ಗಾಂಧೀಜಿಯ ಪೊರಕೆ

Update: 2024-10-14 09:32 GMT

ಗಾಂಧಿ ಜಯಂತಿ ಬಂದ ತಕ್ಷಣ ತೋರುಗಾಣಿಕೆಯ ಸ್ವಚ್ಛತೆಯ ಕಾರ್ಯಕ್ರಮ ಮಾಡುವುದು; ಗಾಂಧೀಜಿಯ ಶುಭ್ರತೆಯ ಕಲ್ಪನೆಯನ್ನು ಪ್ರದರ್ಶನದ ಸರಕಾಗಿಸುವುದು; ಚರಕ, ಪೊರಕೆಗಳನ್ನು ಝಳಪಿಸಿ ಗಾಂಧಿ ಸಂಕೇತಗಳ ಪಾವಿತ್ರ್ಯವನ್ನು ನಾಶ ಮಾಡುವುದು...ಈ ಹೀನ ಚಾಳಿಗಳನ್ನು ಮೊದಲು ನಮ್ಮ ನಾಯಕ ಮಹಾಶಯರು ಕೈ ಬಿಡಬೇಕು. ಗಾಂಧಿಮಾರ್ಗ ಎನ್ನುವುದು ಸಿದ್ಧ ಪಾಕವಲ್ಲ; ಅದು ನಾವು ಸದಾ ರೂಪಿಸಿಕೊಳ್ಳುವ ಆದರ್ಶ ಎಂಬುದು ಈ ಮಂದಿಗೆ ಗೊತ್ತಾಗಬೇಕು...

ಮೊನ್ನೆ ಗಾಂಧಿ ಜಯಂತಿಯ ದಿನ ಒಂದು ಕ್ರೂರ ತಮಾಷೆಯ ಚಿತ್ರ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಭಾರತದ ಪ್ರಧಾನಮಂತ್ರಿಯ ಕೈಯಲ್ಲಿ ಪೊರಕೆ, ಅದಕ್ಕೆ ತಕ್ಕ ಮ್ಯಾಚಿಂಗ್ ವೇಷ, ಫೋಟೊಕ್ಕೆ ತಕ್ಕ ಭಂಗಿ... ಈ ದೇಶದ ರಾಜಕಾರಣಿಗಳು ಹಾಗೂ ಅವರ ‘ಇಮೇಜ್ ಬಿಲ್ಡ್’ ಮಾಡುವ ಜನ ಎಷ್ಟು ಅಸೂಕ್ಷ್ಮವಾಗಿರುತ್ತಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಂತಿತ್ತು. ಭಾರತದ ಊರೂರುಗಳಲ್ಲಿ ಬೀದಿ ಗುಡಿಸುವ ಪೌರ ಕಾರ್ಮಿಕರ ಕಷ್ಟ, ಅವಮಾನ, ಅಸಹಾಯಕತೆಗಳನ್ನು ಒಂದು ಗಳಿಗೆಯಾದರೂ ಈ ಜನ ಅನುಭವಿಸಿದ್ದರೆ, ಕ್ಷಣ ಫೀಲ್ ಮಾಡಿದ್ದರೆ, ಇಂಥ ಕಪಟ ನಾಟಕಗಳ ಚಿತ್ರಗಳನ್ನು ನಾವು ನೋಡಬೇಕಾಗಿ ಬರುತ್ತಿರಲಿಲ್ಲ.

