡುಗಿಯರಾದರೂ ಗಂಭೀರವಾಗಿ ಅರಿಯಲೆತ್ನಿಸಬೇಕು.