ಮಹಾತ್ಮ್ಮಾ ಗಾಂಧೀಜಿಯವರ ಸಿದ್ಧಾಂತಗಳನ್ನು ಭಾರತೀಯ ಜನತಾಪಕ್ಷವಾಗಲೀ ಅದರ ನಾಯಕರಾಗಲೀ ನಿಜವಾದ ಗೌರವದಿಂದ ಕಂಡಿರುವುದಕ್ಕೆ ಹೆಚ್ಚಿನ ಪುರಾವೆಗಳೇನೂ ಇಲ್ಲ. ಆದರೆ ಭಾರತದ ಪ್ರಜಾಪ್ರಭುತ್ವದ ಒತ್ತಡಗಳು ಹೇಗಿರುತ್ತವೆಂದರೆ, ಗಾಂಧೀಜಿಯನ್ನು ಬಾಯುಪಚಾರಕ್ಕಾದರೂ ನೆನೆಯಬೇಕಾದ ಅನಿವಾರ್ಯತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಈ ಮಂದಿಗೆ ಹತ್ತು ವರ್ಷಗಳ ಹಿಂದೆ ಎದುರಾಯಿತು. ಕೇಂದ್ರದ ಸರಕಾರಿ ಕಚೆೇರಿಗಳಲ್ಲಿ ಗಾಂಧಿ ಜಯಂತಿಯನ್ನು ‘ಸ್ವಚ್ಛತಾ ದಿನ’ವನ್ನಾಗಿ ಆಚರಿಸಲು ಆಗ ಕೇಂದ್ರ ಸರಕಾರ ಕರೆ ನೀಡಿತು. ಈ ಕರೆಯಲ್ಲಿದ್ದ ಸ್ವಚ್ಛತೆಯ ವ್ಯಾಖ್ಯಾನ ವಿಕೃತವಾಗಿತ್ತು. ಗಾಂಧಿಮಾರ್ಗವನ್ನು ವಾಚ್ಯವಾಗಿಸಿ ಅದನ್ನು ಶಿಥಿಲಗೊಳಿಸುವ ಗುಪ್ತ ಯೋಜನೆಯೂ ಇದರ ಹಿಂದೆ ಇದ್ದಂತಿತ್ತು.

ಅದಾದ ಮೇಲೆ ಈ ಕಾಯಿಲೆ ರಾಜ್ಯಗಳಿಗೆ ಬಂತು. ರಾಜ್ಯ ಸರಕಾರದ ಬಿಬಿಎಂಪಿ ಅಧಿಕಾರಿಗಳಿಗಾಗಲೀ, ಅವರ ಮಾತು ಕೇಳುವ ಮಂತ್ರಿಗಳಿಗಾಗಲೀ ಯಾವ ಒರಿಜಿನಲ್ ಐಡಿಯಾಗಳೂ ಹೊಳೆಯುವಂತೆ ಕಾಣುತ್ತಿಲ್ಲ. ಮೊನ್ನೆ ಅಕ್ಟೋಬರ್ 2ರಂದು ಬಿಜೆಪಿ ಥರದ ಅಸಂಬದ್ಧ ಸ್ವಚ್ಛತೆಯ ಕಾರ್ಯಕ್ರಮವನ್ನು ಕರ್ನಾಟಕ ಸರಕಾರವೂ ಬೆಂಗಳೂರಿನಲ್ಲಿ ಹಮ್ಮಿಕೊಂಡು ನಗೆಪಾಟಲಾಯಿತು. ನಮ್ಮ ವ್ಯಕ್ತಿತ್ವ, ಸಾರ್ವಜನಿಕ ಜೀವನ ಹಾಗೂ ರಾಜಕಾರಣಗಳ ಬಗ್ಗೆ ಗಾಂಧೀಜಿ ಹೇಳಿದ ‘ಶುಭ್ರತೆ’ಯನ್ನು ಕಸ ಗುಡಿಸುವ ಸ್ವಚ್ಛತೆ ಎಂದು ಸೀಮಿತಗೊಳಿಸುವವರು ಗಾಂಧಿಮಾರ್ಗವನ್ನು ಕೊಲ್ಲುತ್ತಿರುತ್ತಾರೆ. ಕೇವಲ ಹತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಹಿಂದಿರುಗಿ ನೋಡಿ: ಯಾವಾಗ ‘ಆಮ್ ಆದ್ಮಿ ಪಾರ್ಟಿ’ಯ ಪೊರಕೆ ಸಂಕೇತ ದಿಲ್ಲಿಯಲ್ಲಿ ಜನಪ್ರಿಯವಾಗತೊಡಗಿತೋ ಆಗ ಬಿಜೆಪಿಗರು ಪೊರಕೆಯ ಸಂಕೇತವನ್ನು ಹೈಜಾಕ್ ಮಾಡಲು ಹೋದರು; ಆ ಮೂಲಕ ಗಾಂಧೀಜಿ ಪ್ರಾಮಾಣಿಕವಾಗಿ ಪೊರಕೆ ಹಿಡಿದ ಮುಗ್ಧತೆಯನ್ನು ನಾಶ ಮಾಡಲೆತ್ನಿಸಿದರು.

ಗಾಂಧಿ ಜಯಂತಿಯ ಅರ್ಥಪೂರ್ಣತೆಯನ್ನು ನಾಶ ಮಾಡಲು ‘ಸ್ವಚ್ಛತೆ’ಯ ಹೆಸರಿನ ಸೋಗಲಾಡಿತನ ಹೆಚ್ಚುತ್ತಿರುವ ಕಾಲದಲ್ಲಿ 1901ರಲ್ಲಿ ದಕ್ಷಿಣ ಆಫ್ರಿಕಾದಿಂದ ಮೊದಲ ಸಲ ಬಂದಾಗ ಗಾಂಧೀಜಿ ಅಕ್ಷರಶಃ ಸ್ವಚ್ಛತೆಯ ಕೆಲಸವೊಂದನ್ನು ಕೈಗೆತ್ತಿಕೊಂಡ ದಿನವನ್ನು ಇಲ್ಲಿ ನೆನಪಿಸಬೇಕು. ಕಲ್ಕತ್ತಾದಲ್ಲಿ ಕಾಂಗ್ರೆಸಿನ ವಾರ್ಷಿಕ ಅಧಿವೇಶನ ನಡೆಯುತ್ತಿತ್ತು. ಗಾಂಧೀಜಿ ಒಬ್ಬ ಪ್ರತಿನಿಧಿಯಾಗಿ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಧಿವೇಶನದಲ್ಲಿ ಭಾಗಿಯಾಗಿದ್ದ ಪ್ರತಿನಿಧಿಗಳು ಇಡೀ ಜಾಗವನ್ನು ಕೊಳಕು ಮಾಡಿದ್ದರು. ಇದನ್ನು ಕಂಡ ಗಾಂಧೀಜಿಗೆ ಬೇಸರವಾಯಿತು. ಇದನ್ನು ಕ್ಲೀನ್ ಮಾಡಬೇಕಾದವರು ಯಾರು ಎಂಬ ಪ್ರಶ್ನೆಯನ್ನು ಗಾಂಧೀಜಿ ಕೇಳಲಿಲ್ಲ. ತಕ್ಷಣ ಪೊರಕೆ ಕೈಗೆತ್ತಿಕೊಂಡು ಇಡೀ ಜಾಗವನ್ನು ಗುಡಿಸತೊಡಗಿದರು. ಮುಂದೊಮ್ಮೆ ಈ ಕುರಿತು ಖ್ಯಾತ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮ್ಮಣ್ ಬರೆದ ಜೀವಂತ ಗೆರೆಗಳ ಚಿತ್ರವನ್ನು ಈ ಬರಹದ ಜೊತೆಗೆ ಕೊಟ್ಟಿರುವೆ.

ಅಸ್ಪೃಶ್ಯತೆಯ ವಿರುದ್ಧ ಗಾಂಧೀಜಿಯ ಹೋರಾಟ ಬಾಲ್ಯದಿಂದಲೇ ಶುರುವಾಗಿತ್ತು. ಅದು ದಕ್ಷಿಣ ಆಫ್ರಿಕಾದಲ್ಲೂ ಮುಂದುವರಿಯಿತು. 1901ರ ಕಾಂಗ್ರೆಸ್ ಅಧಿವೇಶನದಲ್ಲಿ ಅಸ್ಪೃಶ್ಯತೆಯ ವಿರುದ್ಧದ ನಡೆ ಮತ್ತೊಂದು ರೀತಿಯಲ್ಲಿ ಶುರುವಾಯಿತು. ಮುಂದೆ ಸಬರಮತಿ ಆಶ್ರಮದಲ್ಲಾಗಲಿ, ಇತರ ಆಶ್ರಮಗಳಲ್ಲಾಗಲಿ ಎಲ್ಲ ಆಶ್ರಮವಾಸಿಗಳೂ ಲೆಟ್ರಿನ್‌ಗಳನ್ನು ಸ್ವಚ್ಛ ಮಾಡಬೇಕಾದ ಪಾಳಿಯಿರುತ್ತಿತ್ತು. ಇದು ಎಲ್ಲರಿಗೂ ಕಡ್ಡಾಯವಾಗಿತ್ತು. ಯಾವ ಕೆಲಸವನ್ನು ಬಡ ಅಸ್ಪೃಶ್ಯರ ಮೇಲೆ ಇಡೀ ಭಾರತೀಯ ಸಮಾಜ ಹೇರಿತ್ತೋ ಆ ಕೆಲಸವನ್ನು ಎಲ್ಲ ಆಶ್ರಮವಾಸಿಗಳೂ ಮಾಡಬೇಕೆಂದು ಗಾಂಧೀಜಿ ಆದೇಶಿಸಿದ್ದರು. ಆಶ್ರಮವಾಸಿಗಳಲ್ಲಿ ಬೇರುಬಿಟ್ಟಿದ್ದ ಜಾತೀಯತೆ, ಅಸ್ಪೃಶ್ಯತೆಯ ಭಾವಗಳನ್ನು ಅಷ್ಟಿಷ್ಟಾದರೂ ತೊಡೆಯಲೆತ್ನಿಸಿದರು; ಈ ಆಶ್ರಮವಾಸಿಗಳು ಬೇರೆಡೆಯಲ್ಲಿ ಆಶ್ರಮ ಸ್ಥಾಪಿಸಿದಾಗ ಈ ಪದ್ಧತಿಯನ್ನು ಮುಂದುವರಿಸಿದರು.

ಈ ಅಂಕಣ ಬರೆಯುವಾಗ, ಎಂಭತ್ತರ ದಶಕದಲ್ಲಿ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಜೀವನದ ಮಹತ್ವದ ಘಟನೆಯೊಂದನ್ನು ಹೆಗಡೆಯವರ ಸಂಬಂಧಿ ಪ್ರಮೋದ್ ಹೆಗಡೆ ನೆನಪಿಸಿದರು. ಹದಿಹರೆಯದ ರಾಮಕೃಷ್ಣ ಹೆಗಡೆಗೆ ಕಾಲೇಜು ಓದುವ ಆಸೆಯಿತ್ತು. ಆದರೆ ಊರಿನಲ್ಲಿ ಅವರಿಗೆ ಅದಕ್ಕೆ ಅವಕಾಶವಿರಲಿಲ್ಲ. ಅಷ್ಟೊತ್ತಿಗಾಗಲೇ ಹೆಗಡೆಯವರ ಅಕ್ಕ ಮಹಾದೇವಿತಾಯಿ ಗಾಂಧೀಜಿಯವರ ಅನುಯಾಯಿಯಾಗಿ ಸಬರಮತಿ ಆಶ್ರಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಒಮ್ಮೆ ಊರಿಗೆ ಬಂದ ಮಹಾದೇವಿತಾಯಿ ರಾಮಕೃಷ್ಣ ಹೆಗಡೆಯವರನ್ನು ಮಹಾರಾಷ್ಟ್ರದ ಪೌನಾರಿನಲ್ಲಿದ್ದ ವಿನೋಬಾ ಭಾವೆಯವರ ಪರಮಧಾಮ ಆಶ್ರಮಕ್ಕೆ ಕರೆದೊಯ್ದರು.

ಗಾಂಧೀಜಿಯ ಪ್ರಿಯ ಶಿಷ್ಯರಲ್ಲೊಬ್ಬರಾಗಿದ್ದ ವಿನೋಬಾಭಾವೆ ಗಾಂಧಿ ಹಾದಿಯಲ್ಲಿ ಮುನ್ನಡೆಯುತ್ತಾ ಸರ್ವೋದಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಆಶ್ರಮ ಸೇರಿದ ತರುಣ ರಾಮಕೃಷ್ಣ ಹೆಗಡೆಯವರಿಗೆ ಟಾಯ್ಲೆಟ್ ಕ್ಲೀನ್ ಮಾಡಲು ವಿನೋಬಾ ಹೇಳಿದರು. ‘ನನಗೇಕೆ ಈ ಕೆಲಸ ಕೊಡುತ್ತಿದ್ದೀರಿ?’ ಎಂದು ಹೆಗಡೆ ವಿನೋಬಾರನ್ನು ಕೇಳಿದರು. ಅದಕ್ಕೆ ವಿನೋಬಾ ಕೊಟ್ಟ ಉತ್ತರ: ‘ನೀನು ಬ್ರಾಹ್ಮಣನಾಗಿರುವುದರಿಂದ ನಿನ್ನ ದೇಹ ಹಾಗೂ ಮನಸ್ಸುಗಳಲ್ಲಿ ತುಂಬಿರುವ ಅಹಂಕಾರ ಅಳಿಯಬೇಕು. ಅದಕ್ಕೇ ಈ ಕೆಲಸ.’ ಸ್ವತಃ ವಿನೋಬಾ ಬ್ರಾಹ್ಮಣ ಕುಟುಂಬದಿಂದ ಬಂದಿದ್ದರು ಎಂಬುದನ್ನು ಇಲ್ಲಿ ನೆನಪಿಸುತ್ತಿರುವೆ. ಹೆಗಡೆ ತಮ್ಮ ಜೀವಿತದ ಕೊನೆಯವರೆಗೂ ವಿನೋಬಾ ಪಾಠವನ್ನು ಮರೆಯಲಿಲ್ಲ. ಇವತ್ತು ತೋರುಗಾಣಿಕೆಗಾಗಿ ಕಸ ಗುಡಿಸುತ್ತಾ ಫೋಟೊ ಹಾಕಿಸಿಕೊಳ್ಳುವ ರಾಜಕಾರಣಿಗಳನ್ನು ‘ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯಾದರೂ ಅಸ್ಪೃಶ್ಯತೆ ಆಚರಿಸದಂತೆ ಅವನ ಮೇಲೆ ಪ್ರಭಾವ ಬೀರಿದ್ದೀರಾ?’ ಎಂದು ಕೇಳಿ, ಏನು ಉತ್ತರ ಬರುತ್ತದೋ ನನಗೆ ಹೇಳಿ!

ಕನ್ನಡ ಕವಿ ಪಂಪ ಬನವಾಸಿಯನ್ನು ಎಷ್ಟು ಗಾಢವಾಗಿ ಪ್ರೀತಿಸುತ್ತಿದ್ದ ಎಂಬುದನ್ನು ಸೂಚಿಸುವ ಪ್ರಖ್ಯಾತ ಪದ್ಯವೊಂದಿದೆ: ‘ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್.’

ತನ್ನ ಪ್ರೀತಿಯ ಕನ್ನಡ ನಾಡಿನಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿಯಾದರೂ ಮತ್ತೆ ಹುಟ್ಟಬಯಸುವ ಪಂಪನ ಈ ನಾಡಪ್ರೇಮ ಚಿರಪರಿಚಿತ. ಆದರೆ ತಮ್ಮ ಜೀವಿತದ ಕೊನೆಯಲ್ಲಿ ಗಾಂಧೀಜಿ ಆಡಿದ ಮಾತು ಪಂಪನ ಮಾತಿಗಿಂತ ಕ್ರಾಂತಿಕಾರಕವಾಗಿತ್ತು: ‘ನಾನು ಮುಂದಿನ ಜನ್ಮದಲ್ಲಿ ಭಂಗಿಯಾಗಿ ಹುಟ್ಟುತ್ತೇನೆ.’ ಸ್ವಾತಂತ್ರ್ಯಾನಂತರದಲ್ಲಿ ದಿಲ್ಲಿಯ ಭಂಗಿ ಕಾಲನಿಯಲ್ಲಿ ವಾಸಿಸುತ್ತಾ, ಅಸ್ಪೃಶ್ಯರ ಕಷ್ಟಗಳನ್ನು ಅರಿತ ಗಾಂಧೀಜಿಯ ಮನದಾಳದ ಈ ಮುಗ್ಧ ಮಾತನ್ನು ಯಾರೂ ಅನುಮಾನಿಸಬಾರದು. ಅಸ್ಪೃಶ್ಯತೆಯನ್ನು ಹೊಡೆದೋಡಿಸಲು ತಮ್ಮ ಜೀವಿತದ ಕಡೆಯ ದಶಕಗಳನ್ನು ಮುಡುಪಾಗಿಟ್ಟಿದ್ದ ಗಾಂಧಿಜಿಯವರ ಚಿಂತನೆಯ ಸಾರವನ್ನು ಗ್ರಹಿಸಿದ ಯಾರೇ ಆಗಲಿ, ಪೊರಕೆ ಹಿಡಿದು ಫೋಟೊಗೆ ಪೋಸ್ ಕೊಡುವ ಕ್ರೌರ್ಯವನ್ನು ಮೆರೆಯಲಾರರು.

ಈ ದೃಶ್ಯಗಳ ನಡುವೆ, ಹಿಂದೊಮ್ಮೆ ಬೆಂಗಳೂರು ನಗರಪಾಲಿಕೆ ಬೆಂಗಳೂರಿನ ಬಳಿಯ ಮುಂಡೂರನ್ನು ಕಸದ ತೊಟ್ಟಿ ಮಾಡಿದಾಗ ಅಲ್ಲಿನ ಜನ ಗಾಂಧೀಜಿಯನ್ನು ಮತ್ತೆ ಹುಡುಕಿಕೊಂಡಿದ್ದು ನೆನಪಾಗುತ್ತದೆ. ಐದಾರು ವರ್ಷ ಬೆಂಗಳೂರಿನ ಭೀಕರ ಕಸವನ್ನು ತಮ್ಮೂರಿನ ಮೇಲೆ ಸುರಿಸಿಕೊಂಡು ನರಳುತ್ತಿದ್ದ ಮಂಡೂರಿನ ಜನಕ್ಕೆ ಅದನ್ನು ಪ್ರತಿಭಟಿಸಲು ಗಾಂಧಿಮಾರ್ಗ ಬಿಟ್ಟರೆ ಬೇರೆ ಹಾದಿಯೇ ಇರಲಿಲ್ಲ. ಕಸದಲ್ಲೂ ರಾಜಕೀಯ ಮಾಡುವ ರಾಜಕಾರಣಿಗಳು, ಕಂಟ್ರಾಕ್ಟರುಗಳ ದುಷ್ಟ ಜಾಲದ ಎದುರು ಮಂಡೂರಿನ ಅಸಹಾಯಕ ಜನ ಹಿರಿಯ ಗಾಂಧಿವಾದಿ ದೊರೆಸ್ವಾಮಿಯವರನ್ನು, ಆಗ ಆಮ್ ಆದ್ಮಿ ಪಾರ್ಟಿಯ ಖಡಕ್ ನಾಯಕರಾಗಿದ್ದ ರವಿಕೃಷ್ಣಾರೆಡ್ಡಿಯವರನ್ನು ಜೊತೆಗಿಟ್ಟುಕೊಂಡು ಹೋರಾಟ ನಡೆಸಿದರು. ಜನಪ್ರತಿನಿಧಿಗಳ ಕಪಟ ಸಂಧಾನಕ್ಕೆ, ಸುಳ್ಳು ಆಶ್ವಾಸನೆಗಳಿಗೆ ಮಂಡೂರಿನ ಜನ ಬಗ್ಗಲಿಲ್ಲ. ಕೊನೆಗೆ ದೊರೆಸ್ವಾಮಿಯವರನ್ನು ಮುಂದಿಟ್ಟುಕೊಂಡು ಬೆಂಗಳೂರು ಮಹಾನಗರಪಾಲಿಕೆ ಆ ವರ್ಷದ ನವೆಂಬರ್ ಮೂವತ್ತರ ತನಕ ಗಡುವು ಪಡೆಯಬೇಕಾಯಿತು.

ಮಂಡೂರಿನ ಜನ ಮುಖ್ಯಮಂತ್ರಿಯೂ ಸೇರಿದಂತೆ ಯಾವುದೇ ‘ಜನಪ್ರತಿನಿಧಿ’ಯ ಆಶ್ವಾಸನೆಯನ್ನು ನಂಬಲಿಲ್ಲ. ಅವರು ಕೊನೆಗೂ ನಂಬಿದ್ದು ಗಾಂಧೀಜಿಯ ಸ್ಪರ್ಶ ಪಡೆದ ದೊರೆಸ್ವಾಮಿಯವರನ್ನೇ. ಈ ಅಂಶ ‘ಜನಪ್ರತಿನಿಧಿ’ಗಳು ಎಂದು ಕರೆದುಕೊಳ್ಳುವ ರಾಜಕಾರಣಿಗಳನ್ನು ಜನ ಯಾವ ಕಾರಣಕ್ಕೂ ನಂಬದಂಥ ಸ್ಥಿತಿ ತಲುಪಿರುವುದನ್ನು ಸೂಚಿಸುತ್ತದೆ. ಇಂಥ ಅಪನಂಬಿಕೆಯ ಕಾಲದಲ್ಲೂ ಜನರ ಸಾತ್ವಿಕ ಪ್ರಜ್ಞೆಯೇ ಗಾಂಧೀಜಿಯ ಅನುಯಾಯಿ ದೊರೆಸ್ವಾಮಿಯವರನ್ನು ನಂಬಿಕೆಗೆ ಅರ್ಹರೆಂದು ಗುರುತಿಸಿತ್ತು. ನನ್ನ ಪುಸ್ತಕವೊಂದರ ಬಿಡುಗಡೆಯಲ್ಲಿ ದೊರೆಸ್ವಾಮಿ ಹೇಳಿದ್ದು ನೆನಪಾಗುತ್ತದೆ: ‘ನನಗೆ ಮಲ ಬಾಚುವ ಕೆಲಸ ಆದರ್ಶವಾಗಿ ಬರಲಿಲ್ಲ; ಸೆರೆಮನೆಯಲ್ಲಿ ನಾವು ಹಲವು ಬಂದಿಗಳು ಇರುವುದು, ಮಲ ವಿಸರ್ಜನೆ ಮಾಡುವುದು ಇವೆಲ್ಲ ಒಂದೇ ಕೊಠಡಿಯಲ್ಲಿ ನಡೆಯುತ್ತಿತ್ತು. ಹೀಗಾಗಿ ಇವೆಲ್ಲವನ್ನೂ ನಾವು ಅನಿವಾರ್ಯವಾಗಿ ಕಲಿತೆವು. ನಂತರ ಗಾಂಧಿ ಆಶ್ರಮಗಳಲ್ಲಿ ಅದು ಎಲ್ಲರ ಕೆಲಸವಾಯಿತು.

ಸ್ವಚ್ಛತೆಯನ್ನು ಗಾಂಧಿ ಜಯಂತಿಯ ದಿನದ ಪ್ರದರ್ಶನವಾಗಿಸಿಕೊಂಡಿರುವ ನಮ್ಮ ನಾಯಕರು ಚರಕ, ಪೊರಕೆಗಳನ್ನು ಝಳಪಿಸಿ ಗಾಂಧಿ ಸಂಕೇತಗಳ ಪಾವಿತ್ರ್ಯವನ್ನು ನಾಶ ಮಾಡುವ ಹೀನ ಚಾಳಿಯನ್ನು ಇನ್ನಾದರೂ ಬಿಡಬೇಕು. ಗಾಂಧಿಮಾರ್ಗ ಹಾಗೂ ಗಾಂಧಿವಾದ ಎನ್ನುವುದು ಸಿದ್ಧ ಪಾಕವಲ್ಲ; ಅದು ನಾವು ಸದಾ ರೂಪಿಸಿಕೊಳ್ಳುವ ಆದರ್ಶ ಕೂಡ. ಆ ಆದರ್ಶವನ್ನು ಪ್ರತಿದಿನ ಹುಡುಕಿಕೊಳ್ಳುತ್ತಾ ನಮ್ಮ ನಡೆನುಡಿಗಳ ಬಗ್ಗೆ ಒಂದು ಕ್ಷಣವಾದರೂ ಪರೀಕ್ಷೆ ಮಾಡಿಕೊಂಡರೆ ಮಾತ್ರ ನಮ್ಮ ಸಣ್ಣತನ, ಸುಳ್ಳುಗಳು, ದುರಹಂಕಾರ ಹಾಗೂ ವ್ಯಕ್ತಿಕೇಂದ್ರಿತ ಸ್ವಾರ್ಥದಿಂದ ಬಿಡಿಸಿಕೊಳ್ಳಬಹುದು. ಗಾಂಧೀಜಿಯ ಪೊರಕೆ ಮೊದಲು ನಮ್ಮ ಜಾತೀಯ ಮಿದುಳುಗಳ ಕಸ ಗುಡಿಸುವಂತಾಗಲಿ! ಅಷ್ಟೇ ಮುಖ್ಯವಾಗಿ, ಕಾಲಕಾಲಕ್ಕೆ ಜನರ ಸಿಟ್ಟಿನ ಪೊರಕೆಗಳು ಎಂಥೆಂಥ ಸರ್ವಾಧಿಕಾರಿಗಳನ್ನೂ ಗುಡಿಸಿಹಾಕಿವೆ ಎಂಬ ಚರಿತ್ರೆಯ ವಿವರಗಳು ನಮ್ಮ ರಾಜಕಾರಣಿಗಳಿಗೆ ಗೊತ್ತಿರಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News